(ಕಲಾವಿದ, ಸಂಘಟಕ, ವಿಮರ್ಶಕ ಸುರೇಂದ್ರ ಪಣಿಯೂರು ಅವರ ಲೇಖನ ಸರಣಿ. ಯಕ್ಷಗಾನಕಲೆ- ಪ್ರೇಕ್ಷಕವರ್ಗ- ದೃಷ್ಟಿಕೋನ-1)
ಚತುರಂಗದ ಅಭಿನಯದಿಂದ ಕೂಡಿದ ರಂಜನಾಶೀಲ ಗುಣದಿಂದ ಕೂಡಿದ ಕಲೆಯೇ ಯಕ್ಷಗಾನ ಕಲೆ. ಪಾಮರ ಜನರಿಂದ ಹಿಡಿದು ಪಂಡಿತ ಜನರವರೆಗೂ ತೊಡಗಿಸಿಕೊಂಡ ಕಲೆ. ಈ ಕಲೆಗೊಂದು ಪರಂಪರೆ ಇದೆ ಸಂಪ್ರದಾಯವಿದೆ.
ಜನಜೀವನದೊಡನೆ ಹಾಸು ಹೊಕ್ಕಾಗಿರುವ ಈ ಕಲೆ ಕರಾವಳಿ ತೀರ ಹಾಗೂ ಘಟ್ಟದ ಮೇಲಿನ ಮಲೆನಾಡ ಸೀಮೆಯ ಮನೆಮನೆಯಲ್ಲೂ ಮನೋರಂಜನೆಗಾಗಿ ಆಶ್ರಯಿಸಿದ ಕಲೆ.
ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಉಳಿದೆಲ್ಲ ಮನೋರಂಜನೆಯ ಮಾಧ್ಯಮಗಳನ್ನು ಮೀರಿ ಬೆಳೆದ ಕಲೆ. ಇದಕ್ಕೆಲ್ಲ ಕಾರಣ ಇದರ ರಂಜನಾಶೀಲ ಗುಣ .
ಮೂಲತಃ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ಬೇಸಾಯವನ್ನು ಆಶ್ರಯಿಸಿದ ರೈತಾಪಿ ವರ್ಗದ ಜನರೇ ಅಧಿಕವಾಗಿದ್ದರು. ತೆಂಗು ಅಡಿಕೆಯ ತೋಟ ಕಡಿಮೆಯಿದ್ದು, ಭತ್ತದ ಬೆಳೆಯೇ ಜಾಸ್ತಿ. ಈ ಬೆಳೆಗೆ ವರ್ಷವಿಡೀ ಕೆಲಸ ಮಾಡುವ ಅಗತ್ಯವಿಲ್ಲದೆ ಸೀಮಿತವಾದ ಅವಧಿಯಲ್ಲಿ ಈ ಬೇಸಾಯದ ಕೆಲಸಗಳು ಮುಗಿಯುತ್ತಿದ್ದವು.
ಮಿಕ್ಕುಳಿದ ದಿನಗಳಲ್ಲಿ ವಿಶೇಷವಾದ ಕೆಲಸ ಇಲ್ಲದೆ ವಿಶ್ರಾಂತಿಯ ದಿನಗಳೇ ಅಧಿಕ. ಈ ಸಮಯದಲ್ಲಿ ಜನರಿಗೆ ಮನೋರಂಜನೆಯ ಸಾಧನವಾಗಿ ರೂಢಿಯಾದ ಜಾನಪದ ಕಲೆಗಳು ಹಲವಾರು. ಅದರಲ್ಲಿ ಯಕ್ಷಗಾನವು ಪ್ರಧಾನವಾಗಿತ್ತು.
ಸರ್ವೇಸಾಧಾರಣವಾಗಿ ಬೇಸಾಯದ ಕೆಲಸ ಮುಗಿದು ದೀಪಾವಳಿ ಹಬ್ಬದ ನಂತರ ಆರಂಭ ಆಗುವ ಈ ಯಕ್ಷಗಾನ ಮೇಳಗಳು ಮಳೆ ಆರಂಭವಾಗುವ ಮೊದಲ ತನಕ ಪ್ರದರ್ಶನ ಕೊಡುತ್ತಾ ಇರುತ್ತವೆ.
ಏನಿದ್ದರೂ ಹತ್ತನಾವಧಿ (ಪತ್ತನಾಜೆ)ಗೆ ಈ ಯಕ್ಷಗಾನ ಮೇಳಗಳು ಪ್ರದರ್ಶನ ಕೊನೆಗೊಳಿಸಬೇಕು. ಆ ನಂತರ ದೇವರಿಗೆ ಜಾತ್ರೆ, ಭೂತಕ್ಕೆ ಕೋಲ ಇತ್ಯಾದಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಈ ಹತ್ತನಾವಧಿಯ ನಂತರ ಆಚರಿಸಲ್ಪಡುವುದಿಲ್ಲ. (ಸಶೇಷ).
ಲೇಖನ: ಸುರೇಂದ್ರ ಪಣಿಯೂರ್