ಬೆಂಗಳೂರಿನ ಯಕ್ಷ ಪ್ರಮೀಳೆಯರು: ನಾಗಶ್ರೀ ಜಿ.ಎಸ್. ಮತ್ತು ನಿಹಾರಿಕಾ ಭಟ್ |
ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -13
ಯಕ್ಷಗಾನವು ಜನಪದದೊಳಗೆ ಹಾಸುಹೊಕ್ಕಾಗಿ, ಧಾರ್ಮಿಕ ಭಾವನೆಗಳೊಂದಿಗೆ ಶ್ರದ್ಧೆ, ಸತ್ಯ, ನೀತಿ ಧರ್ಮವನ್ನು ಸಾರುತ್ತಾ, ಮನರಂಜನೆಯನ್ನೂ, ಮಾನಸಿಕ ಸೌಖ್ಯವನ್ನೂ ನೀಡುವ ಅಸಾಧಾರಣ ಕಲೆಯಾಗಿ ಬೆಳೆದಿದೆ ಎಂದು ವಿವರಿಸಿದ್ದಾರೆ ಕಲಾವಿದ, ಲೇಖಕ ಸುರೇಂದ್ರ ಪಣಿಯೂರ್.
ಸಂಸ್ಕೃತ ಭಾಷೆಯಲ್ಲಿದ್ದ ಮಹಾಭಾರತ, ರಾಮಾಯಣ, ಹಾಗೂ ಪುರಾಣಕಥೆಗಳು ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗದಂತಹ ಕಾಲಘಟ್ಟದಲ್ಲಿ ಕಡಲತಡಿಯ ಹಾಗೂ ಮಲೆನಾಡ ಭಾಗದ ಅದೆಷ್ಟೋ ಕವಿಗಳು ಈ ಕಥೆಗಳನ್ನು ತಿಳಿಕನ್ನಡ ಭಾಷೆಯಲ್ಲಿ ಪಾಮರರಿಗೂ ಅರ್ಥವಾಗುವ ರೀತಿಯಲ್ಲಿ ಗೇಯ ಪ್ರಬಂಧಗಳ ರೂಪದಲ್ಲಿ ರಚಿಸಿದರು. ಈ ಪ್ರಬಂಧಗಳು ಮುಂದೆ ಕಥಾ ಪ್ರಸಂಗಗಳಾಗಿ ರಂಗದಲ್ಲಿ ಕಲಾವಿದರ ಮೂಲಕ ಸಾದೃಶ್ಯಗೊಂಡವು. ಈ ರೀತಿಯಲ್ಲಿ ಕೌತುಕ ಹಾಗೂ ರಂಜನಾಶೀಲ ಗುಣವಿದ್ದ ಕಲೆಯು ಜನ ಸಾಮಾನ್ಯರನ್ನು ನೇರವಾಗಿ ತಲುಪುವಂತಾಯ್ತು. ಈ ಕಲೆಯ ಪ್ರದರ್ಶನದ ಮೂಲಕ ಜನರು ಧಾರ್ಮಿಕವಾಗಿ ಪ್ರಜ್ಞಾವಂತರಾದರು. ಕಥೆಯ ನೀತಿ ಸಾರದಿಂದ ನೈತಿಕತೆಯನ್ನು ಅರಿತರು. ಭಕ್ತಿ ಭಾವಗಳು ವೃದ್ಧಿಸಿದವು. ಇದಕ್ಕೆಲ್ಲ ಕಾರಣ ಯಕ್ಷಗಾನ ಕಲೆ.
ಯಕ್ಷಗಾನ ಕಲೆಯಲ್ಲಿ ಪ್ರದರ್ಶನಕ್ಕೆ ಅಳವಡಿಸಿದ ಕಥೆಗಳೆಲ್ಲವೂ ಮಹಾಭಾರತ, ರಾಮಾಯಣ, ಶಿವಲೀಲೆ ಹಾಗೂ ಮತ್ಸ್ಯ, ಮಾರ್ಕಂಡೇಯ, ಭಾಗವತ, ಭವಿಷ್ಯ, ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ, ವಿಷ್ಣು, ವರಾಹ, ವಾಮನ, ವಾಯು, ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಸ್ಕಂದ ಎಂಬ ಅಷ್ಟಾದಶ ಪುರಾಣಗಳಿಂದ ಆಯ್ದು ಕೊಂಡದ್ದಾಗಿವೆ. ಈ ಎಲ್ಲ ಕಥೆಗಳು ರಂಗದಲ್ಲಿ ಅನಾವರಣಗೊಂಡ ದೆಸೆಯಿಂದ ಜನಸಾಮಾನ್ಯರಿಗೆ ಅವುಗಳ ಸಾರವನ್ನು ಸುಲಭ ಸಾಧ್ಯವಾಗಿ ತಿಳಿಯುವಂತಾಯ್ತು. ಈ ರೀತಿಯಲ್ಲಿ ಯಕ್ಷಗಾನ ಕಲೆಯು ಅಸಾಧಾರಣವಾದ ದೃಶ್ಯ ಮಾಧ್ಯಮವೂ ಹೌದು.
ಗ್ರಾಮೀಣ ಭಾಗದಲ್ಲಿರುವ ಜನ ಸಾಮಾನ್ಯರು ತಮ್ಮ ಬಿಡುವಿನ ಕಾಲದಲ್ಲಿ ಸಾಂಸ್ಕೃತಿಕವಾಗಿ ರಂಜನೆಯನ್ನು ಹೊಂದಲು ಆಶ್ರಯಿಸಿದ್ದು ಈ ಯಕ್ಷಗಾನ ಕಲೆಯನ್ನು. ಬದುಕಿನ ಜಂಜಡಗಳ ನಡುವೆ ತಮ್ಮ ಆಯಾಸ, ನೋವುಗಳನ್ನು ಮರೆಯಲು, ನಲಿವುಗಳನ್ನು ಹಂಚಿಕೊಳ್ಳಲು ಸುಲಭವಾಗಿ ದಕ್ಕಿದ ಕಲೆ ಯಕ್ಷಗಾನ.
ರಾತ್ರಿಯಿಡೀ ಅಲೌಕಿಕವಾದ ಭ್ರಮಾಲೋಕದಲ್ಲಿ ವಿಹರಿಸುತ್ತಾ ತಾನೂ ಆ ಲೋಕದೊಳಗೆ ಸಹಭಾಗಿಯಾಗುವುದೇ ಒಂದು ಅದಮ್ಯವಾದ ಸಂತೋಷ. ನಾಟಕರಂಗ ಇನ್ನೂ ಕರಾವಳಿ ತೀರಕ್ಕೆ ಕಾಲಿಡದ ಆ ಸಮಯದಲ್ಲಿ ಯಕ್ಷಗಾನದ ಗೀತಯುಕ್ತ ಕಥಾನಕಗಳು ಜನಪದರಿಗೆ ಮಾನಸಿಕ ಸೌಖ್ಯ, ರಂಜನೆ ಹಾಗೂ ನೆಮ್ಮದಿಯನ್ನು ನೀಡುತ್ತಿದ್ದವು.
ಜನ ಸಾಮಾನ್ಯರು ತಮ್ಮ ದುಃಖ, ದುಗುಡ, ಕಷ್ಟ ಕಾರ್ಪಣ್ಯಗಳ ಪರಿಹಾರಾರ್ಥವಾಗಿ ನೇರವಾಗಿ ಆಶ್ರಯಿಸುವುದು ದೇವರನ್ನು. ದೇವರ ಸಂಪ್ರೀತಿಗಾಗಿ ಪೂಜೆ, ಪುರಸ್ಕಾರ ಸೇವೆ ಇತ್ಯಾದಿಗಳನ್ನು ಹರಕೆಯ ರೂಪವಾಗಿ ಸಲ್ಲಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವಂತಹ ನಂಬಿಕೆ ಇಡುತ್ತಾರೆ. ಇಂತಹ ಆರಾಧನೆಯಲ್ಲಿ ಯಕ್ಷಗಾನ ನಾಟ್ಯಸೇವೆಯೂ ಒಂದು. ಹಾಗಾಗಿ ತಾವು ನಂಬಿದ ದೇವರ ಪ್ರೀತ್ಯರ್ಥವಾಗಿ ಯಕ್ಷಗಾನ ಸೇವೆಯನ್ನು ಸಲ್ಲಿಸಿ ತನ್ಮೂಲಕ ದೇವರ ಆರಾಧನೆಯನ್ನು ಮಾಡಿ ಕೃತಾರ್ಥರಾಗುತ್ತಾರೆ. ಇದು ಯಕ್ಷಗಾನ ಕಲೆಯ ಆರಾಧನಾ ರೂಪ.
ಆರಾಧನಾ ಕಲೆಯಾಗಿ ಪ್ರದರ್ಶನಗೊಂಡ ಯಕ್ಷಗಾನ ಕಲೆಯಿಂದಾಗಿ ದೇವ-ದೇವಿಯರು, ಪುರಾಣ ಪುಣ್ಯಪುರುಷರು, ದೇವಾನುದೇವತೆಗಳು ರಂಗದಲ್ಲಿ ಮೈತಳೆದು ಬಂದು ಅಲೌಕಿಕ ಜಗತ್ತನ್ನು ಅನಾವರಣಗೊಳಿಸಿಸುತ್ತಾರೆ.
ತಾವು ಆರಾಧಿಸುವ ದೇವರ ರೂಪವು ರಂಗಸಾಕ್ಷಾತ್ಕಾರವಾದಾಗ ಭಕ್ತಿರಸ ಹೊಂದಿದ ಭಾವುಕ ಪ್ರೇಕ್ಷಕರು ದೇವರ ಇರುವಿಕೆಯ ಜೊತೆಗೆ ತಾದಾತ್ಮ್ಯ ಭಾವವನ್ನು ಹೊಂದುತ್ತಾರೆ. ಭಕ್ತಿಯ ಪರಾಕಾಷ್ಠೆಯಲ್ಲಿ ಪರವಶರಾಗಿ ಎಷ್ಟೋ ಪ್ರೇಕ್ಷಕರು ರಂಗದಲ್ಲಿಯ ರಾಮ, ಕೃಷ್ಣ, ಶ್ರೀದೇವಿ ಮುಂತಾದ ಪಾತ್ರಧಾರಿಗಳಿಗೆ ಭಕ್ತಿ ಭಾವದಿಂದ ಕಾಲಿಗೆ ಎರಗಿದ್ದು ಅವರದಾದ ಭಾವ ಭಕ್ತಿ ತನ್ಮಯತೆಯನ್ನು ತೋರಿಸುತ್ತದೆ. ಇದು ಜನರಲ್ಲಿ ಧಾರ್ಮಿಕ ಭಾವನೆಯನ್ನು ಉದ್ದೀಪನಗೊಳಿಸಿ ಜನರು ಧರ್ಮವಂತರಾಗಲೂ ಕಾರಣವಾಗಿದೆ.
ಈ ರೀತಿಯಾಗಿ ಯಕ್ಷಗಾನ ಕಲೆಯು ಜನ ಸಾಮಾನ್ಯರಿಗೆ ತಮ್ಮ ಬದುಕಿನ ಒಂದು ಅಂಗವಾಗಿ ಬೆಳೆದು ಬಂದ ಕಲೆಯಾಯ್ತು. ಅಂತಹ ಸಾಂಪ್ರದಾಯಿಕ ಆರಾಧನಾ ಕಲೆಯು ಯಾವುದೇ ರೀತಿಯ ಅನ್ಯ ರಂಗದ ಅಪಸವ್ಯಕ್ಕೆ ಒಳಗಾಗದೆ ಪೂಜ್ಯನೀಯ ಭಾವದಿಂದ ರಂಗದಲ್ಲಿ ಅಭಿವ್ಯಕ್ತಗೊಳ್ಳುವ ಬದ್ಧತೆ ಇದೆ. ಇದು ಕಲಾವಿದರ, ಯಜಮಾನರ, ಕಲಾ ಪೋಷಕರ ಮತ್ತು ಪ್ರೇಕ್ಷಕರ ಜವಾಬ್ದಾರಿ ಕೂಡಾ ಹೌದು. (ಯಕ್ಷಗಾನ್.ಇನ್).
✍ ಸುರೇಂದ್ರ ಪಣಿಯೂರ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಲೇಖನ