ಪಣಿಯೂರು ಯಕ್ಷಲೋಕ-2: ಆರಾಧನಾ ಕಲೆ ಯಕ್ಷಗಾನವು ಜನಪದೀಯವಾಯಿತು

(ಯಕ್ಷಗಾನ ದ್ರೌಪದಿ ವಸ್ತ್ರಾಪರಹಣ ಪ್ರಸಂಗದ ದೃಶ್ಯ)
(ಕಲಾವಿದ, ಸಂಘಟಕ, ವಿಮರ್ಶಕ ಸುರೇಂದ್ರ ಪಣಿಯೂರು ಅವರ ಲೇಖನ ಸರಣಿ. ಯಕ್ಷಗಾನಕಲೆ- ಪ್ರೇಕ್ಷಕವರ್ಗ- ದೃಷ್ಟಿಕೋನ-2)
ಯಕ್ಷಗಾನ ಕಲೆ ಮನೋರಂಜನಾ ಕಲೆಯಾಗಿ ಗುರುತಿಸಿಕೊಳ್ಳುವ ಮೊದಲು ಅದೊಂದು ಆರಾಧನಾ ಕಲೆಯೂ ಆಗಿತ್ತು.

ಅನ್ಯ ಧರ್ಮ ಪಂಥಗಳ ಪ್ರಚಾರದ ನಡುವೆ ನಲುಗಿದ ನಮ್ಮದಾದ ಸನಾತನವಾದ ಹಿಂದೂ ಧರ್ಮದ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅರಸೊತ್ತಿಗೆಗಳು, ಮಠಮಾನ್ಯಗಳು ಯಕ್ಷಗಾನವನ್ನು ಮಾಧ್ಯಮವಾಗಿ ಬಳಸಿಕೊಂಡ ಬಗ್ಗೆ ಯಾವ ಅನುಮಾನವೂ ಇಲ್ಲ.

ಹಾಗಾಗಿ ಜನ ಸಾಮಾನ್ಯರು ನಮ್ಮದಾದ ಮಹಾನ್ ಕಾವ್ಯಗಳಾದ ರಾಮಾಯಣ, ಮಹಾಭಾರತ, ಪುರಾಣ, ಇತ್ಯಾದಿಗಳ ಪ್ರದರ್ಶನಗಳನ್ನು ರಂಗದಲ್ಲಿ ನೋಡಿ, ಅನುಭವಿಸಿ, ಧರ್ಮನಿಷ್ಠೆಯನ್ನು, ಸಾಪೇಕ್ಷತೆಯನ್ನು ಹೊಂದುವಲ್ಲಿ ಈ ಯಕ್ಷಗಾನ ಕಲೆಯು ಪ್ರಮುಖ ಪಾತ್ರವನ್ನು ಹೊಂದಿತ್ತು.

ಮೂಲತಃ  ಸಂಸ್ಕೃತ ಭಾಷೆಯಲ್ಲಿದ್ದ ರಾಮಾಯಣ, ಮಹಾಭಾರತ ಮುಂತಾದ ಪುರಾಣಾಂತರ್ಗತ  ಧರ್ಮಬೋಧಕ ಕತೆಗಳು ಪಾಮರರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ಕಾಲದಲ್ಲಿ ಅದರ ಸಾರವನ್ನು ಜನಪದರಿಗೆ ಉಣಬಡಿಸಿದ್ದು ಈ ಯಕ್ಷಗಾನ. ಆದುದರಿಂದ ಜನಸಾಮಾನ್ಯರಿಂದ ಜನಸಾಮಾನ್ಯರಿಗೆ, ಜನಪದರಿಗೆ ದೊರೆತ ಈ ಕಲೆಯು ಜಾನಪದ ಕಲೆ ಎನಿಸಿಕೊಂಡಿತು.

ಹಾಗಂತ ಇವುಗಳು ಅಶಾಸ್ತ್ರೀಯ ಕಲೆ ಎಂಬುದಾಗಿ ಅಲ್ಲಗಳೆಯುವಂತಿಲ್ಲ, ಹೀಗಳೆಯುವಂತೆಯೂ ಇಲ್ಲ. ಯಾಕೆಂದರೆ ಇದು ದೇಶಕ್ಕೆ ಸಂಬಂಧಪಟ್ಟ ದೇಸೀಕಲೆ. ಮುಂದೆ ಇವೇ ಕಲೆಗಳು ಲಕ್ಷ್ಯ ಹಾಗೂ ಲಕ್ಷಣಗಳನ್ನು ಹೊಂದಿ  ಶಾಸ್ತ್ರೀಯ ಕಲೆಯಾಗಿ ಮಾರ್ಪಾಡುಗೊಂಡ ಉದಾಹರಣೆಗಳು ಇವೆ.

ಆದರೆ ಅದರ ಅಗತ್ಯವೆಷ್ಟು ಅನ್ನುವುದು  ಪರಾಮರ್ಶೆಗೆ ಒಳಪಡಬೇಕಾದ ವಿಚಾರವಾಗಿದೆ. ಅಲ್ಲದೆ ಈ  ಯಕ್ಷಗಾನವನ್ನು ಅಶಾಸ್ತ್ರೀಯ ಕಲೆ ಎಂಬುದಾಗಿ ಹೇಳಲು ಪರಿಗಣಿಸುವ ಮಾನದಂಡಗಳೇನು? ಎಂಬುದು ಯೋಚಿಸಬೇಕಾದ ವಿಚಾರ. (ಸಶೇಷ)

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು