ಪಾಪಣ್ಣ ಭಟ್ರು ಖ್ಯಾತಿಯ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರಿಗೆ ಶ್ರೀ ನರಹರಿ ತೀರ್ಥ ಪ್ರಶಸ್ತಿ


ಉಡುಪಿ: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಅವರಿಗೆ ಉಡುಪಿ ಶ್ರೀ ಅದಮಾರು ಮಠವು ಪ್ರಾಯೋಜಿಸುವ 'ಶ್ರೀ ನರಹರಿ ತೀರ್ಥ ಪ್ರಶಸ್ತಿ' ಘೋಷಿಸಲಾಗಿದೆ.

ಜುಲೈ 11ರಂದು ಸೋಮವಾರ ಸಂಜೆ ಉಡುಪಿಯ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು ₹50 ಸಾವಿರ ಗೌರವಧನ, ಸ್ಮರಣಿಕೆ ಒಳಗೊಂಡಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಶ್ರೀ ಅದಮಾರು ಮಠದ ಶ್ರೀಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಂರ ಸನ್ಯಾಸದೀಕ್ಷೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಅದೇ ದಿನ ಗುರುವಂದನೆ ಕಾರ್ಯಕ್ರಮವೂ ನಡೆಯಲಿದೆ. ಈ ಸಂದರ್ಭ 'ಕೃಷ್ಣಪ್ರಿಯ ವಿಶ್ವಪ್ರಿಯ' ಪುಸ್ತಕ ಬಿಡುಗಡೆ, 2020-22 ಅದಮಾರು ಪರ್ಯಾಯದ 'ವಿಶ್ವಪ್ರಿಯ ಈಶಪ್ರಿಯ' ಸ್ಮರಣ ಸಂಚಿಕೆ ಬಿಡುಗಡೆ ಜೊತೆಗೆ ಮೂರನೇ ವರ್ಷದ 'ಶ್ರೀ ನರಹರಿ ತೀರ್ಥ ಪ್ರಶಸ್ತಿ' ಪ್ರದಾನ ಕಾರ್ಯಕ್ರಮಗಳು ನೆರವೇರಲಿವೆ.

ಕಾರ್ಯಕ್ರಮದ ಬಳಿಕ ನಾಡಿನ ತೆಂಕು ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ 'ಬ್ರಹ್ಮ ಕಪಾಲ' ಯಕ್ಷಗಾನವೂ ಪ್ರದರ್ಶನಗೊಳ್ಳಲಿದೆ.


ಈಗ 95ರ ಹರೆಯದ ಪೆರುವೋಡಿ ನಾರಾಯಣ ಭಟ್ಟರು 'ಪಾಪಣ್ಣ ಭಟ್ರು' ಎಂದೇ ಖ್ಯಾತಿ ಪಡೆದವರು. ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದುಕೊಟ್ಟ ಹಾಸ್ಯಗಾರರಾಗಿರುವ ಪೆರುವೋಡಿಯವರು 'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು ಪ್ರದರ್ಶಿಸಿ ಜನ ಮನ್ನಣೆ ಗಳಿಸಿದ್ದಾರೆ. ದಮಮಂತಿ ಪುನರ್ ಸ್ವಯಂವರ ಪ್ರಸಂಗದ 'ಬಾಹುಕ' ಪಾತ್ರಕ್ಕೆ ಹೊಸ ರೂಪ ನೀಡಿದವರು. ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ ಅವರದಾಗಿದ್ದು, ತುಳು ಪ್ರಸಂಗಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಮೂಲ್ಕಿ ಮೇಳದ ಯಜಮಾನಿಕೆ ನಡೆಸಿದ್ದ ಸಂಘಟನಾಚತುರರೂ ಹೌದು. ಪೆರುವೋಡಿಯವರ ಕಲಾ ಬದುಕಿನ ಚಿತ್ರಣ - 'ಹಾಸ್ಯಗಾರನ ಅಂತರಂಗ' ಪುಸ್ತಕವನ್ನು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ. ಕಾಂತಾವರದ ಕನ್ನಡ ಸಂಘವು ತನ್ನ 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪುಸ್ತಿಕೆಯನ್ನು ಪ್ರಕಟಿಸಿದೆ.
ಪ್ರಖ್ಯಾತ ಕಲಾವಿದರ ಸಂಗಮದಲ್ಲಿ ಬ್ರಹ್ಮ ಕಪಾಲ - ಗಮನ ಸೆಳೆಯಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು