ಪಣಿಯೂರು ಯಕ್ಷಲೋಕ-3: ಆಂಧ್ರ, ತಮಿಳುನಾಡು, ಗೋವೆಯಲ್ಲೂ ಯಕ್ಷಗಾನದ ಬೇರುಗಳು

ಪ್ರಾತಿನಿಧಿಕ ಚಿತ್ರ
(ಕಲಾವಿದ, ಸಂಘಟಕ ಸುರೇಂದ್ರ ಪಣಿಯೂರು ಲೇಖನ ಸರಣಿ. ಯಕ್ಷಗಾನಕಲೆ- ಪ್ರೇಕ್ಷಕವರ್ಗ- ದೃಷ್ಟಿಕೋನ-3)

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯು ತನ್ನದೇ ಆದ ಸುದೀರ್ಘವಾದ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪರಶುರಾಮನು ತನ್ನ ಕೊಡಲಿಯನ್ನು ಎಸೆದು ಸೃಷ್ಟಿಸಿದನು ಎಂಬ ಐತಿಹ್ಯ ಇರುವುದರಿಂದ ಈ ಜಿಲ್ಲೆಯನ್ನು ಪರಶುರಾಮ ಕ್ಷೇತ್ರ ಎಂದೂ ಕರೆಯುತ್ತಾರೆ.

ಪಶ್ಚಿಮ ದಿಕ್ಕಲ್ಲಿ ಸಂಪೂರ್ಣವಾಗಿ ಕಡಲು ಆವರಿಸಿದ ಕಾರಣ ಕರಾವಳಿ ಜಿಲ್ಲೆ ಅಂತಲೂ ಕರೆಯುತ್ತಾರೆ. ತುಳು ಭಾಷಿಗರು ಅಧಿಕವಿರುವುದರಿಂದ ತುಳುನಾಡು ಎಂದೂ ಕರೆಯುತ್ತಾರೆ.

ಈ ಜಿಲ್ಲೆಯು 8ನೇ ಶತಮಾನದಿಂದ 14ನೇ ಶತಮಾನದವರೆಗೆ ಅಳುಪರು, ತದನಂತರ ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ರಾಜಕೀಯವಾಗಿ ಧಾರ್ಮಿಕವಾಗಿ ಹಲವು ರೀತಿಯ ಏಳು ಬೀಳುಗಳನ್ನು ಕಂಡ ಜೊತೆಗೆ ಜಿಲ್ಲೆ ವಿದ್ಯಾವಂತರ ಜಿಲ್ಲೆ ಎನ್ನವುದಾಗಿಯೂ ಗುರುತಿಸಿಕೊಂಡಿದೆ.

ಈ ಎಲ್ಲ ಬೆಳವಣಿಗೆಗಳ ಜೊತೆಗೆ ನಮ್ಮ ಕರಾವಳಿ ಜಿಲ್ಲೆಯಲ್ಲಿ ಯಕ್ಷಗಾನವು ಯಾವಾಗ?  ಹೇಗೆ ? ಬೇರೂರಿತು ಅನ್ನೋದನ್ನು ನೊಡುತ್ತಾ ಹೋದಾಗ ಕೆಲವೊಂದು ಅಂಶಗಳು ತಿಳಿದು ಬರುತ್ತವೆ.

17ನೇ ಶತಮಾನದಲ್ಲಿ ಆಂಧ್ರದ ಮಚಲೀಪಟ್ಟಣದಲ್ಲಿ ಯಕ್ಷಗಾನ ಆಟ ಇತ್ತು, ಅದು ನಂತರದಲ್ಲಿ ತಮಿಳುನಾಡಿಗೂ ಹಬ್ಬಿತು ಅನ್ನುತ್ತಾರೆ. ಇದಕ್ಕೆ 'ಭಾಗವತರಆಟ', 'ದಶಾವತಾರ' ಅನ್ನುತ್ತಿದ್ದರೆಂಬ ಪ್ರತೀತಿ ಇದೆ. ಈ  ಪೂಜಾ ರೂಪದ ಆಟ ಗೋವೆ ಪ್ರಾಂತ್ಯದಲ್ಲೂ ಇದೆ. ಅದರ ಆರಂಭಿಕ ಸ್ತುತಿ ಕನ್ನಡದಲ್ಲಿಯೇ ಇದೆ! ಮುಂಚೆ ಈ ಯಕ್ಷಗಾನವನ್ನು ಐಗಳ ಮಠದಲ್ಲಿ ಕಲಿಸುವ ಪದ್ದತಿ ಇತ್ತು ಎಂಬ ಮಾಹಿತಿಯೂ ದೊರೆಯುತ್ತದೆ.

ಯಕ್ಷಗಾನ ಪದ ಉತ್ಪತ್ತಿ ಬಗ್ಗೆ ಮುಳಿಯ ತಿಮ್ಮಪ್ಪಯ್ಯನವರ ಮಾತಿನ ಪ್ರಕಾರ, ಯಕ್ಷ ಅನ್ನೋದು ಯಜ್ಞ ಮಾಡು ಅಥವಾ ಪೂಜೆ ಮಾಡು ಎಂಬರ್ಥ, ಇದರಿಂದ ಹುಟ್ಟಿದ ಪದವೇ ಯಕ್ಷಗಾನ. ಪ್ರಾಚೀನ ಕಾಲದಲ್ಲಿ ದಕ್ಷಿಣ ಪ್ರಾಂತ್ಯದಲ್ಲಿ ಯಕ್ಷರೆಂಬ ಜನರಿದ್ದರು, ಅವರ ಹಾಡುಗಾರಿಕೆಯೇ 'ಯಕ್ಷಗಾನ' ಎಂದೂ ಹೇಳಲಾಗುತ್ತಿದೆ.

ಡಾ. ಶಿವರಾಮ ಕಾರಂತರು ಹೇಳುವಂತೆ, ಸಂಪ್ರದಾಯಬದ್ಧ ಸಂಗೀತವನ್ನು ಗಂಧರ್ವಗಾನವೆಂದು ಒಂದು  ಸಮಾಜದ ಜನರು ಕರೆದರೆ... ಅದಕ್ಕೆ ವಿಭಿನ್ನವಾದ ಮತ್ತೊಂದು ಗಾನ ಸಂಪ್ರದಾಯವನ್ನು ಯಕ್ಷಗಾನ ಅಂತ ನಮ್ಮ ನಾಡಿನ ಜನರು ಕರೆದರು.

ಅದೇ ರೀತಿ ಭೀಮರಾವ್ ಚಿಟಗುಪ್ಪಿಯವರು 'ಯತಿ'ಗೆ ಸಮಾನಾರ್ಥ ಇರುವ 'ಜಕ್ಕ' ಪದವು ಸಂಸ್ಕೃತದಲ್ಲಿ ಯಕ್ಷವಾಗಿ ಗಾನದೊಡನೆ ಸೇರಿ 'ಯಕ್ಷಗಾನ'ವಾಯಿತು ಅನ್ನುತ್ತಾರೆ.

ವೈಷ್ಣವ ಪಂಥ ಪ್ರಭಾವದಿಂದ ರೂಪುಗೊಂಡ ಯಕ್ಷಗಾನ ಆಟಕ್ಕೆ ದಶಾವತಾರ ಆಟವೆಂದೂ ಹೆಸರಾಯಿತು. 15ನೇ ಶತಮಾನದವರೆಗೆ 'ಶಿವಲೀಲೆ' ಆಡುತ್ತಿದ್ದ ಆಂಧ್ರದ ಯಕ್ಷಗಾನದವರೂ ಕೂಡ ಮುಂದೆ ಭಾಗವತ ಪುರಾಣ ಕತೆ ಆಯ್ದುಕೊಂಡದ್ದು ತಿಳಿದು ಬರುತ್ತದೆ.

ಬಿದನೂರು ವೀರಭದ್ರ ನಾಯಕನು 1720ರಲ್ಲಿ ಬಿಜಾಪುರಕ್ಕೆ ಹೋಗಿ ಅಲ್ಲಿಯ ಬಾದಶಹನೆದುರು 'ದಶಾವತಾರ' ಆಟ ಆಡಿಸಿ ಅನಂದಗೊಳಿಸಿ ಅವನಿಂದ ಶತ್ರು ಸಂಹಾರಕ್ಕೆ ನೆರವು ಪಡೆದನೆಂಬ ಉಲ್ಲೇಖವಿದೆ.

ಹಾಗೆಯೇ ಕಂಠೀರವ ನರಸರಾಜರು ದಶಾವತಾರ ನೋಡಿದ್ದರೆಂದು ಗೋವಿಂದ ವೈದ್ಯನ 'ಕಂಠೀರವ ನರಸ ರಾಜ ವಿಜಯ'ದಿಂದ ತಿಳಿದುಬರುತ್ತದೆ.

ಮುಮ್ಮಡಿ ಕೃಷ್ಣರಾಜ ಒಡೆಯರು ಧರ್ಮಸ್ಥಳದಿಂದ ಯಕ್ಷಗಾನ ಕಲಾವಿದರನ್ನು ಮೈಸೂರಿಗೆ ಕರೆಸಿಕೊಂಡದ್ದಕ್ಕೆ ಆಧಾರವಿದೆ. ಸಾಂಗ್ಲಿಯ ರಾಜ ಕರ್ಕಿಯ ಮೇಳವನ್ನು ಕರೆಸಿ ಆಟ ಆಡಿಸಿದ ದೆಸೆಯಿಂದ ಮರಾಠಿ ರಂಗಭೂಮಿಯಲ್ಲೂ ಕ್ರಾಂತಿಯುಂಟಾಯಿತು ಎಂಬ ವಿಚಾರ ಪ್ರಸಿದ್ಧವಾಗಿದೆ.

ಯಕ್ಷಗಾನ ಬಯಲಾಟವು ದೃಶ್ಯ ಶ್ರಾವ್ಯ ಪ್ರದರ್ಶನವಾಗಿ ಬೆಳೆದುಕೊಂಡು, ಧಾರ್ಮಿಕ ಪಾವಿತ್ರ್ಯದ ಜೊತೆಗೆ ಮನರಂಜನೆ ಸೇರಿ, ಮಹಾಪುರುಷರ ಚರಿತ್ರೆಗಳನ್ನೂ ಪ್ರಚುರಪಡಿಸುವ ಸಾಧನವಾಗಿಯೂ ರೂಪುಗೊಂಡಿತು. ಇದಕ್ಕಾಗಿ ದೇವಸ್ಥಾನಗಳ ಹೆಸರಲ್ಲಿ ಮೇಳಗಳು ಹೊರಡುವ ಸಂಪ್ರದಾಯ ಶುರುವಾಯಿತು. ದೇವರ ಸೇವೆಯ ನಿಮಿತ್ತ ಹರಕೆ ಆಟ ಆಡಿಸುವ ರೂಢಿಯೂ ಬೆಳೆದು ಬಂತು. (ಸಶೇಷ)

* ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು