ಪರಂಪರೆಯ ಮದ್ದಳೆವಾದಕ ತಾರೇಸರ ಪರಮೇಶ್ವರ ಹೆಗಡೆ ದುರ್ಮರಣ

ಇಡಗುಂಜಿ ಮೇಳದ ವೇದಿಕೆಯಲ್ಲಿ ತಾಟೇಸರ ಪರಮಣ್ಣ (ಒಳಚಿತ್ರ).         ಚಿತ್ರಕೃಪೆ: ಕೆರೆಮನೆ ಶಿವಾನಂದ ಹೆಗಡೆ

ಶಿರಸಿ: ಹಿರಿಯ ಮದ್ದಳೆಗಾರ, ತಾರೇಸರ ಪರಮಣ್ಣ ಎಂದೇ ಜನಾನುರಾಗಿಯಾಗಿದ್ದ ತಾರೇಸರ ಪರಮೇಶ್ವರ ಹೆಗಡೆ (62) ಅವರು ಮಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿ ಆಕಸ್ಮಿಕ ಸಾವನ್ನಪ್ಪಿದ್ದು, ಯಕ್ಷಗಾನ ರಂಗವು ಆಘಾತ ವ್ಯಕ್ತಪಡಿಸಿದೆ.

ಮದ್ದಳಯ ಅತ್ಯುತ್ತಮ ಲಯ, ಸಾಹಿತ್ಯ, ಸ್ಪಷ್ಟ ವಾದನದೊಂದಿಗೆ ಪರಂಪರೆಯ ಮದ್ದಳೆವಾದನಕ್ಕೆ ಹೆಸರಾದವರು ತಾರೇಸರ ಪರಮಣ್ಣ. ಕೃಷಿಕರಾಗಿದ್ದ ಅವರು ಜು.14ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅವರ ಮೃತದೇಹವು ಶುಕ್ರವಾರ (ಜು.15) ಪತ್ತೆಯಾಗಿರುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಶಿರಸಿ, ಬನವಾಸಿ, ಸಿದ್ದಾಪುರ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಗುರುವಾರ ಹೆಗ್ಗರಣಿಯಿಂದ ಮನೆಗೆ ಮರಳುತ್ತಿದ್ದ ತಾರೇಸರದ ಪರಮೇಶ್ವರ ಕೃಷ್ಣಪ್ಪ ಹೆಗಡೆ ಅವರು ತಾರೇಸರದ ಹಳ್ಳ ದಾಟುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಈ ಬಗ್ಗೆ ಹುಡುಕಾಟ ನಡೆಸಲಾಗಿತ್ತಾದರೂ ಅವರ ಮೃತದೇಹ ಶುಕ್ರವಾರ ತಾರೇಸರ ಹೊಳೆಯಲ್ಲಿ ದೊರೆತಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತಮ ಮದ್ದಳೆವಾದಕ
ಕೆರೆಮನೆಯ ಇಡಗುಂಜಿ ಮೇಳದಲ್ಲಿ ತಾರೇಸರ ಪರಮಣ್ಣ ಅವರು ಬಹಳ ಕಾಲ ಮದ್ದಳೆವಾದಕರಾಗಿ ಖ್ಯಾತರಾಗಿದ್ದರು. ಕೆರೆಮನೆ ಯಕ್ಷಗಾನ ಕೇಂದ್ರದ ಗುರುಕುಲದಲ್ಲಿ ಅವರು ಎರಡು ವರ್ಷ ಯಕ್ಷಗಾನ ಅಭ್ಯಾಸ ಮಾಡಿದ್ದರು.

ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಪರಮಣ್ಣರನ್ನು ಹೀಗೆ ನೆನಪಿಸಿಕೊಂಡಿದ್ದಾರೆ: ಬಹಳ ಗಟ್ಟಿಯಾದ ಲಯ, ಮದ್ದಲೆಯನ್ನು ಸ್ಪಷ್ಟವಾಗಿ ಶುದ್ಧವಾಗಿ, ಪರಂಪರೆಯ ದಾರಿಯಲ್ಲಿ ನುಡಿಸಬಲ್ಲವರು. ಗುಂಪು, ಛಾಪು, ಕಪಾಲು, ಹೊರಳಿಕೆ ಕೊರೆದಿಟ್ಟ ಹಾಗೆ. ಪರಂಪರೆಯ ಅನೇಕ ಪೆಟ್ಟುಗಳನ್ನು ತಿಳಿದವರು. ಮದ್ದಲೆಗಾಗಿಯೇ ತಮ್ಮನ್ನು ಒಪ್ಪಿಸಿಕೊಂಡವರು. ಎಂದೂ ಗಿಮಿಕ್ಸಿಗೋ, ಕೀಳು ಪ್ರಚಾರದ ಹುಚ್ಚಿಗೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ವಿವರಿಸಿದ್ದಾರೆ ಕೆರೆಮನೆ ಶಿವಾನಂದ ಹೆಗಡೆ.

ಇಡಗುಂಜಿ ಮೇಳದ ದೇಶ ವಿದೇಶದ ಬಹಳಷ್ಟು ಪ್ರದರ್ಶನಗಳಿಗೆ ಪರಮಣ್ಣ ಯಾವತ್ತೂ ತಾಲೀಮು ನಡೆಸುವಲ್ಲಿ ಬೇಸರ ತೋರಿದವರಲ್ಲ. ಅವರ ರಂಗನಿಷ್ಠೆ, ಮದ್ದಲೆಯೊಂದಿಗಿನ ಪ್ರೀತಿ, ಸದಾ ನೆನೆಯುವಂಥಹದ್ದು. ಉತ್ತರ ಕನ್ನಡದ ಶ್ರೇಷ್ಠ ಮದ್ದಲೆವಾದಕರಾಗಿದ್ದ ಕಿನ್ನೀರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ ಮುಂತಾದ ಹಿರಿಯರ ಸಹವಾಸ, ಅವರ ಪೆಟ್ಟುಗಳನ್ನು ಆಸ್ವಾದಿಸುವುದು, ಅನುಸರಿಸುವುದು, ಪರಮನಿಗೆ ಬಹಳ ಪ್ರೀತಿಯ ವಿಷಯವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ಶಿವಾನಂದ ಹೆಗಡೆ.

ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರ ಒಡನಾಟ, ಮಾರ್ಗದರ್ಶನದಿಂದ ಪಕ್ವವಾಗಿದ್ದ ಅವರು, ಉತ್ತರ ಕನ್ನಡದ ಯಕ್ಷಗಾನದ ಹಲವು ಹಳೆಯ ನುಡಿತಗಳನ್ನು ಬಲ್ಲವರಾಗಿದ್ದರು. ಕರ್ಕಿ ಪ್ರಭಾಕರ ಭಂಡಾರಿಯವರ ಮದ್ದಲೆಯ ನಾದ, ಪೆಟ್ಟುಗಳ ಸೌಂದರ್ಯ ಅವನ ಜೀವದ ಗೆಳೆಯನಂತೆ. ಹಾಗಾಗಿ  ಒಂದು ರೀತಿಯಲ್ಲಿ ಪ್ರಭಾಕರ ಭಂಡಾರಿಯವರ ಭಕ್ತನೇ ಆಗಿದ್ದ. ಮಾವಿನಕೆರೆ ಚಂಡೆ ಕೃಷ್ಣ ಯಾಜಿಯವರ ಶಿಷ್ಯರಾಗಿದ್ದು, ತಮ್ಮ ಮದ್ದಲೆಯನ್ನು ಮನೆಯ ಮಕ್ಕಳಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.

ನಾಲ್ಕಾರು ವರುಷದಿಂದ ಅನಾರೋಗ್ಯದ ನಿಮಿತ್ತ ಅವರು ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸುತ್ತಿರಲಿಲ್ಲ. ಕೆರೆಮನೆ ಯಕ್ಷಗಾನ ಕೇಂದ್ರದಲ್ಲಿ ತಯಾರಾದ ಅನೇಕ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾದ ಅವರು, ಯಕ್ಷಗಾನ ಕೇಂದ್ರದ ಶಿಕ್ಷಕರಾಗಿಯೂ, ಮಂಡಳಿಯ ಮದ್ದಲೆವಾದಕರಾಗಿಯೂ ಬಹುಕಾಲ ದುಡಿದಿದ್ದರು.

ಇದು ಸಾಯುವ ವಯಸ್ಸಲ್ಲ. ಒಳ್ಳೆಯ ಪ್ರತಿಭೆ ಇತ್ತು. ಇನ್ನೂ ಬೆಳಗಬೇಕಿತ್ತು. ವಿಧಿ ಬೇರೆ ಬರೆದಿತ್ತು. ಯಕ್ಷರಂಗಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ಬಗ್ಗೆ ಕೆರೆಮನೆ ಶಿವಾನಂದ ಹೆಗಡೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು