ಯಕ್ಷ ಮೆಲುಕು 07: 'ಹರಿ'ದಾಸ ಶೇಣಿಯವರ ಹರಿಕಥಾ ಕಾಲಕ್ಷೇಪದಲ್ಲಿ ಮದ್ದಳೆ ನುಡಿಸಿದ ಬಗೆ

ಹರಿದಾಸರಾಗಿ ಶೇಣಿಯವರು (ಚಿತ್ರಕೃಪೆ: ಕಾಂಚನ ಮ್ಯೂಸಿಕ್ ಅಕಾಡೆಮಿ)
ಹಿರಿಯ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರು ತಮ್ಮ ಯಕ್ಷಗಾನ ಬದುಕಿನ ಆ ಕಾಲದ ದಿನಗಳನ್ನು, ಕೂಡ್ಲು ಮೇಳದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಹರಿಕಥೆಗೆ ಸಾಥ್ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಶೇಣಿ ಗೋಪಾಲಕೃಷ್ಣ ಭಟ್ಟರೊಬ್ಬರು ಯಕ್ಷಗಾನದ ತವರು ಮಣ್ಣಿನಲ್ಲಿ ಅರಳಿದ ಯಕ್ಷಗಾನದ ಶಕಪುರುಷ. ಅವರು ಹರಿದಾಸರಾಗಿ ನಾಡಿನ ಉದ್ದಗಲ ಸುತ್ತಾಡಿ, ಹರಿಕಥೆಗಳನ್ನು ಮಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯ. ಹರಿ ಕಥೆಗೆ ನಾನೂ ಮದ್ದಳೆ ನುಡಿಸಲು ಹೋಗುತ್ತಿದ್ದ ನೆನಪು ಇದು.

ಆ ಕಾಲದಲ್ಲಿ ತೆಂಕುತಿಟ್ಟಿನಲ್ಲಿ ಚಾಲ್ತಿಯಲ್ಲಿ ಇದ್ದದ್ದೇ ನಾಲ್ಕು ಪ್ರಮುಖ ಡೇರೆ ಮೇಳಗಳು. ಧರ್ಮಸ್ಥಳ, ಕರ್ನಾಟಕ (ಇರಾ), ಕೂಡ್ಲು ಹಾಗೂ ಕುಂಡಾವು. ನಾನು ಕೂಡ್ಲು ಮೇಳದಲ್ಲಿ ಒಂದು ವರ್ಷ ಕೆಲಸ ಮಾಡಿದ ಬಳಿಕ ನಂತರ ಎರಡನೇ ವರ್ಷಕ್ಕೆ ಧರ್ಮಸ್ಥಳಕ್ಕೆ ಸೇರ್ಪಡೆಯಾದೆ. ಅಲ್ಲಿ ನೆಡ್ಲೆ ನರಸಿಂಹ ಭಟ್ ಹಾಗೂ ಕಡತೋಕ ಮಂಜುನಾಥ ಭಾಗವತರ ಒಡನಾಟವಾಗಿ, ಅವರು ಆಶೀರ್ವಾದಪೂರಕವಾಗಿ ಯಕ್ಷಗಾನದ ಪೆಟ್ಟು-ಮಟ್ಟುಗಳನ್ನು ಹೇಳಿಕೊಟ್ಟು ಶಿಲೆಯಾಗಿದ್ದ ನನ್ನಲ್ಲಿ ಒಂದಿಷ್ಟು ಶಿಲ್ಪ ಮೂಡಿಸಲು ಪ್ರಯತ್ನಿಸಿದರು.

ಹಿಂದೆಲ್ಲಾ ಹಾಗೆಯೇ ಅಲ್ಲವೇ? ಸುಮಾರು 8 ಗಂಟೆಗೆ ಚೌಕಿ ಪೂಜೆಗೆ ಕುಳಿತುಕೊಂಡರೆ, ಮರುದಿನ ಬೆಳಗ್ಗಿನವರೆಗೂ ಒಬ್ಬರೇ ಚೆಂಡೆ, ಒಬ್ಬರೇ ಮದ್ದಳೆ, ಒಬ್ಬರೇ ಭಾಗವತಿಕೆ ಮಾಡುವ ಕಾಲವದು. ಆ ಕಾಲದಲ್ಲಿ ಚೆ್ನ್ನಾಗಿ ಪಳಗಿದೆನಾದರೂ, ನಿದ್ದೆಗೆಟ್ಟು ರಾತ್ರಿಯಿಡೀ ಅಕ್ಷರಶಃ 'ದುಡಿತ'ವು ಆರಂಭದಲ್ಲಿ ನನಗೆ ಕಷ್ಟ ಅಂತನೇ ಅನಿಸಿ, ಸಾಕು, ಮುಂದಿನ ವರ್ಷ ತಿರುಗಾಟ ಬೇಡ ಎಂದು ಮನೆಯಲ್ಲಿ ಕೂತಿದ್ದೆ. ಹೇಗೂ ಜೀವನೋಪಾಯಕ್ಕೆ ನಮ್ಮ ಪರಂಪರೆಯ ಪೂಜೆಯಿತ್ತು. ಕಡಬದ ದುರ್ಗಾಂಬಿಕಾ ದೇವಸ್ಥಾನ ಮತ್ತು ಮಹಾಗಣಪತಿ ದೇವಸ್ಥಾನ - ಎರಡಲ್ಲಿಯೂ ನಮ್ಮದು ವಂಶಪಾರಂಪರ್ಯ ಪೂಜೆಯೇ ಉದ್ಯೋಗ. ಈಗಲೂ ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ನನ್ನ ತಮ್ಮ ಕೇಶವ ಬೈಪಾಡಿತ್ತಾಯ ಪೂಜಾ ಕೈಂಕರ್ಯದೊಂದಿಗೆ ಸುತ್ತಮುತ್ತಲಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದಾನೆ.

ಆ ಕಾಲದಲ್ಲಿ ನನ್ನ ತಮ್ಮ ಅನಂತ ಬೈಪಾಡಿತ್ತಾಯ ಈ ಪೂಜೆಯ ಕೆಲಸವನ್ನು ನೋಡಿಕೊಳ್ಳುತ್ತಿರುವಾಗ ನಾನು ಮೇಳಗಳಿಗೆ ಹೋಗುತ್ತಿದ್ದೆ. ಮೇಳ ಮುಗಿದ ಬಳಿಕ ಮನೆಯಲ್ಲೇ ಕೂತಿದ್ದಾಗ, ಮಳೆಗಾಲದಲ್ಲಿ ನಡೆಯುವ ಆಟ-ಕೂಟಗಳಿಗೂ ಹೋಗುತ್ತಿದ್ದೆ. ಇಂಥದ್ದೇ ಒಂದು ಸಂದರ್ಭ, ಅರಸಿನಮಕ್ಕಿ ಬಳಿಯ ದೊಂಡೋಲೆಯಲ್ಲೊಂದು ಚೌತಿಯ ತಾಳಮದ್ದಳೆ. ಕೂಡ್ಲು ಮೇಳದ ಯಜಮಾನರಾಗಿದ್ದ ಶಂಕರನಾರಾಯಣಪ್ಪಯ್ಯ ಅವರ ಬಾವನ ಮನೆಯಲ್ಲಿ ಈ ಕೂಟವಿತ್ತು. ಅವರೂ ಬಂದಿದ್ದರು. ಅಲ್ಲಿ ನನ್ನ ಮದ್ದಳೆಯನ್ನು ಕೇಳಿದ ಅವರು, ಕೂಡ್ಲು ಮೇಳಕ್ಕೆ ಬರುತ್ತೀಯಾ ಅಂತ ಕೇಳಿದರು. ಮಾತುಕತೆಯೆಲ್ಲ ನಡೆದು ಮೇಳಕ್ಕೆ ಹೋಗುವುದೂ ಫಿಕ್ಸ್ ಆಯಿತು.

ಹೀಗೆ, ಕೂಡ್ಲು ಮೇಳದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರು ಜೊತೆಯಾದರು. ಅವರು ಆಗಲೇ ಹರಿದಾಸರಾಗಿ ಪ್ರಸಿದ್ಧರಾಗಿದ್ದರು. ಉತ್ತರಾದಿ (ಹಿಂದೂಸ್ತಾನಿ) ಸಂಗೀತವನ್ನೂ ಕಲಿತಿದ್ದ ಅವರು ಹರಿಕಥೆಯಲ್ಲಿಯೂ ಅದೇ ಮಾದರಿಯಲ್ಲಿ ಹಾಡುತ್ತಿದ್ದರು. ನಾನು ದಕ್ಷಿಣಾದಿ ಮೃದಂಗ ಕಲಿತಿದ್ದು ಹೇಗೂ ಅವರಿಗೆ ಗೊತ್ತಿತ್ತಲ್ಲಾ... ಈ ಮಾಣಿ, ಬಾ... ಹರಿಕಥೆಗೆ ನೀನು ಮದ್ದಳೆ ನುಡಿಸು ಅಂತ ಕರೆದುಕೊಂಡು ಹೋಗುತ್ತಿದ್ದರು.

ಕೂಡ್ಲು ಮೇಳದ ತಿರುಗಾಟದ ಅವಧಿಯಲ್ಲೇ ಅವರಿಗೆ ಹರಿಕಥಾ ಕಾಲಕ್ಷೇಪದ ಕಾರ್ಯಕ್ರಮಗಳು ಸಿಗುತ್ತಿದ್ದವು. ರಾತ್ರಿ ಆಟವಿದ್ದರೆ, ಹಗಲು ಹೊತ್ತಿನಲ್ಲಿ ಈ ರೀತಿಯ ಕಾರ್ಯಕ್ರಮಗಳು. ಆದರೆ, ರಾತ್ರಿ ಚೌಕಿ ಪೂಜೆಯೊಳಗೆ ನಾವು ಮರಳಿ ಬರಬೇಕಿತ್ತು.

ಆಗೆಲ್ಲಾ ಮೇಳದಲ್ಲಿ ಪೂರ್ವರಂಗದ ಬಾಲಗೋಪಾಲರು ಇರಲಿಲ್ಲ. ಆ ಸಮಯದಲ್ಲಿ, ಅಂದರೆ ಎಂಟುವರೆಯಿಂದ ಸಂಗೀತ ಕಚೇರಿ, ಡ್ಯಾನ್ಸ್ ಎಲ್ಲ ಇರುತ್ತಿತ್ತು. ಹಿಂದೊಮ್ಮೆ ಹೇಳಿದಂತೆಯೇ, ಕುಂಡಾವು ಮೇಳದಲ್ಲಿ ಚೆನ್ನೈಯ ಸೈಗಲ್ ಜೋಸೆಫ್ ಎಂಬಾತ ಹಾಡಲು ಬರುತ್ತಿದ್ದ. ನಂತರ ನೃತ್ಯವೂ ಇರುತ್ತಿತ್ತು.

ಹೀಗೆ ಶೇಣಿಯವರ ಹರಿಕಥೆಗೆ ಹಾರ್ಮೋನಿಯಂ (ಶ್ರುತಿ ಪೆಟ್ಟಿಗೆ) ಇದ್ದರೆ ಸಾಕಾಗುತ್ತಿತ್ತು. ಇಲ್ಲವೆಂದಾದರೆ, ಮೇಳದಲ್ಲಿ ಪ್ರಸಂಗಪೂರ್ವ ನಡೆಯುತ್ತಿದ್ದ ಸಂಗೀತ ಕಚೇರಿಗೆ ಬರುತ್ತಿದ್ದ ನಿತ್ಯಾನಂದ ಬೋಳಾರ್ಕರ್ ಅವರು ವಯಲಿನ್ ನುಡಿಸುತ್ತಿದ್ದರು. ನಾನು ಮೃದಂಗದ ನಡೆಯನ್ನೇ ಮದ್ದಳೆಯಲ್ಲಿ ನುಡಿಸುತ್ತಿದ್ದೆ. ಶೇಣಿಯವರಿಗೂ ಅದು ಇಷ್ಟವಾಯಿತು. ಆಟವು ಅಕ್ಕಪಕ್ಕದಲ್ಲೇ ಆಗುತ್ತಿದ್ದರೆ ಬೋಳಾರ್ಕರ್ ವಯಲಿನ್‌ಗೆ ಬರುತ್ತಿದ್ದರು. ಹರಿಕಥೆಯು ದೂರದಲ್ಲಿ ಇದ್ದರೆ ಅವರು ಬರುತ್ತಿರಲಿಲ್ಲ. ಆಗ, ಹಾರ್ಮೋನಿಯಮ್ಮೇ ಗತಿ. ಎಂಟರೊಳಗೆ ಅವರು ಮೇಳದ ಚೌಕಿಯಲ್ಲಿರಬೇಕಾಗುತ್ತಿತ್ತು. ಯಾಕಂದ್ರೆ, ಡೇರೆ ಮೇಳದ ಈ ಸಂಗೀತ ಕಚೇರಿ, ಡ್ಯಾನ್ಸ್ ಶುರುವಾಗಬೇಕಿತ್ತಲ್ಲ!

ಹೀಗೆ, ಈ ಮಾಣಿ ಮೃದಂಗ ನುಡಿಸಲಾಯಿತು ಅಂತ ಶೇಣಿಯವರು ಕರೆದುಕೊಂಡು ಹೋಗುತ್ತಿದ್ದರು. ಅವರಿಗೆ ಒಂದೊಂದು ಕಾರ್ಯಕ್ರಮಕ್ಕೆ ನೂರು ರೂಪಾಯಿಯೇನೋ ಸಿಗುತ್ತಿತ್ತು. ಅದರಲ್ಲಿ ಅವರು ನಮಗೂ ಇಪ್ಪತ್ತು ರೂಪಾಯಿ ಕೊಡುತ್ತಿದ್ದರು. ವಾರದಲ್ಲಿ ಈ ರೀತಿ 2-3 ಕಾರ್ಯಕ್ರಮಗಳು ಸಿಗುತ್ತಿದ್ದವು. ನಿದ್ದೆಯೇನೋ ಕಡಿಮೆಯಾಗುತ್ತಿತ್ತು. ಆದರೆ ಆ ಕಾಲದಲ್ಲಿ ಮೇಳದ ಸಂಬಳವೂ ತೀರಾ ಕಡಿಮೆಯಲ್ಲಾ, ಹೀಗಾಗಿ ಜೀವನೋಪಾಯಕ್ಕೆ ಈ ಸಂಪಾದನೆಯೂ ಪೂರಕವಾಗುತ್ತಿತ್ತು.

ಶೇಣಿಯವರು ಸಂಗೀತ ಕಲಿತಿದ್ದರಿಂದ, ಮೇಳದ ಆಟದಲ್ಲಿಯೂ ಭಾಗವತರೇನಾದರೂ ಶ್ರುತಿ ಬಿಟ್ಟರೆ ಅವರಿಗೆ ತಕ್ಷಣ ಗೊತ್ತಾಗುತ್ತಿತ್ತು. ಅವರು ಆಟದಲ್ಲಿ ಅರ್ಥ ಹೇಳುವುದಕ್ಕೆ ಕಪ್ಪು 2, ಬಿಳಿ 3, ಬಿಳಿ ನಾಲ್ಕು - ಈ ಪಟ್ಟಿಯಲ್ಲಿ ಲೀಲಾಜಾಲವಾಗಿ ಅರ್ಥ ಹೇಳಬಲ್ಲವರಾಗಿದ್ದರು.

ಅಂತೂ ಆಟದ ತಿರುಗಾಟದ ಮಧ್ಯೆ ಶೇಣಿಯವರೊಡನೆ ಹರಿಕಥೆಯಲ್ಲಿಯೂ ಭಾಗವಹಿಸಿ, ನನ್ನ ಜ್ಞಾನವನ್ನೂ, ಅವರ ಒಡನಾಟದ, ಅನುಭವದ ನುಡಿಗಳನ್ನೂ ನಾನು ವಿಸ್ತರಿಸಿಕೊಂಡಿದ್ದು ಹೀಗೆ.

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಇವನ್ನೂ ಓದಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು