ಕುಂದಾಪುರ: ಬಡಗುತಿಟ್ಟಿನ ಹಿರಿಯ ವೇಷಧಾರಿ, ಪರಂಪರೆಯ ಪ್ರತಿನಿಧಿ ಮಜ್ಜಿಗೆಬೈಲು ಆನಂದ ಶೆಟ್ಟಿ (80) ಅವರು ಜು.10ರ ಭಾನುವಾರ ಇಹಲೋಕ ತ್ಯಜಿಸಿದರು.
ಕುಂದಾಪುರ ತಾಲೂಕಿನ ಯಡಾಡಿಯ ಸ್ವಗೃಹದಲ್ಲಿ ರಾತ್ರಿ ಸುಮಾರು ಏಳುವರೆ ವೇಳೆ ಅವರು ನಿಧನರಾದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಪರಂಪರೆಯ ಪ್ರಾತಿನಿಧಿಕ ಪುರುಷ ಮತ್ತು ಎರಡನೇ ವೇಷಧಾರಿಯಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಮಜ್ಜಿಗೆಬೈಲು ಆನಂದ ಶೆಟ್ಟಿ, ತಮ್ಮದೇ ಆದ ಪಾತ್ರ ಚಿತ್ರಣದ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಬಡಗುತಿಟ್ಟಿನ ಹಾರಾಡಿ ಮತ್ತು ಮಟ್ಟಾಡಿ ಶೈಲಿಯ ಪ್ರಾತಿನಿಧಿಕ ಕಲಾವಿದರಾಗಿ ಗುರುತಿಸಿಕೊಂಡಿರುವ ಅವರು, ಐದನೇ ತರಗತಿ ಮಾತ್ರ ಕಲಿತಿದ್ದರು. ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ದಂಪತಿಗೆ 1942ರಲ್ಲಿ ಜನಿಸಿದ ಅವರು ತಂದೆಯಿಂದಲೇ ಆರಂಭಿಕ ಯಕ್ಷಗಾನ ಕಲಿತು, ಕೊಡವೂರು ಮೇಳದಲ್ಲಿ ತಂದೆಯವರೊಂದಿಗೆ ಗೆಜ್ಜೆ ಕಟ್ಟಿದ್ದರು.
ಪ್ರಧಾನ ಪುರುಷ ವೇಷಧಾರಿಯಾಗಿ ರೂಪುಗೊಂಡ ಇವರು ಮಂದಾರ್ತಿ ಮೇಳದಲ್ಲಿ ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜು ನಾಯ್ಕ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ, ಬೆಲ್ಲೂರು ರಾಮ ಬಳೆಗಾರ್, ಉಡುಪಿ ಬಸವ, ಮತ್ಯಾಡಿ ನರಸಿಂಹ ಶೆಟ್ಟಿ, ಮಂಡ್ಯ ಮುತ್ತ ಗಾಣಿಗ ಮುಂತಾದ ಬಯಲಾಟದ ಘಟಾನುಘಟಿಗಳೊಂದಿಗೆ ತಿರುಗಾಟ ಮಾಡಿದವರು.
ಪ್ರಧಾನ ಪುರುಷ ವೇಷಗಳಾದ ಅರ್ಜುನ, ಪುಷ್ಕಳ, ಸುಧನ್ವ, ಕೃಷ್ಣ, ಮಾರ್ತಾಂಡತೇಜ, ಎರಡನೇ ವೇಷಗಳಾದ ವೀರಮಣಿ, ಜಾಂಬವ, ಬಲರಾಮ, ಕಮಲಭೂಪ, ಯಯಾತಿ, ದಕ್ಷ, ಬೀಷ್ಮ ಮುಂತಾದ ಪಾತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ ಇವರು ಜೋಡಾಟದಲ್ಲಿ ರಂಗಸ್ಥಳದ ಹುಲಿಯಾಗಿ ಗರ್ಜಿಸಿದರು. ಜೋಡಾಟದಲ್ಲಿ ಮಂಡಿ ತಿರುಗುವುದರಲ್ಲಿ ದಾಖಲೆ ನಿರ್ಮಿಸಿದರು. ಸುದೀರ್ಘ ಕಾಲ ಮಾರಣಕಟ್ಟೆ, ಸಾಲಿಗ್ರಾಮ, ಅಮೃತೇಶ್ವರಿ, ಗೋಳಿಗರಡಿ, ಪೆರ್ಡೂರು ಹೀಗೆ 40 ವರ್ಷ ತಿರುಗಾಟ ಮಾಡಿದ ಇವರು ದೀರ್ಘಕಾಲ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಯಕ್ಷಗಾನ ಕಲಾರಂಗ ಸಹಿತ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದವು. 2013ರಲ್ಲಿ ಅವರಿಗೆ ಹಾರಾಡಿ ರಾಮ ಗಾಣಿಗ ಪ್ರಶಸ್ತಿ ದೊರೆತಿತ್ತು.
ಅವರು ಪತ್ನಿ, ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.