![]() |
ಡೇರೆ (ಟೆಂಟ್) ಯಕ್ಷಗಾನ ಆಟ ವೀಕ್ಷಿಸುತ್ತಿರುವ ಪ್ರೇಕ್ಷಕರು |
ಕರ್ನಾಟಕ ಕರಾವಳಿ ತೀರದಲ್ಲಿ ಅನಾದಿ ಕಾಲದಿಂದಲೂ ಮನೋರಂಜನೆಗೆ ಸಾಧನವಾದ ಏಕೈಕ ಕಲೆಯೇ ಯಕ್ಷಗಾನ. ಯಕ್ಷಗಾನ ಕಲೆಯು ದೃಶ್ಯಕಾವ್ಯದ ಮೂಲಕ ಪ್ರದರ್ಶನವಾಗಿ ಬೆಳೆದುಕೊಂಡು ಬಂದು ಧಾರ್ಮಿಕ ಪಾವಿತ್ರ್ಯದ ಜೊತೆಗೆ ಮನೋರಂಜನೆಯ ಹಾಗೂ ಮತೀಯ ಮಹಾಪುರುಷರ ಚರಿತ್ರೆಗಳನ್ನು ಪ್ರಚಾರಪಡಿಸುವ ಸಾಧನ ಸಮುದಾಯವಾಗಿ ದುಡಿದದ್ದು ನಿತ್ಯ ಸತ್ಯ. ಹಾಗಾಗಿ ಇದು ದೇವತಾರಾಧನೆ ಕಲೆಯಾಗಿಯೂ ಗುರುತಿಸಿಕೊಂಡಿತು. ಯಕ್ಷಗಾನ ಕಲೆ ಹಾಗೂ ಪ್ರೇಕ್ಷಕರ ನಡುವೆ ಒಂದು ಸೌಹಾರ್ದಯುತ ಕೊಡುಕೊಳ್ಳುವಿಕೆಯ ಸಂಬಂಧ ಇದೆ ಅನ್ನ ಬಹುದೇನೋ.
ಒಂದು ರಂಗಕಲೆ ತನ್ನೆಲ್ಲ ಸಮಗ್ರತೆಯನ್ನು ಕಾಪಾಡಿಕೊಂಡು, ಏಳುಬೀಳುಗಳನ್ನು ಕಂಡುಕೊಂಡು ತಲತಲಾಂತರದಿಂದ ವರ್ತಮಾನಕ್ಕೆ ಬಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ನೆಲೆ ಕಾಣುವಲ್ಲಿ ಮಹತ್ತರ ಪಾತ್ರ ಪ್ರೇಕ್ಷಕನದ್ದು.
ಪ್ರೇಕ್ಷಕನಾದವನು ಯಕ್ಷಗಾನ ಕಲೆಯನ್ನು ಆರಾಧನಾ ಭಾವದ ಜೊತೆಗೆ ತಾನು ಕಲೆಯೊಂದಿಗೆ ತಾದಾತ್ಮ್ಯ ಭಾವ ಹೊಂದಿ ಅನುಭವಿಸಿ ತನ್ನ ನಂತರದ ಪೀಳಿಗೆಗೆ ಅದನ್ನು ಜತನದಿಂದ ಕಾಪಿಟ್ಟುಕೊಂಡು ಬಂದವನು ಎಂದರೆ ತಪ್ಪಾಗಲಿಕ್ಕಿಲ್ಲ.
ಹಾಗಾದರೆ ಈ ಪ್ರೇಕ್ಷಕ ಹೇಗಿರಬೇಕು? ಈ ಪ್ರೇಕ್ಷಕ ಪದದ ವ್ಯುತ್ಪತ್ತಿ ಗಮನಿಸಿದಾಗ ತಿಳಿದು ಬರುವುದು ಹೀಗೆ... 'ಪ್ರೇಕ್ಷಕಾನಾಂ' ಎನ್ನುವುದು ಪ್ರಾಶ್ನಿಕಾನಾಂ ಎನ್ನುವುದರ ಪಾಠಾಂತರ! ಪ್ರಾಶ್ನಿಕ ಅಂದರೆ ನಿರ್ಣಾಯಕ, ವಿಮರ್ಶಕ, ಪ್ರಶ್ನಿಸುವವ ಅನ್ನುವ ಅರ್ಥವಿದೆ. ಅವನೇ ಪ್ರೇಕ್ಷಕ.
ಪ್ರೇಕ್ಷಕರ ಗುಣಧರ್ಮವನ್ನು ವರ್ಣಿಸುತ್ತಾ, ಶಾಂತ ಸ್ವಭಾವದವರೂ, ಕುಲಶೀಲ ಸಂಪನ್ನರು, ವಿದ್ಯಾವಂತರು, ಧರ್ಮ ಕರ್ಮ ನಿಷ್ಠರು, ನಾಲ್ಕು ವಿಧದ ಅಭಿನಯ ತಿಳಿದವರು, ರಸಭಾವ ಸೂಕ್ಷ್ಮ ಹಾಗೂ ಶಬ್ದ ಛಂದಸ್ಸು ಅರಿತವರು, ಷಡಂಗನಾಟ್ಯ ಕುಶಲರಾದ ಶಾಸ್ತ್ರ ಪ್ರಬುದ್ಧರನ್ನು ಪ್ರಾಶ್ನಿಕರು ಅಂದರೆ ವಿಮರ್ಶಕರು, ಪ್ರೇಕ್ಷಕರು ಅಥವಾ ನಿರ್ಣಾಯಕರು ಎಂದು ಕರೆಯಲಾಗುತ್ತದೆ.
ಭಾವಾನುಕರಣದ ನಾಟಕದಲ್ಲಿ ಬೇರೆ ಬೇರೆ ರೀತಿಯ ಜನರು ಬೇರೆ ಬೇರೆ ರೀತಿಯ ಭಾವದಲ್ಲಿ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಇಂತಹ ಗುಣಗಳಿದ್ದವರನ್ನು 'ಪ್ರೇಕ್ಷಕ' ಅಂತ ತಿಳಿಯಬೇಕು ಎನ್ನುತ್ತದೆ ಭರತಮುನಿಯ ನಾಟ್ಯ ಶಾಸ್ತ್ರ.
ನಾನಾ ಭಾವರಸಗಳನ್ನುಳ್ಳ ಪ್ರಯೋಗದ ಸಿದ್ದಿಯಲ್ಲಿ 'ದೈವಿಕೀ' ಮತ್ತು 'ಮಾನುಷೀ' ಎಂಬ ಪ್ರಕಾರಗಳು ಇವೆ. ಈ ಮಾನುಷೀ ಸಿದ್ಧಿಯಲ್ಲಿ 10 ವಿಧಗಳು. ಅದು ಮುಂದುವರಿದು ಆಂಗಿಕ ಹಾಗೂ ವಾಚಿಕ ಅಂತ ಎರಡು ವಿಧವಾಗುತ್ತದೆ. ಈ ಪ್ರಕಾರದಲ್ಲಿ ಪ್ರೇಕ್ಷಕನಾದವನು ತಾನು ಕಂಡ ಪ್ರಯೋಗದಿಂದ ಸಂತೋಷವನ್ನು ಹೊಂದಿ, ಚಪ್ಪಾಳೆ ಹೊಡೆಯುವುದು, ಕುಣಿಯುವುದು, ಶಿಳ್ಳೆ, ಸೀಟಿಯನ್ನು ಹಾಕುವುದು, ಪಾರಿತೋಷಕವನ್ನು ಆಯಾಯ ಭಾವ ಸಂಬಂಧಿಯಾಗಿ ಕಲಾವಿದರಿಗೆ ನೀಡುವುದರ ಮೂಲಕ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಬಹುದು.
ಅದೇ ರೀತಿಯಲ್ಲಿ ದೈವೀಸಿದ್ದಿಯಲ್ಲಿ ಪ್ರಯೋಗದ ಪರಿಪೂರ್ಣವಾದ ಭಾವಾಭಿವ್ಯಕ್ತಿಗೆ ಮೆಚ್ಚಿ ಯಾವುದೇ ರೀತಿಯ ಗಲಾಟೆ, ಗೌಜಿ, ಗದ್ದಲ ಇಲ್ಲದೆ ಎದ್ದು ನಿಂತು ಗೌರವ ಸೂಚಿಸಬಹುದು ಎಂದು ಭರತನ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಿದೆ.
ಕರ್ನಾಟಕದ ಕರಾವಳಿ ಕೃಷಿ ಪ್ರಧಾನವಾಗಿದ್ದ ಆ ಕಾಲದಲ್ಲಿ ಸಿನೆಮಾ, ರಂಗನಾಟಕ, ಟಿ.ವಿ, ಮೊಬೈಲ್, ಕಂಪ್ಯೂಟರ್ ಮುಂತಾದ ಯಾವುದೇ ರೀತಿಯ ಮನರಂಜನೆಯ ಮಾಧ್ಯಮಗಳು ಇಲ್ಲದಿದ್ದ ಕಾಲದಲ್ಲಿ ಮನರಂಜನೆಗೆ ಮುಖ್ಯ ಮಾಧ್ಯಮವೇ ಈ ಯಕ್ಷಗಾನ ಕಲೆಯಾಯ್ತು. ದಿನದಲ್ಲಿ ಬೇಸಾಯದ ದುಡಿಮೆಯ ಜಂಜಡದಿಂದ ಹೊಂದಿದ ಆಯಾಸ, ದುಗುಡ ದುಮ್ಮಾನ ಕಳೆಯಲು ರಾತ್ರಿಯ ವೇಳೆಗೆ ಈ ಯಕ್ಷಗಾನ ಪ್ರದರ್ಶನವನ್ನು ಕಾಣಲು ಜನರು ಮುಂದಾದರು. ಇವರೇ ಯಕ್ಷಗಾನಕ್ಕೆ ಒದಗಿದ ಪ್ರಧಾನ ಪ್ರೇಕ್ಷಕರು.
ಈ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದ ಪ್ರಧಾನ ಸಾಧನ ಚೆಂಡೆ. ಈ ರಣಭೇರಿಯೋಪಾದಿಯ ಚೆಂಡೆಯ ಪೆಟ್ಟು ಕೇಳಿಯೇ ಜನರು ಯಕ್ಷಗಾನ ನೋಡಲು ಬಯಲಲ್ಲಿ ಸೇರುತ್ತಿದ್ದರು. (ಸಶೇಷ)
✍ ಸುರೇಂದ್ರ ಪಣಿಯೂರ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಲೇಖನ