ಪುರಾಣ ತಿಳಿಯೋಣ ಸರಣಿ
ಎಲ್ಲರಿಗೂ ಒಬ್ಬ ತಾಯಿಯಿದ್ದರೆ ದುರುಳನಾದ ಜರಾಸಂಧನಿಗೆ ಮೂವರು ತಾಯಂದಿರು. ಅದೇ ರೀತಿ ಇವನ ಜನನವೂ ಒಂದು ವಿಶಿಷ್ಟವಾದ ರೀತಿಯಲ್ಲಿ ಆಯಿತು.
ಭರತ ವಂಶದಲ್ಲಿ ಜನಿಸಿದ ಸುಹೋತ್ರನ ಪೀಳಿಗೆಯಲ್ಲಿ ಉಪರಿಚರ ವಸು ಎಂಬ ಮಹಾತ್ಮನು ಜನಿಸಿದನು. ಇವನು ಗಿರಿಕಾ ಎಂಬ ಕನ್ಯೆಯನ್ನು ಮದುವೆಯಾಗಿ ಬೃಹದ್ರಥ ಎಂಬ ಪುತ್ರನನ್ನು ಪಡೆದನು. ಕಾಲಾನುಕ್ರಮದಲ್ಲಿ ಬೃಹದ್ರಥನು ಮಗಧ ರಾಜ್ಯದ ಅಧಿಪತಿಯಾಗಿ ಗಿರಿವ್ರಜವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು.
ಬೃಹದ್ರಥನು ಒಬ್ಬ ರಾಜನ ಅವಳಿ ಪುತ್ರಿಯರನ್ನು ಮದುವೆಯಾಗಿ, ಇಬ್ಬರನ್ನೂ ಸಮಾನ ದೃಷ್ಟಿಯಿಂದ ನೋಡುತ್ತಿದ್ದನು. ಬೃಹದ್ರಥನ ಕೀರ್ತಿಯು ಎಲ್ಲೆಲ್ಲೂ ಹಬ್ಬಿತ್ತು. ಹೀಗೆ ಅವನು ಸಂತುಷ್ಟನಾಗಿದ್ದನು.
ಅದರೆ ಅವನಿಗೆ ಬಹುಕಾಲವಾದರೂ ಮಕ್ಕಳಾಗಲಿಲ್ಲ. ಸಂತಾನ ಪ್ರಾಪ್ತಿಗಾಗಿ ಅನೇಕ ವಿಧವಾದ ಇಷ್ಟಿಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ. ರಾಜ ಮತ್ತು ಅವನ ಯಮಳ ಪತ್ನಿಯರಿಗೆ ಇದೇ ಒಂದು ದೊಡ್ಡ ಕೊರಗಾಯಿತು.
ಒಮ್ಮೆ ಬೃಹದ್ರಥನು ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ಒಂದು ಮರದ ಕೆಳಗೆ ಕುಳಿತಿದ್ದ ಚಂಡ ಕೌಶಿಕ ಎಂಬ ಋಷಿಯನ್ನು ನೋಡಿ, ಅಲ್ಲಿಗೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡನು. ಕನಿಕರಗೊಂಡ ಋಷಿಯು ರಾಜನಿಗೆ ಅಭಿಮಂತ್ರಿಸಿದ ಒಂದು ಮಾವಿನ ಹಣ್ಣನ್ನು ಕೊಟ್ಟು "ರಾಜ, ಇದನ್ನು ನಿನ್ನ ಪತ್ನಿಯು ಭಕ್ಷಿಸಿದರೆ ಸಂತಾನವಾಗುತ್ತದೆ" ಎಂದು ಹೇಳಿ ಕಳುಹಿಸಿದನು.
ಇದರಿಂದ ಆನಂದತುಂದಿಲನಾದ ರಾಜನು ಅರಮನೆಗೆ ಬಂದು ಹಣ್ಣನ್ನು ಎರಡು ಸಮಭಾಗ ಮಾಡಿ ಇಬ್ಬರು ಪತ್ನಿಯರಿಗೂ ಕೊಟ್ಟನು. ನವಮಾಸಗಳು ತುಂಬಿದ ನಂತರ ಇಬ್ಬರು ಪತ್ನಿಯರೂ ಏಕಕಾಲದಲ್ಲಿ ಪ್ರಸವಿಸಿದರು.
ವಿಚಿತ್ರವೆಂದರೆ ಇಬ್ಬರದ್ದೂ ಅರ್ಧ ದೇಹವುಳ್ಳ ಶಿಶುಗಳಾಗಿದ್ದವು. ಇದರಿಂದ ನಿರಾಶರಾದ ರಾಣಿಯರು ಶಿಶುವಿನ ಎರಡು ಭಾಗಗಳನ್ನು ಊರಾಚೆ ತಿಪ್ಪೆಯಲ್ಲಿ ಎಸೆದು ಬರುವಂತೆ ಸೇವಕಿಯರಿಗೆ ಆಜ್ಞೆ ಮಾಡಿದರು. ಅದರಂತೆ ಸೇವಕಿಯರು ಎರಡು ಭಾಗಗಳನ್ನು ತಿಪ್ಪೆಗೆ ಎಸೆದು ಬಂದರು.
ಆಗ ವಿಧಿ ಪ್ರೇರಣೆಯಂತೆ, ರಾತ್ರಿ ತಿರುಗುತ್ತಿದ್ದ ಜರಾ ಎಂಬ ರಾಕ್ಷಸಿಯು ಶಿಶುವಿನ ಎರಡು ಭಾಗಗಳನ್ನು ನೋಡಿ ಅವುಗಳನ್ನು ಭಕ್ಷಿಸಲು ಸರಿಯಾದ ಕ್ರಮದಲ್ಲಿ ಜೋಡಿಸಿದಳು. ತಕ್ಷಣ ಶಿಶುವಿಗೆ ಜೀವ ಬಂದು ಅದು ವಿಕಾರವಾಗಿ ಅಳಲು ಪ್ರಾರಂಭಿಸಿತು.
ರಾಕ್ಷಸಿಯಾದರೂ ಹೆಂಗಸಲ್ಲವೇ! ಅವಳಲ್ಲಿ ಮಾತೃ ಭಾವ ಉಕ್ಕಿ ಶಿಶುವನ್ನು ರಾಜನಿಗೆ ಒಪ್ಪಿಸಿದಳು. ಈ ರೀತಿ ಶಿಶುವಿನ ಎರಡು ಭಾಗಗಳನ್ನು ಜರಾ ಎಂಬ ರಾಕ್ಷಸಿಯು ಸಂಧಿಸಿದಾಗ ಮಗುವಿಗೆ ಜೀವ ಬಂದಿದ್ದರಿಂದ ಅದನ್ನು ಜರಾಸಂಧ ಎಂದು ಕರೆಯಲಾಯಿತು.
ಹೀಗೆ ಜರಾಸಂಧನಿಗೆ ಮೂವರು ತಾಯಂದಿರಾದರು. ಈತ ಕಾಲಭೈರವನ ಭಕ್ತನಾಗಿದ್ದ. ಮುಂದೆ ಭೀಮನಿಂದ ಹತನಾಗುತ್ತಾನೆ. (ಯಕ್ಷಗಾನ.ಇನ್)
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ