(ತಿಳಿವಳಿಕೆಗಾಗಿ ಪುರಾಣ ಕಥೆಗಳು - ಸರಣಿ by ದಾಮೋದರ ಶೆಟ್ಟಿ ಇರುವೈಲು)
ಹಲವಾರು ವರ್ಷಗಳ ಅನಿಶ್ಚಿತತೆಯ ನಂತರ ಹಸ್ತಿನೆಯ ಅರಮನೆಯಲ್ಲಿ ಮತ್ತೊಮ್ಮೆ ಎಲ್ಲವೂ ತಹಬಂದಿಗೆ ಬಂದು ರಾಜ್ಯಭಾರ ಸುಸೂತ್ರವಾಗಿ ನಡೆಯುತ್ತಿತ್ತು.
ಶಂತನು ಪುತ್ರ ವಿಚಿತ್ರವೀರ್ಯನಿಗೆ ಮಕ್ಕಳಾಗದೇ ಇದ್ದುದರಿಂದ, ಅವನ ಕ್ಷೇತ್ರದಲ್ಲಿ, ಆ ಕಾಲದ ಪದ್ದತಿಯಂತೆ ನಿಯೋಗ ಪದ್ದತಿಯಿಂದ ವೇದವ್ಯಾಸರಿಂದ ಅಂಬಿಕೆಯಲ್ಲಿ ಧೃತರಾಷ್ಟ್ರ , ಅಂಬಾಲಿಕೆಯಿಂದ ಪಾಂಡು ಹಾಗೂ ದಾಸಿಯಿಂದ ವಿದುರ ಹುಟ್ಟಿದ್ದರು.
ಹಿರಿಯನಾದ ದೃತರಾಷ್ಟ್ರ ಕುರುಡನಾದರೆ, ಕಿರಿಯವ ಪಾಂಡು ಪಾಂಡುರೋಗಿ. ಇಬ್ಬರೂ ಸಿಂಹಾಸನಕ್ಕೆ ಅನರ್ಹರಾಗಿದ್ದರೂ ಮಧ್ಯಮಾರ್ಹತೆಯ ನೆಲೆಯಲ್ಲಿ ಕಿರಿಯನಾದ ಪಾಂಡು ಚಕ್ರವರ್ತಿಯು ರಾಜ್ಯವಾಳುತ್ತಿದ್ದನು.
ಪಾಂಡು ಚಕ್ರವರ್ತಿ ಹಲವಾರು ದಿಗ್ವಿಜಯಗಳನ್ನು ಮಾಡಿ ಸಾಮ್ರಾಜ್ಯವನ್ನು ವಿಸ್ತರಿಸಿದ್ದ. ಸದಾ, ಬೇಟೆ, ದಿಗ್ವಿಜಯ, ವಿಹಾರದಲ್ಲಿ ಸಮಯ ಕಳೆಯುವುದು ಅವನ ಹವ್ಯಾಸ. ಅವನಿಗೆ ಕುಂತಿ ಮತ್ತು ಮಾದ್ರಿ ಎಂಬ ಇಬ್ಬರು ಪತ್ನಿಯರು.
ಅದೇ ಕಾಲದಲ್ಲಿ ಕಿಂದಮ ಎಂಬ ಋಷಿಯು ಹಸ್ತಿನಾವತಿಯಿಂದ ಅನತಿ ದೂರದಲ್ಲಿದ್ದ ಅರಣ್ಯದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ಗೃಹಸ್ಥಾಶ್ರಮವನ್ನು ಪಾಲಿಸುತ್ತಾ ತಪೋನಿರತನಾಗಿದ್ದನು.
ಒಮ್ಮೆ ಕಿಂದಮನ ಪತ್ನಿಯು ಋತುಸ್ನಾನ ಮುಗಿಸಿ ಆಶ್ರಮಕ್ಕೆ ಹಿಂದಿರುಗುವಾಗ ರತಿ ಕ್ರೀಡೆಯಲ್ಲಿ ನಿರತವಾಗಿದ್ದ ಮೃಗಗಳನ್ನು ನೋಡಿ ಕಾಮಾಸಕ್ತಳಾದಳು. ಅವಳು ಆಶ್ರಮಕ್ಕೆ ಧಾವಿಸಿ ಬಂದು ತನ್ನನ್ನು ಕೂಡುವಂತೆ ಪತಿಯನ್ನು ಪೀಡಿಸತೊಡಗಿದಳು.
ಆಗ ಕಿಂದಮನು- "ಭದ್ರೆ, ನಾವು ಮನುಷ್ಯರು, ಮೇಲಾಗಿ ತಾಪಸಿಗಳು.ಯಾವಾಗ ಅಂದರೆ ಆವಾಗ ನಾನು ನಿನ್ನನ್ನು ಸೇರುವಂತಿಲ್ಲ. ಅಲ್ಲದೆ ಇದು ಹಗಲು. ಈಗ ನಿನ್ನನ್ನು ಸೇರುವುದು ಪಶುಧರ್ಮ" ಎಂದು ಪರಿಪರಿಯಾಗಿ ಹೇಳಿದನು.
ಆದರೆ ಪತ್ನಿಯ ಬಲವಂತ ಹೆಚ್ಚಾದ್ದರಿಂದ ಕಿಂದಮನು- "ಸರಿ, ನಾವು ಮನುಷ್ಯ ರೂಪದಲ್ಲಿ ಸೇರಿದರೆ ಅದು ಅಧರ್ಮವಾಗುತ್ತದೆ. ನಾವಿಬ್ಬರೂ ಜಿಂಕೆಗಳಾಗಿ ರತಿ ಕ್ರೀಡೆಯಲ್ಲಿ ತೊಡಗೋಣ" ಎಂದು ಹೇಳಿ ಪತ್ನಿಯನ್ನು ಮೃಗವನ್ನಾಗಿ ಮಾಡಿ ತಾನೂ ಮೃಗವಾಗಿ ರತಿ ಕ್ರೀಡೆಯನ್ನು ಪ್ರಾರಂಭಿಸಿದರು.
ಅದೇ ಸಮಯಕ್ಕೆ ಸರಿಯಾಗಿ ಯುವಕನಾದ ಪಾಂಡು ಚಕ್ರವರ್ತಿಯು ಬೇಟೆಯಾಡುತ್ತಾ ಅಲ್ಲಿಗೆ ಬಂದವನು ಪೊದೆಯ ಹಿಂದೆ ಶಬ್ದವನ್ನು ಕೇಳಿ ಅದು ಮೃಗವೆಂದು ಭಾವಿಸಿ, ಬಾಣವನ್ನು ಪ್ರಯೋಗಿಸಿದನು. ಅದು ಪಶುರೂಪದಲ್ಲಿದ್ದ ಕಿಂದಮ ಋಷಿಗೆ ನಾಟಿತು.
ಮಾರಣಾಂತಿಕವಾಗಿ ಪೆಟ್ಟು ತಿಂದ ಕಿಂದಮನು ಕರ್ಕಶವಾಗಿ ಕೂಗುತ್ತಾ ಪೊದೆಯ ಮರೆಯಿಂದ ಹೊರಬಂದು, ಮನುಷ್ಯ ರೂಪ ಧರಿಸಿ- "ನೀನು ಕಾಮಾಸಕ್ತನಾಗಿ ನಿನ್ನ ಪತ್ನಿಯನ್ನು ಅಥವಾ ಬೇರೆ ಸ್ತ್ರೀಯನ್ನು ಮುಟ್ಟಿದ ತಕ್ಷಣ ಮರಣ ಹೊಂದು" ಎಂದು ಶಪಿಸಿ ಅಸು ನೀಗಿದನು. ಅವನ ಪತ್ನಿಯೂ ಸಹಗಮನ ಮಾಡಿದಳು.
ಈ ಘೋರವಾದ ಶಾಪದಿಂದ ಪಾಂಡುವಿಗೆ ಜೀವನದ ಬಗ್ಗೆ ಜಿಗುಪ್ಸೆ ಮೂಡಿ ಹಸ್ತಿನಾವತಿಗರಕ್ಕೆ ಬಂದು, ನಡೆದ ಘಟನೆಯನ್ನು ಭೀಷ್ಮಾದಿಗಳಿಗೆ ವಿವರಿಸಿ, ರಾಜ ಲಾಂಛನವನ್ನು, ರಾಜ್ಯಾಧಿಕಾರವನ್ನು ಧೃತರಾಷ್ಟ್ರನಿಗೆ ವಹಿಸಿ ಪತ್ನಿಯರಾದ ಕುಂತಿ, ಮಾದ್ರಿಯರೊಂದಿಗೆ ಕಾಡಿಗೆ ಬಂದು, ಅಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ತಾಪಸರಂತೆ ಇರಲು ಪ್ರಾರಂಭಿಸಿದನು.
ಮಕ್ಕಳಿಲ್ಲದವರಿಗೆ ಸ್ವರ್ಗವಿಲ್ಲ ಎಂಬ ಶಾಸ್ತ್ರ ವಚನವು ಅವನನ್ನು ಅಧೀರನನ್ನಾಗಿ ಮಾಡಿತು. ಪತಿಯ ಅನ್ಯಮನಸ್ಕತೆಯನ್ನು ಗಮನಿಸಿದ ಕುಂತಿಯು- "ಆರ್ಯಪುತ್ರ, ನೀನು ಚಿಂತಿಸುವ ಅಗತ್ಯವಿಲ್ಲ. ನನಗೆ ದೂರ್ವಾಸ ಮುನಿಗಳು ಮಂತ್ರವೊಂದನ್ನು ಉಪದೇಶಿಸಿದ್ದಾರೆ. ಆ ಮಂತ್ರದಿಂದ ನಾನು ದೇವತೆಗಳಿಂದ ಮಕ್ಕಳನ್ನು ಪಡೆಯಬಲ್ಲೆ. ನೀನು ಒಪ್ಪಿದರೆ ನಾನು ಮುಂದುವರಿಯುತ್ತೇನೆ" ಎಂದಳು.
ಪಾಂಡುವು ಒಪ್ಪಿಗೆ ಕೊಟ್ಟ ನಂತರ ಅವಳು ಧರ್ಮದೇವತೆಯಿಂದ ಯುಧಿಷ್ಠಿರನನ್ನು ಪಡೆದಳು. ಮಗುವು ಜನಿಸಿದಾಗ ಎಲ್ಲೆಲ್ಲೂ ಶುಭ ಶಕುನಗಳಾದವು. ದಿಕ್ಕುಗಳು ಪ್ರಸನ್ನವಾದವು, ಆಕಾಶವು ಶುಭ್ರವಾಯಿತು, ಸಾಗರಗಳು ಶಾಂತವಾದವು, ನದಿಗಳು ಪ್ರಸನ್ನತೆಯಿಂದ ಹರಿದವು. ಇಡೀ ಪ್ರಕೃತಿಯೇ ಪ್ರಸನ್ನವಾಯಿತು. ಸಾತ್ವಿಕರ ಮನಗಳು ಹರ್ಷದಿಂದ ತುಂಬಿಹೋದವು. ನಂತರ ವಾಯುವಿನಿಂದ ಭೀಮನನ್ನೂ, ಇಂದ್ರನಿಂದ ಅರ್ಜುನನನ್ನೂ ಪಡೆದಳು. ಅನಂತರ ಅಶ್ವಿನೀ ದೇವತೆಗಳ ವರದಿಂದ ಮಾದ್ರಿಯು ನಕುಲ-ಸಹದೇವರನ್ನು ಪಡೆದಳು.
ದೌರ್ಭಾಗ್ಯವೆಂದರೆ ಗಾಂಧಾರಿಯು ಗರ್ಭ ಧರಿಸಿ ಒಂದು ವರ್ಷದ ಮೇಲಾಗಿದ್ದರೂ ಅವಳಿಗೆ ಪ್ರಸವವಾಗಲಿಲ್ಲ. ಕುಂತಿಯು ಮಗನನ್ನು ಪಡೆದ ವಿಷಯವನ್ನು ತಿಳಿದ ಗಾಂಧಾರಿಯು- "ಅಯ್ಯೋ, ನಾನು ಕೆಟ್ಟೆ! ಕುರು ವಂಶದ ವಾರಸುದಾರ ಹುಟ್ಟೇ ಬಿಟ್ಟ. ಇನ್ನು ನನ್ನ ಮಕ್ಕಳ ಗತಿಯೇನು? ಅವರು ಕುಂತಿಯ ಮಕ್ಕಳ ಸೇವೆಯನ್ನು ಮಾಡಬೇಕಾಗುತ್ತದೆ" ಎಂದು ಬಹು ವಿಧವಾಗಿ ಹಲುಬಿದಳು. ಧೃತರಾಷ್ಟ್ರನ ಚಿತ್ತದಲ್ಲೂ ಕಳವಳವಾಯಿತು.
ಒಡಲುರಿಯನ್ನು ತಾಳಲಾರದೆ ಗಾಂಧಾರಿಯು ತನ್ನ ಹೊಟ್ಟೆಯನ್ನು ಬಲವಾಗಿ ಕಿವುಚಿಕೊಂಡಳು. ಆಗ ನೆತ್ತರಿನಿಂದ ಕೂಡಿದ್ದ ಮಾಂಸದ ಮುದ್ದೆಯೊಂದು ಅವಳ ಗರ್ಭದಿಂದ ಹೊರಬಂದಿತು. ಅದೇ ಸಮಯಕ್ಕೆ ಅಲ್ಲಿ ಪ್ರಕಟರಾದ ವ್ಯಾಸರು- "ಮರುಳು ಹೆಣ್ಣೇ, ಇದೇನು ಅಕಾರ್ಯ ಮಾಡಿಬಿಟ್ಟೆ. ಇನ್ನು ಸ್ವಲ್ಪ ದಿನಗಳು ಕಾದಿದ್ದರೆ ಕುಲಕ್ಕೆ ಕೀರ್ತಿ ತರುವ ಮಕ್ಕಳು ಹುಟ್ಟುತ್ತಿದ್ದರು. ಈಗ ಕಾಲ ಮಿಂಚಿ ಹೋಗಿದೆ. ನಾನೇನೋ ಈ ಪಿಂಡದಿಂದ ಮಕ್ಕಳನ್ನು ಕರುಣಿಸಬಲ್ಲೆ. ಆದರೆ ಹೀಗೆ ಹುಟ್ಟುವ ಮಕ್ಕಳು ಕುಲಕ್ಕೆ ಕೊಡಲಿ ಕಾವಾಗುತ್ತಾರೆ. ಈಗ ನೀನು ಮಾಡಿದ್ದನ್ನು ನೀನೇ ಉಣಬೇಕು" ಎಂದು ಪೇಚಾಡಿಕೊಂಡರು.
ನಂತರ ವ್ಯಾಸರು ಪಿಂಡವನ್ನು ನೂರೊಂದು ಭಾಗ ಮಾಡಿ, ಅವುಗಳಲ್ಲಿ ನೂರರಲ್ಲಿ ಪುತ್ರ ಭಾಗ್ಯವನ್ನು ಪ್ರತಿಷ್ಠಾಪಿಸಿ, ಒಂದೊಂದು ಪಿಂಡವನ್ನು ಒಂದೊಂದು ಘೃತ ಕುಂಭದಲ್ಲಿ ಇರಿಸಿದರು. ನೂರೊಂದನೆಯ ಭಾಗದಲ್ಲಿ ಪುತ್ರಿಯ ಭಾಗ್ಯವನ್ನು ಪ್ರತಿಷ್ಠಾಪಿಸಿ ಅದನ್ನು ಬೇರೊಂದು ಘೃತ ಕುಂಭದಲ್ಲಿ ಇರಿಸಿದರು.
ಕಾಲಕ್ರಮದಲ್ಲಿ ಘೃತ ಕುಂಭಗಳಿಂದ ನೂರು ಮಕ್ಕಳು ಜನಿಸಿದರು. ಮೊದಲು ದುರ್ಯೋಧನ, ನಂತರ ದುಶ್ಯಾಸನ ಜನಿಸಿದರು. ನೂರೊಂದನೆಯ ಕುಂಭದಿಂದ ದುಶ್ಶಲೆಯು ಜನಿಸಿದಳು.
ಧುರ್ಯೋಧನ ಜನಿಸಿದಾಗ ಹಲವಾರು ದುಶ್ಯಕುನಗಳು ಸಂಭವಿಸಿದವೆಂದು ಮಹಾಭಾರತದಲ್ಲಿ ಹೇಳಲ್ಪಟ್ಟಿದೆ. ವಿದುರನು ಈ ಮಗುವನ್ನು ತ್ಯಜಿಸುವುದೇ ಒಳ್ಳೆಯದೆಂದು ಸಲಹೆಯನ್ನೂ ಕೊಟ್ಟಿದ್ದನಂತೆ.
ಸಂಗ್ರಹ: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ