ಸುಳ್ಯ: ಯಕ್ಷಗಾನದ ಹಿರಿಯ ಕಲಾವಿದ, ಕನ್ನಡ-ತುಳು ಪ್ರಸಂಗಗಳ ಮನೋಜ್ಞ ಪಾತ್ರಧಾರಿ, 'ಕಾಡುಮಲ್ಲಿಗೆ' ಪ್ರಸಂಗ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚ, ಅಳಿಕೆ ರಾಮಯ್ಯ, ಬೋಳಾರ, ಸಾಮಗರು, ಮಿಜಾರು ಅಣ್ಣಪ್ಪ, ಪುಳಿಂಚ ರಾಮಯ್ಯ ರೈ ಮೊದಲಾದ ಮಹಾನ್ ಚೇತನಗಳ ಒಡನಾಡಿಯಾಗಿದ್ದ ಅವರು ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿರುವುದಲ್ಲದೆ ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ಒಬ್ಬರಾದ ವಿಶ್ವನಾಥ ರೈ ಅವರು 1949ರ ಫೆಬ್ರವರಿ 20ರಂದು ಬೆಳ್ಳಾರೆಯಲ್ಲಿ ಜನಿಸಿದರು. ಅವರಿಗೆ ಇಬ್ಬರು ಅಕ್ಕಂದಿರು, ಒಬ್ಬಾಕೆ ತಂಗಿ. 2 ನೇ ತರಗತಿ ಓದಿದ್ದರೂ ಬೆಳ್ಳಾರೆ ವಿಶ್ವನಾಥ ರೈ ಯಕ್ಷಗಾನದಲ್ಲಿ ಮಾಡಿದ ಮಹಾನ್ ಸಾಧನೆ ಅನುಕರಣೀಯ. ಅಚ್ಚುತ ಮಣಿಯಾಣಿ ಅವರಿಂದ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದವರು. ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದ್ದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ ಹೆಗ್ಗಳಿಕೆ ಅವರದು.
ಸ್ತ್ರೀ ಪುರುಷ ಪಾತ್ರಗಳೆರಡರಲ್ಲೂ ಪರಿಣತರಾಗಿರುವ ಬೆಳ್ಳಾರೆ ವಿಶ್ವನಾಥ ರೈ, ಒಟ್ಟು ಸುಮಾರು 55 ವರ್ಷ ತಿರುಗಾಟ ಮಾಡಿದ್ದಾರೆ.
ಅಭಿಮನ್ಯು, ಬಭ್ರುವಾಹನ, ರಾಮ, ಲಕ್ಷ್ಮಣ, ಕೃಷ್ಣ, ಅರ್ಜುನ, ಧರ್ಮರಾಯ, ಸೀತೆ, ದ್ರೌಪದಿ, ಮೋಹಿನಿ, ಪ್ರಭಾವತಿ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ತುಳು ಪ್ರಸಂಗಗಳಲ್ಲಂತೂ, ವಿಶೇಷವಾಗಿ ಕರ್ನಾಟಕ ಮೇಳದ ಸೂಪರ್ ಹಿಟ್ ಪ್ರಸಂಗ ಕಾಡಮಲ್ಲಿಗೆಯ 'ಮಲ್ಲಿಗೆ' ಪಾತ್ರ ನಿರ್ವಹಣೆ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟಿತ್ತು.
ಯಕ್ಷಗಾನ ಗುರುಗಳಾಗಿಯೂ ಹಲವಾರು ಶಿಷ್ಯರನ್ನು ರೂಪಿಸಿರುವ ಬೆಳ್ಳಾರೆ ವಿಶ್ವನಾಥ ರೈ ಅವರ ನಿಧನವು ಯಕ್ಷಗಾನ ರಂಗಕ್ಕೆ ಅತಿದೊಡ್ಡ ಆಘಾತ.
ಕರ್ನಾಟಕ ಮೇಳ ಒಂದರಲ್ಲೇ 35 ವರುಷಗಳ ತಿರುಗಾಟ ಮಾಡಿದ್ದು, ಉಳಿದಂತೆ ಮಧೂರು ಮೇಳ 1 ವರ್ಷ, ಸುರತ್ಕಲ್ ಮೇಳ 5 ವರ್ಷ, ಕದ್ರಿ ಮೇಳ 2 ವರ್ಷ, ಬಪ್ಪನಾಡು 1 ವರ್ಷ, ಕುಂಟಾರು ಮೇಳ 2 ವರ್ಷ, ಎಡನೀರು 1 ವರ್ಷ ಹಾಗೂ ಕಟೀಲು ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿದ್ದಾರೆ.
ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಡರಾತ್ರಿ ಬೆಳ್ಳಾರೆಯ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಇಂದು ಮದ್ಯಾಹ್ನ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಬೆಳ್ಳಾರೆಯಲ್ಲಿ ಜರುಗಲಿದೆ.