ಪಟ್ಲ ಫೌಂಡೇಶನ್ ಟ್ರಸ್ಟ್‌ಗೆ ಅರ್ಧ ಎಕ್ರೆ ಸ್ಥಳ ದಾನ ನೀಡಿದ ಪ್ರೊಫೆಸರ್ ಎಂ.ಎಲ್ ಸಾಮಗ

ಪಟ್ಲ ಫೌಂಡೇಶನ್ ವತಿಯಿಂದ ನಡೆದ ದಶಕಥಾ ಸುಧಾ ತಾಳಮದ್ದಳೆ ಸರಣಿಯ 6ನೇ ದಿನದ ಉದ್ಘಾಟನಾ ಕಾರ್ಯಕ್ರಮ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗಾಗಿ ಸಲ್ಲಿಸುತ್ತಿರುವ ಸೇವೆಗಳನ್ನು ಪರಿಗಣಿಸಿ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಎಂ.ಎಲ್.ಸಾಮಗ ಅವರು ಅರ್ಧ ಎಕರೆ ಭೂಮಿಯನ್ನೇ ದಾನ ಮಾಡಿದ್ದಾರೆ.

ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಜರುಗುತ್ತಿರುವ ದಶಕಥಾ ಸುಧಾ ತಾಳಮದ್ದಳೆ ಸರಣಿಯ 6ನೇ ದಿವಸವಾದ ಮಂಗಳವಾರ (ಜು.06, 2021) ಸಭಾ ಕಾರ್ಯಕ್ರಮದಲ್ಲಿ ಅವರು ಇದನ್ನು ಘೋಷಿಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಅದರ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯಸಾಧನೆಗಳನ್ನು ಮೆಚ್ಚಿ ಅಂದಾಜು ಒಂದು ಕೋಟಿ ರೂ. ಮೌಲ್ಯದ ನಿವೇಶನವನ್ನು ಅವರು ಉಚಿತವಾಗಿ ನೀಡಿದ್ದಾರೆ.

ಉಡುಪಿಯ ಕೊಡವೂರಿನಲ್ಲಿ ತಮ್ಮ ತೀರ್ಥರೂಪರ ಹೆಸರಿನಲ್ಲಿ ಸುಮಾರು 50 ಸೆಂಟ್ಸ್ ವಿಶಾಲವಾದ ಖಾಲಿ ನಿವೇಶನವಿದೆ. ಇದು ಅವರ ತಂದೆ ದಿ.ಮಲ್ಪೆ ಶಂಕರನಾರಾಯಣ ಸಾಮಗರಿಗೆ ಸರಕಾರದಿಂದ ಬಳುವಳಿಯಾಗಿ ಬಂದ ನಿವೇಶನವಾಗಿದ್ದು, ಎಂ.ಎಲ್.ಸಾಮಗರ ಪಾಲಿಗೆ ಬಂದಿತ್ತು. ಇದನ್ನು ಪಟ್ಲ ಫೌಂಡೇಶನ್ ಕಾರ್ಯಗಳಿಗಾಗಿ ವಿನಿಯೋಗವಾಗಲಿ ಎಂದು ಅವರು ಭಾವುಕರಾಗಿ ನುಡಿದರು.

ಯಕ್ಷಗಾನ ವಿದ್ವಾಂಸರೂ, ಕಲಾವಿದರೂ, ಕಲಾ ಪ್ರೋತ್ಸಾಹಕರೂ ಆದ ಪ್ರೊಫೆಸರ್ ಎಂ.ಎಲ್. ಸಾಮಗ ಹಾಗೂ ಅವರ ಧರ್ಮಪತ್ನಿ  ಪ್ರತಿಭಾ ಎಲ್. ಸಾಮಗ ಅವರ ಔದಾರ್ಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

ನಿರಂತರ ಹತ್ತು ದಿವಸದ ಸರಣಿ ತಾಳಮದ್ದಲೆಯ 6ನೇ ದಿವಸದ ಉದ್ಘಾಟನೆಯನ್ನು ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಸೇರಾಜೆ ಸತ್ಯನಾರಾಯಣ ಭಟ್ ಜ್ಯೋತಿ ಬೆಳಗಿಸಿ ನೆರವೇರಿಸಿದರು.

ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ, ಶ್ರೀ ಮಧುಕರ ಭಾಗವತ್, ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪದಾಧಿಕಾರಿಗಳಾದ ಡಾ. ಮನು ರಾವ್, ಪಡುಬಿದ್ರಿ ದುರ್ಗಾಪ್ರಸಾದ್ ಈರೋಡ್, ಪುರುಷೋತ್ತಮ ಭಂಡಾರಿ, ಸುದೇಶ್ ಕುಮಾರ್ ರೈ ಹಾಗೂ ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು