ಹಿಡಿಂಬಾಸುರ, ಹಿಡಿಂಬಾ |
ಯಕ್ಷಗಾನದಲ್ಲಿ ನೋಡಿರುವಂತೆ, ರಾಮಾಯಣ, ಮಹಾಭಾರತಗಳಲ್ಲಿ ಬರುವ ಇಬ್ಬರು ರಾಕ್ಷಸಿಯರ ವೈರುಧ್ಯದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ದಾಮೋದರ ಶೆಟ್ಟಿ ಇರುವೈಲ್.
ರಾಮಾಯಣ ಮಹಾಭಾರತಗಳಲ್ಲಿ ಬರುವ ಎರಡು ರಾಕ್ಷಸೀ ಪಾತ್ರಗಳು ಶೂರ್ಪನಖಿ ಮತ್ತು ಹಿಡಿಂಬೆ. ಇವರಿಬ್ಬರ ಗುಣಗಳಲ್ಲಿ ಸಾಮ್ಯತೆಯಿದೆ. ಇಬ್ಬರೂ ಪುರುಷಾಕರ್ಷಣೆಗೆ ಒಳಗಾದವರು. ಆದರೆ ಇಬ್ಬರಿಗೆ ಸಿಕ್ಕ ಫಲ ಬೇರೆ ಬೇರೆ. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ.
ಒಬ್ಬಾಕೆಯದು ಕಾಮವಾದರೆ ಇನ್ನೊಬ್ಬಳದು ನಿಜವಾದ ಪ್ರೇಮ. ಶೂರ್ಪನಖಿ ಮೊದಲು ರಾಮನತ್ತ ಆಕರ್ಷಿತಳಾಗಿ ಆತ ತನ್ನ ಪತಿಯಾಗಬೇಕು ಅಂತ ಬಯಸುತ್ತಾಳೆ. ಬರಿಯ ಬಯಕೆ ಪ್ರೇಮವಾದೀತು. ಆದರೆ ಆಕೆ ರಾಮನ ಪತ್ನಿಯಾಗುವಲ್ಲಿ ಸೀತೆ ತನ್ನ ಪಾಲಿನ ಮುಳ್ಳಾದಾಳು, ಅವಳನ್ನ ತನ್ನ ಮಾರ್ಗದಿಂದ ಸರಿಸಲು ಯೋಚಿಸುತ್ತಾಳೆ.
ಅಲ್ಲಿಗೆ ಆಕೆಯ ಪ್ರೇಮ ಇನ್ನೊಂದು ಆಯಾಮ ಪಡೆದುಕೊಂಡಂತಾಗುತ್ತದೆ. ಪ್ರೇಮವೆಂದರೆ ಯಾಚಿಸಬೇಕು. ಯಾಚನೆಯೇ ಪ್ರಮುಖವಾಗಬೇಕಿತ್ತು. ಆದರೆ ತನ್ನ ಪಾಲಿನ ಮುಳ್ಳು ಅಂತೆಲ್ಲಾ ಯೋಚಿಸುವಲ್ಲಿ ಆಕೆಗೆ ರಾಮನನ್ನು ಪಡೆಯಲೇಬೇಕು ಎನ್ನುವ ಹಠವೇ ಪ್ರಾಮುಖ್ಯವಾಗಿ ಬಿಟ್ಟಿತು. ರಾಮನೋ… ಇದನ್ನರಿತು ನನ್ನಂತೆ ಇರುವ ಲಕ್ಷ್ಮಣನನ್ನು ಕೇಳು ಅಂದಾಗ, ಆಕೆ ಮರು ಮಾತಿಲ್ಲದೆ ಲಕ್ಷ್ಮಣನ ಬಳಿ ಸಾಗುತ್ತಾಳೆ. ಅಂದರೆ ರಾಮನೇ ಬೇಕಿಲ್ಲ. ಅವನಂತಿರುವ ಗಂಡು ಯಾರಾದರೂ ಆದೀತು. ಇದರ ಅರ್ಥ ಆಕೆಯದು ಪ್ರೇಮವಲ್ಲ ಕಾಮ.
ಅದೂ ಅಲ್ಲದೆ ತನ್ನ ಅಣ್ಣನಾದ ರಾವಣನ ಕುರಿತಾಗಿ ಹೇಳಿ ರಾಮಲಕ್ಷ್ಮಣರನ್ನು ಹೆದರಿಸುವ ತಂತ್ರವನ್ನೂ ಮಾಡುತ್ತಾಳೆ. ಅರ್ಥಾತ್ ರಾಕ್ಷಸೀ ಸ್ವಭಾವದಲ್ಲಿ ಬದಲಾವಣೆ ಇಲ್ಲ. ಆ ಕಾರಣಕ್ಕಾಗಿ ಆಕೆಗೆ ಮಾನ ಖಂಡನೆಯ ಶಿಕ್ಷೆಯಾಯಿತು.
ಅದೇ ಹಿಡಿಂಬೆಯ ಪ್ರಕರಣದಲ್ಲಿ, ಆಕೆಯ ನಡವಳಿಕೆ ನೋಡಿ. ಭೀಮನನ್ನು ಕಂಡ ಕೂಡಲೇ ಆಕೆ ತಾನು ರಾಕ್ಷಸಿ ಎನ್ನುವುದನ್ನೇ ಮರೆಯುತ್ತಾಳೆ. ಅದುವರೆಗಿನ ರಾಕ್ಷಸೀ ಸ್ವಭಾವ ತೊರೆದು ಆತನನ್ನು ಮನಸಾರೆ ಪ್ರೀತಿಸಿ ಆತನೇ ತನ್ನ ಪತಿಯಾಗಬೇಕು ಅಂತ ಯೋಚಿಸಿ ತನ್ನ ಅಣ್ಣನ ವಿರುದ್ಧವೇ ನಿಲ್ಲುತ್ತಾಳೆ.
ತನ್ನ ಅಣ್ಣ ಕೆಟ್ಟವನು. ಆತನಿಂದ ನಿಮ್ಮನ್ನು ಕಾಪಾಡುತ್ತೇನೆ ಎಂದೆಲ್ಲ ಹೇಳುತ್ತಾಳೆ. ಅಣ್ಣನನ್ನು ಭೀಮ ಕೊಂದು ಹಾಕಿದಾಗಲೂ ಆಕೆ ಬೇಸರ ಪಡುವುದಿಲ್ಲ. ಅದಾಗಿಯೂ ಭೀಮ ಒಪ್ಪಲು ಹಿಂಜರಿದಾಗ ಕುಂತಿಯ ಮೊರೆ ಹೋಗುತ್ತಾಳೆ. ಆಕೆಯ ಬಳಿ "ಒಬ್ಬ ಕಾಮಪೀಡಿತ ಹೆಣ್ಣಿನ ನೋವು ಸಂಕಟಗಳನ್ನು ನೀನು ಅರಿತಿರುವೆ ಎಂದು ಭಾವಿಸುತ್ತೇನೆ. ಹಾಗಾಗಿ ನಮ್ಮನ್ನು ಒಂದುಗೂಡಿಸು" ಎಂದು ಅಂಗಲಾಚುತ್ತಾಳೆ.
ರಾಕ್ಷಸೀ ಪ್ರವೃತ್ತಿ ತೊರೆದ ಆಕೆಯೊಳಗಿನ ಹೆಣ್ತನ ಕುಂತಿಯ ಮನ ಕರಗಿಸುತ್ತದೆ. (ಗಂಡನಾದ ಪಾಂಡುವಿನ ಜತೆ ಮಿಲನದ ಸುಖವಂಚಿತಳಾದ ಆಕೆಯ ಅನುಭವ ಅವಳನ್ನು ಒಪ್ಪಿಸಿದ್ದಿರಲೂಬಹುದು). ಪ್ರೇಮಕ್ಕಾಗಿ ಈ ರೀತಿಯ ಯಾಚನೆ ಮಾಡಿದ ಕಾರಣ ಆಕೆಗೆ ಭೀಮ ದಕ್ಕಿದ.
ರಾಕ್ಷಸೀ ತಾಮಸ ಭಾವ ಪ್ರಕಟಣೆಯು ಕುಲನಾಶಕ್ಕೆ ಹೇತುವಾದರೆ, ರಾಕ್ಷಸೀ ಭಾವ ಬಿಟ್ಟು ತಾಮಸಿಕಳಾಗಿ ನಿಜ ಪ್ರೇಮ ಪ್ರದರ್ಶಿಸಿದವಳಿಗೆ ವೀರಪರಾಕ್ರಮಿ ಪುತ್ರ ಸಂಜನಿಸಿ ವಂಶೋದ್ಧಾರವಾಯಿತು.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ