ಪಟ್ಟಾಜೆ ವೆಂಕಟ್ರಮಣ ಭಟ್, ಕೀರ್ತಿಶೇಷ ಯಕ್ಷಗಾನ ಕಲಾವಿದರು. ಅವರಿಗೆ ಕಲಾವಿದರ ಮೇಲೆ ಪ್ರೀತಿ ಅಪಾರ. ಅಪಾರ ಅನುಭವದ ಗುಣಗಣಿಯಾಗಿದ್ದು, ಚೌಕಿಗೆ ಬಂದು ಮಾತನಾಡಿಸುವ ಔದಾರ್ಯವನ್ನು ನೆನಪಿಸಿಕೊಂಡಿದ್ದಾರೆ ಯಕ್ಷಗಾನ ಗುರುಗಳಾದ ಸಬ್ಬಣಕೋಡಿ ರಾಮ ಭಟ್.
ಪಟ್ಟಾಜೆ ವೆಂಕಟ್ರಮಣ ಭಟ್ಟರ ಹೆಸರನ್ನು ಕೇಳಿದಾಗ ನೆನಪಿಗೆ ಬರುವುದು ಅವರ ಕಂಸವಧೆಯ ಅಕ್ರೂರನ ಪಾತ್ರ. ನನ್ನ-ಅವರ ಒಡನಾಟವನ್ನು ಲೇಖನದ ಮೂಲಕ ಉಲ್ಲೇಖಿಸುತ್ತಿದ್ದೇನೆ.
ನಾನು ಕರ್ನಾಟಕ ಮೇಳದಲ್ಲಿ ಬಾಲ ಕಲಾವಿದನಾಗಿದ್ದಾಗ ಅವರ ಪರಿಚಯದ ಭಾಗ್ಯ ದೊರೆಯಿತು. 1977ರಲ್ಲಿ ಮಳೆಗಾಲದಲ್ಲಿ ಶ್ರೀ ಕರ್ನೂರು ಕೊರಗಪ್ಪ ರೈಯವರ ಸಂಘಟನೆಯಲ್ಲಿ ಘಟಾನುಘಟಿ ಕಲಾವಿದರ ಒಕ್ಕೂಟದಲ್ಲಿ ಸತ್ಯ ಹರಿಶ್ಚಂದ್ರ ಪ್ರಸಂಗ. ಶ್ರೀ ರಾಮದಾಸ ಸಾಮಗರ ಹರಿಶ್ಚಂದ್ರ, ಕೋಳ್ಯೂರು ರಾಮಚಂದ್ರ ರಾವ್ ಅವರ ಚಂದ್ರಮತಿ, ನನ್ನ ರೋಹಿತಾಶ್ವ ಪಾತ್ರ. ಅಂದು ಅವರು ನನ್ನ ಪಾತ್ರವನ್ನು ನೋಡಿ ಚೌಕಿಗೆ ಬಂದರು. ಕೋಳ್ಯೂರು ರಾಮಚಂದ್ರ ರಾವ್‌ರಲ್ಲಿ ಲೋಹಿತಾಶ್ವ ಮಾಡಿದ ಬಾಲಕ ಯಾರು? ಅಂತ ಕೇಳಿದಾಗ, ಕೋಳ್ಯೂರು ಅವರು 'ಸಬ್ಬಣಕೋಡಿ ರಾಮ' ಎಂಬ ಮಾಣಿ ಎಂದರು.
ನೇರ ಪಟ್ಟಾಜೆಯವರು ನನ್ನ ಬಳಿಗೆ ಸಮೀಪಿಸಿ "ನಿನ್ನ ಪಾತ್ರ ಬಹಳ ಒಳ್ಳೆಯದಾಗಿದೆ. ಮುಂದೆ ಉತ್ತಮ ಕಲಾವಿದನಾಗುತ್ತಿಯಾ, ಪ್ರಯತ್ನಿಸು" ಎಂದು ಹರಸಿದರು. ನಾನು ಅವರ ಪರಿಚಯ ಮಾಡಿಕೊಂಡೆ. ಆ ಮೇಲೆ ಅವರು ಕರ್ನಾಟಕ ಮೇಳದ ಯಕ್ಷಗಾನ ಬದಿಯಡ್ಕದಲ್ಲಿ ಆದಾಗ ಚೌಕಿಗೆ ಬಂದು ನನ್ನನ್ನು ಮಾತನಾಡಿಸಿ ಹೋಗುತ್ತಿದ್ದರು.
ಆ ಬಳಿಕ 1986ನೇ ಇಸವಿಯಲ್ಲಿ ಮಾನ್ಯ ಮೇಳವು ಅಗಲ್ಪಾಡಿ ಕೇಳು ಮಾಸ್ಟರ್ ನೇತೃತ್ವದಲ್ಲಿ ಹೊರಟಿತು. ತೆಂಕಬೈಲು ಪ್ರಧಾನ ಭಾಗವತರು. ಪಟ್ಟಾಜೆಯವರು ವೇಷಧಾರಿಗಳಾಗಿ ಭಾಗವಹಿಸುತ್ತಿದ್ದರು. ಆಗ ನಾನು ಸ್ತ್ರೀ ಪಾತ್ರ ಮಾಡುತ್ತಿದ್ದೆ. ಪಟ್ಟಾಜೆಯವರ ಈಶ್ವರ, ನನ್ನ ದಾಕ್ಷಾಯಿಣಿ. ಕುಮಾರ ವಿಜಯದ ದೂರ್ವಾಸ ಅವರದು, ನನ್ನ ಮಾಯಾ ಅಜಮುಖಿ ಪಾತ್ರ. ಕಂಸವಧೆಯಲ್ಲಿ ಅವರ ಅಕ್ರೂರ, ನನ್ನ ಕೃಷ್ಣನ ಪಾತ್ರ. ಅಂತೆಯೇ, ಅವರ ಜಮದಗ್ನಿ, ನನ್ನ ಭಾರ್ಗವ... ಹೀಗೆ ಅವರ ಒಡನಾಟ ತುಂಬಾ ಆಗಿದೆ.
ಪಟ್ಟಾಜೆಯವರು ತುಂಬಾ ಅನುಭವಿ ಮತ್ತು ನಿಗರ್ವಿ. ನಾನು ಅವರಲ್ಲಿ ಯಕ್ಷಗಾನದ ಬಗ್ಗೆ ಅನುಭವವನ್ನು ಹಂಚಿಕೊಳ್ಳುತ್ತಿದ್ದೆ. ಆಳವಾದ ಪುರಾಣ ಅನುಭವ ಅವರಲ್ಲಿ ಇತ್ತು. ಪಳ್ಳತ್ತಡ್ಕದಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಶಂಭು ಹೆಗಡೆಯವರ ಇಡಗುಂಜಿ ಮೇಳದ ಆಟ ಮತ್ತು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಯಕ್ಷಗಾನ ಇತ್ತು. ಅಂದು ಪಟ್ಟಾಜೆಯವರ ಅಕ್ರೂರ, ನನ್ನ ಕೃಷ್ಣನ ಪಾತ್ರವನ್ನು ನೋಡಿ ಶಂಭು ಹೆಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಪುತ್ರರಿಗೆ ನಾನು ಎಂದರೆ ಬಹಳ ಪ್ರೀತಿ.
1999 ನವೆಂಬರ 21ನೇ ತಾರೀಕಿನಂದು ಮಾವಿನಕಟ್ಟೆ ಅಯ್ಯಪ್ಪ ಸ್ವಾಮಿ ಉತ್ಸವದಲ್ಲಿ ಪಟ್ಟಾಜೆಯವರ ಕಂಸವಧೆಯ ಅಕ್ರೂರನ ಪಾತ್ರ, ನನ್ನ ಕೃಷ್ಣ. ಯಕ್ಷಗಾನವನ್ನು ಮುಗಿಸಿ ಬೆಳಿಗ್ಗೆ ನನ್ನ ವಾಹನದಲ್ಲಿ ಬದಿಯಡ್ಕತನಕ ಬಂದಿದ್ದರು. ಅದೇ ಅವರ ಕಡೇ ಭೇಟಿ. 27.11.1999 ನೇ ದಿನದಂದು ಅವರ ಮರಣದ ವಾರ್ತೆಯನ್ನು ಕೇಳಿ ದುಃಖಿತನಾದೆ.
ಆದರೆ ಕೆಲವು ವರ್ಷಗಳ ಹಿಂದೆ ಸಾಮ್ರಾಟ್ ಕ್ಲಬ್ ಮಾನ್ಯದವರು ನನ್ನ ಅವರ ಒಡನಾಟವನ್ನು ಗುರುತಿಸಿ ಪ್ರತಿಷ್ಠಿತ ಪಟ್ಟಾಜೆ ಪ್ರಶಸ್ತಿಯನ್ನು ನೀಡಿದ್ದಾರೆ. ಆ ಪ್ರಶಸ್ತಿಯನ್ನು ಪಡೆದ ನಾನೇ ಭಾಗ್ಯವಂತ. ಪಟ್ಟಾಜೆಯವರ ಹೆಸರು ಯಕ್ಷಗಾನ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿದಿದೆ. ಅವರ ಪಾದಗಳಿಗೆ ಕೋಟಿ, ಕೋಟಿ, ನಮನಗಳು.
✍: ಸಬ್ಬಣಕೋಡಿ ರಾಮ ಭಟ್, ಗುರುಗಳು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ. ಪೆರ್ಲ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ
Tags:
ಕಲಾವಿದ