ಜ್ಞಾನ ಪ್ರಸಾರದ ಸಂಚಾರಿ ವಿಶ್ವವಿದ್ಯಾಲಯ - ಯಕ್ಷಗಾನ

 

ಯಕ್ಷಗಾನ ಪ್ರಸಂಗ

ಯಕ್ಷಗಾನವು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿತ್ತು ಮತ್ತು ಜನರು ಪುರಾಣ ಜ್ಞಾನವನ್ನು, ಸಂಸ್ಕೃತಿಯನ್ನು ಅರಿತುಕೊಳ್ಳುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾಗಿತ್ತು. ಈ ದಿಸೆಯಲ್ಲಿ ಪ್ರೇಕ್ಷಕರ ಜವಾಬ್ದಾರಿಯೂ ಬಹುಮುಖ್ಯ ಎಂದು "ಯಕ್ಷಗಾನಕಲೆ - ಪ್ರೇಕ್ಷಕವರ್ಗ - ಬದಲಾದ ದೃಷ್ಟಿಕೋನ" ಸರಣಿಯ 16ನೇ ಕಂತಿನಲ್ಲಿ ವಿವರಣೆ ನೀಡಿದ್ದಾರೆ ಸುರೇಂದ್ರ ಫಣಿಯೂರ್.
ನಾನು ಈಗಾಗಲೇ ಹಿಂದಿನ ಕಂತುಗಳಲ್ಲಿ ಪ್ರಸ್ತಾಪಿಸಿದಂತೆ ಯಕ್ಷಗಾನದ ಪ್ರದರ್ಶನಕ್ಕೆ ಪ್ರೇಕ್ಷಕರನ್ನು ಸೆಳೆಯುವ ಪ್ರಧಾನ ಸಾಧನವೇ ಚೆಂಡೆ. ಹಿಂದಿನ ಕಾಲದಲ್ಲಿ ಆಯಾ ದಿನದ ಯಕ್ಷಗಾನ ಪ್ರದರ್ಶನಗಳು ಮುಂಚಿತವಾಗಿ ನಿಶ್ಚಯಗೊಂಡು ಅಂದರೆ ವೀಳ್ಯ ಪಡೆದು ನೆರವೇರುವುದು ಬಹಳಷ್ಟು ಕಡಿಮೆ. ಅವು ಹೆಚ್ಚಾಗಿ ಊರವರು ಒಟ್ಟು ಸೇರಿ ನೆರವೇರಿಸುವ ಪ್ರದರ್ಶನಗಳಾಗಿದ್ದವು.

ಯಕ್ಷಗಾನ ಪ್ರದರ್ಶನಗಳ ಕುರಿತು ಮಾಹಿತಿ ನೀಡಲು ಬಹಳ ಹಿಂದಿನ ಕಾಲದಲ್ಲಿ ಊರಿಗೆ ಹತ್ತಿರದಲ್ಲಿದ್ದ ಗುಡ್ಡೆಯ ಮೇಲೆ ಹೋಗಿ ಮುಸ್ಸಂಜೆಯ ಹೊತ್ತಿಗೆ ಚೆಂಡೆಯನ್ನು ಬಾರಿಸುವ ಕಾರ್ಯಕ್ರಮ ಮಾಡುತ್ತಿದ್ದರು. ಇದು ಸಾಧಾರಣವಾಗಿ ಅರ್ಧ ತಾಸಿನ ಅವಧಿಗೆ ನಡೆಯುತ್ತಿತ್ತು. ಇದನ್ನು ಗುಡ್ಡದ ಕೇಳಿ ಅನ್ನುತ್ತಾರೆ.

ಆ ದಿನ ಆ ಊರಲ್ಲಿ ಯಕ್ಷಗಾನ ಪ್ರದರ್ಶನವಿದೆ ಎನ್ನುವುದರ ಕುರಿತು ಈ ರೀತಿಯಲ್ಲಿ ಸದ್ದು ಮಾಡುತ್ತಾ ಜನರ ಚಿತ್ತವನ್ನು ಅತ್ತ ಸೆಳೆದು ಇತ್ತ ಕೇಳಿ ಅನ್ನೋದೇ ಕೇಳಿ ಪದದ ತಾತ್ಪರ್ಯ ಆಗಿತ್ತು. ಹಿಂದಿನ ಕಾಲದಲ್ಲಿ ಈ ರೀತಿಯ ಸದ್ದಿನ ಮೂಲಕ ಜನರನ್ನು ಜಾಗೃತಗೊಳಿಸುವ ಪದ್ದತಿ ಇತ್ತು ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಉದಾಹರಣೆಗೆ ಹಿಂದೆ ರಾಜರ ಕಾಲದಲ್ಲಿ ಊರಿಗೆ ಶತ್ರು ರಾಜರ ದಾಳಿಯಾದ ಸಂದರ್ಭದಲ್ಲಿ ತುರ್ತುಪರಿಸ್ಥಿತಿ ಉಂಟಾಗಿ ಊರಿನ ಕೋಟೆ ಕೊತ್ತಳಗಳ ಬುರುಜಿನ ಮೇಲೆ ಇರಿಸಿದ ಭಾರಿ ಗಾತ್ರದ ಭೇರಿಗಳನ್ನು ಬಾರಿಸುವ ಮೂಲಕ ಜನರನ್ನು ಜಾಗೃತಗೊಳಿಸುತ್ತಿದ್ದರು. ಅದೇ ರೀತಿಯಲ್ಲಿ ಶತ್ರು ದಾಳಿಯ ಸಂದರ್ಭದಲ್ಲಿ ಊರಿನ ಗುಡ್ಡೆಯ ಮೇಲೆ ಹತ್ತಿ ಕೂಗು ಹಾಕುತ್ತಾ ಪರಸ್ಪರರನ್ನು ಎಚ್ಚರಿಸುವ ಮೂಲಕ ದಂಡಿನ ಜನರನ್ನು ಸಹಾಯಕ್ಕಾಗಿ ಜಾಗೃತಗೊಳಿಸುವ ಪದ್ಧತಿಯೂ ರೂಢಿಯಲ್ಲಿತ್ತು. ಇದೇ ಕ್ರಮಗಳು ಯಕ್ಷಗಾನಕ್ಕೆ ಪ್ರೇರಕವಾಗಿರಲೂ ಬಹುದು. ಏನೇ ಇರಲಿ ಊರಿನ ಜನರು ಯಕ್ಷಗಾನ ಪ್ರದರ್ಶನ ಏರ್ಪಡುವ ಬಯಲಿನಲ್ಲಿ ಒಗ್ಗೂಡುತ್ತಾ ಇದ್ದರು.

ಕರಾವಳಿ ಪ್ರಾಂತ್ಯದಲ್ಲಿ ಊರು ಅಂದರೆ ತೋಟ ಗದ್ದೆಗಳ ನಡುವೆ ಹಂಚಿಕೊಂಡಿರುವ ಒಂದಷ್ಟು ಮನೆಗಳ ಸಮೂಹ. ಸಾಧಾರಣವಾಗಿ ಆ ಕಾಲದಲ್ಲಿ 100 ರಿಂದ 200 ಮನೆಗಳ ಗುಂಪಿಗೆ ಒಂದು ಊರು ಎನ್ನುತ್ತಿದ್ದರು. ಇವುಗಳು ಬಯಲು ಸೀಮೆ ಪ್ರಾಂತ್ಯದಲ್ಲಿರುವಂತೆ ಎಲ್ಲಾ ಮನೆಗಳು ಒತ್ತಟ್ಟಿಗೆ ಒಂದೇ ಕಡೆ ಇರುತ್ತಿರಲಿಲ್ಲ. (ಆ ಪ್ರಾಂತ್ಯದಲ್ಲಿ ಗದ್ದೆ ಬಯಲು ಒಂದು ಕಡೆ ಆದರೆ ಜನ ವಾಸ್ತವ್ಯದ ಊರು ಒಂದು ಕಡೆ ಇರುವುದು ರೂಢಿ).


ಕರಾವಳಿಯ ಊರಲ್ಲಿ ಅವಿಭಾಜ್ಯ ಕುಟುಂಬಗಳೇ ಇದ್ದ ಆ ಕಾಲದಲ್ಲಿ ಒಂದು ಮನೆಯಲ್ಲಿ ಕನಿಷ್ಠ 10ರಿಂದ 15 ಜನರು ವಾಸವಿರುತ್ತಿದ್ದರು. ಹಾಗಾಗಿ ಈ ಮನೆಗಳ ಒಂದಷ್ಟು ಜನರು ರಾತ್ರಿ ಆಟ ನೋಡಲು ಬಯಲಲ್ಲಿ ಒಟ್ಟು ಸೇರುತ್ತಿದ್ದರು. ಜೊತೆಗೆ ಒಂದಷ್ಟು ಜನರು ಮನೆ ಕಾಯಲು ಮನೆಯಲ್ಲಿಯೇ ಇರುತ್ತಿದ್ದರು. ಅಥವಾ ಎಲ್ಲರೂ ಒಟ್ಟು ಸೇರಿ ಆಟ ನೋಡಲು ಹೋಗುವುದೂ ಇತ್ತು. ಇಲ್ಲಿ ಒಂದು ವಿಚಾರವನ್ನು ಗಮನಿಸಲಾಗಿ, ಆ ಕಾಲದಲ್ಲಿ ರಾತ್ರಿಯ ಕಾಲದಲ್ಲಿ ಕಳ್ಳಕಾಕರ ಹಾವಳಿ ಇಲ್ಲವೇ ಇಲ್ಲ ಅನ್ನುವಷ್ಟು ಕನಿಷ್ಠವಾಗಿತ್ತು. ಹಾಗಾಗಿ ಜನರು ನಿರ್ಭಿಡೆಯಿಂದ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದರು. ಈ ರೀತಿಯಲ್ಲಿ ಅವಿಭಾಜ್ಯ ಕುಟುಂಬದ ವ್ಯವಸ್ಥೆಯಡಿಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪ್ರೇಕ್ಷಕರು ವಿಪುಲವಾಗಿದ್ದರು. ಈ ರೀತಿಯಲ್ಲಿ ಬಹಳ ಹಿಂದಿನ ಕಾಲದಲ್ಲಿ ಸಾಧಾರಣವಾಗಿ ಯಕ್ಷಗಾನ ಪ್ರದರ್ಶನಕ್ಕೆ 200ರಿಂದ 350ರಷ್ಟು ಸಂಖ್ಯೆಯ ಪ್ರೇಕ್ಷಕರು ಬಯಲಲ್ಲಿ ಒಟ್ಟು ಸೇರುತ್ತಿದ್ದರು.

ವಿದ್ಯಾಭ್ಯಾಸಕ್ಕೆ ಶಾಲೆಗಳೇ ಇಲ್ಲದಿದ್ದ ಆ ಕಾಲದಲ್ಲಿ ಜನ ಸಾಮಾನ್ಯರಲ್ಲಿ ಕೆಲವೇ ಕೆಲವು ಜನರು ವಿದ್ಯಾರ್ಜನೆಗಾಗಿ ಗುರುಕುಲ ಪದ್ಧತಿಯ ಐಗಳ ಮಠವನ್ನೇ ಆಶ್ರಯಿಸಿದ್ದರು. ಅಲ್ಲಿ ನಮ್ಮದಾದ ರಾಮಾಯಣ, ಮಹಾಭಾರತ, ಪುರಾಣ ಮುಂತಾದವುಗಳನ್ನು ಬೋಧಿಸುವುದರ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿಚಾರಗಳಲ್ಲಿ ಜನರನ್ನು ಸಂಪನ್ನಗೊಳಿಸುತ್ತಿದ್ದರು. ಅದನ್ನು ಹೊರತುಪಡಿಸಿಯೂ ಪುರಾಣ ಕತೆಗಳನ್ನು ಬಲ್ಲವರು ಪ್ರವಚನಗಳ ಮೂಲಕ ಜನರಿಗೆ ಈ ಕತೆಗಳನ್ನು ತಿಳಿಯಪಡಿಸಿ ಜ್ಞಾನ ಪ್ರಸರಣ ಮಾಡುತ್ತಿದ್ದರು. ಹೀಗಾಗಿ ಹೆಚ್ಚಿನ ಜನರು ಜಾನಪದೀಯ ಕಥೆಗಳು, ಪುರಾಣ ಕತೆಗಳು, ಯಕ್ಷಗಾನ ಪ್ರಸಂಗ ಪದಗಳ ಬಗ್ಗೆ ಜ್ಞಾನಸಂಪನ್ನರಾಗಿದ್ದರು. ಈ ರೀತಿಯ ಪ್ರೇಕ್ಷಕರು ಒಂದು ತೆರನಾದರೆ, ಯಕ್ಷಗಾನ ಪ್ರದರ್ಶನವನ್ನು ಈಕ್ಷಿಸುವ ಮೂಲಕ ಪುರಾಣ ಪುಣ್ಯ ಕತೆಗಳನ್ನು ಮನನ ಮಾಡಿಕೊಂಡು ತನ್ಮೂಲಕ ಧಾರ್ಮಿಕವಾದ, ನೈತಿಕವಾದ ಪ್ರಜ್ಞೆಯಲ್ಲಿ ಸಂಪನ್ನಗೊಳ್ಳುತ್ತಾ ಇದ್ದವರು ಮತ್ತೊಂದು ಬಗೆಯವರು. ಯಕ್ಷಗಾನವು ಒಂದು ರೀತಿಯಲ್ಲಿ ಸಂಚಾರಿ ವಿಶ್ವವಿದ್ಯಾಲಯ ಮಾದರಿಯಲ್ಲಿ ಜನರನ್ನು ಜ್ಞಾನಸಂಪನ್ನಗೊಳಿಸುವ ಮಾಧ್ಯಮವಾಗಿತ್ತು.

ಅಂದಿನ ಪ್ರೇಕ್ಷಕರು ರಾತ್ರಿಯಿಡೀ ಜಾಗರಣೆಯಲ್ಲಿದ್ದು ಏಕಾಗ್ರತೆಯಿಂದ ಯಕ್ಷಗಾನ ಪ್ರದರ್ಶನವನ್ನು ಈಕ್ಷಿಸುತಿದ್ದರು, ಆಸ್ವಾದಿಸುತ್ತಿದ್ದರು. ಊರಲ್ಲಿ ವೈಶಾಖಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಲೆಯು ಜನಪದರ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಈ ಯಕ್ಷಗಾನ ಕಲೆಯ ಬಗ್ಗೆ ಅರಿವಿದ್ದವರು ಕಲಾವಿದನ ಪ್ರದರ್ಶನದಲ್ಲಿಯ ತಪ್ಪು ಒಪ್ಪುಗಳನ್ನು ಸೌಹಾರ್ದತೆಯಿಂದ ಚರ್ಚಿಸುತ್ತಿದ್ದರು. ತಪ್ಪುಗಳಿದ್ದಲ್ಲಿ ತಿದ್ದುತ್ತಲೂ ಇದ್ದರು. ಪ್ರೇಕ್ಷಕರು ರಂಗದಲ್ಲಿ ಯಕ್ಷಗಾನ ಕಲೆಯನ್ನು ಕೇವಲ ರಂಜನೆಯಾಗಿ ಆಸ್ವಾದಿಸುತ್ತಿರಲಿಲ್ಲ. ಅದರಲ್ಲಿ ನೈತಿಕತೆ ಹಾಗೂ ಸಂಸ್ಕೃತಿಯ ಸಾರವನ್ನು ಅನುಭವಿಸುತ್ತಿದ್ದರು. ಇದು ಆವತ್ತಿನ ಪ್ರೇಕ್ಷಕರ ಮನೋಧರ್ಮ.

ಈ ರೀತಿಯಲ್ಲಿ ಯಕ್ಷಗಾನ ರಂಗದಲ್ಲಿ ಸಾದೃಶ್ಯಗೊಳ್ಳುವ ಆಖ್ಯಾನಗಳು ಪ್ರೇಕ್ಷಕರಲ್ಲಿ ಭಕ್ತಿ ಭಾವವನ್ನು ಜಾಗೃತಗೊಳಿಸುವ ಮೂಲಕ ಯಕ್ಷಗಾನ ಕಲೆಯು ಆರಾಧನಾ ಕಲೆಯಾಗಿ ಸ್ಥಿರಗೊಳ್ಳುವಲ್ಲಿ ಪ್ರೇಕ್ಷಕರ ಪಾತ್ರ ಹಿರಿದು. ಈ ಕಾರಣದಿಂದ ಈ ರೀತಿಯ ಜವಾಬ್ದಾರಿಯುತ ಪ್ರೇಕ್ಷಕರ ಕಣ್ಗಾವಲಿನಲ್ಲಿ ಯಕ್ಷಗಾನ ರಂಗದಲ್ಲಿ ಅನ್ಯರಂಗದ ಅಪಸವ್ಯಕ್ಕೆ ಅಸ್ಪದವಿದ್ದಿರಲಿಲ್ಲ. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದನಷ್ಟೇ ಜವಾಬ್ದಾರಿ ಪ್ರೇಕ್ಷಕರಿಗೂ ಇದೆ ಎಂಬುದು ಸರ್ವವಿದಿತ. (ಸಶೇಷ)

✍ ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು