ಕೌರವರ ನಿರ್ನಾಮದ ಬಳಿಕ ಅಶ್ವತ್ಥಾಮನೆಸಗಿದ ಕರಾಳ ಕೃತ್ಯ

ಯಕ್ಷಗಾನ ಅಶ್ವತ್ಥಾಮ
ಬೆಂಗಳೂರಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದಿಂದ ನಡೆದ ಮಹಾಪ್ರಸ್ಥಾನ ಪ್ರಸಂಗದಲ್ಲಿ ಅಶ್ವತ್ಥಾಮನಾಗಿ ಪ್ರಸಾದ್ ಚೇರ್ಕಾಡಿ. ಚಿತ್ರ ಕೃಪೆ: ಪಿ.ಕೆ.ಜೈನ್ ಚಪ್ಪರಿಕೆ
ರಕ್ತರಾತ್ರಿ ಹೆಸರಿನ ಯಕ್ಷಗಾನದಲ್ಲಿ ಅಶ್ವತ್ಥಾಮನ ಸ್ವಾಮಿಭಕ್ತಿ, ಕ್ರೌರ್ಯ, ದ್ವೇಷ, ರೋಷಾವೇಶವು ಬಿಂಬಿತವಾಗುತ್ತದೆ. ಈ ಬಗ್ಗೆ ವಿವರಿಸಿದ್ದಾರೆ ದಾಮೋದರ ಶೆಟ್ಟಿ, ಇರುವೈಲು ಅವರು ಪುರಾಣ ತಿಳಿಯೋಣ ಸರಣಿಯಲ್ಲಿ.
ಅದು ಕುರುಕ್ಷೇತ್ರ ಯುದ್ಧದ ಹದಿನೆಂಟನೇ ದಿನ. ವೈಶಂಪಾಯನ ಸರೋವರದ ಪಕ್ಕದಲ್ಲಿ ದುರ್ಯೋಧನನು ತೊಡೆ ಮುರಿದು ಅನಾಥನಂತೆ ಮಲಗಿದ್ದನು. (ಕೆ.ಎಸ್.ನಾರಾಯಣಾಚಾರ್ಯರ ಪ್ರಕಾರ ಭೀಮನು ಕೌರವನ ತೊಡೆಗೆ ಅಲ್ಲ, ಅದಕ್ಕಿಂತಲೂ ಸ್ವಲ್ಪ ಮೇಲೆ ಹೊಡೆದುದಂತೆ). ಸುತ್ತಲೂ ನೋಡಿದಾಗ ಅವನಿಗೆ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಬದಲಿಗೆ ಅವನಿಗೆ ಅವನ ಹಸಿಮಾಂಸವನ್ನು ತಿನ್ನಲು ಹಾತೊರೆಯುತ್ತಿರುವ ನಾಯಿ, ನರಿ, ಗೂಬೆ, ಹದ್ದುಗಳೇ ಕಾಣಿಸಿದವು. ಅವು ಅವನ ಮಾಂಸವನ್ನು ತಿನ್ನಲು ಹತ್ತಿರಕ್ಕೆ ಬಂದಾಗಲೆಲ್ಲ ದುರ್ಯೋಧನನು ಅವುಗಳನ್ನು ಬಲು ಕಷ್ಟದಿಂದ ಓಡಿಸುತ್ತಿದ್ದನು. ಆತ ಹದಿನೆಂಟು ದಿನದ ಹಿಂದಿನ ತನ್ನ ವೈಭವವನ್ನು ನೆನೆಸಿಕೊಂಡು ಹಲುಬುತ್ತಿದ್ದನು.

ವಿಪರೀತವಾದ ರಕ್ತಸ್ರಾವದಿಂದ ಅವನಿಗೆ ಒಂದಿಷ್ಟೂ  ಕದಲಲಾಗುತ್ತಿರಲಿಲ್ಲ. ಈ ವಿಷಯವನ್ನು ತಿಳಿದ ಕೃಪ, ಅಶ್ವತ್ಥಾಮ ಮತ್ತು ಕೃತವರ್ಮರು ಧಾವಿಸಿ ಬಂದು ದುರ್ಯೋಧನನ ದಾರುಣ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕಿದರು. ಅಶ್ವತ್ಥಾಮನಂತೂ ಬಿಕ್ಕಿ ಬಿಕ್ಕಿ ಅಳುತ್ತಾ ಕುಸಿದು ಬಿದ್ದನು. ನಂತರ ಅಶ್ವತ್ಥಾಮನು "ನನ್ನಂತಹ ಸಾವಿರಾರು ಜನರನ್ನು ಸಾಕಿದ ಧಣಿ ನೀನು. ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲಾರೆ" ಎಂದು ಹೇಳಿ ಮತ್ತೆ ಅಳಲು ಪ್ರಾರಂಭಿಸಿದನು.

ಆಗ ದುರ್ಯೋಧನನು "ಅಶ್ವತ್ಥಾಮಾ, ಕಾಲದ ಗತಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಸೌಭಾಗ್ಯದಿಂದ ನೀವು ಮೂವರಾದರೂ ಬದುಕುಳಿದಿದ್ದೀರಿ. ನನ್ನ ಬಗ್ಗೆ ಶೋಕಿಸುವುದನ್ನು ಬಿಟ್ಟು ನಿಮಗೆ ಸಂತೋಷ ಸಿಗುವ ಜಾಗಗಳನ್ನು ಹುಡುಕಿಕೊಳ್ಳಿ" ಎಂದನು.

ಆದರೆ ಅಶ್ವತ್ಥಾಮನು "ನಮಗೆ ಇನ್ನೆಲ್ಲಿಯ ಸುಖ? ನನ್ನ ತಂದೆಯನ್ನು ಮೋಸದಿಂದ ಕೊಂದರು. ನಿನ್ನ ಶತ್ರುಗಳನ್ನು ವಧಿಸಿದಾಗಲೇ ನನಗೆ ಶಾಂತಿ. ನನಗೆ ಅನುಮತಿಯನ್ನು ಕೊಡು. ಅವರನ್ನೆಲ್ಲ ಸಂಹರಿಸಿ ನಿನ್ನ ಋಣದಿಂದ ಮುಕ್ತನಾಗುತ್ತೇನೆ" ಎಂದನು.

ಆ ತಕ್ಷಣ ದುರ್ಯೋಧನನು ಅಶ್ವತ್ಥಾಮನನ್ನು ಸೈನಿಕರೇ ಇಲ್ಲದ ಸೈನ್ಯಕ್ಕೆ ಪ್ರಧಾನ ದಂಡನಾಯಕನನ್ನಾಗಿ ನೇಮಿಸಿದನು. ನಂತರ ಮೂವರೂ ಅಲ್ಲಿಂದ ಹೊರಟು ಕಾಡನ್ನು ಸೇರಿ, ರಾತ್ರಿಯಾಗಿದ್ದುದರಿಂದ ಒಂದು ಆಲದ ಮರದ ಕೆಳಗೆ ತಂಗಿದರು. ಕೃಪ ಮತ್ತು ಕೃತವರ್ಮರು ಮಲಗಿ ನಿದ್ರೆ ಹೋದರು. ಆದರೆ ದ್ರೋಣಪುತ್ರ ಅಶ್ವತ್ಥಾಮನಿಗೆ ನಿದ್ರೆ ಹತ್ತಲಿಲ್ಲ. ಆಗ ಅವನು ಸೇಡಿನ ಬೆಂಕಿಯಿಂದ ಸುಡಲ್ಪಡುತ್ತಾ ಬೆಂಕಿಯ ಚೆಂಡೇ ಆಗಿದ್ದನು.

ಮಧ್ಯರಾತ್ರಿಯ ಹೊತ್ತಿನಲ್ಲಿ ಒಂದು ದೊಡ್ಡ ಗೂಬೆಯು ಬಂದು ಅವರು ಮಲಗಿರುವ ಮರದ ಮೇಲೆ ಮಲಗಿದ್ದ ನೂರಾರು ಕಾಗೆಗಳನ್ನು ಕುಕ್ಕಿ ಕುಕ್ಕಿ ಕೊಂದಿತು. ಗಾಢ ನಿದ್ರೆಯಲ್ಲಿದ್ದುದರಿಂದ ಕಾಗೆಗಳಿಗೆ ಓಡಿಹೋಗಲೂ ಸಹ ಸಾಧ್ಯವಾಗಲಿಲ್ಲ. ಇದನ್ನೆಲ್ಲ ಗಮನಿಸಿದ ಅಶ್ವತ್ಥಾಮನಿಗೆ ಪಾಂಡವರನ್ನು ಕೊಲ್ಲುವ ದಾರಿಯು ಕಾಣಿಸಿತು.

ಆ ತಕ್ಷಣ ಅವನು ಕೃಪ ಮತ್ತು ಕೃತವರ್ಮರನ್ನು ಬಡಿದೆಬ್ಬಿಸಿ "ನಾವು ಈಗಲೇ ಪಾಂಡವರ ಶಿಬಿರಗಳಿಗೆ ಹೋಗೋಣ. ಎಲ್ಲರೂ ಗಾಢ ನಿದ್ರೆಯಲ್ಲಿರುತ್ತಾರೆ. ಅವರನ್ನು ಕೊಂದು ಹಾಕೋಣ" ಎಂದನು. ಆದರೆ ಕೃಪ ಮತ್ತು ಕೃತವರ್ಮರು ಇದಕ್ಕೆ ಒಪ್ಪಲಿಲ್ಲ.

ಕೃಪನು "ಅಶ್ವತ್ಥಾಮ, ನಿನ್ನದು ಇದೆಂತಹಾ ಘೋರ ಯೋಜನೆ. ನಾವು ದುಡುಕುವುದು ಬೇಡ. ನಾವು ಹಸ್ತಿನಾವತಿಗೆ ಹೋಗಿ ಧೃತರಾಷ್ಟ್ರಾದಿಗಳೊಡನೆ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ" ಎಂದು ಪರಿಪರಿಯಾಗಿ ಹೇಳಿದನು.

ಆದರೆ ಅಶ್ವತ್ಥಾಮನು ಒಪ್ಪದಿರಲು, ಕೃಪನು "ಸರಿ, ನಿನ್ನಷ್ಟದಂತೆಯೇ ಆಗಲಿ. ಆದರೆ ರಾತ್ರಿ ಕಳ್ಳರಂತೆ ನುಗ್ಗಿ ಅವರನ್ನು ವಧಿಸುವುದು ಬೇಡ. ನಾಳೆ ಬೆಳಿಗ್ಗೆ ಹೋಗಿ ಅವರೊಂದಿಗೆ ಯುದ್ಧ ಮಾಡಿ ಸಾಯಿಸೋಣ ಅಥವಾ ನಾವೇ ಸಾಯೋಣ" ಎಂದನು. ಅದಕ್ಕೂ ಅಶ್ವತ್ಥಾಮನು ಒಪ್ಪದಿರಲು, ಕೃಪ ಮತ್ತು ಕೃತವರ್ಮರು "ಸರಿ, ಹಣೆಯಲ್ಲಿ ಬರೆದಿರುವಂತೆ ಆಗುತ್ತದೆ. ನಾವೂ ಬರುತ್ತೇವೆ. ಆದರೆ‌ ನಾವು ಶಿಬಿರದ ಹೊರಗಡೆ ನಿಂತಿರುತ್ತೇವೆ. ನೀನು ಒಳಗೆ ಹೋಗಿ ನಿನ್ನ ಸಂಹಾರ ಕಾರ್ಯವನ್ನು ಮಾಡು. ತಪ್ಪಿಸಿಕೊಂಡು ಬಂದವರನ್ನು ನಾವು ವಧಿಸುತ್ತೇವೆ" ಎಂದರು.

ನಂತರ ಮೂವರೂ ಪಾಂಡವರ ಶಿಬಿರಗಳ ಹತ್ತಿರ ಬಂದರು. ಪೂರ್ವ ನಿರ್ಧಾರದಂತೆ ಕೃಪ ಮತ್ತು ಕೃತವರ್ಮರು ಹೊರಗಡೆ ನಿಂತರು. ಅಶ್ವತ್ಥಾಮನು ಒಳಗೆ ಪ್ರವೇಶಿಸಿ ದೃಷ್ಟದ್ಯುಮ್ನ, ಶಿಖಂಡಿ, ಯುಧಾಮನ್ಯು, ಉಪ ಪಾಂಡವರು ಮುಂತಾದವರನ್ನು  ಕೊಲ್ಲಲು ಪ್ರಾರಂಭಿಸಿದನು. ಹೀಗೆ ಪಾಂಡವರ ಶಿಬಿರಗಳಲ್ಲಿದ್ದ ಎಲ್ಲರೂ ಯಮಾಲಯ ಸೇರಿದರು. ನಂತರ ಮೂವರೂ ಶಿಬಿರಗಳಿಗೆ ಬೆಂಕಿಯನ್ನಿಟ್ಟರು.

ನಂತರ ದುರ್ಯೋಧನನಲ್ಲಿಗೆ ಬಂದರು. ದುರ್ಯೋಧನನಿಗಿನ್ನೂ ಕುಟುಕು ಜೀವವಿತ್ತು. ಅಶ್ವತ್ಥಾಮನು "ದುರ್ಯೋಧನ, ಪಾಂಡವರು, ಸಾತ್ಯಕಿ, ಕೃಷ್ಣರನ್ನು ಬಿಟ್ಟು ಮಿಕ್ಕೆಲ್ಲರೂ ನಿರ್ನಾಮವಾದರು" ಎಂದನು. ಆಗ ದುರ್ಯೋಧನನು ನಿಧಾನವಾಗಿ ಕಣ್ಣುಗಳನ್ನು ತೆರೆದು ಅಶ್ವತ್ಥಾಮನನ್ನು ನೋಡಿ ಅಸು ನೀಗಿದನು.

ಈ ಗೊಂದಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡ ದೃಷ್ಟದ್ಯುಮ್ನನ ಸಾರಥಿಯು ಧಾವಿಸಿ ಬಂದು ಓಘವತೀ ತೀರದಲ್ಲಿ ತಂಗಿದ್ದ ಯುಧಿಷ್ಠಿರನಿಗೆ ವಿಷಯವನ್ನು ತಿಳಿಸಿದನು. ಪಾಂಡವರು ಶೋಕ ಸಾಗರದಲ್ಲಿ ಮುಳುಗಿ ಹೋದರು. ದ್ರೌಪದಿಯು ಮಕ್ಕಳಾದ ಉಪಪಾಂಡವರ ಸಾವಿನಿಂದ ಶೋಕಾರ್ತಳಾಗಿ "ಅಶ್ವತ್ಥಾಮನನ್ನು ವಧಿಸುವ ತನಕ ನಾನು ಪ್ರಾಯೋಪವೇಶ ವ್ರತವನ್ನು ಮಾಡುತ್ತೇನೆ" ಎಂದು ಹೇಳಿ ಕುಳಿತು ಬಿಟ್ಟಳು. ಪ್ರಾಯೋಪವೇಶವೆಂದರೆ ಈ ದೇಹದ ಅನುಪಯುಕ್ತತೆಯನ್ನು ಮನಗಂಡು ಉಪವಾಸವಿದ್ದು ಪ್ರಾಣ ಬಿಡುವ ಪ್ರಕ್ರಿಯೆ‌. ಜೈನರಲ್ಲಿ ಇದೇ ರೀತಿ ಪ್ರಾಣ ತ್ಯಾಗ ಮಾಡುವ ಕ್ರಮ ಇದೆ. ಇದನ್ನು ಸಲ್ಲೇಖನ ವ್ರತ ಎಂದು ಕರೆಯುತ್ತಾರೆ.

ದ್ರೌಪದಿಯ ಶೋಕವನ್ನು ನೋಡಲಾರದೆ ಭೀಮನು ನಕುಲನನ್ನು ಸಾರಥಿಯಾಗಿ ಮಾಡಿಕೊಂಡು ಅಶ್ವತ್ಥಾಮನನ್ನು ಕೊಲ್ಲಲು ಹೊರಟನು. ಆಗ ಕೃಷ್ಣನು "ಯುಧಿಷ್ಠಿರ, ಈಗ ಭೀಮನು ದೊಡ್ಡ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ದುರಾತ್ಮನಾದ ಅಶ್ವತ್ಥಾಮನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಭಯಂಕರವಾದ ಬ್ರಹ್ಮಶಿರೋಸ್ತ್ರವನ್ನು ಪ್ರಯೋಗಿಸುತ್ತಾನೆ" ಎಂದನು. ನಂತರ ಕೃಷ್ಣ ಮತ್ತು ಮಿಕ್ಕ ಪಾಂಡವರು ಭೀಮನನ್ನು ರಕ್ಷಿಸಲು ಹೊರಟು, ಭೀಮನನ್ನು ಹಿಡಿದರು.


ಹೀಗೆ ಎಲ್ಲರೂ ಒಟ್ಟಾಗಿ ಬಂದಿದ್ದನ್ನು ನೋಡಿದ ಅಶ್ವತ್ಥಾಮನು ಜಂಡು ಹುಲ್ಲಿನಲ್ಲಿ (ಐಷೀಕ) ಬ್ರಹ್ಮಶಿರೋಸ್ತ್ರವನ್ನು ಅಭಿಮಂತ್ರಿಸಿ "ಈ ಅಸ್ತ್ರದಿಂದ ಪಾಂಡವರು ನಾಶವಾಗಲಿ (ಅಪಾಂಡವೀಯ)" ಎಂದು ಸಂಕಲ್ಪಿಸಿ ಅಸ್ತ್ರವನ್ನು ಪ್ರಯೋಗಿಸಿದನು. ಆಗ ಕೃಷ್ಣನ ಸೂಚನೆಯಂತೆ ಅರ್ಜುನನು "ಗುರು ಪುತ್ರನಿಗೆ ಮಂಗಳವಾಗಲಿ, ವಿಶ್ವಕ್ಕೆ ಮಂಗಳವಾಗಲಿ" ಎಂದು ಸಂಕಲ್ಪಿಸಿ ಬ್ರಹ್ಮಶಿರೋಸ್ತ್ರವನ್ನು ಪ್ರಯೋಗಿಸಿದನು. ಮುಂದಾಗಬಹುದಾದ ಅನರ್ಥಗಳನ್ನು ತಪ್ಪಿಸಲು ನಾರದರು ಮತ್ತು ವ್ಯಾಸರು ಎರಡು ಪ್ರಬಲ ಅಸ್ತ್ರಗಳ ಮಧ್ಯೆ ನಿಂತು ತಮ್ಮ ತಪೋಬಲದಿಂದ ಅಸ್ತ್ರಗಳನ್ನು ತಡೆದು ನಿಲ್ಲಿಸಿದರು.

ಆಗ ವ್ಯಾಸರು ತಮ್ಮ ತಮ್ಮ ಅಸ್ತ್ರಗಳನ್ನು ಉಪಸಂಹರಿಸಿಕೊಳ್ಳುವಂತೆ ಅರ್ಜುನ ಮತ್ತು ಅಶ್ವತ್ಥಾಮರಿಬ್ಬರಿಗೂ ಹೇಳಿದರು. ಜಿತೇಂದ್ರಿಯನಾದ ಅರ್ಜುನನು ತನ್ನ ಅಸ್ತ್ರವನ್ನು ಉಪಸಂಹರಿಸಿದನು. ಆದರೆ ಜಿತೇಂದ್ರಿಯನಲ್ಲದ ಕಾರಣ ಅಶ್ವತ್ಥಾಮನಿಗೆ ತನ್ನ ಅಸ್ತ್ರವನ್ನು ಉಪಸಂಹಾರ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಅಶ್ವತ್ಥಾಮನು "ಈ ಅಸ್ತ್ರವು ಪಾಂಡವರನ್ನು ನಾಶಮಾಡದಿದ್ದರೂ ಅವರ ಸಂತತಿಯನ್ನು ನಾಶಮಾಡುತ್ತದೆ" ಎಂದು ಹೇಳಿಬಿಟ್ಟನು. ಇದರಿಂದ ಕುಪಿತಗೊಂಡ ಭೀಮನು ಅಶ್ವತ್ಥಾಮನನ್ನು ಕೊಲ್ಲಲು ಉದ್ಯುಕ್ತನಾದನು. ವ್ಯಾಸರ ಸೂಚನೆಯಂತೆ ಅಶ್ವತ್ಥಾಮನು ತನ್ನ ತಲೆಯಲ್ಲಿದ್ದ ಅಪೂರ್ವ ಮಣಿಯನ್ನು ಭೀಮನಿಗೆ ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಂಡನು.

ಇದರಿಂದ ಕುಪಿತಗೊಂಡ ಕೃಷ್ಣನು "ನಿನ್ನ ಅಸ್ತ್ರವು ಉತ್ತರೆಯ ಗರ್ಭದಲ್ಲಿರುವ ಶಿಶುವನ್ನು ನಾಶಮಾಡಬಹುದು. ಆದರೆ ನಾನು ನನ್ನ ತಪೋಬಲದಿಂದ ಶಿಶುವನ್ನು ಬದುಕಿಸುತ್ತೇನೆ. ನೀನು ಮಾತ್ರ ಇನ್ನು ಸಾವಿರಾರು ವರ್ಷಗಳ ಕಾಲ ಹುಚ್ಚನಂತೆ ಭೂಮಂಡಲದಲ್ಲಿ ಅಲೆಯುತ್ತಿರು. ನಿನ್ನ ಮೈ ತುಂಬಾ ಹುಣ್ಣುಗಳಾಗಿ ಅವುಗಳಿಂದ ದುರ್ಗಂಧದಿಂದ ಕೂಡಿದ ಕೀವು ಸೋರುತ್ತಿದ್ದು, ನಿನ್ನನ್ನು ಯಾರೂ ಹತ್ತಿರ ಸೇರಿಸುವುದಿಲ್ಲ" ಎಂದು ಶಪಿಸಿದನು. ಮಣಿಯನ್ನು ತಂದು ಭೀಮನು ದ್ರೌಪದಿಗೆ ಕೊಟ್ಟು ವಿಷಯವನ್ನೆಲ್ಲ ತಿಳಿಸಿದನು. ಆಗ ದ್ರೌಪದಿಯು "ಹೋಗಲಿ ಬಿಡಿ, ಗುರು ಪುತ್ರನನ್ನು ವಧೆ ಮಾಡದಿದ್ದುದು ಒಳ್ಳೆಯದೇ ಆಯಿತು" ಎಂದು ಹೇಳಿ ಮಣಿಯನ್ನು ಯುಧಿಷ್ಠಿರನಿಗೆ ಕೊಟ್ಟಳು.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು