ಯಕ್ಷಮೆಲುಕು 09: ತಾಳಮದ್ದಳೆಯಾಟ ಎಂಬಂತಿದ್ದ 'ಯಕ್ಷಗಾನ ನಾಟಕ'ದಲ್ಲಿ ನಾನು ಹಾರ್ಮೋನಿಯಂ ಕಲಾವಿದ!

 

2020ರಲ್ಲಿ ನಡೆದ ಕಡಬ ನಾರಾಯಣ ಆಚಾರ್ಯ ಸಂಸ್ಮರಣೆ ಕಾರ್ಯಕ್ರಮದ ಪಾರ್ಶ್ವದಲ್ಲಿ, ಬೈಪಾಡಿತ್ತಾಯ ದಂಪತಿ, ದಿನೇಶ ಅಮ್ಮಣ್ಣಾಯ, ಪದ್ಯಾಣ ಗಣಪತಿ ಭಟ್, ಪೊಳಲಿ ದಿವಾಕರ ಆಚಾರ್ಯರು.

ಚಿಕ್ಕ ಪ್ರಾಯದಲ್ಲೇ ಹಾರ್ಮೋನಿಯಂ ಬಾರಿಸುತ್ತಾ, ಅಮ್ಮಣ್ಣಾಯ ಕುಟುಂಬದ ಯಕ್ಷಗಾನ ಹಿಮ್ಮೇಳ ವೈಭವವನ್ನು ಕಿವಿಗೆ ಕೇಳಿಸಿಕೊಳ್ಳುತ್ತಲೇ, ಯಕ್ಷಗಾನದ ಹುಚ್ಚು ಹಿಡಿಸಿಕೊಂಡವರು ಹರಿನಾರಾಯಣ ಬೈಪಾಡಿತ್ತಾಯರು. ಮೂಲತಃ ಪೂಜೆಯ ಸಂಪ್ರದಾಯಸ್ಥ ಕುಟುಂಬದವರಾದ ಅವರ ಹಿರಿಯರೂ ಯಕ್ಷಗಾನ ಕಲಾವಿದರಾಗಿದ್ದರು. ಅವರ "ಯಕ್ಷಮೆಲುಕು" ಸರಣಿಯ ಮುಂದಿನ ಭಾಗ ಇಲ್ಲಿದೆ.
ಹೌದು, ಇದು ನಾನು ಚಿಕ್ಕ ಪ್ರಾಯದಲ್ಲೇ ಹಾರ್ಮೋನಿಯಂ ಕಲಾವಿದನೆಂದು ಕರೆಸಿಕೊಂಡ ಕಥೆಯಿದು. 1950ರ ದಶಕದ ಉತ್ತರಾರ್ಧವದು. ನಮ್ಮದು ಮೂಲತಃ ಬಡ ಬ್ರಾಹ್ಮಣ ಕುಟುಂಬ. ತೀರಾ ಬಡತನವಿತ್ತು. ನನ್ನ ತಂದೆ ರಾಮಕೃಷ್ಣ ಬೈಪಾಡಿತ್ತಾಯರಿಗೆ ಕಡಬದ ದುರ್ಗಾಂಬಿಕಾ ದೇವಸ್ಥಾನ ಮತ್ತು ಮಹಾಗಣಪತಿ ದೇವಸ್ಥಾನಗಳ ಪೂಜೆಯ ಕೆಲಸವಿತ್ತು. ಅದರಲ್ಲೇ ಅಮ್ಮ, ನಾನು, ನನ್ನ ತಮ್ಮಂದಿರಾದ ಅನಂತ, ಮೋಹನ ಮತ್ತು ಕೇಶವ, ತಂಗಿಯಂದಿರಾದ ಲಕ್ಷ್ಮೀ ಹಾಗೂ ಸುಲೋಚನಾರ ಜೀವನ ಸಾಗಬೇಕಿತ್ತು.

ನಾನೆಂದರೆ ಎಡಮಂಗಲ ನೂಚಿಲ ಮನೆಯ ಶಿಕ್ಷಕ, ಅರ್ಥಧಾರಿ ಎನ್.ಆರ್.ಚಂದ್ರರಿಗೆ ತುಂಬ ಇಷ್ಟ. ಹೀಗಾಗಿ ಕಡಬ ಕೆಂಚಭಟ್ರೆಯಲ್ಲಿದ್ದ ನನ್ನನ್ನು ಶಾಲೆಗೆ ಹೋಗಲು ಅವರ ಮನೆಯಲ್ಲಿಟ್ಟುಕೊಂಡರು. ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದೆ. ಅವರು ನನಗೆ ಮಾವ. ಎಂದರೆ, ನನ್ನ ಖಾಸಾ ಚಿಕ್ಕಪ್ಪ ಕೆ.ವಾಸುದೇವ ಬೈಪಾಡಿತ್ತಾಯರ ಪತ್ನಿ ರತ್ನಿ ಚಿಕ್ಕಮ್ಮನ ಅಣ್ಣ ಅವರು. ಅವರಿಗೆ ಮದುವೆಯಾಗಿತ್ತು, ಮಕ್ಕಳೆಂದರೆ ತುಂಬಾನೇ ಪ್ರೀತಿ ಅವರಿಗೆ. ನನ್ನ ಮೇಲೆ ಸ್ವಲ್ಪ ಹೆಚ್ಚೇ ವಾತ್ಸಲ್ಯವಿತ್ತವರಿಗೆ.

ನನಗಾಗ ಹತ್ತು ವರ್ಷ ಇರಬಹುದು. ಎಡಮಂಗಲ ಎಲಿಮೆಂಟರಿ 5ನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ಆ ಪರಿಸರದಲ್ಲಿ "ಯಕ್ಷಗಾನ ನಾಟಕ" ಎಂದಿತ್ತು. ಅಂದರೆ ಅದು ಬಯಲಾಟದ ರೀತಿ ಅಲ್ಲದ, ತಾಳಮದ್ದಳೆಯೂ ಅಲ್ಲದ ವಿಚಿತ್ರ, ಮಿಶ್ರ ಕಲಾ ಪ್ರಕಾರದಂತೆ. ಇಲ್ಲಿ ಯಕ್ಷಗಾನದ ಹಿಮ್ಮೇಳವಿತ್ತು, ಚೆಂಡೆ-ಮದ್ದಳೆಯಿತ್ತು. ಆದರೆ ಕುಣಿತ ಇರಲಿಲ್ಲ. ವೇಷ ಹಾಕಿ ಅರ್ಥ ಹೇಳುವ ಪದ್ಧತಿ. ಒಟ್ಟಾರೆಯಾಗಿ ತಾಳಮದ್ದಳೆಯಲ್ಲಿ ಕುಣಿತವಿಲ್ಲದ ವೇಷಗಳು ಅಂತ ಹೇಳಬಹುದೇನೋ.

ಇದರಲ್ಲಿ ನಮ್ಮ ಬಳ್ಪದ ವಿಷ್ಣು ಅಮ್ಮಣ್ಣಾಯರೂ (ಲಕ್ಷ್ಮೀಶ ಅಮ್ಮಣ್ಣಾಯರ ತಂದೆ) ವೇಷ ಮಾಡುತ್ತಿದ್ದರು. ಅವರ ಸಹೋದರ ರಾಮ ಅಮ್ಮಣ್ಣಾಯರ ಹಾಡುಗಾರಿಕೆ, ಮತ್ತೊಬ್ಬ ಸೋದರ ನಾರಾಯಣ ಅಮ್ಮಣ್ಣಾಯರ (ದಿನೇಶ ಅಮ್ಮಣ್ಣಾಯರ ತಂದೆ) ಮದ್ದಳೆವಾದನ. ಈ ಕಲೆಯು ತಾಳಮದ್ದಳೆಯ ರೀತಿಯಲ್ಲೇ, ಬಿಡ್ತಿಗೆ, ಮುಕ್ತಾಯ ಎಲ್ಲವಿತ್ತು.

ಚೆಂಡೆ ಪೆಟ್ಟು ಕೇಳಿಯೇ ಜನ ಸೇರುತ್ತಿದ್ದರು. ಕೃಷಿ ಪ್ರಧಾನವಾಗಿದ್ದ ಆ ಊರಿನ ಸುತ್ತಮುತ್ತಲಿನವರಿಗೆ ಮೊಬೈಲ್, ಟಿವಿಗಳಾಗಲೀ, ಅಥವಾ ನಾಟಕವೇ ಆಗಲೀ - ಯಾವುದೂ ಇಲ್ಲದ ಆ ಪ್ರದೇಶದಲ್ಲಿ ಮನರಂಜನೆಗೆ ಮುಖ್ಯ ಮಾರ್ಗವೇ ಈ ಯಕ್ಷಗಾನ ನಾಟಕ. ಸ್ಥಳೀಯರೇ ಸೇರಿಕೊಂಡು ಸಂಘ ಕಟ್ಟಿಕೊಂಡು ಇದರಲ್ಲಿ ಭಾಗವಹಿಸುತ್ತಿದ್ದರು. ದಿನದ ದುಡಿಮೆಯ ಜಂಜಡ ಕಳೆಯಲು ಸಂಜೆ ವೇಳೆಗೇ ಇಂಥ ಕಾರ್ಯಕ್ರಮ.

ಇದಕ್ಕೇ ಸ್ವಲ್ಪ ಮಟ್ಟಿಗೆ ಸಾಂಸ್ಥಿಕ ರೂಪ ದೊರೆತು, ಸ್ಥಳೀಯರೇ ಇರುವ ಯಕ್ಷಗಾನ ನಾಟಕ ಮಂಡಳಿಗಳು ಹುಟ್ಟಿಕೊಂಡವು. ಜಾತ್ರೆ ಅಥವಾ ಯಾವುದಾದರೂ ಕಾರ್ಯಕ್ರಮಗಳ ಸಂದರ್ಭ, ಯಕ್ಷಗಾನ ನಾಟಕವನ್ನೂ ಏರ್ಪಡಿಸಲಾಗುತ್ತಿತ್ತು. ಕೆಲವೊಮ್ಮೆ ಟಿಕೆಟ್ ಇಟ್ಟು ಕೂಡ ಈ ಯಕ್ಷಗಾನ ನಾಟಕ ಆಡಿಸುತ್ತಿದ್ದರು.

ಸುಮಾರು 3 ಗಂಟೆಯ ಕಾರ್ಯಕ್ರಮವದು. ಸುಳ್ಯ ತಾಲೂಕಿನ ಎಡಮಂಗಲ ಪಂಚಲಿಂಗೇಶ್ವರ ದೇವಸ್ಥಾನ ತುಂಬ ಪ್ರಸಿದ್ಧವಾದುದು. ಆ ದೇವಸ್ಥಾನದ ಜಾತ್ರೆ ಐದು ದಿನ ನಡೀತಿತ್ತು. ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ, ಸಂಗೀತ, ಯಕ್ಷಗಾನ ನಾಟಕ - ಹೀಗೆ ಒಂದೊಂದು ದಿನ ಒಂದೊಂದು ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು. ಊರಿನ ಹವ್ಯಾಸಿ ಕಲಾವಿದರೇ ಭಾಗವಹಿಸುತ್ತಿದ್ದರು.

ಇಂಥ ಯಕ್ಷಗಾನ ನಾಟಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಬಂಧಿಕರೇ ಇದ್ದುದರಿಂದ, ನನಗೆ ಹಾರ್ಮೋನಿಯಂಗೆ ಗಾಳಿ ಹಾಕುವ ಕೆಲಸ. ಹೀಗೆ ನಾನೂ ಒಬ್ಬ ಹಾರ್ಮೋನಿಯಂ ಕಲಾವಿದನಾಗಿದ್ದೆ ಬಾಲಕನಾಗಿದ್ದಾಗಲೇ! ಈ ರೀತಿಯಾಗಿ ನನ್ನೊಳಗೆ ಯಕ್ಷಗಾನದ ಹುಚ್ಚೊಂದು ನಿಧಾನವಾಗಿ ಬೆಳೆಯತೊಡಗಿತು.

ಇದರಿಂದಾಗಿಯೇ ಏನೋ, ಮುಂದೆ ನಾನು ಹಾರ್ಮೋನಿಯಂ ನುಡಿಸುವುದನ್ನೂ ಕಲಿತುಕೊಂಡಿದ್ದೆ. ಭಜನಾ ಕಾರ್ಯಕ್ರಮಗಳಿಗೆಲ್ಲ ನುಡಿಸುತ್ತಿದ್ದೆ. ಜೊತೆಗೆ ಅಮ್ಮಣ್ಣಾಯ ಕುಟುಂಬದ ಯಕ್ಷಗಾನ ಹಿಮ್ಮೇಳವನ್ನು ಕೇಳುತ್ತಲೇ ಬೆಳೆಯುತ್ತಿದ್ದೆ. ಇದು ನನ್ನೊಳಗಿನ ಯಕ್ಷಗಾನವನ್ನು ಬಡಿದೆಬ್ಬಿಸುತ್ತಲೇ ಇತ್ತು. ತತ್ಪರಿಣಾಮವಾಗಿಯೇ ಐದನೇ ತರಗತಿಗೇ ಓದು ಬಿಟ್ಟು, ಯಕ್ಷಗಾನವನ್ನೇ ಅಭ್ಯಸಿಸಿ, ಕಿರಿಯ ಪ್ರಾಯದಲ್ಲೇ ಅಂದರೆ ನನಗೆ ಸುಮಾರು 15 ವರ್ಷವಿರುವಾಗಲೇ ಯಕ್ಷಗಾನವನ್ನು ಕಲಿತುಬಿಟ್ಟೆ ಮತ್ತು ಕೂಡ್ಲು ಮೇಳಕ್ಕೂ ಸೇರಿಕೊಳ್ಳುವಂತಾಯಿತು. (ಯಕ್ಷಗಾನ.ಇನ್).

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು