ಚೌತಿಯ ಚಂದ್ರನ ಕಾಡಿದ ದೋಷ ನಿವಾರಣೆಗೆ ಸ್ಯಮಂತಕೋಪಾಖ್ಯಾನ

ಯಕ್ಷಗಾನ ಜಾಂಬವತಿ ಕಲ್ಯಾಣದ ದೃಶ್ಯ
ಗಣಪತಿಯನ್ನು ನೋಡಿ ನಕ್ಕ ಚಂದ್ರನಿಗೆ ಗಣೇಶ್ವರನು ಶಾಪ ಕೊಡುತ್ತಾನೆ. ಚೌತಿಯಂದು ಚಂದ್ರನನ್ನು ನೋಡಿದವರಿಗೆ ಅಪವಾದ ತಪ್ಪದೆಂಬ ಶಾಪವಿದು. ಕೃಷ್ಣನಿಗೂ ತಟ್ಟಿದ ಈ ಶಾಪ ಪರಿಹಾರಾರ್ಥವಾಗಿ ಈ ಸ್ಯಮಂತೋಕಾಪಾಖ್ಯಾನ ಕೇಳಬಹುದೆಂಬ ಪ್ರತೀತಿ ಇದೆ. 
ಒಮ್ಮೆ ಸತ್ರಾಜಿತನೆಂಬ ಯಾದವ ರಾಜನೊಬ್ಬ ಸೂರ್ಯನನ್ನು ಮೆಚ್ಚಿಸಿ ದಿನವೊಂದಕ್ಕೆ ಮಣಗಟ್ಟಳೆ ಬಂಗಾರ ಕೊಡುವ ಸ್ಯಮಂತಕ ಮಣಿಯನ್ನು ವರವಾಗಿ ಪಡೆಯುತ್ತಾನೆ. ಸ್ಯಮಂತಕ ಮಣಿಯು ನಿನ್ನ ಬಳಿ ಇರುವುದು ಕ್ಷೇಮವಲ್ಲ, ತನಗೆ ಕೊಡೆಂದು ಶ್ರೀಕೃಷ್ಣನು ಅದೊಮ್ಮೆ ಕೇಳಿದಾಗ, ಸತ್ರಾಜಿತನು ಕೊಡಲಾರೆ ಎನ್ನುತ್ತಾನೆ.

ಕೆಲ ಕಾಲದ ನಂತರ ಒಮ್ಮೆ ಸತ್ರಾಜಿತನ ತಮ್ಮನಾದ ಪ್ರಸೇನಜಿತು ಆ ಮಣಿಯನ್ನು ಧರಿಸಿ ಕಾಡಿಗೆ ಬೇಟೆಗೆ ಹೋಗಿದ್ದಾಗ, ಅಲ್ಲಿ ಒಂದು ಸಿಂಹವು ಅವನನ್ನು ಕೊಂದು ಮಣಿಯನ್ನು ಒಯ್ಯುತ್ತದೆ. ಪ್ರಜ್ವಲಿಸುತ್ತಿದ್ದ ಮಣಿಯನ್ನು ಕಚ್ಚಿಕೊಂಡು ಹೋಗುವ ಸಿಂಹವನ್ನು ಜಾಂಬವಂತನು ಅಡ್ಡಗಟ್ಟಿ ಅದನ್ನು ಕೊಂದು, ಸ್ಯಮಂತಕ ಮಣಿಯನ್ನು ಒಯ್ದು ತನ್ನ ಮಗ ಪ್ರವೀರನ ತೊಟ್ಟಿಲಿಗೆ ಕಟ್ಟಿದನು.

ಇತ್ತ ಸತ್ರಾಜಿತ ಮಹಾರಾಜನು, ತನ್ನ ತಮ್ಮ ಪ್ರಸೇನಜಿತು ವಾಪಸು ಬಾರದಿರಲು, ಸ್ಯಮಂತಕ ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಅಪವಾದ ಹಾಕಿದನು. ಈ ಅಪವಾದ ಹೊತ್ತ ಶ್ರೀಕೃಷ್ಣನು ಪ್ರಸೇನನನ್ನು ಅರಸುತ್ತಾ ಕಾಡಿಗೆ ಹೋಗಲು, ಸತ್ತುಬಿದ್ದ ಪ್ರಸೇನನ ಹಾಗೂ ಆತನ ಕುದುರೆಯ ದೇಹ ಕಂಡುಬರುತ್ತದೆ.


ಅಲ್ಲಿಂದ ಹೊರಟಾಗ ಒಂದು ಸಿಂಹದ ಹೆಜ್ಜೆ ಗುರುತುಗಳೂ ಕಂಡು ಬರುತ್ತವೆ. ಆ ಹೆಜ್ಜೆ ಗುರುತನ್ನು ಅನುಸರಿಸಿ ಹೋದಾಗ ಸಿಂಹದ ಶವವು ಕಂಡು ಬರುತ್ತದೆ. ಅಲ್ಲಿ ಕಂಡುಬರುವ ಭಲ್ಲೂಕದ ಹೆಜ್ಜೆ ಗುರುತನ್ನು ಅನುಸರಿಸಿ ಜಾಂಬವಂತನ ಗುಹೆಗೆ ಹೋಗಿ ನೋಡಿದಾಗ ಮಣಿಯನ್ನು ಮಗುವಿನ ತೊಟ್ಟಿಲಗೆ ಕಟ್ಟಿ ಹೆಣ್ಣೊಬ್ಬಳು ತೂಗುತ್ತಿರುವುದನ್ನು ಕೃಷ್ಣ ಕಾಣುತ್ತಾನೆ. ಇನ್ನೇನು ಮಣಿಯನ್ನು ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಜಾಂಬವಂತನಿಗೂ ಕೃಷ್ಣನಿಗೂ ಯುದ್ಧವಾಗುತ್ತದೆ.

ಯುದ್ಧದಲ್ಲಿ ಕೈಸೋಲುತ್ತಿರುವ ಜಾಂಬವಂತನಿಗೆ ತಾನು ಯುದ್ಧ ಮಾಡುತ್ತಿರುವುದು ತ್ರೇತಾಯುಗದ ರಾಮನ ಜೊತೆಗೆ ಎಂಬ ಅರಿವಾಗಿ, ಯುದ್ದ ನಿಲ್ಲಿಸಿ ತಪ್ಪಾಯಿತೆಂದು ಕ್ಷಮೆ ಯಾಚಿಸಿ ಸ್ಯಮಂತಕ ಮಣಿಯನ್ನು ಶ್ರೀಕೃಷ್ಣನಿಗೆ ಕೊಡುತ್ತಾನೆ. ಜೊತೆಗೆ ತನ್ನ ಮಗಳು ಜಾಂಬವತಿಯನ್ನೂ ಶ್ರೀಕೃಷ್ಣನಿಗೆ ಮದುವೆ ಮಾಡಿದನು.

ಆ ಮಣಿಯನ್ನು ತಂದು, ವಿಷಯವನ್ನು ತಿಳಿಸಿ ಸತ್ರಾಜಿತನಿಗೆ ಕೊಟ್ಟಾಗ, ಪಶ್ಚಾತ್ತಾಪ ಪಟ್ಟ ಸತ್ರಾಜಿತ, ತನ್ನ ಮಗಳು ಸತ್ಯಭಾಮೆಯನ್ನೂ ಕೃಷ್ಣನಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾನೆ.

ಗಣಪತಿಯನ್ನು ನೋಡಿ ನಕ್ಕನಿಗೆ ಚಂದ್ರನಿಗೆ ಗಣೇಶನು ಶಾಪ ನೀಡಿದ ಪ್ರಕಾರ, ಭಾದ್ರಪದ ಶುಕ್ಲದ ಚೌತಿಯ ಚಂದ್ರನನ್ನು ನೋಡಿದರೆ ಬರುವ ಅಪವಾದವನ್ನು ಕಳೆಯಲು ಈ ಕಥೆಯನ್ನು ಕೇಳಿದರೆ ಅಪವಾದ ನೀಗುತ್ತದೆ ಎಂಬ ಪ್ರತೀತಿ ಇದೆ.

ಸಂ.: ದಾಮೋದರ ಶೆಟ್ಟಿ, ಇರುವೈಲು

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು