ದಂಡಕನಿಂದ ದಂಡಕಾರಣ್ಯ ಹುಟ್ಟಿಕೊಂಡಿದ್ದು ಹೇಗೆ?

ಯಕ್ಷಗಾನವೊಂದರ ದೃಶ್ಯ
ಪೌರಾಣಿಕ ಕಥಾನಕಗಳ ಅರಿವಿನ ಸರಣಿ by ದಾಮೋದರ ಶೆಟ್ಟಿ ಇರುವೈಲ್
ಸೂರ್ಯವಂಶದ ಒಬ್ಬ ಅರಸು ದಂಡಕ. ಈತ ಇಕ್ಷ್ವಾಕು ರಾಜನ ನೂರು ಮಕ್ಕಳಲ್ಲೊಬ್ಬ. ಇವನು ಮಹಾಮೂರ್ಖನಾಗಿದ್ದರಿಂದ "ದಂಡಕ"ಎಂದು ಹೆಸರಿಟ್ಟಿದ್ದರು.

ಇವನ ಘೋರಕೃತ್ಯವನ್ನು ಸಹಿಸಲಾಗದೆ ತಂದೆಯು ವಿಂಧ್ಯೆ- ಶೈವಲ ಪರ್ವತಗಳ ನಡುವಿನ ರಾಜ್ಯದಲ್ಲಿ ಮಧುಮಂತವೆಂಬ ನಗರ ನಿರ್ಮಿಸಿಕೊಟ್ಟು ಅವನನ್ನು ಬೇರೆಯೇ ಇರಿಸಿದನು. ಶುಕ್ರಾಚಾರ್ಯರನ್ನು ಪುರೋಹಿತರನಾಗಿಟ್ಟುಕೊಂಡು ಅತಿಶಯ ಭೋಗದಿಂದ ಅನೇಕ ವರ್ಷ ಅಲ್ಲಿ ರಾಜ್ಯಭಾರ ಮಾಡಿದನು.

ಒಮ್ಮೆ ದಂಡಕನು ಶುಕ್ರಾಚಾರ್ಯರ ಆಶ್ರಮಕ್ಕೆ ಹೋದಾಗ ಅವರು ಅಲ್ಲಿ ಇರದಿರುವುದನ್ನು ಕಂಡು ಅವರ ಪುತ್ರಿ ಅರಜೆಯನ್ನು ಬಲಾತ್ಕರಿಸಿ ಮಾನಭಂಗ ಮಾಡಿ ಹಿಂದಿರುಗಿದನು. ಆಶ್ರಮಕ್ಕೆ ಹಿಂದಿರುಗಿದ ಶುಕ್ರಾಚಾರ್ಯರು ಸಮಾಚಾರ ತಿಳಿಯುತ್ತಲೇ ಕೋಪಾವಿಷ್ಟರಾಗಿ "ದಂಡಕ, ಏಳು ರಾತ್ರಿಗಳೊಳಗೆ ನೀನೂ ನಿನ್ನ ರಾಜ್ಯವೂ ಭೃತ್ಯ ಪರಿವಾರ ಸಹಿತ, ಮೂರು ಯೋಜನ ವಿಸ್ತೀರ್ಣದ ಪ್ರದೇಶವೇ ನಾಶವಾಗಿ ಸಕಲ ಜೀವಜಂತುಗಳೂ ಮಾಯವಾಗಲಿ" ಎಂದು ಶಪಿಸಿದರು.

ಮಗಳಿಗೆ "ನೀನು ಇಲ್ಲೇ ಇರು. ನೀನಿರುವ ಒಂದು ಯೋಜನ ಪ್ರದೇಶ ಫಲ-ಪುಷ್ಪ-ಅರಣ್ಯ ಸಂಪದ್ಭರಿತವಾಗಿ ಸದಾ ಸುಭಿಕ್ಷವಾಗಿರಲಿ. ಕಾಶಿಯಿಂದ ಅಗಸ್ತ್ಯರು ಬಂದಮೇಲೆ ಈ ಪ್ರದೇಶ ಪಾವನವಾಗಿ ಶ್ರೀರಾಮನ ಆಗಮನದ ನಂತರ ತಪಸ್ವಿಗಳ ನೆಲೆಬೀಡಾಗಲಿ" ಎಂದು ಹೇಳಿ ತನ್ನವರನ್ನೆಲ್ಲ ಕರೆದುಕೊಂಡು ಬೇರೆ ಸ್ಥಳಕ್ಕೆ ತೆರಳಿದರು.

ಶಾಪದಂತೆ ಸತತ ಏಳು ದಿನ ಧೂಳಿನ ಮಳೆ ಸುರಿದು ಎಲ್ಲರೂ ಎಲ್ಲವೂ ನಿರ್ನಾಮವಾಯಿತು. ನಂತರ ಈ ಪ್ರದೇಶವು "ದಂಡಕಾರಣ್ಯ" ಎಂದು ಖ್ಯಾತಿ ಪಡೆಯಿತು. ಇದನ್ನು ಆಗ "ಜನಸ್ಥಾನ" ಎಂದೂ ಕರೆಯುತ್ತಿದ್ದರು.

ಸಂಗ್ರಹ: ದಾಮೋದರ ಶೆಟ್ಟಿ, ಇರುವೈಲ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು