ಯಕ್ಷಗಾನ ಹಿಮ್ಮೇಳ ಗುರು ಮೋಹನ ಬೈಪಾಡಿತ್ತಾಯರಿಗೆ ಪುತ್ತೂರು ಗೋಪಾಲಕೃಷ್ಣ ನೆನಪಿನ ಗೌರವ

ಮೋಹನ ಬೈಪಾಡಿತ್ತಾಯರು ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ (ಫೈಲ್ ಚಿತ್ರ)
ಪುತ್ತೂರು: ಯಕ್ಷಗಾನದ ವಾದ್ಯಗಳಿಗೆ ಹೊಸ ಆಯಾಮ ನೀಡಿದ ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ) ಅವರ ನೆನಪಿನಲ್ಲಿ ಬುಧವಾರ (ಜು.07, 2021) ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳ ಗುರುಗಳಾದ ಮೋಹನ ಬೈಪಾಡಿತ್ತಾಯ ಅವರನ್ನು ಗೌರವಿಸಲಾಗುತ್ತದೆ.
 
ಅಭಿಮಾನಿಗಳಿಂದ 'ಗೋಪಣ್ಣ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಪುತ್ತೂರು ಗೋಪಾಲಕೃಷ್ಣ ಅವರು ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ನೀಡಿದವರು.

ಇವರ ಸಂಸ್ಮರಣೆ ಕಾರ್ಯಕ್ರಮವು ಇಂದು ಅಪರಾಹ್ನ 2 ಗಂಟೆಗೆ ಪುತ್ತೂರಿನ ಬಪ್ಪಳಿಗೆ 'ಅಗ್ರಹಾರ' ಗೃಹದಲ್ಲಿ ಜರುಗಲಿದ್ದು, ನಂತರ ಕೋವಿಡ್ ಮಾರ್ಗಸೂಚಿ ನಿಯಮಗಳಿಗನುಸಾರವಾಗಿ ನಡೆಯುವ ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.

ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯರ ಶಿಷ್ಯನೂ, ಕಿರಿಯ ಸಹೋದರನೂ ಆಗಿರುವ ಮೋಹನ ಬೈಪಾಡಿತ್ತಾಯರು ಬೆಳ್ಮಣ್ಣು ಮೇಳದಲ್ಲಿದ್ದಾಗ, ಮಂಗಳೂರು ಆಕಾಶವಾಣಿ ಬಳಿ ನಡೆದ ವ್ಯಾನ್ ಅಪಘಾತದಲ್ಲಿ ಗಾಯಗೊಂಡು, ತಿರುಗಾಟ ನಿಲ್ಲಿಸಬೇಕಾಯಿತು. ಮತ್ತು ಅವರು ಭಾಗವತಿಕೆಗೂ ಇದರಿಂದ ತೊಡಕಾಯಿತು. ನಂತರ ಅವರು ಚೆಂಡೆ ಮದ್ದಳೆಯನ್ನು ನುಡಿಸುತ್ತಿದ್ದಾರೆ.

ಮೋಹನ ಬೈಪಾಡಿತ್ತಾಯರು ಯಕ್ಷಗುರುವಾಗಿ ಊರಲ್ಲಿ ಹಾಗೂ ಮುಂಬಯಿಯಲ್ಲಿ ಕೂಡ ಅನೇಕ ಶಿಷ್ಯರನ್ನು ರೂಪುಗೊಳಿಸುತ್ತಿದ್ದಾರೆ. ತನ್ನಣ್ಣನಿಂದ ಹಿಮ್ಮೇಳ ಕಲಿತ ಬಳಿಕ, ಹತ್ತು ವರುಷ ಹವ್ಯಾಸಿಯಾಗಿ ದುಡಿದ ಅವರು, ಬಳಿಕ ಆದಿಸುಬ್ರಹ್ಮಣ್ಯ, ನಂದಾವರ, ಕಾಂತಾವರ, ಕರ್ನಾಟಕ, ಬೆಳ್ಮಣ್ಣು ಮೇಳಗಳಲ್ಲಿ ಎರಡು ದಶಕಗಳ ತಿರುಗಾಟ ಮಾಡಿದ್ದಾರೆ.

ಬೆಳ್ಮಣ್ಣು ಮೇಳದ ವಾಹನ ಅಪಘಾತದಿಂದಾಗಿ ಮೋಹನರು ಮೂರು ವರುಷ ಓಡಾಡದ ಸ್ಥಿತಿ ಬಂದಿತ್ತು ಮತ್ತು ಕಂಠಕ್ಕೇ ಅಪಾಯ ಉಂಟಾಯಿತು. ಇದರ ಜತೆಗೆ ಆರ್ಥಿಕ ಸಂಕಟಗಳ ಮಾಲೆ ಕಾಡಿ, 1995ರಿಂದ ಯಕ್ಷಗಾನ ಗುರುವಾಗಿ ಬದುಕಿಗೆ ದಾರಿ ಮಾಡಿಕೊಂಡರು.

ಹಿಂದಿನ ವರ್ಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಪಾವಲಕೋಡಿ ಗಣಪತಿ ಭಟ್ಟರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಸುಪುತ್ರ ಬಿಜೆಪಿಯ ಪುತ್ತೂರು ನಗರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಹಾಗೂ ಯಕ್ಷಗಾನ ಕಲಾವಿದರೂ ಆಗಿರುವ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಮಾಹಿತಿ: ನಾ.ಕಾರಂತ ಪೆರಾಜೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು