![]() |
ಎಂ.ಕೆ.ರಮೇಶ್ ಆಚಾರ್ಯ ಅವರ ದೇವಿ, ಕಿರೀಟ ವೇಷ |
ತೆಂಕು-ಬಡಗು ಎರಡೂ ರೀತಿಯ ಯಕ್ಷಗಾನ ಪ್ರಕಾರಗಳಲ್ಲಿ ಅಳುಕಿನಿಂದಲೇ ಅದ್ಭುತ ಸಾಮರ್ಥ್ಯ ಪ್ರದರ್ಶಿಸುವಲ್ಲಿಗೆ ತಲುಪಿದ ಎಂ.ಕೆ.ರಮೇಶ ಆಚಾರ್ಯರು ಯಕ್ಷಗಾನದಲ್ಲಿ ನಡೆದು ಬಂದ ದಾರಿಯಲ್ಲಿ ಯಕ್ಷಗಾನ ಬೆಳೆದು ಬಂದ ಇತಿಹಾಸ, ಕಲಾವಿದರ ಬವಣೆಯ ಮಾಹಿತಿಯೂ ಇದೆ, ಹಿರಿಯರನೇಕರ ವಿಷಯಗಳೂ ಇವೆ. ಯಕ್ಷಗಾನ.ಇನ್ ಗಾಗಿ ಲೇಖನ ಬರೆದವರು ಹವ್ಯಾಸಿ ಕಲಾವಿದ, ತಂತ್ರಾಂಶ ತಜ್ಞ ರವಿ ಮಡೋಡಿ, ಬೆಂಗಳೂರು.
ಸಾಮಾನ್ಯವಾಗಿ ಯಕ್ಷಗಾನವೆಂದರೆ ಕರಾವಳಿಯ ಕಲೆ ಎಂದು ಕರೆಯುವ ವಾಡಿಕೆಯಿದೆ. ಆದರೆ ಕರಾವಳಿ ಮಾತ್ರವಲ್ಲದೇ ಒಂದು ಕಾಲದಲ್ಲಿ ಮಲೆನಾಡಿನ ಭಾಗದಲ್ಲಿಯೂ ಅದು ಪ್ರಬಲವಾಗಿ ಬೆಳೆದಿತ್ತು ಎಂದು ಇತಿಹಾಸ ತಿಳಿಸುತ್ತದೆ. ಚಿಕ್ಕಮಗಳೂರಿನಿಂದ ಯಲ್ಲಾಪುರದವರೆಗೆ ಗುರುತಿಸುವ ಈ ಭಾಗದಲ್ಲಿ ಸೀಮೆಗೊಂದರಂತೆ ಮೇಳಗಳು ಅಸ್ತಿತ್ವದಲ್ಲಿದ್ದು ತಮ್ಮ ಕಲಾವಂತಿಕೆಯನ್ನು, ಪ್ರದರ್ಶನವನ್ನು ಮಾಡುತ್ತಿದ್ದವು. ಇವು ಬಡಗುತಿಟ್ಟಿನ ಮಾದರಿಗಳಾದ ನಡುತಿಟ್ಟು ಹಾಗೂ ಬಡಾಬಡಗು ಎರಡನ್ನೂ ಅನುಸರಿಸುತ್ತಿರುವುದು ವಿಶೇಷವಾಗಿದೆ. ಯಕ್ಷಗಾನ ಒಂದು ಕಾಲದ ಮಲೆನಾಡಿನ ಪ್ರಸಿದ್ಧ ಜನಮಾಧ್ಯಮವಾಗಿ ಬೆಳೆದಿತ್ತು. ಆಧುನಿಕತೆಯ ಹಂಗಿಲ್ಲದೇ ಹಳ್ಳಿಗರು ಯಕ್ಷಗಾನವನ್ನು ಪ್ರೀತಿಸಿದರು, ಬೆಳೆಸಿದರು ಹಾಗೂ ಪೋಷಿಸಿದರು.
ಇಂತಹ ಮಲೆನಾಡಿನ ಭಾಗವಾದ ತೀರ್ಥಹಳ್ಳಿಗೆ ಯಕ್ಷಗಾನದಲ್ಲಿ ವಿಶೇಷವಾದ ಸ್ಥಾನವಿದೆ. ಈ ಪರಿಸರದಲ್ಲಿ ರೆಂಜದಕಟ್ಟೆ, ಮೇಗರವಳ್ಳಿ, ಬುಕ್ಲಪುರ ಇತ್ಯಾದಿ ಮೇಳಗಳು ಹಲವು ಶತಮಾನಗಳ ಅಸ್ತಿತ್ವವನ್ನು ಹೊಂದಿದ್ದವು. ಮೇಳಗಳಿಗೆ ಪೂರಕವಾಗಿ ಇಲ್ಲಿನ ಹಲವು ಪ್ರಸಂಗಕರ್ತರು ಸಹ ತಮ್ಮ ಕಲೋಪಾಸನೆಯ ಮೂಲಕವಾಗಿ ಯಕ್ಷಗಾನವನ್ನು ಆರಾಧಿಸಿದ್ದರು. ಇದರಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ಪ್ರಮುಖವಾದವರು. ಜೊತೆಗೆ ಈ ಭಾಗದಿಂದ ಹಲವಾರು ಕಲಾವಿದರು, ಸಂಘಟಕರು ತಮ್ಮದೇ ಆದ ಕಲಾ ಕೈಂಕರ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಇವರಲ್ಲಿ ಮುಖ್ಯವಾಗಿ 2020ರ ಸಾಲಿನ ಕರ್ನಾಟಕ ಸರ್ಕಾರದ ಎರಡನೆಯ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶ್ರೀ ಎಂ ಕೆ ರಮೇಶ್ ಆಚಾರ್ಯ ಕೂಡ ಒಬ್ಬರು.
ಮಲೆನಾಡಿನ ಯಕ್ಷಗಾನ
ರಮೇಶ್ ಆಚಾರ್ಯ ಅವರ ಬಗ್ಗೆ ಹೇಳುವುದಕ್ಕಿಂತ ಮುಂಚೆ ಮಲೆನಾಡಿನ ಅಂದಿನ ಸ್ಥಿತಿಗತಿಯ ಹಾಗೂ ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಹೇಳಬೇಕಾಗುತ್ತದೆ. ಅಂದಿನ ಮಲೆನಾಡಿನ ಮೇಳಗಳಿಗೆ ಕರೆದು ಆಟ ಕೊಡುವ ಕ್ರಮಗಳಿರಲಿಲ್ಲ. ಮೇಳದವರು ಊರನ್ನು ಸುತ್ತಿ ಊರಿನ ಪ್ರಮುಖರಲ್ಲಿ ಕೇಳಿಕೊಂಡು ಆಟಗಳನ್ನು ಮಾಡಬೇಕಿತ್ತು. ಊರಿನವರು ವರಾಡವನ್ನು ಎತ್ತಿ ಒಂದು, ಎರಡು ರೂಪಾಯಿಗಳನ್ನು ಸೇರಿಸಿ ಆಟಗಳನ್ನು ಮಾಡಿಸುತ್ತಿದ್ದರು. ವರುಷಕ್ಕೆ ಸರಾಸರಿ 60 ರಿಂದ 70 ಆಟಗಳು ಪ್ರತಿ ಮೇಳಗಳಲ್ಲಿ ನಡೆಯುತ್ತಿದ್ದವು. ದಕ್ಷಿಣ ಕನ್ನಡದ ಮೇಳಗಳು ಘಟ್ಟಕ್ಕೆ ಬಂದು ಆಟ ನಡೆಸುತ್ತಿದ್ದುದು ಕಡಿಮೆ. ಆದರೆ ಅಲ್ಲಿನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಮಲೆನಾಡಿನ ಮೇಳಗಳಲ್ಲಿ ಇರುತ್ತಿದ್ದರು. ಜೊತೆಗೆ ಅಲ್ಲಿನ ಕಲಾವಿದರಿಗೆ ಮಳೆಗಾಲದಲ್ಲಿ ಕಾರ್ಯಕ್ರಮಗಳು ಇಲ್ಲದೇ ಇರುವುದರಿಂದ ಬದುಕಿಗಾಗಿ ಮಲೆನಾಡಿಗೆ ಬಂದು ಇಲ್ಲಿ ಪ್ರವಚನ, ಯಕ್ಷಗಾನದ ತರಬೇತಿ ಇತ್ಯಾದಿಗಳನ್ನು ಮಾಡುತ್ತಿದ್ದರು. ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಮಲೆನಾಡಿನ ಕಲಾವಿದರೊಂದಿಗೆ ಯಕ್ಷಗಾನದ ಕೊಡು/ಕೊಳ್ಳುವ ವಿಚಾರಗಳು ಯಕ್ಷಗಾನದ ಮಹತ್ತರವಾದ ಸಂಗತಿಯಾಗಿದ್ದು ಈ ಪ್ರೋತ್ಸಾಹವೇ ಇಲ್ಲಿ ಮೇಳಗಳು ಹುಟ್ಟುವುದಕ್ಕೆ ಕಾರಣವಾಗಿವೆ.
ಮುಮ್ಮೇಳದಲ್ಲಿ ಬಹಳ ಪ್ರಬುದ್ಧರಾದ ಕಲಾವಿದರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಪ್ರಸಂಗಗಳ ಬಗ್ಗೆ ಅರಿವಿದ್ದ ಭಾಗವತರು ಅಥವಾ ಇತರರಿಂದ ಹೆಚ್ಚಿನ ಮಾರ್ಗದರ್ಶನವನ್ನು ಪಡೆದು ರಂಗದಲ್ಲಿ ಪ್ರಸ್ತುತಿ ಪಡಿಸುತ್ತಿದ್ದರು. ಪದ್ಯಾಭಿನಯಗಳು, ಚಾಲು ಕುಣಿತಗಳು ಇರಲಿಲ್ಲ ಮತ್ತು ಕೇವಲ ಸಾಹಿತ್ಯಕ್ಕೆ ಮಾತ್ರ ಕುಣಿತವಿತ್ತು. ಅರ್ಥಗಾರಿಕೆಯು ಕಡಿಮೆಯಿದ್ದು ಪದ್ಯದ ಅರ್ಥಕ್ಕೆ ಮಾತ್ರ ಸೀಮಿತವಾಗಿತ್ತು. ಪ್ರಸಂಗದ ಎಲ್ಲ ಪದ್ಯಗಳು ಬಳಕೆಯಾಗುತ್ತಿದ್ದವು (ಸರಾಸರಿ 350-400). ವೇಷಗಾರಿಕೆಯಲ್ಲಿ ಮರದ ವೇಷಭೂಷಣದ ವಸ್ತುಗಳಿಗೆ ಬೇಗಡೆ ಅಂಟಿಸುವ ಕ್ರಮವಿದ್ದಿರಲಿಲ್ಲ. ಹೊಳೆಯ ಬದಿಯಲ್ಲಿ ಸಿಗುವ ಕೆಂಪು, ಜೇಡಿ ಕಲ್ಲುಗಳನ್ನು ಮರದ ವೇಷಭೂಷಣಕ್ಕೆ ಬಣ್ಣವಾಗಿ ಬಳಸುತ್ತಿದ್ದರು. ಮುಖಕ್ಕೆ ಹಸಿಬಣ್ಣವನ್ನು ಹಚ್ಚುತ್ತಿದ್ದರು.
ಘಟ್ಟದ ಮೇಲಿನ ಮೇಳಗಳಲ್ಲಿ ಪೂರ್ಣಪ್ರಮಾಣದ ತಿರುಗಾಟವಿರಲಿಲ್ಲ. ಸಾಮಾನ್ಯವಾಗಿ ಸಂಕ್ರಾಂತಿ ವೇಳೆಗೆ ಮೇಳಗಳ ಆಟಗಳು ಪ್ರಾರಂಭವಾಗುತ್ತಿದ್ದವು. ಹೆಚ್ಚಿನ ಮೇಳದ ಕಲಾವಿದರಿಗೆ ಗದ್ದೆ ಬೇಸಾಯ, ತೋಟದ ಕೆಲಸಗಳು ಇದ್ದುದ್ದರಿಂದ ಡಿಸೆಂಬರ್ ವೇಳೆಗೆ ಅದನ್ನು ಮುಗಿಸಿಕೊಳ್ಳಬೇಕಿತ್ತು. ಮೇಳ ಪ್ರಾರಂಭವಾದ ಮೇಲೂ ಒಂದಷ್ಟು ದಿನಗಳು ಮಾತ್ರ ಕಾರ್ಯಕ್ರಮಗಳು ಇರುತ್ತಿದ್ದವು. ಈ ಸಮಯದಲ್ಲಿ ದಕ್ಷಿಣ ಕನ್ನಡದಿಂದ ಬರುತ್ತಿದ್ದ ಕಲಾವಿದರು ಮತ್ತೆ ಊರಿಗೆ ಹೋಗಲಾಗದೆ ಜೀವನ ನಿರ್ವಹಣೆಗಾಗಿ ಅಲ್ಲಿಯೇ ಕೆಲಸವನ್ನೋ ಅಥವಾ ಇನ್ನೇನೋ ಮಾಡಿಕೊಂಡು ಇರಬೇಕಿತ್ತು.
ಕುಟುಂಬದ ಹಿನ್ನೆಲೆ
ತಂದೆ ಕೃಷ್ಣಾಚಾರ್ ಅವರು ಹವ್ಯಾಸಿಯಾಗಿ ತಾಳಮದ್ದಲೆ ಅರ್ಥಧಾರಿಯಾಗಿದ್ದರು. ಹಳೆಯ ಶೈಲಿಯ ಅರ್ಥಗಾರಿಕೆ ಅವರ ಕ್ರಮವಾಗಿತ್ತು. ಅಂದಿನ ತಾಳಮದ್ದಲೆಗಳಲ್ಲಿ ಅವಧರಿಸು, ಬಲ್ಲಿರೇನಯ್ಯ ಎಂಬ ಪದಗಳು ಹೆಚ್ಚಾಗಿ ಬಳಕೆಯಾಗುತ್ತಿದ್ದವು. ಉದಾಹರಣೆಗೆ "ಅಯ್ಯಾ, ಭಗವಾನ್ ಭಾಸ್ಕರನು ಪೂರ್ವ ದಿಕ್ಕಿನಲ್ಲಿ ಬರುವ ಮುಂಚೆಯೇ ನಾನೆದ್ದು, ಶುಚಿರ್ಭೂತನಾಗಿ, ಮಡಿಬಟ್ಟೆಯುಟ್ಟು ಆಭರಣದಿಂದ ಅಲಂಕೃತನಾಗಿ..." ಹೀಗೆ ಅರ್ಥಗಾರಿಕೆಯಿತ್ತು.
ಎಮ್ ಕೆ ಅವರ ತಂದೆಯವರು ಹೆಚ್ಚಾಗಿ ಸಾತ್ವಿಕ ಪಾತ್ರಗಳನ್ನು ಮಾಡುತ್ತಿದ್ದರು. ಈಗಿನಂತೆ ತಾಳಮದ್ದಲೆಗಳು ವರುಷದ ಎಲ್ಲ ದಿನಗಳಲ್ಲಿಯೂ ಇರದೆ ಹಬ್ಬ ಹರಿದಿನ ಮುಂತಾದ ವಿಶೇಷ ದಿನಗಳಲ್ಲಿ ನಡೆಯುತ್ತಿದ್ದವು. ರಾತ್ರಿ ಇಡೀ ನಡೆಯುತ್ತಿದ್ದ ತಾಳಮದ್ದಲೆಗಳು ಹೆಚ್ಚಾಗಿ ಲಾಟೀನು, ಚಿಮಣಿ ಬೆಳಕನ್ನು ಆಶ್ರಯಿಸಿದ್ದವು. ತಂದೆಗೆ ತಿಳಿಯದ ಹಾಗೆ ಅವರ ಹಿರಿಯ ಮಗ ಕೂಡ ತಾಳಮದ್ದಲೆಗಳಲ್ಲಿ ಅರ್ಥವನ್ನು ಹೇಳುತ್ತಿದ್ದರು. "ಮೂಡಣದಿಕ್ಕಿನ ಕೋಡುಗಲ್ಲಿನ ಎಡೆಯಲ್ಲಿ ಓಡೋಡಿ ಬರುವ ರವಿಯ ಪ್ರಕಾಶವಾದ ಕಿರಣವು ಪೃಥ್ವಿಯ ಮೇಲೆ ಪಸರಿಸುವ ಮುನ್ನ ಎಚ್ಚೆತ್ತ ನಾನು..." ಎಂಬಂತೆ ಸಾಹಿತ್ಯಿಕವಾಗಿ ಅರ್ಥವನ್ನು ಹೇಳುತ್ತಿದ್ದರು. ಒಮ್ಮೆ ಇವರ ಅರ್ಥವನ್ನು ಕೇಳಿದ ತಂದೆ "ನೀವೆಲ್ಲ ಇಷ್ಟು ಚೆಂದ ಅರ್ಥವನ್ನು ಹೇಳುತ್ತಿದ್ದೀರಿ ಅಂದ ಮೇಲೆ ಇನ್ನು ನಾನು ಅರ್ಥ ಹೇಳುವುದನ್ನು ನಿಲ್ಲಿಸುತ್ತೇನೆ. ನನ್ನಂಥವನ ಅರ್ಥ ಹೊಸ ತಲೆಮಾರಿಗೆ ಇಷ್ಟವಾಗುವುದು ಕಷ್ಟ" ಎಂಬ ಅಭಿಪ್ರಾಯವನ್ನು ಹೊತ್ತು ಅರ್ಥ ಹೇಳುವುದನ್ನು ನಿಲ್ಲಿಸಿದ್ದರು.
ರಂಗಪ್ರವೇಶ
ಎಮ್ ಕೆಯವರ ದೊಡ್ಡಪ್ಪ ಮರಿಯಪ್ಪಾಚರ್ ಎನ್ನುವವರು ಶ್ರೀ ಜಗದಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಚ್ಚನಕುಡಿಗೆ ಎಂಬ ಮೇಳವನ್ನು ಕಟ್ಟಿದ್ದರು. ನೆಲ್ಲೂರು ಮರಿಯಪ್ಪಚಾರ್ ಈ ಮೇಳದಲ್ಲಿ ಭಾಗವತರಾಗಿದ್ದರು. ಜೊತೆಗೆ ಅವರು ಎಮ್ ಕೆ ಕುಟುಂಬಕ್ಕೆ ದೂರದ ಸಂಬಂಧಿಗಳು ಕೂಡ. ಒಮ್ಮೆ ಮರಿಯಪ್ಪಚಾರ್ ಎಮ್ ಕೆ ಯವರ ಮನೆಗೆ ಬಂದಿದ್ದರು. ಆಗಿನ್ನು ಎಮ್ ಕೆ ಯವರಿಗೆ ಹತ್ತು - ಹನ್ನೊಂದು ವರುಷ. ಶಾಲೆಗಳಿಲ್ಲದ ಆ ಕಾಲದಲ್ಲಿ ಐಗಳ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದ ಎಮ್ ಕೆ ಯವರಿಗೆ ಮುಂದೆ ಓದುವ ಇಚ್ಛೆ ಇರಲಿಲ್ಲ. ಎಮ್ ಕೆ ಯವರನ್ನು ನೋಡಿದ ಮರಿಯಪ್ಪಚಾರ್ ಹುಡುಗನನ್ನು ಯಕ್ಷಗಾನಕ್ಕೆ ಕಳುಹಿಸಲು ಅವರ ತಂದೆಯಲ್ಲಿ ಕೇಳಿದರು. ಎಮ್ ಕೆಯವರ ತಾಯಿ ಇದನ್ನು ಆಕ್ಷೇಪಿಸಿ "ಅವನು ಓದಿ ಏನಾದರೂ ಉದ್ಯೋಗ ಮಾಡಲಿ. ಯಕ್ಷಗಾನಕ್ಕೆ ಬೇಡ" ಎಂದರಂತೆ. ಆಗ ತಂದೆ, "ಆರು ಜನ ಮಕ್ಕಳಲ್ಲಿ ಬೇರೆ ಯಾರಾದರೂ ಓದಲಿ, ಕೆಲಸ ಮಾಡಲಿ. ಇವನು ಮಾತ್ರ ಯಕ್ಷಗಾನಕ್ಕೆ ಹೋಗಲಿ" ಎಂದರು. ಈ ಮಾತುಗಳು ಎಮ್ ಕೆ ಯವರ ತಾಯಿಗೆ ಸಮಾಧಾನವಾಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಎಮ್ ಕೆ ಯವರು ಮಾತ್ರ ತಂದೆಯವರ ಅಪೇಕ್ಷೆಯಂತೆ ಮೇಳ ಸೇರಿದರು. ಹತ್ತು ಹನ್ನೊಂದು ವರುಷದ ಹುಡುಗನಿಗೆ ಮೇಳಕ್ಕೆ ಬರುವಾಗ ಬಣ್ಣದ ವೇಷಕ್ಕೆ ಹುಚ್ಚುಗಟ್ಟಿತ್ತೇ ವಿನಃ ಯಕ್ಷಗಾನದ ಬಗ್ಗೆ ಯಾವ ಕಲ್ಪನೆಗಳು ಇರಲಿಲ್ಲ. ಇದೊಂದು ಗಮ್ಮತ್ತಿನ ವಿಚಾರವೆಂದೇ ಎಣಿಸಿ ಅವರು ತಿರುಗಾಟವನ್ನು ಪ್ರಾರಂಭಿಸಿದರು.
ಜನ್ನಾಡಿ ಗೋಪು, ಬೆಳಕಲ್ ಸುಬ್ಬಣ್ಣಯ್ಯ, ಹಳ್ಳಾಡಿ ಕುಷ್ಟ, ನಗರ ಜಗನ್ನಾಥ ಶೆಟ್ಟಿ, ವೆಂಕಟದಾಸರು, ಮರಿಯಪ್ಪಚಾರ್, ಮಾರ್ವಿ ಸುಬ್ರಾಯ ಹೆಬ್ಬಾರ್ ಮುಂತಾದವರು ಬಚ್ಚನಕುಡಿಗೆ ಮೇಳದ ಕಲಾವಿದರಾಗಿದ್ದರು. ಮೊದಮೊದಲಿಗೆ ಎಮ್ ಕೆ ಯವರು ಕೋಡಂಗಿ, ಬಾಲಗೋಪಾಲ ವೇಷವನ್ನು ಮಾಡುತ್ತಿದ್ದರು. ಮೇಳದ ಯಜಮಾನರ ಮಗ ಎಂಬ ಕಾರಣಕ್ಕೆ ಭಾಸ್ಕರ ಬಳೆಗಾರ ಎಂಬವರು ತಿರುಗಾಟದ ಹಗಲಿನಲ್ಲಿ ಇವರಿಗೆ ಹೆಜ್ಜೆಗಳನ್ನು ಕಲಿಸುತ್ತಿದ್ದರು. ಕಲಿಕೆಯಲ್ಲಿ ಹೆಚ್ಚಿನ ಆಸ್ಥೆ ವಹಿಸಿದ್ದ ಎಮ್ ಕೆ ಯವರಿಗೆ ಒಂದು ಹಂತದಲ್ಲಿ ಬಡ್ತಿ ದೊರಕಿ ಮೇಳದಲ್ಲಿ ಮುಂದೆ ಪುಂಡು ವೇಷದ ಪಾತ್ರಗಳು ಪ್ರಾಪ್ತವಾದವು. ʻಕುಶಲವ ಕಾಳಗ’ ಪ್ರಸಂಗದ ಕುಶ ಇವರ ಮೊದಲ ಪುಂಡುವೇಷದ ಪಾತ್ರ. ಆ ದಿನ ಹಿರಿಯರಿಂದ ಒಂದಷ್ಟು ಅರ್ಥವನ್ನು ಹೇಳಿಸಿಕೊಂಡು ರಂಗದಲ್ಲಿ ವರದಿ ಒಪ್ಪಿಸಿದ್ದರು. ಮುಂದೆ ಅವರು ಜಾಂಬವತಿ ಕಲ್ಯಾಣದ ಪ್ರಸೇನ, ಕೃಷ್ಣಾರ್ಜುನ ಕಾಳಗದ ಅಭಿಮನ್ಯು ಮುಂತಾದ ಪಾತ್ರಗಳನ್ನು ಮಾಡಿ ಕಲಾಭಿಮಾನಿಗಳಿಂದ ಮೆಚ್ಚುಗೆ ಗಳಿಸಿದರು. ಹಲವು ಸಣ್ಣಪುಟ್ಟ ವೇಷಗಳನ್ನು ಮಾಡುತ್ತ ಮೂರು ವರುಷ ತಿರುಗಾಟವನ್ನು ಪೂರೈಸಿದರು. ನಂತರ ಒಂದು ವರುಷ ಕಿಗ್ಗ ಮೇಳದಲ್ಲಿಯೂ ತಿರುಗಾಟವನ್ನೂ ಮಾಡಿದರು.
ಕಿರಿಯ ಕಲಾವಿದರ ಅಸಹಾಯಕ ಸ್ಥಿತಿ
ಅಂದಿನ ಮೇಳಗಳ ವ್ಯವಸ್ಥೆಯಲ್ಲಿ ಕಿರಿಯ ಕಲಾವಿದರನ್ನು ಪ್ರೀತಿಯಿಂದ ನೋಡುತ್ತಿರಲಿಲ್ಲ. ಹೊಸತಾಗಿ ಮೇಳಕ್ಕೆ ಬಂದರೆ ಅವನಿಂದ ಎಷ್ಟು ಚಾಕರಿ ಮಾಡಿಸುವುದಕ್ಕೆ ಸಾಧ್ಯ ಎನ್ನುವುದನ್ನು ನೋಡುತ್ತಿದ್ದರು. ಹಿರಿಯ ಕಲಾವಿದರ ಬಟ್ಟೆ ಶುದ್ಧಮಾಡಿಕೊವುದು, ಅವರಿಗೆ ಸ್ನಾನಕ್ಕೆ ನೀರನ್ನು ತಂದುಕೊಡುವುದು, ಮಲಗುವುದಕ್ಕೆ ವ್ಯವಸ್ಥೆ ಮಾಡುವುದು, ತಿರುಗಾಟದಲ್ಲಿ ಅವರ ಚೀಲಗಳನ್ನು ಹೊತ್ತು ಸಾಗುವುದು ಹೀಗೆ ಇನ್ನಿತರೆ ಕೆಲಸಗಳನ್ನು ಕಿರಿಯ ಕಲಾವಿದರು ಮಾಡಬೇಕಾದಂಥಹ ಪರಿಸ್ಥಿತಿ ಇತ್ತು. ಕಿರಿಯ ಕಲಾವಿದರು ಹಗಲು ಈ ರೀತಿಯಲ್ಲಿ ಸೇವೆಯನ್ನು ಮಾಡಿ ರಾತ್ರಿ ರಂಗದಲ್ಲಿ ಹತ್ತಾರು ವೇಷಗಳನ್ನೂ ಮಾಡಬೇಕಿತ್ತು. ಒಂದೊಮ್ಮೆ ಸ್ವಲ್ಪ ಹೊತ್ತು ವಿಶ್ರಾಂತಿಗೆಂದು ಮಲಗಿದರೆ "ಏನಾ, ಕುಂಡಿ ಮೇಲ್ ಮಾಡಿ ಮಲ್ಕಡಿಂದೆಲೆ. ಆಟ ಕಾಣ್ ಅಥವಾ ಹೆಜ್ಜೆ ಕಲಿ"... ರಪ್ ಎಂದು ಏಟುಗಳು ಅಥವಾ ಬೈಗುಳಗಳು ತಪ್ಪುತ್ತಿರಲಿಲ್ಲ. ಇನ್ನು ಗಣಪತಿ ಪೆಟ್ಟಿಗೆಯವರು ಮೇಳದ ಪ್ರಧಾನ ಕಲಾವಿದರಿಗೆ ಸೀಮಿತವಾಗಿದ್ದರೇ ವಿನಃ ಕಿರಿಯ ಕಲಾವಿದರ ಹತ್ತಿರ ಬರುತ್ತಿರಲಿಲ್ಲ. ಹಾಗಾಗಿಯೇ ಕಿರಿಯ ಕಲಾವಿದರು ಮತ್ತೊಬ್ಬ ತಮ್ಮಂತಹ ಕಲಾವಿದನಿಂದ ಆಹಾರ್ಯದ ಸಹಾಯವನ್ನು ಪಡೆಯಬೇಕಿತ್ತು. ಜೊತೆಗೆ ಈ ಕಲಾವಿದರು ಚೌಕಿಯಲ್ಲಿ ಗಟ್ಟಿ ಮಾತನ್ನು ಆಡುವಂತಿರಲಿಲ್ಲ. ಒಂದೊಮ್ಮೆ ಆಡಿದರೆ "ಏನಾ, ನಿನ್ನ ಸ್ವರ ಇಲ್ಲಿಯವರೆಗೆ ಕೇಳುತ್ತಲೇ" ಎಂದು ಕಣ್ಣು ಕೆಂಪು ಮಾಡಿಕೊಂಡು ಹಿರಿಯ ಕಲಾವಿದರು ಗದರಿಸುತ್ತಿದ್ದರು. ಇಷ್ಟೆಲ್ಲ ಕಷ್ಟವಿದ್ದರೂ ಮೇಳವನ್ನು ಬಿಟ್ಟು ಹೋಗಲು ಕಿರಿಯ ಕಲಾವಿದರಿಗೆ ಮನಸ್ಸು ಬರುತ್ತಿರಲಿಲ್ಲ. ಇದು ಕಲೆಯ ಸೆಳೆತ ಒಂದು ಬಗೆಯಲ್ಲಾದರೆ ಅವರ ಮನೆಯ ಆರ್ಥಿಕ ಸ್ಥಿತಿಗಳು ಕೂಡ ಮತ್ತೊಂದು ಕಾರಣವಿದ್ದಿರಬಹುದು.
ಎಲ್ಲಿಯೋ ಘಟ್ಟದ ಮೇಲೆ ಯಾರದ್ದೋ ಮನೆಯಲ್ಲಿ ಒಂದು ಆಟ. ಮನೆಯವರಿಗೆ ಎಮ್ ಕೆ ಯವರು ಮೇಳದ ಯಜಮಾನರ ಮಗ ಎಂಬ ವಿಷಯ ತಿಳಿದಿತ್ತು. ಕಲಾವಿದರೆಲ್ಲರು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಆ ಮನೆಯವರು ಒಂದು ಲೋಟ ಮಜ್ಜಿಗೆಯನ್ನು ತಂದು ಬೇರೆ ಯಾವ ಕಲಾವಿದರಿಗೂ ನೀಡದೆ ಊಟ ಮಾಡುತ್ತಿದ್ದ ಎಮ್ ಕೆ ಅವರಿಗೆ ಕೊಟ್ಟರು. ಅವರು ಅದನ್ನು ಪಡೆದು ಅನ್ನಕ್ಕೆ ಕಲೆಸುತ್ತಿದ್ದರು. ಪಕ್ಕದಲ್ಲಿ ಕುಳಿತಿದ್ದ ಹಿರಿಯ ಮದ್ದಲೆಗಾರಿಗೆ ಕೋಪ ಉಕ್ಕೇರಿ ತನಗೆ ಕೊಡದೇ ಒಬ್ಬನೇ ಹಾಕಿಕೊಂಡ ಎನ್ನುವ ಕಾರಣಕ್ಕೆ ಎಂಜಲಿನ ಕೈಯಲ್ಲಿ ಎಮ್ ಕೆ ಅವರಿಗೆ ಗಟ್ಟಿಯಾಗಿ ಹೊಡೆದರು! ಬೆಚ್ಚಿದ ಎಮ್ ಕೆ ಯವರು ಊಟವನ್ನು ಅರ್ಧಕ್ಕೆ ನಿಲ್ಲಿಸಿ ಅಳುತ್ತ ಹೊರಕ್ಕೆ ಓಡಿ ಬಂದರು.
ಒಮ್ಮೆ ವೃಷಸೇನ-ಕರ್ಣಪರ್ವ ಪ್ರಸಂಗ. ಎಮ್ ಕೆ ಯವರದು ವೃಷಸೇನನ ಪಾತ್ರ. ಪ್ರಸಂಗದಲ್ಲಿ ವೃಷಸೇನ ಸತ್ತಲ್ಲಿಗೆ ಕರ್ಣ ಬಂದು ದುಃಖಿಸುವ ಸನ್ನಿವೇಶ. ಕರ್ಣನ ದುಃಖ ಮುಗಿದ ಮೇಲೆ ತೆರೆಯವರು ಬಂದು ತೆರೆ ಹಿಡಿದು ಮೇಲೆ ವೃಷಸೇನ ಎದ್ದು ಹೋಗಬೇಕಿತ್ತು. ಆದರೆ ಎಮ್ ಕೆ ಯವರು ರಂಗದಲ್ಲಿ ನಿದ್ದೆ ಮಾಡಿಬಿಟ್ಟಿದ್ದರು! ತೆರೆಯವರು ಸೂಚನೆ ನೀಡಿದರೂ ಅವರು ಏಳುವ ಸ್ಥಿತಿ ಇರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಒದ್ದು, ಕೆನ್ನಿಗೆ ಒಂದು ಬಾರಿಸಿ ಅವರನ್ನು ಎಬ್ಬಿಸಿ ಚೌಕಿಗೆ ಕರೆದುಕೊಂಡು ಹೋಗಬೇಕಾಯಿತು! ಇಂಥಹ ಹಲವಾರು ಮುಜುಗರದ ಸನ್ನಿವೇಶಗಳನ್ನು ತಮ್ಮ ವೃತ್ತಿಜೀವನದಲ್ಲಿ ಹಿಂದೆ ಹಾಕಿ ಮುಂದೆ ನಡೆದವರು ಎಮ್ ಕೆ.
ಕಲಾವಿದರ ದುಸ್ತರ ಬದುಕು
ಮುಂದೆ ಅವರು ಗೋಳಿಗರಡಿ ಮೇಳವನ್ನು ಸೇರಿ ಪುಂಡು ಸಾಲಿನ ಪಾತ್ರಗಳನ್ನು ನಿರ್ವಹಿಸಿದರು. ನಂತರ ಉದ್ಯಾವರ ಸುಂದರ್, ಹಿರಿಯಣ್ಣ ಭಂಡಾರಿ ಮುಂತಾದವರ ಬೆಂಬಲ ಪ್ರೋತ್ಸಾಹ ಸಿಕ್ಕು ಇನ್ನಷ್ಟು ಬೆಳವಣಿಗೆಗೆ ಕಾರಣವಾಯಿತು. 1963ರ ಹೊತ್ತಿಗೆ ಅವರು ಮಂದಾರ್ತಿ ಮೇಳವನ್ನು ಸೇರಿದರು. ತಿಂಗಳಿಗೆ 50 ರೂಪಾಯಿನಂತೆ ಆರು ತಿಂಗಳಿಗೆ ರೂ. 300 ಸಂಬಳ. ಆಗೆಲ್ಲ ಕಲಾವಿದರ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಇದಕ್ಕೊಂದು ಉದಾಹರಣೆಯೆಂದರೆ ಮಧ್ಯಾಹ್ನದವರೆಗೆ ಕಲಾವಿದರು ಬಿಡಾರದಲ್ಲಿ ಉಳಿದು, ನಂತರ ಊಟ ಮಾಡಿ, ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಹೋಗಿ ಮನೆಯ ಕಾರ್ಯಗಳನ್ನು ಪೂರೈಸಿ ಸಾಯಂಕಾಲ ಹೆಂಡತಿ - ಮಕ್ಕಳನ್ನು ಊಟಕ್ಕಾಗಿ ಮೇಳಕ್ಕೆ ಕರೆದುಕೊಂಡು ಬರುತ್ತಿದ್ದರು. ಒಂದು ಹೊತ್ತಿನ ಊಟಕ್ಕೂ ಕಲಾವಿದರು ಅನುಭವಿಸುತ್ತಿದ್ದ ದುಸ್ತರದ ಬದುಕಿಗೆ ಇದು ಸಾಕ್ಷಿ ನುಡಿಯುತ್ತದೆ. ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಚೇತರಿಕೆಯನ್ನು ಕಂಡಿದ್ದು ಈಗ ಒಂದು ಹದಿನೈದು-ಇಪ್ಪತ್ತು ವರುಷದಿಂದೀಚೆಗೆ ಎಂದರೆ ತಪ್ಪಾಗಲಾರದು.
ಮಂದಾರ್ತಿ ಮೇಳದಲ್ಲಿ ವೀರಭದ್ರ ನಾಯಕರ ಸಾಂಗತ್ಯ
ಮಂದಾರ್ತಿ ಮೇಳದಲ್ಲಿ ಯಕ್ಷಗಾನದ ದಶಾವತಾರಿ ಎಂದೇ ಖ್ಯಾತರಾಗಿದ್ದ ವೀರಭದ್ರ ನಾಯಕರು ಪ್ರಧಾನ ವೇಷಧಾರಿಗಳಾಗಿದ್ದರು. ಅವರ ಒಡನಾಟ ಎಮ್ ಕೆ ಯವರಿಗೆ ಲಭಿಸಿತು. ಜೊತೆಗೆ ಬಡಗುತಿಟ್ಟಿನ ಪಾರಂಪರಿಕ ವಿಷಯಗಳನ್ನು, ನಾಟ್ಯವನ್ನು ಅವರಿಂದ ಕಲಿಯಲು ಪ್ರಾರಂಭಿಸಿದರು. ಹಿಂದೆ ಕಾಲ್ನಡಿಗೆಯಲ್ಲಿ ಒಂದು ಕ್ಯಾಂಪಿನಿಂದ ಮತ್ತೊಂದು ಕ್ಯಾಂಪಿಗೆ ಹೋಗಬೇಕಿತ್ತು. ಕ್ಯಾಂಪಿಗೆ ಹೋದ ಮೇಲೆ ವೀರಭದ್ರ ನಾಯಕರಿಗೆ ವಿಶ್ರಾಂತಿ ಬೇಕಾಗುತ್ತದರಿಂದ ದಾರಿಯಲ್ಲಿ ನಡೆದು ಹೋಗುವಾಗ ಹೆಜ್ಜೆಗಳನ್ನು ಹೇಳಿಕೊಡುತ್ತಿದ್ದರು. ಆ ರೀತಿಯಲ್ಲಿ ಎಮ್ ಕೆ ಯವರು ವೀರಭದ್ರ ನಾಯಕರಲ್ಲಿ ಸತತ ಮೂರು ವರುಷಗಳ ಕಾಲ ಅಭ್ಯಾಸವನ್ನು ಮಾಡಿದರು. ಅವರ ಗರಡಿಯಲ್ಲಿ ಇನ್ನಷ್ಟು ಪಳಗಿ ಹಲವಾರು ಪಾತ್ರಗಳನ್ನು ಮಾಡಿ ಅವರಿಂದಲೇ ಸೈ ಎನಿಸಿಕೊಂಡರು.
ಶ್ರೀ ಎಮ್. ಮಧ್ವರಾಜ್ ರವರು (ಪ್ರಮೋದ್ ಮಧ್ವರಾಜ್ ತಂದೆ) ಪ್ರತಿ ವರುಷ ಮಂದಾರ್ತಿ ಮೇಳದ ಆಟವನ್ನು ಆಡಿಸುತ್ತಿದ್ದರು. ಒಂದು ಬಾರಿ ಭಾರ್ಗವ ವಿಜಯ ಪ್ರಸಂಗದಲ್ಲಿ ಎಮ್ ಕೆ ಯವರ ಪರುಶುರಾಮನ ಪಾತ್ರ. ಆ ಪಾತ್ರವನ್ನು ಮೆಚ್ಚಿದ ಮಧ್ವರಾಜ್ ಬೆಳಗ್ಗೆಯೇ ಎಮ್ ಕೆ ಯವರಿಗೆ ಐದು ರೂಪಾಯಿಯ ಬಹುಮಾನವನ್ನು ನೀಡಿದ್ದು ಅಂದಿನ ಕಾಲಕ್ಕೆ ಅದು ಬಹುದೊಡ್ಡ ಮೊತ್ತವಾಗಿತ್ತು.
ಜೋಡಾಟಗಳು ನಡೆಯುತ್ತಿದ್ದ ಕಾಲವದು. ಒಮ್ಮೆ ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ ಹಾಗೂ ಕೊರವೂರು ಮೇಳಕ್ಕೆ ಆದಿಉಡುಪಿಯಲ್ಲಿ ಜೋಡಾಟ. ಆ ಆಟದಲ್ಲಿ ಮಂಡಿ ತಿರುಗುವುದರಲ್ಲಿ ಎಮ್ ಕೆ ಯವರಿಗೆ ಮೊದಲ ಬಹುಮಾನವು ಸಿಕ್ಕಿತ್ತು. ಮರುದಿನ ನೋಡಿದರೆ ಅವರ ಮೊಣಕಾಲಿನ ಚಿಪ್ಪಿನ ಚರ್ಮವೆಲ್ಲ ಹರಿದು ದೊಡ್ಡ ಗಾಯವಾಗಿತ್ತು.
ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗದೇ ಇದ್ದಾಗ
ಎಮ್ ಕೆ ಯವರು ಪುರುಷ ಪಾತ್ರಗಳೊಂದಿಗೆ ಸಣ್ಣ ಪುಟ್ಟ ಸ್ತ್ರೀವೇಷವನ್ನು ಕೂಡ ಮಾಡುತ್ತಿದ್ದರು. 1965ರ ಹೊತ್ತಿಗೆ ಕುಂದಾಪುರದಲ್ಲಿ ನಡೆದ ರತಿ ಕಲ್ಯಾಣ ಪ್ರಸಂಗದಲ್ಲಿ ಇವರದು ರತಿಯ ಪಾತ್ರ. ಅಲ್ಲಿಯೇ ಪಕ್ಕದಲ್ಲಿ ಧರ್ಮಸ್ಥಳ ಮೇಳದ ಆಟವು ನಡೆಯುತ್ತಿತ್ತು. ಮಂದಾರ್ತಿ ಮೇಳದ ಆಟವನ್ನು ನೋಡುವುದಕ್ಕೆ ಪುತ್ತೂರು ನಾರಾಯಣ ಹೆಗ್ಡೆ ಹಾಗೂ ಪಾತಾಳ ವೆಂಕಟರಮಣ ಭಟ್ಟರು ಬಂದಿದ್ದರು. ಎಮ್ ಕೆ ಯವರ ರತಿ ಪಾತ್ರವನ್ನು ನೋಡಿದ ಅವರುಗಳು ತೆಂಕಿನ ಧರ್ಮಸ್ಥಳ ಮೇಳಕ್ಕೆ ಬರುವಂತೆ ಆಹ್ವಾನವನ್ನು ನೀಡಿದರು. ಆಗ ಧರ್ಮಸ್ಥಳ ಟೆಂಟಿನ ಮೇಳವಾಗಿತ್ತು. ಅವರುಗಳ ಆಹ್ವಾನವನ್ನು ಮನ್ನಿಸಿ ಧರ್ಮಸ್ಥಳ ಮೇಳಕ್ಕೆ ಹೋದರು. ಆದರೆ ಪ್ರಥಮ ಪ್ರದರ್ಶನದಲ್ಲಿ ರತ್ನವರ್ಮ ಹೆಗ್ಗಡೆಯವರಿಗೆ ಇವರ ಪಾತ್ರ ತೃಪ್ತಿ ನೀಡದಿರುವ ಕಾರಣ, ಬಡಗಿನ ನಾಟ್ಯವೂ ಇದ್ದ ಕಾರಣವೋ ಏನೋ, ಮೇಳಕ್ಕೆ ಬೇಡ ಎನ್ನುವ ಮನಸ್ಥಿತಿಯನ್ನು ಹೊಂದಿದ್ದರು. ಮೇಳಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದ ಪುತ್ತೂರು ನಾರಾಯಣ ಹೆಗ್ಡೆ ಹಾಗೂ ಪಾತಾಳ ವೆಂಕಟರಮಣ ಭಟ್ಟರಿಗೆ ಏನು ಹೇಳಬೇಕೆಂದು ತೋಚದೆ ಬೇರೆ ಮೇಳಕ್ಕೆ ಹೋಗುವಂತೆ ಸೂಚಿಸಿದರು.
ಆದರೆ ಕುರಿಯ ವಿಠಲ ಶಾಸ್ತ್ರಿಗಳಿಗೆ ಎಮ್ ಕೆ ಯವರ ಕಲಾವಂತಿಕೆಯ ಬಗ್ಗೆ ಅತೀವ ನಂಬಿಕೆಯಿತ್ತು. ತೆಂಕಿನ ಹೆಜ್ಜೆಗಳನ್ನು ಹುಡುಗನಿಗೆ ತಾನು ಕಲಿಸಿಕೊಟ್ಟು ಮೇಳಕ್ಕೆ ಪೂರಕವಾಗುವಂತೆ ಸಿದ್ಧಗೊಳಿಸುತ್ತೇನೆ ಎಂಬ ಭರವಸೆಯನ್ನು ಹೆಗ್ಗಡೆಯವರಿಗೆ ನೀಡಿ ಅವರನ್ನು ಒಪ್ಪಿಸಿದರು. ಕೊಟ್ಟ ಮಾತಿನಂತೆ ಎಮ್ ಕೆ ಯವರನ್ನು ತಮ್ಮ ಮನೆಗೆ ಕರೆತಂದು ತೆಂಕಿನ ನಾಟ್ಯವನ್ನು ಕಲಿಸಿದರು. ಮತ್ತೆ ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದರು. ಅಲ್ಲಿಂದ ಎಮ್ ಕೆ ಯವರು ಹಿಂತಿರುಗಿ ನೋಡಲಿಲ್ಲ. ಧರ್ಮಸ್ಥಳ ಮೇಳವನ್ನು ಸೇರಿದ ಮೇಲೆ ಅವರ ಸಂಬಳವು ರೂ. 300 ರಿಂದ 800ಕ್ಕೆ ಜಿಗಿಯಿತು. ಮೇಳದ ಭಾಗವತರಾಗಿದ್ದ ಕಡತೋಕ ಮಂಜುನಾಥ ಭಾಗವತರ ಭಾಗವತಿಕೆಯಲ್ಲಿ ಇನ್ನಷ್ಟು ಪಕ್ವಗೊಳ್ಳುತ್ತ ಸ್ತ್ರೀವೇಷವನ್ನು ಗಟ್ಟಿಗೊಳಿಸಿಕೊಂಡರು. ಕನ್ಯಾಕುಮಾರಿ ಮಹಾತ್ಮೆ ಮುಂತಾದ ಪ್ರಸಂಗಗಳಲ್ಲಿ ಸ್ತ್ರೀ ಪ್ರಧಾನ ಪಾತ್ರವನ್ನು ನಿರ್ವಹಿಸಿದರು. ಮುಂದೆ ಅವರು ವರದರಾಜ್ ಪೈ ಯಜಮಾನಿಕೆಯ ಸುರತ್ಕಲ್ ಮೇಳದತ್ತ ಕಲಾಪಯಾಣವನ್ನು ಮುಂದುವರಿಸಿದರು.
ಅಂತಃಸತ್ವ ಹೆಚ್ಚಿಸಿದ ಸುರತ್ಕಲ್ ಮೇಳ
ಒಮ್ಮೆ ಬದಿಯಡ್ಕದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವಿತ್ತು. ಕುರಿಯ ವಿಠ್ಠಲ ಶಾಸ್ತ್ರಿಗಳ ಅರಿಕೆಯಂತೆ ಅಂದು ಮಾಯಾ ಅಜಮುಖಿ ಪ್ರಸಂಗ . ಶೇಣಿಯವರ ದೂರ್ವಾಸ ಹಾಗೂ ಎಮ್ ಕೆ ಯವರ ಅಜಮುಖಿ ಎಂದು ಶಾಸ್ತ್ರಿಗಳೇ ಪಾತ್ರಗಳನ್ನು ನಿರ್ಣಯಿಸಿದ್ದರು. ಶೇಣಿಯವರ ಹೆಸರನ್ನು ಕೇಳುವಾಗಲೇ ಎಮ್ ಕೆಯವರು ನಡುಗಿಹೋಗಿದ್ದರು. ಶೇಣಿಯವರ ಕಲಾಪ್ರೌಢಿಮೆಯ ಅರಿವಿದ್ದ ಎಮ್ ಕೆ ಇವತ್ತು ತನ್ನಿಂದ ಪಾತ್ರವನ್ನು ಮಾಡಲು ಸಾಧ್ಯವೇ ಎಂಬ ಅಳುಕಿನಿಂದಲೇ ಆ ದಿನ ರಂಗಸ್ಥಳವನ್ನು ಪ್ರವೇಶಿಸಿದ್ದರು. ಆದರೆ ಒಂದೆರಡು ಪದ್ಯಗಳ ನಂತರ ಶೇಣಿಯವರೊಂದಿಗೆ ಹಲವು ಕಾಲದ ಒಡನಾಟವಿದ್ದಷ್ಟು ಪಾತ್ರಗಳು ಆಪ್ತವಾಗಿ ಸಾಗಿದವು. ಆ ದಿನದ ಯಶಸ್ಸು ಎಮ್ ಕೆ ಯವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಸಂಸರ್ಗದಿಂದ ಶೇಣಿಯವರಿದ್ದ ಸುರತ್ಕಲ್ ಮೇಳಕ್ಕೆ ಅವರು ಸೇರುವುದಕ್ಕೆ ಕಾರಣವಾಯಿತು. ಸುರತ್ಕಲ್ ಮೇಳವನ್ನು ಸೇರಿದ ಮೇಲೆ ಅವರ ಪಾತ್ರಗಳನ್ನು ನೋಡುವ ದೃಷ್ಟಿಕೋನಗಳು ಬದಲಾದವು. ಜೊತೆಗೆ ಶೇಣಿಯವರು ಪ್ರೀತಿಯಿಂದ ಎಮ್ ಕೆ ಯವರ ಕಲಾ ಪ್ರೌಢಿಮೆಯನ್ನು ಗುರುತಿಸಿ ಮುಂದೆ ಪಾತ್ರಗಳಿಗೆ ಬೇಕಾದ ಮಾರ್ಗದರ್ಶನ ನೀಡಿದರು.
ಒಮ್ಮೆ ರಂಗಸ್ಥಳದಲ್ಲಿ ಎಮ್ ಕೆ ಯವರು ಯಾವುದೋ ಸಂಸ್ಕೃತ ಶ್ಲೋಕವನ್ನು ಹೇಳಿದ್ದರು. ಚೌಕಿಗೆ ಬಂದ ಮೇಲೆ ಶೇಣಿಯವರು ಅವರನ್ನು ಕರೆದು 'ಸಂಸ್ಕೃತ ಕಲಿತಿದ್ದೀಯಾ?ʼ ಎಂದು ಕೇಳಿದರು. 'ಇಲ್ಲ' ಎಂದ ಎಮ್ ಕೆ ಗೆ 'ಹಾಗಾದರೆ ಇನ್ನು ಮುಂದೆ ಯಾವುದೇ ಕಾರಣಕ್ಕೆ ಸಂಸ್ಕೃತವನ್ನು ತಿಳಿಯದೇ ಶ್ಲೋಕವನ್ನು ಅಪದ್ಧವಾಗಿ ಹೇಳಬೇಡ. ನಿನಗೆ ಹೇಳಲೇಬೇಕೆಂದರೆ ಬಲ್ಲವರಿಂದ ತಿಳಿದುಕೊಂಡು ಹೇಳು' ಎಂದು ಬುದ್ಧಿಯ ಮಾತನ್ನು ಹೇಳಿದರು. ಮುಂದೆ ಅವರು ಶ್ಲೋಕವನ್ನು ಪ್ರಯೋಗಿಸುವಾಗ ಎಚ್ಚರಿಕೆ ವಹಿಸಿದರು. ಜೊತೆಗೆ ಮಾತುಗಾರಿಕೆಯ ಸೂಕ್ಷ್ಮತೆ ಬಗ್ಗೆ ತೆಕ್ಕಟ್ಟೆ ಆನಂದ ಮಾಸ್ತರವರು ಅವರನ್ನು ತಿದ್ದಿದರು.
ಶೇಣಿಯವರೊಂದಿಗಿನ ಒಡನಾಟ ಎಮ್ ಕೆ ಯವರಿಗೆ ಬಹಳವನ್ನು ಕಲಿಸಿದ್ದು ಸುಳ್ಳಲ್ಲ. ಒಮ್ಮೆ ರಾವಣ ವಧೆ ಪ್ರಸಂಗದಲ್ಲಿ ಶೇಣಿಯವರ ರಾವಣ, ಎಮ್ ಕೆ ಯವರ ಮಂಡೋದರಿ. ಎಮ್ ಕೆ ಯವರು ಮೊದಲ ಬಾರಿಗೆ ಈ ಪಾತ್ರವನ್ನು ಮಾಡುತ್ತಿರುವ ಕಾರಣ ರಂಗನಡೆಗಳ ಬಗ್ಗೆ ಪೂರ್ಣವಾಗಿ ಅರಿವಿರಲಿಲ್ಲ. ಶೇಣಿಯವರು ಮಂಡೋದರಿಯ ಅಂತಃಪುರಕ್ಕೆ ಹೋಗುತ್ತೇನೆಂದು ನಿಷ್ಕ್ರಮಣಗೈದರು. ಚೌಕಿಯಲ್ಲಿದ್ದ ಎಮ್ ಕೆ ಅವರು ಮುಂದೆ ತಮ್ಮ ಪ್ರವೇಶವೆಂದು ಭಾವಿಸಿ ರಂಗಕ್ಕೆ ಬಂದರು. ವಸ್ತುಸ್ಥಿತಿಯಲ್ಲಿ ರಾವಣ ಮತ್ತೊಮ್ಮೆ ಪ್ರವೇಶ ಮಾಡಿ, ಅವನ ಎರಡು ಪದ್ಯಗಳು ಆದ ಮೇಲೆ ಮಂಡೋದರಿ ಪತಿಯನ್ನು ಸಂತೈಸುವಂತೆ ಪ್ರವೇಶ ಮಾಡಬೇಕಿತ್ತು.
ಇವರ ಏಕಾಏಕಿ ಪ್ರವೇಶದಿಂದ ಎಲ್ಲರಿಗೂ ಏನು ಮಾಡಬೇಕೆಂದು ತೋಚಲಿಲ್ಲ. ಶೇಣಿಯವರು ಮರೆಯಿಂದಲೇ ಹೊರಗೆ ಬರುವಂತೆ ಸೂಚನೆಯನ್ನು ನೀಡಿದರು. ಎಮ್ ಕೆ ಯವರು ಕೂಡಲೇ ಹೊರಗೆ ಬಂದರು. ಮತ್ತೆ ಶೇಣಿಯವರ ಪ್ರವೇಶವಾಗಿ ಮಾತನ್ನು ಪ್ರಾರಂಭಿಸಿದರು. "ಈ ದಿವಸ ನನಗೆ ಮಾನಸಿಕವಾಗಿ ಆದ ಆಘಾತ ಯಾವತ್ತೂ ಆಗಲಿಲ್ಲ. ಇವತ್ತು ನಾನು ಅಂತಃಪುರಕ್ಕೆ ಬಂದಾಗ ನನ್ನನ್ನು ನೋಡಿಯೂ ನೋಡದವರಂತೆ ಮುಖವನ್ನು ತಗ್ಗಿಸಿ ಮಂಡೋದರಿ ಹೊರಟುಹೋದಳು. ಹಾಗಾದರೆ ನನ್ನ ಬಗ್ಗೆ ಅವಳಿಗೆ ಎಷ್ಟು ನೋವಿರಬಹುದು" ಎಂದರು. ಕಲಾವಿದನ ದೋಷವನ್ನು ಶೇಣಿಯವರು ಆ ಹೊತ್ತು ಗುಣವಾಗಿ ಪರಿವರ್ತನೆ ಮಾಡಿದರು. ಕಲಾವಿದನ ಅಪ್ರಸ್ತುತ ಪ್ರವೇಶವನ್ನೇ ಶೇಣಿಯವರು ಹೊಸ ನೋಟದಿಂದ ನೋಡಿದ್ದು ಜನರಿಗೆ ಮೆಚ್ಚುಗೆಯಾಗಿ ಬೇಕೆಂದೇ ಶೇಣಿಯವರು ಇದನ್ನು ಮಾಡಿದ್ದಾರೆಂದು ಮಾತಾಡಿಕೊಂಡರು!
ಆ ವರುಷ ಮೇಳದಲ್ಲಿ ಶನೀಶ್ವರ ಮಹಾತ್ಮೆ ಪ್ರಸಂಗ. ಜಲವಳ್ಳಿ ವೆಂಕಟೇಶರಾವ್ ಅವರ ಶನಿ, ಶೇಣಿಯವರ ವಿಕ್ರಮಾದಿತ್ಯ, ಕೊಕ್ಕಡ ಈಶ್ವರ ಭಟ್ಟರ ಆಲೋಲಿಕೆ, ತೆಕ್ಕಟ್ಟೆಯವರ ನಂದಿಶೆಟ್ಟಿ, ಎಮ್ ಕೆ ಯವರ ವಿಷ್ಣು ಹಾಗೂ ಪದ್ಮಾವತಿ. ಆ ಪ್ರಸಂಗ ಎಷ್ಟು ಜನಪ್ರಿಯವಾಯಿತೆಂದರೆ ಇದು ಶನೀಶ್ವರ ಮಹಾತ್ಮೆ ಅಲ್ಲ ಇದು ಶೇಣಿ ಮಹಾತ್ಮೆ ಎಂದು ಜನ ಕರೆಯುತ್ತಿದ್ದರು. ಒಂದು ಸಲ ಪ್ರಯೋಗಕ್ಕೆ ಶೇಣಿಯವರ ಶನಿ ಹಾಗೂ ಎಮ್ ಕೆ ಅವರ ವಿಕ್ರಮನನ್ನು ಆಯೋಜಕರು ಮಾಡಿಸಿದ್ದರು. ಅದು ಕೂಡ ಯಶಸ್ವಿಯಾಗಿ ಸಂಪನ್ನವಾಗಿತ್ತು.
ಸುರತ್ಕಲ್ ಮೇಳದಲ್ಲಿ ಸತಿ ಶೀಲವತಿ ಪ್ರಸಂಗದಲ್ಲಿ ಎಮ್ ಕೆಯವರಿಗೆ ಗುಣವತಿ ಪಾತ್ರ ನಿಗದಿಯಾಗಿತ್ತು. ಅದು ಮತ್ಸರ ತುಂಬಿದ ಪಾತ್ರ. ಸ್ವಭಾವತಃ ಸಾತ್ವಿಕಗುಣದ ಎಮ್ ಕೆಯವರ ಗುಣಕ್ಕೆ ವಿರುದ್ಧವಾಗಿದ್ದು ಅವರಿಗೆ ಒಗ್ಗುವ ಪಾತ್ರವಾಗಿರಲಿಲ್ಲ. ಆದರೂ ಒಪ್ಪಿ ಪಾತ್ರವನ್ನು ನಿರ್ವಹಿಸಿದರು. ಪಾತ್ರ ಎಲ್ಲರೂ ಅಂದುಕೊಂಡಂತೆ ಬರಲಿಲ್ಲ. ಮೇಳದ ಯಜಮಾನರು ಪಾತ್ರ ಪೋಷಣೆಯ ಆಕ್ಷೇಪಣೆಯನ್ನು ಮಾಡಿದರು. ನಂತರ ಈ ಪಾತ್ರವನ್ನು ಸವಾಲಾಗಿ ಸ್ವೀಕರಿಸಿದ ಎಮ್ ಕೆ ಅವರು ಪಾತ್ರಕ್ಕೆ ಬೇಕಾದ ಗಡಸುತನ, ಕಟುವಾದ ಶಬ್ದಗಳು, ಭಾವನೆ ಇತ್ಯಾದಿಗಳನ್ನು ಮೈಗೂಡಿಸಿಕೊಂಡು ಮತ್ತೆ ಪಾತ್ರವನ್ನು ಗೆಲ್ಲಿಸಿದರು ಮತ್ತು ಯಜಮಾನರಿಂದ ಮೆಚ್ಚುಗೆಯನ್ನು ಪಡೆದರು!
ಎಮ್ ಕೆಯವರ ಕಲಾವಂತಿಕೆಯನ್ನು ನೋಡುವುದಾದರೆ ಅವರ ಅನೇಕ ಪಾತ್ರಗಳು ರಂಗದಲ್ಲಿ ಜಯಭೇರಿ ಬಾರಿಸಿವೆ. ಅವುಗಳಲ್ಲಿ ಮುಖ್ಯವಾಗಿ ವಾಲಿ ವಧೆಯ ತಾರೆ, ನಳ ದಮಯಂತಿಯ ದಮಯಂತಿ, ಸತ್ಯ ಹರಿಶ್ಚಂದ್ರದ ಚಂದ್ರಮತಿ, ಮಹಾರಥಿ ಕರ್ಣದ ಕುಂತಿ, ಕನ್ಯಾಕುಮಾರಿ ಮಹಾತ್ಮೆಯ ಕನ್ಯಾಕುಮಾರಿ, ಪಾಪಣ್ಣ ವಿಜಯದ ಗುಣಸುಂದರಿ, ಬಬ್ರುವಾಹನ ಕಾಳಗದ ಚಿತ್ರಾಂಗದೆ, ರಾವಣ ವಧೆಯ ಮಂಡೋದರಿ, ಅಕ್ಷಯಾಂಬರದ ದ್ರೌಪದಿ, ನಾಟ್ಯರಾಣಿ ಶಾಂತಲೆ ಮುಂತಾದ ಪಾತ್ರಗಳು ಪ್ರಮುಖವಾಗಿವೆ. ಇದರ ಜೊತೆಗೆ ಸಾಧ್ವಿ ಸದಾರಮೆ, ರಾಜಾ ಯಯಾತಿ, ಪಾಪಣ್ಣ ವಿಜಯ, ಕಡುಗಲಿ ಕುಮಾರ ರಾಮ ಮುಂತಾದ ಪ್ರಸಂಗಗಳ ಪಾತ್ರಗಳು ಸದಾ ನೆನಪಿನಲ್ಲುಳಿಯುವಂತೆ ಮಾಡುತ್ತವೆ.
ಅವರು ಪಾತ್ರಗಳಿಗೆ ಪಾರಂಪರಾಗತ ಮೌಲ್ಯಗಳನ್ನು ಅಳವಡಿಸಿದ್ದು ಮಾತ್ರವಲ್ಲದೇ ಹೊಸ ಹೊಳಹನ್ನು, ಚಿಂತನೆಗಳನ್ನು, ಹೊಸತನದ ಜೊತೆ ಜೀವವನ್ನು ತುಂಬಿದರು. ಭಿನ್ನವಾದ ದೃಷ್ಟಿಕೋನಗಳನ್ನು ಪಾತ್ರದಲ್ಲಿ ಸ್ಫುಟವಾಗಿ ತೋರಿಸುತ್ತಾ ಪಾತ್ರಗಳನ್ನು ಎತ್ತರಕ್ಕೆ ಏರಿಸಿದ್ದರು. ಒಂದೇ ತರದ ಪಾತ್ರಗಳಿಗೆ ಅಧಿಷ್ಠಿತವಾಗಿಸಿಕೊಳ್ಳದೇ ಬೇರೆ ಬೇರೆ ಸ್ತರದ, ಗುಣಧರ್ಮದ ಪಾತ್ರಗಳನ್ನು ಮಾಡಿ ವಿಷದವಾಗಿ ಪ್ರಸ್ತುತಿಗೊಳಿಸುವ ಅವರ ಗಟ್ಟಿತನವು ಎಲ್ಲರೂ ಗಮನಿಸಬೇಕಾದ ಅಂಶವಾಗಿದೆ. ಎಂದೂ ಫಲಿತಗಳ ಬಗ್ಗೆ ಚಿಂತಿಸದೆ ಪ್ರಾಮಾಣಿಕವಾಗಿ ಯತ್ನಶೀಲವಾಗಿ ದುಡಿಯುವ ಅವರ ಮನಸ್ಥಿತಿ ಮೆಚ್ಚುಗೆಯನ್ನು ಪಡೆಯುತ್ತದೆ.
ಇಂತಹ ಒಳ್ಳೆಯ ಕಲಾವಿದರನ್ನು ರೂಪಿಸಿದ ಸುರತ್ಕಲ್ ಮೇಳದ ಬದ್ಧತೆ ಬಗ್ಗೆ ಹೇಳಲೇಬೇಕು. ಸುರತ್ಕಲ್ ಮೇಳವು ತಂಡವಾಗಿ, ಒಗ್ಗಟ್ಟಿನಿಂದ ಸಾಮಾಜಿಕ ಹಾಗೂ ಪೌರಾಣಿಕ ಪಾತ್ರಗಳನ್ನು ಕಟ್ಟಿಕೊಡುತ್ತಿದ್ದ ರೀತಿ ಆ ಮೇಳವನ್ನು ಎತ್ತರಕ್ಕೆ ಏರಿಸಿದ್ದು ಸುಳ್ಳಲ್ಲ. ಇದಕ್ಕೆ ಪೂರಕವಾಗಿ ಮೇಳದ ಯಜಮಾನರಾದ ವರದರಾಜ್ ಪೈಗಳ ಸಂಘಟನೆ, ಪ್ರಗಲ್ಭತೆ, ಕಳಕಳಿ, ಚತುರತೆ ಇತ್ಯಾದಿಗಳಿಂದಾಗಿ ಮೇಳವು ಜನಪ್ರಿಯವಾಗಿ ಬೆಳೆಯುವುದಕ್ಕೆ ಸಾಧ್ಯವಾಗಿತ್ತು. ಸುರತ್ಕಲ್ ಮೇಳ ಕೇವಲ ವ್ಯವಹಾರಿಕ ದೃಷ್ಟಿಕೋನವನ್ನು ಇಟ್ಟುಕೊಂಡಿರಲಿಲ್ಲ. ಯಕ್ಷಗಾನದ ವಲಯವನ್ನು ಬಿಟ್ಟು ಬಾಂಬೆ, ಚಿತ್ರದುರ್ಗ, ಕಡೂರು, ಬೆಳಗಾವಿ, ಹೊಸದುರ್ಗ ಮುಂತಾದ ಕಡೆಗಳಲ್ಲಿ ಟೆಂಟ್ ಆಟಗಳನ್ನು ಮಾಡುತ್ತಿದ್ದರು. ಮೇಳಕ್ಕೆ ಇಲ್ಲಿ ಲಾಭ ನಷ್ಟಕ್ಕಿಂತ ಯಕ್ಷಗಾನ ವಿಸ್ತರಣೆಯ ಬಗ್ಗೆ ಕಾಳಜಿಯಿರುವುದು ಮಹತ್ತರ ಸಂಗತಿಯಾಗಿದೆ.
ಮತ್ತೆ ತೆಂಕಣದಿಂದ ಬಡಗಿಗೆ
ಎಮ್ ಕೆಯವರು ತೆಂಕಿನ ಸುರತ್ಕಲ್ ಮೇಳದಲ್ಲಿ ಜನಪ್ರಿಯರಾದಂತೆ ಅವರನ್ನು ಬಡಗಿನ ಮೇಳಗಳಿಗೆ ಕರೆತರುವ ಪ್ರಯತ್ನಗಳು ನಡೆದವು. ಜನಪ್ರಿಯ ಭಾಗವತರಾದ ಕಾಳಿಂಗ ನಾವಡರು ಸಾಲಿಗ್ರಾಮ ಮೇಳಕ್ಕೆ ಬರುವಂತೆ ಆಹ್ವಾನವನ್ನು ನೀಡಿದ್ದರು. ಎಮ್ ಕೆ ಅವರು ಹತ್ತೊಂಬತ್ತು ವರುಷಗಳ ಕಾಲದ ತಮ್ಮ ಸುರತ್ಕಲ್ ಮೇಳದ ತಿರುಗಾಟವನ್ನು ನಿಲ್ಲಿಸಿ ಪ್ರೀತಿಯಿಂದ ಸಾಲಿಗ್ರಾಮ ಮೇಳಕ್ಕೆ ಬರುವುದಕ್ಕೆ ಒಪ್ಪಿದ್ದರು. ಆದರೆ ದುರಾದೃಷ್ಟಕ್ಕೆ ಆ ವರುಷವೇ ಕಾಳಿಂಗ ನಾವಡರು ದೈವಾಧೀನರಾದರು. ನಾವಡರಿಗೆ ಕೊಟ್ಟ ಮಾತಿನಂತೆ ಎಮ್ ಕೆ ಅವರು ಎರಡು ವರುಷ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು ನಡೆಸಿದರು. ಆ ವರುಷ ಮೇಘಮಯೂರಿ, ಶೃಂಗ ಸಾರಂಗ ಎಂಬ ಪ್ರಸಂಗಗಳು ಗಲ್ಲಾಪೆಟ್ಟಿಗೆಯನ್ನು ತುಂಬಿದ್ದವು. ಇದರಲ್ಲಿ ಎಮ್.ಕೆಯವರು ಸ್ವಾರಸ್ಯಕರವಾದ ಸಂಭಾಷಣೆಯನ್ನು ಮಾರ್ಗದರ್ಶನ ಪ್ರಸಂಗಕ್ಕೆ ನೀಡಿ ಆಕರ್ಷಕವಾಗಿ ರೂಪುಗೊಳ್ಳುವಂತೆ ಮಾಡಿರುವುದನ್ನು ಮರೆಯುವಂತಿಲ್ಲ. ಮುಂದೆ ಅವರು ಮತ್ತೆ ಐದು ವರುಷ ಸುರತ್ಕಲ್ ಮೇಳದಲ್ಲಿ ಸಂಚರಿಸಿದರು.
ವಯಸ್ಸು ಹಿರಿದಾದಂತೆ ಮತ್ತೆ ಸ್ತ್ರೀವೇಷವನ್ನು ಮಾಡುವುದಕ್ಕೆ ಅವರು ಒಪ್ಪುತ್ತಿರಲಿಲ್ಲ. ಪೋಷಕ ಪಾತ್ರಗಳನ್ನು ಮಾಡಿ ಅದಕ್ಕೆ ಜೀವವನ್ನು ತುಂಬುತ್ತಿದ್ದರು. ನೀಲಾವರ ಮೇಳದಲ್ಲಿ ನೀಲಾವರ ಕ್ಷೇತ್ರ ಮಹಾತ್ಮೆಯಲ್ಲಿ ಇವರ ಶಿವದತ್ತ ಎನ್ನುವ ಬ್ರಾಹ್ಮಣನ ಪಾತ್ರ. ಆ ಪಾತ್ರ ಮತ್ತೊಬ್ಬರಿಂದ ಸಾಧ್ಯವಿಲ್ಲ ಎನ್ನುವಷ್ಟು ಮೆಚ್ಚುಗೆಯನ್ನು ಪಡೆದಿತ್ತು. ಇದು ಎಲ್ಲ ಪಾತ್ರದೊಂದಿಗೆ ಸಂಪರ್ಕವಿದ್ದ ಪಾತ್ರ. ಹಾಗಾಗಿ ಇವರೇ ಎಲ್ಲ ಪಾತ್ರಕ್ಕೂ ಸಂಭಾಷಣೆಯನ್ನು, ರಂಗನಡೆಯನ್ನು ರೂಪಿಸಿಕೊಟ್ಟಿದ್ದರು. ಯಾವ ಮೇಳವೇ ಇರಲಿ, ತಮ್ಮ ಪಾತ್ರಗಳ ಬಗ್ಗೆ ಮಾತ್ರ ಚಿಂತನೆ ನಡೆಸದೆ ಉಳಿದ ಪಾತ್ರಗಳ ಅಂತಃಸತ್ವ ಹೆಚ್ಚಿಸುವ ಬಗ್ಗೆ ಗಮನವನ್ನು ಹರಿಸುತ್ತಾರೆ. ಯಾವುದೇ ಹಮ್ಮುಬಿಮ್ಮು ಇಲ್ಲದೆ ಒಬ್ಬ ಗುರುವಿನ ಸ್ಥಾನದಲ್ಲಿ ನಿಂತು ಸಹ ಕಲಾವಿದರಿಗೆ ಮಾಗದರ್ಶನವನ್ನು ಮಾಡುತ್ತ ಸಹೃದಯರಾಗಿ ಕಾಣಿಸಿಕೊಂಡಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಬೇಕು.
ತಾಳಮದ್ದಲೆ ಕ್ಷೇತ್ರಕ್ಕೆ ಆಕಸ್ಮಿಕ ಪ್ರವೇಶ
ಎಮ್ ಕೆ ಯವರ ತಾಳಮದ್ದಲೆ ಕ್ಷೇತ್ರದ ಪ್ರವೇಶ ಆಕಸ್ಮಿಕ. ಶೇಣಿಯವರ ತಾಳಮದ್ದಲೆಯ ತಂಡದಲ್ಲಿ ಸ್ತ್ರೀ ಪಾತ್ರಗಳಿಗೆ ಅರ್ಥವನ್ನು ಹೇಳುತ್ತಿದ್ದ ಕಲಾವಿದರೊಬ್ಬರು ಕಾರಣಾಂತರಗಳಿಂದ ಅದರಲ್ಲಿ ಭಾಗವಹಿಸುತ್ತಿರಲಿಲ್ಲ. ಶೇಣಿಯವರಿಗೆ ಆ ಪಾತ್ರವನ್ನು ಮಾಡುವ ಕಲಾವಿದರ ಅನಿವಾರ್ಯತೆಯಿತ್ತು. ಶೇಣಿಯವರು ಎಮ್ ಕೆ ಯವರ ಕಲಾವಂತಿಕೆಯನ್ನು ಬಲ್ಲವರಾಗಿದ್ದರು. ಅವರಲ್ಲಿ ತಾಳಮದ್ದಲೆಯಲ್ಲಿ ಅರ್ಥವನ್ನು ಹೇಳಿಸುವ ಯೋಚನೆ ಬಂತು. ಸ್ವತಃ ಈ ಬಗ್ಗೆ ಎಮ್ ಕೆ ಅವರಲ್ಲಿ ಮಾತುಗಳನ್ನು ಆಡಿದಾಗ ಸಾಧ್ಯವೇ ಇಲ್ಲವೆಂಬಂತೆ ಹೇಳಿದರು. ಅವರ ಹಿಂಜರಿಕೆಯನ್ನು ಅರ್ಥವಿಸಿಕೊಂಡ ಶೇಣಿಯವರು 'ತಾಳಮದ್ದಲೆ ಎಂದರೆ ಅದೇನು ಪರಬ್ರಹ್ಮವಾ? ನೀನು ಭಾಗವಹಿಸಬೇಕು' ಎಂದು ಖಡಾಖಂಡಿತವಾಗಿ ನುಡಿದರು.
ಒಂದೆಡೆಯಲ್ಲಿ ಎಮ್ ಕೆಯವರಿಗೆ ತನ್ನಿಂದ ಇದು ಸಾಧ್ಯವೇ ಎಂಬ ಭಯ. ಮತ್ತೊಂದೆಡೆಗೆ ಶೇಣಿಯವರ ಮಾತನ್ನು ಮೀರುವಂತಿಲ್ಲ. ಕೊನೆಗೆ ಭಯಮಿಶ್ರಿತ ಮನಸ್ಥಿತಿಯಲ್ಲಿ ಅರ್ಥವನ್ನು ಪ್ರಾರಂಭಿಸಿದರು. ಪಾತ್ರಗಳು ಯಶಸ್ವಿಯಾದವು. ಶೇಣಿಯವರ ಮಾರ್ಗದರ್ಶನ, ಉತ್ತೇಜನ ಜೊತೆಗೆ ತೆಕ್ಕಟ್ಟೆ ಆನಂದ ಮಾಸ್ತರ್ ಪ್ರೋತ್ಸಾಹಗಳು ಪಾತ್ರಗಳ ಗಹನತೆಯನ್ನು, ಒಳಹೊರವನ್ನು ಅರ್ಥವಿಸಿಕೊಳ್ಳುವತ್ತ ಹೆಚ್ಚು ಪೂರಕವಾಯಿತು. ಮುಂದೆ ಅದರಲ್ಲಿ ಗಟ್ಟಿತನವನ್ನು ಬೆಳೆಸಿಕೊಂಡು ಶ್ರೇಷ್ಠ ಕಲಾವಿದರ ಎದುರಿನಲ್ಲಿ ಸಮದಂಡಿಯಾಗಿ ಅರ್ಥವನ್ನು ಹೇಳುವ ಮಟ್ಟಕ್ಕೆ ಬೆಳೆದು ಸೈ ಎನಿಸಿಕೊಂಡರು. ಜೊತೆಗೆ ಅಂದಿನ ಕ್ಯಾಸೆಟ್ಟಿನ ಯುಗದಲ್ಲಿ 200ಕ್ಕೂ ಅಧಿಕ ಕ್ಯಾಸೆಟ್ಟಿನಲ್ಲಿ ಅವರ ಅರ್ಥಗಾರಿಕೆ ದಾಖಲಾಗಿರುವುದು ಸಂತೋಷದ ಸಂಗತಿಯಾಗಿದೆ.
ಪ್ರಸಂಗಸಾಹಿತ್ಯದ ಕೃಷಿ
ಎಮ್ ಕೆಯವರು ಪ್ರಸಂಗಕರ್ತರಾಗಿದ್ದು ಕೂಡ ಆಕಸ್ಮಿಕವೇ ಸರಿ. ಸುರತ್ಕಲ್ ಮೇಳದಲ್ಲಿ ಯಾವುದೋ ಒಂದು ಪ್ರಸಂಗ. ಶೃಂಗಾರ ಸನ್ನಿವೇಶಕ್ಕೆ ಪೂರಕವಾಗಿ ಅದರಲ್ಲಿ ಪದ್ಯಗಳು ಇರಲಿಲ್ಲ. ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ಸಾಹಿತ್ಯಿಕವಾಗಿ ಭಾಷಾಪ್ರೌಢಿಮೆಯನ್ನು ಹೊಂದಿದ್ದ ಎಮ್ ಕೆಯವರ ಬಳಿ ಬಂದು ಪದ್ಯ ಬರೆಯುವಂತೆ ಕೇಳಿಕೊಂಡರು. ಇದು ಸಾಧ್ಯವಿಲ್ಲ ಎನ್ನುವಂತೆ ಒಂದೇ ಮಾತಿನಲ್ಲಿ ಮುಗಿಸಿದರು. ಆದರೆ ಪದ್ಯಾಣರು ಬಿಡಲಿಲ್ಲ. ಪದ್ಯವನ್ನು ಬರೆಯಲೇಬೇಕೆಂಬ ಒತ್ತಾಸೆಯನ್ನು ಮೀರದವರಾದ ಎಮ್ ಕೆ, ಬೇರೆ ದಾರಿಕಾಣದೇ ರೂಪಕ ತಾಳದಲ್ಲಿ ಪದ್ಯವನ್ನು ಬರೆದುಕೊಟ್ಟಿದ್ದರು.
ಪದ್ಯಾಣರು ಅಗರಿಯವರಿಗೆ ಅದನ್ನು ತೋರಿಸಿದರು. ಅಗರಿ ರಘುರಾಮ್ ಭಾಗವತರಿಗೂ ಈ ಪದ್ಯ ಮೆಚ್ಚುಗೆಯಾಗಿ ಪ್ರಸಂಗಗಳನ್ನು ಬರೆಯುವುವಂತೆ ಸಲಹೆಯನ್ನು ನೀಡಿದರು. ಮುಂದೆ ಆಡಿಯೋ ಕ್ಯಾಸೆಟ್ಟಿಗೋಸ್ಕರವಾಗಿ ಸಮಯಮಿತಿಯ ಪ್ರದರ್ಶನಕ್ಕಾಗಿ ಪ್ರಸಂಗವನ್ನು ಬರೆಯತೊಡಗಿದರು. ನ್ಯಾಯ ಎಲ್ಲಿದೆ, ಬಾದರಾಯಣ ಸಂಬಂಧ, ಕೆರೆಗೆ ಹಾರ ಮುಂತಾದ ಕ್ಯಾಸೆಟ್ಟಿನ ಪ್ರಸಂಗಗಳಿಗೆ ಪದ್ಯವನ್ನು ರಚಿಸಿದ್ದರು. ಅವರ ಪೂರ್ಣ ಪ್ರಮಾಣದ ಪ್ರಸಂಗವನ್ನು ಚೈತ್ರ ಕೋಗಿಲೆ ಮಂದಾರ್ತಿ ಮೇಳದಲ್ಲಿ (ಹಿಂದೆ ಈ ಮೇಳದಲ್ಲಿ ಸಾಮಾಜಿಕ ಕಥೆಗಳನ್ನು ಆಡಲಾಗುತ್ತಿತ್ತು) ಆಡಲಾಗಿತ್ತು. ಜೊತೆಗೆ ಅನೇಕ ತುಳು ಪ್ರಸಂಗಗಳಿಗೂ ಪದ್ಯವನ್ನು ರಚಿಸಿದ್ದಾರೆ (ಹಿಂದೆ ತುಳು ಪ್ರಸಂಗಕ್ಕೆ ಕನ್ನಡದಲ್ಲಿ ಪದ್ಯಗಳು ಇರುತ್ತಿದ್ದವು). ಕಾಲಮಿತಿಯ 'ಸತ್ಯಾಂತರಂಗ' ಪ್ರಸಂಗ ಹನುಮಗಿರಿ ಮೇಳದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿವೆ. ಹೀಗೆ ಅವರು 100ಕ್ಕೂ ಹೆಚ್ಚು ಕಥೆಗಳಿಗೆ ಪ್ರಸಂಗ ಸಾಹಿತ್ಯವನ್ನು ಒದಗಿಸಿರುವುದು ವಿಶೇಷವಾಗಿದೆ.
ನಿರಂತರ 57 ವರುಷಗಳ ತಿರುಗಾಟವನ್ನು ಮಾಡಿರುವ ಎಮ್ ಕೆಯವರು ಯಕ್ಷಗಾನದ ಪೂರ್ಣ ಆಯಾಮವನ್ನು ಬಲ್ಲವರು. ಪಾತ್ರಧಾರಿಯಾಗಿ, ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿ ನೆಗಳ್ತೆಯನ್ನು ಪಡೆದಿರುವ ಎಮ್ ಕೆಯವರು ಯಕ್ಷಗಾನದ ಅನುಭವ ಕಣಜ. ಬದಲಾದ ಕಲಾ ಮಾಧ್ಯಮದ ಸ್ಥಿತಿಗತಿಗಳಲ್ಲಿ ಎಮ್ ಕೆಯವರ ಅನುಭವಗಳು ರಂಗಕ್ಕೆ ಅಗತ್ಯವಿದೆ. ಪಾತ್ರಗಳನ್ನು ಕಟ್ಟುವ, ಪ್ರಸಂಗಗಳಿಗೆ ನಡೆಯನ್ನು ರೂಪಿಸುವ, ಪರಿಣಾಮಕಾರಿಯಾದ ಆಯಾಮವನ್ನು ನೀಡುವ ನಿಟ್ಟಿನಲ್ಲಿ ಅವರ ನಿರ್ದೇಶನದ ಅಗತ್ಯವೆನಿಸುತ್ತದೆ. ಅಂತಹ ಅವರ ವೈದುಷ್ಯವನ್ನು ಪರಿಣಾಮಕಾರಿಯಾಗಿ ಯಕ್ಷಗಾನವು ಬಳಸಿಕೊಂಡು ಸದೃಢವಾದ ಆಶಯವನ್ನು, ನೋಟಗಳನ್ನು ಬಿಂಬಿಸುವ ಯಕ್ಷಗಾನವಾಗಿ ಮೂಡಿಬರಬೇಕಿದೆ. ಅವಿರತ ಶ್ರಮವನ್ನು ಗುರುತಿಸುವಂತಾಗಿ ಅನುಭವಗಳನ್ನು ದಾಖಲಿಸುವಂತಾದರೆ ಅವರ ದುಡಿಮೆಗೆ ಇನ್ನಷ್ಟು ಅರ್ಥಗಳು ಸಿಗುವುದಕ್ಕೆ ಸಾಧ್ಯವಿದೆ. ಅವರ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತ ಇನ್ನಷ್ಟು ಕೀರ್ತಿ, ಗೌರವಗಳು ಅರಸಿ ಬರಲಿ ಎಂದು ಆಶಿಸೋಣ.
ಲೇಖನ: ರವಿ ಮಡೋಡಿ, ಬೆಂಗಳೂರು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ