ಸಾಮಾಜಿಕ ಹಿತಕ್ಕೆ ಯಕ್ಷಗಾನ: ಕೃಷಿ ವಿಜಯ ತಾಳಮದ್ದಳೆಯ ಸವಿನೆನಪು

ಕಡಬದ ಯಕ್ಷಗಾನ ತಾಳಮದ್ದಳೆ ತಂಡ: ಮೇಲಿನ ಸಾಲಿನಲ್ಲಿ ಕಡಬ ಅನಂತ ರಾವ್, ಪ್ರಫುಲ್ಲ ಚಂದ್ರ ರೈ, ಅನಂತ ಬೈಪಾಡಿತ್ತಾಯ, ಮುರಳಿ ಬೈಪಾಡಿತ್ತಾಯ. ಕೆಳಗಿನ ಸಾಲಿನಲ್ಲಿ ಕಡಬ ರಾಮಯ್ಯ ರೈ, ಕೆ.ವಿ.ಗಣಪಯ್ಯ, ಕಲ್ಪುರೆ ನಾರಾಯಣ ಭಟ್, ಹರಿನಾರಾಯಣ ಮತ್ತು ಲೀಲಾ ಬೈಪಾಡಿತ್ತಾಯರು. (1970ರ ದಶಕದ ಉತ್ತರಾರ್ಧದ ಚಿತ್ರ).
ಪುತ್ತೂರು-ಸುಳ್ಯ ಪರಿಸರವು ಯಕ್ಷಗಾನದ ಆಡುಂಬೊಲ. ಸ್ವಾತಂತ್ರ್ಯಾನಂತರದಲ್ಲಿ ಕಡಬದಲ್ಲಿ ಕಡಬ ಮಿತ್ರವೃಂದ ಎಂಬ ತಾಳಮದ್ದಳೆ ತಂಡ ಹುಟ್ಟಿಕೊಂಡು, ಹಲವು ಪ್ರದರ್ಶನಗಳನ್ನು ನೀಡಿತ್ತು. ಇದರಲ್ಲಿ ಜಪಾನೀ ಕೃಷಿ ಪದ್ಧತಿ, ಸಂತಾನ ನಿಯಂತ್ರಣ - ಈ ಸಂದೇಶಗಳನ್ನು ಸಾರಲು ಸರಕಾರವೇ ಈ ತಂಡವನ್ನು ಸಂಪರ್ಕಿಸಿತ್ತು. ಆ ಕಾಲದಲ್ಲಿ ಆಹಾರದ ಅಭಾವ, ಕೃಷಿ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತಿದೆ ಈ ಲೇಖನ. ಇಲ್ಲಿ ಖ್ಯಾತ ಅರ್ಥಧಾರಿಯಾಗಿದ್ದ ಶಿಕ್ಷಕರೂ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕೆ.ವಿ.ಗಣಪಯ್ಯ ಅವರು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಕ್ಷರ ರೂಪ ನೀಡಿದವರು ನಿವೃತ್ತ ಶಿಕ್ಷಕ, ಅರ್ಥಧಾರಿ ಗಣರಾಜ ಕುಂಬ್ಳೆಯವರು.
ಕೃಷಿ ವಿಜಯ - ಯಕ್ಷಗಾನ ಪ್ರಸಂಗವೊಂದರ ಹೆಸರಿದು. ಯಕ್ಷಗಾನದಲ್ಲೇನು ಕೃಷಿ? ಏನು ಉದ್ದೇಶ? ನಾವು ಒಂದಷ್ಟು ಹಿಂದಣ ಕಾಲದತ್ತ ಸರಿಯಬೇಕು. ಸುಮಾರು 1957-58ರ ಕಾಲವಿರಬೇಕು. ನಮ್ಮ ದೇಶವು ಸ್ವತಂತ್ರಗೊಂಡು ಪ್ರಜಾಪ್ರಭುತ್ವ ನೆಲೆಯಾಗುತ್ತಿತ್ತು. ಆರ್ಥಿಕ ಯೋಜನೆಗಳು ಕಾರ್ಯಗತಗೊಳ್ಳುತ್ತಾ ಇದ್ದ ಸಮಯ. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಮೊದಲ ಮಣೆ. 'ಹಸಿರು ಕ್ರಾಂತಿ'ಯ ಘೋಷಣೆ ಮೊಳಗುತ್ತಿತ್ತು.

ನಿಜಕ್ಕಾದರೆ, ಆಗ ಆಹಾರ ಧಾನ್ಯಗಳ ಅಭಾವವೂ ದೇಶವನ್ನು ಕಾಡುತ್ತಿದ್ದುದು ನೆನಪಾಗುತ್ತದೆ. 'ಜಪಾನೀ ಕೃಷಿ ಪದ್ಧತಿ'ಯ ಪ್ರಚಾರ ಮಾಡಿ, ದೇಶದ ಕೃಷಿ ಉತ್ಪಾದನೆಯನ್ನು ಬೆಳೆಸಬೇಕೆಂಬ ಸರಕಾರದ ನಿರ್ಧಾರದಂತೆ ಇಲಾಖೆಗಳೆಲ್ಲವೂ ಕಾರ್ಯಪ್ರವೃತ್ತವಾಗಿದ್ದವು. ಇನ್ನೊಂದು, ಜನಸಂಖ್ಯಾ ಸ್ಫೋಟದ ಸಮಸ್ಯೆ. ಇದರ ನಿಯಂತ್ರಣಕ್ಕೆ ತಕ್ಕ ಯೋಜನೆಗಳು.

ಶಿಕ್ಷಕನಾಗಿದ್ದ ನನಗೆ ಒಂದು ದಿನ ಪುತ್ತೂರು ಸಹಾಯ ಕಮಿಶನರರಿಂದ ಕರೆ ಬಂತು. ಪುತ್ತೂರಿಗೆ ಬಂದೆ. ಸಹಾಯಕ ಕಮಿಶನರ್ ತಿಮ್ಮಪ್ಪ ಶೆಟ್ರು ದಕ್ಷ ಅಧಿಕಾರಿ ಎಂದೇ ಹೆಸರುವಾಸಿ. ಏನಪ್ಪಾ, ಯಾಕಪ್ಪಾ ಎಂದುಕೊಂಡು ಬಂದಿದ್ದ ನನ್ನನ್ನು ಕರೆದು, ಕುಳ್ಳಿರಿಸಿ, ತುಂಬ ಸೌಜನ್ಯದಿಂದ ಮಾತನಾಡಿಸಿದರು.

'ಯಕ್ಷಗಾನ ತಾಳಮದ್ದಳೆಯ ಮೂಲಕ ಜಪಾನೀ ಕೃಷಿ ಪದ್ಧತಿಯ ಪ್ರಚಾರ ಮಾಡಲು ಸಾಧ್ಯವೇ?' ಎಂದವರು ಪ್ರಶ್ನಿಸಿದರು. ನನಗೋ, ಒಂದು ಬಾರಿ ಆಶ್ಚರ್ಯವೆನಿಸಿತು. ಆದರೂ ಪ್ರಯತ್ನಿಸುವ ಭರವಸೆ ನೀಡಿದೆ. 'ಪುತ್ತೂರು ಕಮಿಶನರ್ ಕಚೇರಿಯ ಅಧೀನ ಗ್ರಾಮಗಳಿಗೆ ಸೂಚನೆ ಕಳಿಸಿ, ತಾಳಮದ್ದಳೆ ಸ್ಫರ್ಧೆ ಏರ್ಪಡಿಸುವ, ವಿಷಯವು ಕೃಷಿ ಸಂಬಂಧವಿರಲಿ' ಎಂದು ಸಲಹೆ ನೀಡಿದೆ.

ಹಾಗೆಯೇ, ಮುಂದೆ ಸ್ಫರ್ಧೆ ನಡೆಯಿತು. ಮೂರು ತಂಡಗಳು ಮಾತ್ರ ಭಾಗವಹಿಸಿದ್ದವು. ಅವುಗಳಲ್ಲಿ ನಮ್ಮ 'ಕಡಬ ಮಿತ್ರವೃಂದ (ರಿ)' ಪ್ರಥಮ ಸ್ಥಾನ ಗಳಿಸಿತ್ತು. ನಾವು 'ಕೃಷಿ ವಿಜಯ' ಅಥವಾ 'ಮಲ್ಲ ವಿಜಯ' ಎಂಬ ಪ್ರಸಂಗವನ್ನು ಪ್ರದರ್ಶಿಸಿದ್ದೆವು.

ಇದರ ಕಥಾನಕ ಸ್ಥೂಲವಾಗಿ ಹೀಗಿದೆ:
ಮಲ್ಲ ಗೌಡನೆಂಬ ಕೃಷಿಕ, ಊರ ಮುಂದಾಳು. ಅವನಿಗೊಬ್ಬ ಮಗ. ಸಾಂಪ್ರದಾಯಿಕ ಕೃಷಿ ವಿಧಾನದಿಂದಾಗಿ ಕಾಳಿಗಿಂತ ಜೊಳ್ಳು ಹೆಚ್ಚಿತ್ತು. ಮಗನಿಗೆ ಆಧುನಿಕ ಕೃಷಿ ಪದ್ಧತಿಯಲ್ಲಿ ಆಸಕ್ತಿ. ಆಧುನಿಕ ಚಿಂತನೆಯವನೀತ. ಮದುವೆಯಾದರೂ ಬೇಗನೆ ಸಂತಾನ ಬೇಡವೆಂದು ತಡೆದವನು. ಕೋಳಿ ಅಂಕ ತಪ್ಪು, ಹಿಂಸೆ ಅಂತೆಲ್ಲ ಪ್ರತಿಪಾದಿಸುವವನು. ಕಂಬಳದ ಕೋಣಗಳನ್ನು ಹೊಡೆದು ಓಡಿಸುವುದು ಸರಿಯಲ್ಲ, ಪ್ರೀತಿಯಿಂದ ಸಲಹಿ ಕೃಷಿಗೆ ಬಳಸಬೇಕು ಎಂಬ ವಾದವನ್ನು ತಂದೆಯೊಂದಿಗೆ ಮಾಡುತ್ತಿರುತ್ತಾನೆ. ಒಂದು ದಿನ ಇವರ ಮನೆಗೆ ಗ್ರಾಮ ಸೇವಕನೊಬ್ಬ ಬರುತ್ತಾನೆ, ಗೌಡನನ್ನು ಮಾತನಾಡಿಸುತ್ತಾನೆ.

"ಏನಿದು ಯಜಮಾನ | ಮಾಡುವೆ ಏತಕೆ ದುಮ್ಮಾನ...."

ಎಂದು ಕೇಳುತ್ತಾನೆ. ಮಲ್ಲ ಗೌಡನು ಕೃಷಿಯ ಸಮಸ್ಯೆಗಳನ್ನು ವಿವರಿಸಿ, ಸಂಪ್ರದಾಯ ಬಿಡಲೊಲ್ಲದ ಮನಃಸ್ಥಿತಿಯನ್ನು ತೋರಿದಾಗ ಗ್ರಾಮ ಸೇವಕನು, 'ಜಪಾನಿ' ಕೃಷಿ ಪದ್ಧತಿಯ ಮಹತ್ವವನ್ನು ತಿಳಿಸುತ್ತಾನೆ. ಸದ್ಯದಲ್ಲೇ ಪುತ್ತೂರಿನಲ್ಲಿ ಕೃಷಿ ಸಮ್ಮೇಳನವು ನಡೆಯಲಿದ್ದು, ಅದರಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ಸಲಹೆ ನೀಡುತ್ತಾನೆ. ತಂದೆ, ಮಗ ಇಬ್ಬರೂ ಸೇವಕನೊಡನೆ ಸಮ್ಮೇಳನಕ್ಕೆ ಬರುತ್ತಾರೆ. ಆಧುನಿಕ ಕೃಷಿ ಪದ್ಧತಿಗಳನ್ನು ತಿಳಿದುಕೊಳ್ಳುತ್ತಾರೆ. ಅಲ್ಲದೆ, ಸಂತಾನ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಆರೋಗ್ಯ ಇಲಾಖೆಯವರು ಪ್ರದರ್ಶಿಸುತ್ತಾರೆ.

'ಮಲ್ಲನು ಸೇವಕನೊಡನೆ ಪ್ರವೇಶಿಸ|ಲಲ್ಲಿಗೆ ಬರುತವನು || ನಿಲ್ಲಿರಿ ನಾ ನಿಮಗೆಲ್ಲವ ಹೇಳುವೆ ಎನುತಲಿ ತೋರಿದನು||'

ಮಲ್ಲ ಗೌಡನ ಮನಃ ಪರಿವರ್ತನೆಯೊಂದಿಗೆ ಪ್ರಸಂಗಕ್ಕೆ ಮಂಗಳವಾಗುತ್ತದೆ.

ಹೀಗೆ, ಜಪಾನಿ ಕೃಷಿ ಪದ್ಧತಿ ಹಾಗೂ ಸಂತತಿ ನಿಯಂತ್ರಣವನ್ನು ಕುರಿತ ಯಕ್ಷಗಾನ ಪ್ರಸಂಗವು ತಾಳಮದ್ದಳೆಯಾಗಿ ಮೂಡಿಬಂದಿತ್ತು. ತಂಡದಲ್ಲಿ ಭಾಗವತರಾಗಿ ಆನಂದ ರೈ, ಚೆಂಡೆ ಮದ್ದಳೆ ವಾದಕರಾಗಿ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಅನಂತ ಬೈಪಾಡಿತ್ತಾಯರು ಇದ್ದರು. ಹರಿನಾರಾಯಣರ ವಿವಾಹಾನಂತರ ಕೆಲವು ಪ್ರದರ್ಶನಗಳಲ್ಲಿ ಪತ್ನಿ ಲೀಲಾ ಬೈಪಾಡಿತ್ತಾಯರು ಭಾಗವತಿಕೆ ಮಾಡಿದ್ದರು.

ಅರ್ಥಧಾರಿಗಳಾಗಿ ನಾನು (ಕೆ.ವಿ.ಗಣಪಯ್ಯ), ಕಲ್ಪುರೆ ವಾಸುದೇವ ಭಟ್, ಪ್ರಫುಲ್ಲ ಚಂದ್ರ ರೈ, ರಾಮಯ್ಯ ರೈ, ಕಡಬ ಅನಂತ ರಾವ್ ಮುಂತಾದವರಿದ್ದರು.

ಮುಂದೆ ಐದಾರು ವರ್ಷಗಳ ಕಾಲ ವಾರ್ಷಿಕವಾಗಿ ಅನೇಕ ಕಡೆಗಳಲ್ಲಿ ಕಡಬ ಮಿತ್ರ ವೃಂದವು ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೀಡಿತು.

'ಸಂತಾನ ನಿಯಂತ್ರಣ', 'ಮಿತ ಸಂತಾನ' ಇಂತಹ ವಿಚಾರಗಳನ್ನು ಪೌರಾಣಿಕ ಪ್ರಸಂಗಗಳ ಮೂಲಕವೂ ಪ್ರಚುರಪಡಿಸಿದ್ದಿದೆ. ಉದಾಹರಣೆಗೆ, 'ಮಧ್ಯಮ ವ್ಯಾಯೋಗ'. ಇದರಲ್ಲಿ ಕುಂತಿಗೆ ಮೂರು ಮಂದಿ ಮಕ್ಕಳು. ಮಿತ ಸಂತತಿಯು ಹಿತ ಸಂತತಿಯಾಗಿ ಹೇಗೆ ಮೇಲ್ಮೆಯನ್ನು ಸಾಧಿಸಿತೆಂಬುದನ್ನು ತೋರಿಸಿಕೊಡಲಾಗುತ್ತಿತ್ತು.

ಮಂಗಳೂರು ಪುರಭವನದಲ್ಲಿ ನಡೆದಿದ್ದ ತಾಳಮದ್ದಳೆಗೆ ಅಭೂತಪೂರ್ವ ಪ್ರೋತ್ಸಾಹ ದೊರೆತುದು ಮರೆಯಲಾಗದ್ದು. ಮಾಗಧ ವಧೆ, ಸುಭದ್ರಾ ಕಲ್ಯಾಣಗಳನ್ನೂ ಆಯ್ದುಕೊಂಡು, ಪ್ರದರ್ಶಿಸಿದ್ದಿದೆ.

ಇವೆಲ್ಲ ಯಕ್ಷಗಾನದ ಸವಿ ಮೆಲುಕುಗಳು. ಯಕ್ಷಗಾನದ ಅಭಿರುಚಿ ತೀವ್ರವಾಗಿದ್ದರಿಂದ ಇವೆಲ್ಲ ನಡೆಯಿತು. ಆರೋಗ್ಯ ಇಲಾಖೆಯು ನಮ್ಮ ಕಾರ್ಯಕ್ರಮವೊಂದಕ್ಕೆ 500 ರೂಪಾಯಿಗಳನ್ನು ನೀಡುತ್ತಿತ್ತು. ಆ ಕಿಂಚಿತ್ ಮೊತ್ತವು ನಮ್ಮ ಪ್ರಯಾಣ ವೆಚ್ಚ, ಕಿರು ಸಂಭಾವನೆಗಳಿಗೆ ಸಾಲುತ್ತಿತ್ತು, ಅಷ್ಟೇ. ಆದರೆ ಯಕ್ಷಗಾನ ಕಲಾ ಮಾಧ್ಯಮವನ್ನು ಸಾಮಾಜಿಕ ಹಿತಕ್ಕಾಗಿ ಬಳಸಿದ ಸಾರ್ಥಕತೆಯು ಎದೆತುಂಬಿದೆ. (ಯಕ್ಷಗಾನ.ಇನ್)

ಮಾಹಿತಿ: ಕೆ.ವಿ.ಗಣಪಯ್ಯ ಆಲಾಜೆ

✍ ನಿರೂಪಣೆ: ಗಣರಾಜ ಕುಂಬ್ಳೆ, ರಾಮಕುಂಜ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು