ಮಂಗಳೂರು: ಮಹಾಮಾರಿ ಕೊರೊನಾ-19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದಾಗಿ, ಜೀವನೋಪಾಯಕ್ಕಾಗಿ ಸಂಕಷ್ಟಕ್ಕೆ ಸಿಲುಕಿರುವ ಯಕ್ಷಗಾನ ಕಲಾವಿದರು, ನಾಟಕ ಕಲಾವಿದರಿಗೆ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಮಂಗಳೂರು ಘಟಕವು ಬಂಟ್ಸ್ ಹಾಸ್ಟೆಲ್ ಕರಂಗಲ್ಪಾಡಿ ಮಾರ್ಕೆಟ್ ಬಳಿಯ ಹಾಪ್‌ಕಾಮ್ಸ್ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ, ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಫೌಂಡೇಶನ್ ವತಿಯಿಂದ ನೀಡಿದ ಆಹಾರ ದಿನಸಿ ಸಾಮಾಗ್ರಿ ಕಿಟ್‌ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿತರಿಸಿದ ಸಂದರ್ಭ ಮಾತನಾಡುತ್ತಿದ್ದರು.
ತೆಂಕು ತಿಟ್ಟಿನ ಪ್ರಸಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿಅವರು ಸ್ವತಃ ಕಲಾವಿದರಾಗಿ ಮತ್ತೊಬ್ಬ ಕಲಾವಿದರ ನೋವಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಸರಕಾರ ಮಾಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡುತ್ತಿದೆ ಎಂದು ಟ್ರಸ್ಟ್‌ನ ಸೇವಾ ಕಾರ್ಯವನ್ನು ಕೊಂಡಾಡಿದರು.
ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಕ್ಷಗಾನ ಕಲಾವಿದರಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಆಹಾರ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಿತ್ತು. ಈ ಬಾರಿಯೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿ ಆರು ಜಿಲ್ಲೆಗಳಲ್ಲಿರುವ ಸುಮಾರು ಒಂದು ಸಾವಿರಕ್ಕೂ ಮಿಕ್ಕ ಕಲಾವಿದರಿಗೆ ಕಿಟ್ ವಿತರಣೆಯಾಗಲಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ವಿವರಿಸಿದರು.
ಸಮಾರಂಭದಲ್ಲಿ ಹವ್ಯಾಸಿ ಘಟಕದ ಗೌರಾವಾಧ್ಯಕ್ಷ ಡಾ. ಪ್ರಭಾಕರ ಜೋಷಿ, ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ರಾಧಾಕೃಷ್ಣ, ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಘಟಕದ ಅಧ್ಯಕ್ಷ ಪ್ರದೀಪ್ ಆಳ್ವ ಕದ್ರಿ, ಪದಾಧಿಕಾರಿಗಳಾದ ರವಿ ಶೆಟ್ಟಿ ಅಶೋಕನಗರ, ಕೃಷ್ಣ ಶೆಟ್ಟಿ ತಾರೆಮಾರ್, ತಾರಾನಾಥ ಶೆಟ್ಟಿ ಬೋಳಾರ, ಸಂತೋಷ್ ರೈ ನೆಲ್ಯಾಡಿ ಗೋಪಿನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರದೀಪ್ ಆಳ್ವ ವಂದಿಸಿದರು. ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಸುದ್ದಿ