![]() |
ಪ್ರಾತಿನಿಧಿಕ ಚಿತ್ರ: ಅರ್ಪಿತಾ ಹೊಳ್ಳ ಹಾಗೂ ನಾಗಶ್ರೀ ಜಿ.ಎಸ್. |
(ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ ಇರುವೈಲ್ ಮಾಹಿತಿ)
ರಾಜಭೋಗಗಳಿಲ್ಲದಿದ್ದರೂ ಪಾಂಡವರು ದ್ರೌಪದಿಯೊಂದಿಗೆ ಅರಣ್ಯದಲ್ಲಿ ತಮಗೆ ಸಿಕ್ಕಿದಷ್ಟರಲ್ಲಿ ತೃಪ್ತಿಪಟ್ಟುಕೊಂಡು ದಿನ ಕಳೆಯತ್ತಿದ್ದರು. ಪಾಂಡವರು ವನದಲ್ಲಿ ಪಡುತ್ತಿರುವ ಕಷ್ಟಗಳಿಗೆ ತಾನು ಮತ್ತು ತನ್ನ ಮಗ ಕಾರಣ ಎಂದು ತಿಳಿದ ಧೃತರಾಷ್ಟ್ರನು ಬಹುವಾಗಿ ದುಃಖಿತನಾದನು.
ನಿಜಕ್ಕಾದರೆ, ಅರ್ಜುನನು ಸಜೀವವಾಗಿ ದೇವಲೋಕಕ್ಕೆ ಹೋಗಿ ದಿವ್ಯಾಸ್ತ್ರಗಳನ್ನು ಪಡೆದು ಬಂದಿದ್ದು ಮತ್ತು ಶಿವನಿಂದ ಪಾಶುಪತಾಸ್ತ್ರವನ್ನು ಪಡೆದಿದ್ದು, ಭೀಮನು ಬಲವಂತರಾದ ಹಿಡಿಂಬ-ಬಕಾಸುರ- ಜರಾಸಂಧ-ಕಿಮ್ಮೀರ -ಜಟಾಸುರರನ್ನು ಕೊಂದಿದ್ದು ಮತ್ತು ಕುಬೇರನ ವನಕ್ಕೆ ನುಗ್ಗಿ ಸೌಗಂಧಿಕಾ ಪುಷ್ಪಗಳನ್ನು ತಂದಿದ್ದು- ಇವೆಲ್ಲವೂ ಧೃತರಾಷ್ಟ್ರನ ಚಿಂತೆಯನ್ನು ಹೆಚ್ಚಿಸಿದ್ದವು.
ಆದರೆ ಮುಂದಾಗಬಹುದಾದ ಅನರ್ಥಗಳ ಬಗ್ಗೆ ಪರಿವೆಯೇ ಇಲ್ಲದೆ ದುರ್ಯೋಧನನು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದನು. ಅಪ್ಪ ಧೃತರಾಷ್ಟ್ರನ ಪುತ್ರಪ್ರೇಮವನ್ನು ದುರ್ಬಳಕೆ ಮಾಡಿಕೊಂಡು ಅವನನ್ನು ಆಟದ ಗೊಂಬೆಯಂತೆ ಆಡಿಸುತ್ತಿದ್ದನು. ಭೀಷ್ಮ, ವಿದುರ ಮತ್ತು ದ್ರೋಣರ ಬಗ್ಗೆ ಅವನು ತಲೆ ಕೆಡಿಸಿಕೊಂಡಿರಲಿಲ್ಲ.
ಪಾಂಡವರು ದ್ವೈತ ವನದಲ್ಲಿದ್ದಾರೆಂದು ತಿಳಿದ ಅವನು ಕರ್ಣ, ದುಶ್ಶಾಸನ ಮತ್ತು ಶಕುನಿಯರೊಂದಿಗೆ ಸಮಾಲೋಚನೆ ನಡೆಸಿದನು. ಆಗ ಕರ್ಣ ಮತ್ತು ಶಕುನಿಯರು- "ದುರ್ಯೋಧನಾ, ನಾವು ದ್ವೈತ ವನಕ್ಕೆ ಹೋಗಿ ನಮ್ಮ ವೈಭವವನ್ನು ದರಿದ್ರರಾದ ಪಾಂಡವರ ಮುಂದೆ ಪ್ರದರ್ಶಿಸಿ ಅವರ ಹೊಟ್ಟೆ ಉರಿಸೋಣ" ಎಂಬ ಸಲಹೆ ನೀಡಿದರು. ಆದರೆ ಇದಕ್ಕೆ ನಮ್ಮ ತಂದೆ ಒಪ್ಪುವುದಿಲ್ಲ ಎಂದು ದುರ್ಯೋಧನ ಪೇಚಾಡಿಕೊಂಡನು.
ಕರ್ಣನು ಒಂದು ಉಪಾಯವನ್ನು ಸೂಚಿಸುತ್ತಾ- "ಹೇಗಿದ್ದರೂ ದ್ವೈತ ವನದಲ್ಲಿ ನಮ್ಮ ಗೋವುಗಳು ಗೋಪಾಲಕರ ದೊಡ್ಡಿಗಳಲ್ಲಿವೆ. ಆಗಾಗ ಘೋಷಯಾತ್ರೆ ಮಾಡಿ ಗೋವುಗಳನ್ನು ನೋಡಿಕೊಂಡು ಬರುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ನೆಪದಲ್ಲಿ ನಾವು ದ್ವೈತ ವನಕ್ಕೆ ಹೋಗಬಹುದು" ಎಂದನು.
ಆಗ ದುಷ್ಟ ಚತುಷ್ಟಯರು ಸುಮಂಗ ಎಂಬ ಗೋಪಾಲಕನನ್ನು ಕರೆಸಿ, ಅವನಿಗೆ ಹೇಳಬೇಕಾದ್ದುದನ್ನು ಹೇಳಿ- "ನಾಳೆ ನೀನು ಸಭೆಗೆ ಬಂದು ನಾವು ಹೇಳಿಕೊಟ್ಟಂತೆ ಹೇಳಬೇಕು" ಎಂದು ಆಜ್ಞಾಪಿಸಿದರು.
ಈ ರೀತಿ ಪೂರ್ವ ಯೋಜನೆಯಂತೆ ಸುಮಂಗನು ಮರುದಿನ ರಾಜಸಭೆಗೆ ಬಂದು- "ಪ್ರಭು, ನಮ್ಮ ದೊಡ್ಡಿಯಲ್ಲಿರುವ ಗೋವುಗಳು ಒಂದಕ್ಕೆ ಎರಡರಂತೆ ಬೆಳೆಯುತ್ತಿವೆ. ಪ್ರಭುಗಳು ಬಂದು ಪರಿಶೀಲಿಸಿದರೆ ನಮಗೆ ಸಂತೋಷವಾಗುತ್ತದೆ" ಎಂದು ವಿನಂತಿ ಮಾಡಿಕೊಂಡನು. ಆಗ ಧೃತರಾಷ್ಟ್ರನು- "ಈಗ ದ್ವೈತ ವನದಲ್ಲಿ ಪಾಂಡವರಿದ್ದಾರೆ. ಹೋಗುವುದು ಬೇಡ" ಎಂದು ಹೇಳಿದನು. ಭೀಷ್ಮಾದಿಗಳೂ ಸಹ ಒಪ್ಪಲಿಲ್ಲ. ನಂತರ ದುರ್ಯೋಧನನು ತಂದೆಯನ್ನು ಏಕಾಂತದಲ್ಲಿ ಕಂಡು ಒಪ್ಪಿಗೆ ಪಡೆದನು.
ಧೃತರಾಷ್ಟ್ರನು ಒಪ್ಪಿದ್ದೇ ತಡ, ದುರ್ಯೋಧನ-ಕರ್ಣ- ದುಶ್ಶಾಸನ-ಶಕುನಿ ಮುಂತಾದವರು ತಮ್ಮ ತಮ್ಮ ಸ್ತ್ರೀಯರೊಂದಿಗೆ ದ್ವೈತ ವನಕ್ಕೆ ಹೊರಟರು. ಅಪಾರ ಸೈನ್ಯ, ನಟ-ನರ್ತಕರು, ಗಾಯಕರು, ವಂದಿ ಮಾಗಧರು, ವಾರಾಂಗನೆಯರು, ಪುರ ಪ್ರಮುಖರು, ವರ್ತಕರು ಹೀಗೆ ಅಪಾರವಾದ ಜನಸ್ತೋಮವೂ ಸಹ ಹೊರಟಿತು. ಎಲ್ಲರೂ ಪಾಂಡವರು ಇದ್ದ ಸ್ಥಳದಿಂದ ಕೊಂಚ ದೂರದಲ್ಲಿ ಬಿಡಾರಗಳನ್ನು ನಿರ್ಮಿಸಿಕೊಂಡು ವಿಹರಿಸಲು ಪ್ರಾರಂಭಿಸಿದರು.
ಮರುದಿನ ದುರ್ಯೋಧನನ ಸಲಹೆಯಂತೆ ಸೈನಿಕರು ದ್ವೈತ ಸರೋವರದ ದಡದಲ್ಲಿ ಕ್ರೀಡಾಸ್ಥಾನವನ್ನು ನಿರ್ಮಿಸಲು ಹೋದರು. ಅದೇ ಸಂದರ್ಭದಲ್ಲಿ ಗಂಧರ್ವ ರಾಜನಾದ ಚಿತ್ರಸೇನನು ತನ್ನ ಸಖಿಯರೊಂದಿಗೆ ಜಲಕ್ರೀಡೆಯಾಡುತ್ತಿದ್ದನು. ಚಿತ್ರಸೇನನ ಸೈನಿಕರು ದುರ್ಯೋಧನನ ಸೈನಿಕರನ್ನು ಹೊಡೆದೋಡಿಸಿದರು. ಇದರಿಂದ ಖತಿಗೊಂಡ ದುರ್ಯೋಧನನು ಗಂಧರ್ವರೊಂದಿಗೆ ಯುದ್ಧವನ್ನು ಪ್ರಾರಂಭಿಸಿದನು. ಸ್ವಲ್ಪ ಸಮಯದ ನಂತರ ಚಿತ್ರಸೇನನು ಮಾಯಾ ಯುದ್ಧವನ್ನು ಪ್ರಾರಂಭಿಸಿದನು.
ಕರ್ಣ, ಶಕುನಿ, ದುಶ್ಶಾಸನ ಮುಂತಾದವರು ಯುದ್ಧ ರಂಗದಿಂದ ಪಲಾಯನ ಮಾಡಿದರು. ಚಿತ್ರಸೇನನು ದುರ್ಯೋಧನನ್ನು ಬಂಧಿಸಿದನು. ಗಂಧರ್ವರು ಕೆಲವು ಸ್ತ್ರೀಯರನ್ನೂ ಬಂಧಿಸಿದರು. ಆಗ ಕೆಲವು ಸೈನಿಕರು ಯುಧಿಷ್ಠಿರನಲ್ಲಿಗೆ ಬಂದು ವಿಷಯವನ್ನು ತಿಳಿಸಿ- "ಪ್ರಭು, ಈಗ ನೀವೇ ನಮ್ಮನ್ನು ರಕ್ಷಿಸಬೇಕು" ಎಂದು ಪ್ರಾರ್ಥಿಸಿದರು. ಇದರಿಂದ ಭೀಮನಿಗೆ ಖುಷಿಯಾಗಿ- "ನಾವು ಮಾಡಬೇಕಾಗಿದ್ದ ಕಾರ್ಯವನ್ನು ಗಂಧರ್ವರು ಮಾಡಿದ್ದಾರೆ" ಎಂದು ಹೇಳಿ ತನ್ನ ಖುಷಿಯನ್ನು ವ್ಯಕ್ತಪಡಿಸಿದನು.
ಆದರೆ ಯುಧಿಷ್ಠಿರನು ತಮ್ಮಂದಿರಿಗೆ ತಿಳಿಹೇಳಿ ದುರ್ಯೋಧನನ್ನು ಬಿಡಿಸಿಕೊಂಡು ಬರುವಂತೆ ಕಳುಹಿಸಿದನು. ಅಣ್ಣನಾಜ್ಞೆಯ ಅನುಸಾರ ಅರ್ಜುನನ ನೇತೃತ್ವದಲ್ಲಿ ಯುದ್ಧವು ಪ್ರಾರಂಭವಾಗಿ "ಚಾಕ್ಷುಷೀ" ವಿದ್ಯೆಯಿಂದ ಗಂಧರ್ವನನ್ನು ಸೋಲಿಸಿ, ದುರ್ಯೋಧನನ್ನು ಬಿಡಿಸಿ ತರುತ್ತಾನೆ.
ಈ ರೀತಿಯಾಗಿ ಹೀನಾಯವಾಗಿ ಅವಮಾನಿತನಾದ ದುರ್ಯೋಧನನು ಯುಧಿಷ್ಠಿರನಿಗೆ ನಮಸ್ಕರಿಸಿ, ಯಾವೊಂದು ಮಾತನ್ನೂ ಆಡದೆ ತಲೆ ತಗ್ಗಿಸಿಕೊಂಡು ಬಂದು ತನ್ನ ಬಿಡಾರವನ್ನು ಸೇರಿದನು. ಆಗ ಅವನ ಮನೋಸ್ಥಿತಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಪಾಂಡವರಿಗೆ ಅಪಮಾನ ಮಾಡಲು ಬಂದು ತಾನೇ ಅಪಮಾನಕ್ಕೀಡಾದನು.
ಅಲ್ಲದೆ ಯಾರ ಹೊಟ್ಟೆ ಉರಿಸಲು ಬಂದಿದ್ದನೋ ಅವರೇ ಅವನನ್ನು ಕಾಪಾಡಿದರು. ಛಲದಂಕ ಮಲ್ಲನ ಛಲ ಉಡುಗಿ ಹೋಯಿತು. ಮಾನಧನನ ಮಾನವು ಶತ್ರುಗಳ ಮುಂದೆ, ಅದೂ ತಾನು ಹೀನಾಯವಾಗಿ ಅವಮಾನಿಸಿದ್ದ ದ್ರೌಪದಿಯ ಮುಂದೆ, ಮೂರು ಕಾಸಿಗೆ ಹರಾಜಾಯಿತು.
ಸೂಚನೆ: ಕುಮಾರವ್ಯಾಸ ಭಾರತದ ಪ್ರಕಾರ, ದುರ್ಯೋಧನನು ಬಂಧಿಯಾದ ನಂತರ ಭಾನುಮತಿಯು ಯುಧಿಷ್ಠಿರನಲ್ಲಿಗೆ ಬಂದು ತನ್ನ ಪತಿಯನ್ನು ರಕ್ಷಿಸುವಂತೆ ಪ್ರಾರ್ಥಿಸಿದಳು. ಆಗ ಯುಧಿಷ್ಠಿರನು ತಮ್ಮಂದಿರನ್ನು ಯುದ್ಧಕ್ಕೆ ಕಳುಹಿಸಿದನು. ಅವರು ಚಿತ್ರಸೇನನನ್ನು ಸೋಲಿಸಿ ದುರ್ಯೋಧನನನ್ನು ಕರೆತಂದರು. ಯುಧಿಷ್ಠಿರನು ದ್ರೌಪದಿಯನ್ನು ಕರೆದು- "ಭದ್ರೆ, ದುರ್ಯೋಧನನ ಕಟ್ಟುಗಳನ್ನು ಬಿಚ್ಚು" ಎಂದು ಹೇಳಿದನು. ಆಗ ಕುಲನಾರಿಯಾದ ದ್ರೌಪದಿಯು ಮರು ಮಾತನಾಡದೆ, ತನಗಾದ ಅವಮಾನಗಳನ್ನು ನುಂಗಿಕೊಂಡು ಕಟ್ಟುಗಳನ್ನು ಬಿಚ್ಚಲು ಪ್ರಾರಂಭಿಸಿದಳಂತೆ.
ಸಂಗ್ರಹ: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ