ವಟ ಸಾವಿತ್ರೀ ವ್ರತ-2: ಸತ್ಯವಾನನಿಗಾಗಿ ಸಾವಿತ್ರಿಯು ಯಮನನ್ನೇ ಪೇಚಿಗೆ ಸಿಲುಕಿಸಿದಾಗ...

ಇಂದು (ಜೂ.24, 2021) ವಟ ಸಾವಿತ್ರೀ ವ್ರತದ ದಿನ. ಈ ಹಿನ್ನೆಲೆಯಲ್ಲಿ ಸಕಾಲಿಕ ಲೇಖನ ಸರಣಿ. ಲೇಖಕರು: ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಮದುವೆಯಾದ ಮರುದಿನವೇ ಸಾವಿತ್ರಿಯು ತನ್ನ ಮೈಮೇಲಿನ ಆಭರಣಗಳನ್ನೆಲ್ಲಾ ತೆಗೆದಿಟ್ಟು ಆಶ್ರಮವಾಸಿಗಳಿಗೆ ಒಪ್ಪುವ ನಾರುಮಡಿಯನ್ನುಡುತ್ತಾಳೆ. ಅತ್ತೆ-ಮಾವಂದಿರ ಸೇವೆಯನ್ನು ಸಂತೋಷದಿಂದ ಮಾಡಲಾರಂಭಿಸುತ್ತಾಳೆ. ನಗುನಗುತ್ತ ಸೇವೆಗೈಯುವ ಆಕೆ ಎಲ್ಲರಿಗೂ ಮೆಚ್ಚಿನವಳಾಗುತ್ತಾಳೆ. ಸತ್ಯವಾನನ ಪ್ರೀತಿಯ ಮಡದಿಯಾಗುತ್ತಾಳೆ, ಪತಿವ್ರತೆಯೇ ಆಗುತ್ತಾಳೆ. ತನ್ನ ಗಂಡನ ಅಲ್ಪಾಯುಸ್ಸಿನ ಗುಟ್ಟನ್ನು ಯಾರಿಗೂ ತಿಳಿಸದೇ ತಾನೊಬ್ಬಳೇ ನೋವನ್ನು ಅನುಭವಿಸುತ್ತಾ ಗಟ್ಟಿ ಮನಸ್ಸಿನಿಂದ ಇರುತ್ತಾಳೆ. ನಾರದರು ಹೇಳಿದ ಮಾತನ್ನು ಮರೆಯದೇ ಪ್ರತಿ ದಿನವೂ ಸಾವಿತ್ರೀದೇವಿಯನ್ನು ಪೂಜಿಸುತ್ತಾಳೆ. ದಿನಗಳು ಉರುಳಿ ಒಂದು ವರ್ಷವಾಗುವುದಕ್ಕೆ ನಾಲ್ಕೇ ದಿನಗಳು ಬಾಕಿ ಉಳಿಯುತ್ತವೆ.

ಸತ್ಯವಾನನ ಆಯುಸ್ಸು ಇನ್ನು ಕೇವಲ ನಾಲ್ಕೇ ದಿನಗಳು ಉಳಿದಿರುತ್ತವೆ. ಆಗಲೂ ಕೂಡಾ ಸಾವಿತ್ರಿಯು ಧೃತಿಗೆಡುವುದಿಲ್ಲ. ಸಾವಿತ್ರಿಯು ಮೂರು ದಿನಗಳ ಕಠಿಣವಾದ ವಟಸಾವಿತ್ರೀ ವ್ರತವನ್ನು ಕೈಗೊಳ್ಳುತ್ತಾಳೆ. ಮೂರು ದಿನವೂ ಉಪವಾಸವಿದ್ದು ನೀರನ್ನೂ ಸಹ ಸೇವಿಸದೇ ಹಗಲು ರಾತ್ರಿ ಎನ್ನದೆ ದೇವಿಯ ಅರ್ಚನೆ ಮಾಡುತ್ತಾಳೆ. ನಿದ್ರೆಯನ್ನೂ ಸಹ ತೊರೆದು ಕಟ್ಟೆಚ್ಚರದಿಂದ ಸತ್ಯವಾನನ ಜತೆಯಲ್ಲೇ ಇರುತ್ತಾಳೆ. ಸಾವಿತ್ರಿಯು ಯಾಕೆ ಹೀಗೆ ಕಠಿಣವಾದ ವ್ರತ ಮಾಡುತ್ತಿದ್ದಾಳೆ ಎಂಬ ಅರಿವಿಲ್ಲದೇ ಉಳಿದವರು "ಬೇಡಮ್ಮ, ದೇಹ ದಂಡಿಸಿಕೊಳ್ಳಬೇಡಮ್ಮ" ಎನ್ನುತ್ತಾರೆ. ಯಾರು ಬೇಡವೆಂದರೂ ಕೇಳದ ಸಾವಿತ್ರಿಯು ತನ್ನ ಮೂರು ದಿನಗಳ ವಟಸಾವಿತ್ರೀ ವ್ರತವನ್ನು ಪೂರ್ಣಗೊಳಿಸುತ್ತಾಳೆ.

ಸಾವಿತ್ರಿಯು ನಿರೀಕ್ಷಿಸಿಕೊಂಡಿದ್ದ ಆ ನಾಲ್ಕನೇ ದಿನ ಬೆಳಗಾಗುತ್ತದೆ. ಅದು ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನ. ಸಾವಿತ್ರಿಗೆ ಮನಸ್ಸಿನಲ್ಲಿ ಕೊಂಚ ತಳಮಳವಾದರೂ ಅದನ್ನು ತೋರಗೊಡದೇ ತನ್ನ ನಿತ್ಯದ ಕೆಲಸಗಳನ್ನು ಮುಗಿಸುತ್ತಾಳೆ. ಅತ್ತೆಮಾವಂದಿರ ಶುಶ್ರೂಷೆ ಮಾಡುತ್ತಾಳೆ. ಮಾವನ ದೇವತಾಪೂಜೆಗೆ ಅಣಿಮಾಡುತ್ತಾಳೆ. ಅವರಿಗೆ ಉಪಾಹಾರವನ್ನು ಕೊಟ್ಟು ತೃಪ್ತಿಪಡಿಸಿ, ನಮಸ್ಕರಿಸುತ್ತಾಳೆ. ಮಾವನು 'ದೀರ್ಘ ಸುಮಂಗಲೀ ಭವ’ ಎಂದು ಆಶೀರ್ವದಿಸಿದಾಗ ಸತ್ಯವಂತರಾದವರ ಬಾಯಲ್ಲಿ ಬರುವ ಮಾತು ಎಂದೂ ಸುಳ್ಳಾಗದು ಎಂಬ ನಂಬಿಕೆಯಿಂದ ಸಂತೋಷಿಸುತ್ತಾಳೆ. ಅವರ ಆಶೀರ್ವಾದವೇ ನಿಜವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ.  

ನಿತ್ಯದಂತೆ ಸತ್ಯವಾನನು ಕಟ್ಟಿಗೆಯನ್ನು ತರಲು ಕಾಡಿಗೆ ಹೊರಟು ನಿಂತಾಗ ಸಾವಿತ್ರಿಯು "ನಾನೂ ಜೊತೆಯಲ್ಲಿ ಬರುತ್ತೇನೆ" ಎನ್ನುತ್ತಾಳೆ. ಸತ್ಯವಾನನಿಗೆ ಆಶ್ಚರ್ಯವಾಗುತ್ತದೆ. ಅವನು "ಪ್ರಿಯೆ, ನೀನು ಜೊತೆಯಲ್ಲಿ ಬರುವುದು ನನಗೂ ಸಂತೋಷವೇ. ಆದರೆ ಮೂರು ದಿನಗಳ ಕಠಿಣ ವ್ರತದಿಂದ ಈಗಾಗಲೇ ನೀನು ಬಳಲಿದ್ದೀಯೆ. ಇನ್ನೂ ಆಹಾರವನ್ನು ಕೂಡಾ ಸೇವಿಸಿಲ್ಲ. ಕಾಡಿನ ದಾರಿ ಬಹು ಕಷ್ಟ. ನಿನಗೆ ಆಯಾಸವಾಗುತ್ತದೆ. ಬೇಡ" ಎನ್ನುತ್ತಾನೆ. ಆದರೆ ಸಾವಿತ್ರಿಯು "ಇಲ್ಲ, ನನಗೇನೂ ಕಷ್ಟವಾಗುವುದಿಲ್ಲ. ಕಾಡಿನ ಸೌಂದರ್ಯವನ್ನು ಸವಿಯುವ ಆಸೆಯಾಗಿದೆ ನನಗೆ. ನಾನು ನಿಮ್ಮ ಜೊತೆಯಲ್ಲಿಯೇ ಬರುತ್ತೇನೆ" ಎಂದು ಹಠ ಹಿಡಿಯುತ್ತಾಳೆ. ಅವಳನ್ನು ನೋಯಿಸಲು ಇಷ್ಟವಿಲ್ಲದೇ ಸತ್ಯವಾನನು ಒಪ್ಪುತ್ತಾನೆ. ಸಾವಿತ್ರಿಯು ಅತ್ತೆಮಾವಂದಿರ ಅಪ್ಪಣೆಯನ್ನು ಪಡೆದು ಗಂಡನೊಡನೆ ಕಾಡಿಗೆ ಹೊರಡುತ್ತಾಳೆ. 

ಇತ್ತ ಶೈಮಿನೀಪುರದಲ್ಲಿ ಯಮನು ಅಂದು ಸತ್ತು ಯಮಲೋಕಕ್ಕೆ ಬಂದಿರುವ ಪ್ರೇತಗಳ ವಿಚಾರಣೆ ನಡೆಸುತ್ತಾ ಇರುತ್ತಾನೆ. ಆಗ ಚಿತ್ರಗುಪ್ತನು "ಇಂದು ಇನ್ನೂ ಒಬ್ಬನು ಬರಲಿಕ್ಕಿದ್ದಾನೆ.  ಚಿತ್ರಾಶ್ವ ಎಂಬ ರಾಜಕುಮಾರನಿಗೆ ಬ್ರಹ್ಮನು ಬರೆದ ಆಯುಸ್ಸು ಮುಗಿದಿದೆ. ಅವನನ್ನು ಯಮಪಾಶ ಹಾಕಿ ಎಳೆದು ತರಬೇಕಾಗಿದೆ" ಎನ್ನುತ್ತಾನೆ. ಕೂಡಲೇ ಯಮನು "ಯಾರಲ್ಲಿ, ಆ ಚಿತ್ರಾಶ್ವನನ್ನು ಪಾಶಹಾಕಿ ಎಳೆದು ತನ್ನಿ" ಎಂದು ತನ್ನ ಭಟರಿಗೆ ಆಜ್ಞಾಪಿಸುತ್ತಾನೆ. 

ಅಷ್ಟರಲ್ಲಿ ಅಲ್ಲಿಗೆ ನಾರದರು ಆಗಮಿಸುತ್ತಾರೆ. ಆಗ ಯಮನು ಪೀಠದಿಂದ ಇಳಿದು ಬಂದು ನಾರದರನ್ನು ಕರೆತಂದು, ಉಚಿತವಾದ ಆಸನವಿತ್ತು ಅವರನ್ನು ಸತ್ಕರಿಸುತ್ತಾನೆ. ಆಗ ನಾರದರು  "ಏನಯ್ಯಾ ಯಮಧರ್ಮ, ನೀನು ಆ ಚಿತ್ರಾಶ್ವನ ಪ್ರಾಣವನ್ನು ಕಸಿದು ತರಲು ಹೊರಟಿದ್ದೀಯಲ್ಲ ಅವನೇನು ಪಾಪ ಮಾಡಿದ್ದಾನೆ ? ಒಂದು ವೇಳೆ ನೀನು ಅವನನ್ನು ಇಲ್ಲಿಗೆ ತಂದರೆ ಪತಿವ್ರತೆಯಾದ ಆತನ ಸತಿ ಸಾವಿತ್ರಿಯು ಖಂಡಿತವಾಗಿಯೂ ತನ್ನ ಪ್ರಾಣವನ್ನು ತೊರೆಯುತ್ತಾಳೆ. ಹೀಗೆ ಮಾಡಿದರೆ ಭೂಲೋಕದಲ್ಲಿ ಸತೀಧರ್ಮ ಉಳಿಯುವುದಾದರೂ ಹೇಗೆ? ಆದ್ದರಿಂದ ಅವನನ್ನು ತರಬೇಡ, ಬಿಡು ಅವನನ್ನು" ಎನ್ನುತ್ತಾನೆ. ಅದಕ್ಕೆ ಯಮನು "ನಾರದರೇ, ಆತನಿಗೆ ನಿನ್ನ ತಂದೆ ವಿಧಿಸಿದ ಆಯುಸ್ಸು ಮುಗಿದಿದೆ. ಹೀಗಾಗಿ ಅವನನ್ನು ತರುವುದು ನನ್ನ ಕರ್ತವ್ಯ. ಸತೀಧರ್ಮ ಉಳಿಸಲಿಕ್ಕಾಗಿ ಹಾಗೆಲ್ಲ ಬಿಟ್ಟು ಬರಲು ಸಾಧ್ಯವೇ ? ಈ ಹಿಂದೆ ಎಂದೂ ನಾನು ಹಾಗೆ ಮಾಡಿಲ್ಲ. ಅವಳು ವಿಧವೆಯಾದರೆ ನನಗೇನು ? ಎಷ್ಟಕ್ಕೂ ನಾನು ಅವನನ್ನು ಬಿಡುವುದಿಲ್ಲ" ಎನ್ನುತ್ತಾನೆ. 

ಅದಕ್ಕೆ ಪ್ರತಿಯಾಗಿ ನಾರದರು "ಅಯ್ಯಾ, ಸುಮ್ಮನೇ ಬಾಯಿ ಪೌರುಷ ಬೇಡ. ಅವನನ್ನು ತರುವುದಕ್ಕೆ ನಿನ್ನಿಂದ ಆಗುವುದಿಲ್ಲ. ಆ ಪತಿವ್ರತೆ ತನ್ನ ಪತಿಯನ್ನು ಬಿಟ್ಟುಕೊಡುವುದಿಲ್ಲ. ಆಕೆಯ ಎದುರು ನೀನು ಸೋಲುವುದು ನಿಶ್ಚಯ" ಎನ್ನುತ್ತಾನೆ. ಅದಕ್ಕೆ ಯಮನು "ಸುಮ್ಮನಿರಿ ನಾರದರೇ, ಎಂತೆಂತಹ ಪತಿವ್ರತೆಯರ ಪತಿಯಂದಿರ ಅಸುವನ್ನು ನಾನು ಕಸಿದು ತಂದಿಲ್ಲವೇ ? ಇವಳೇನು ಮಹಾ ? ನೋಡಿಯೇ ಬಿಡ್ತೇನೆ" ಎಂದು ಪೌರುಷವಾಡುತ್ತಾನೆ. "ಆದೀತು, ನೋಡು ಹಾಗಾದರೆ" ಎನ್ನುತ್ತಾ ನಾರದರು ತೆರಳುತ್ತಾರೆ.   

ಇತ್ತ ಸಾವಿತ್ರಿಯೊಡನೆ ಕಟ್ಟಿಗೆ ತರಲೆಂದು ಕಾಡಿಗೆ ಹೋದ ಸತ್ಯವಾನನು ಒಂದು ಮರವನ್ನು ಏರಿ ಕೊಡಲಿಯಿಂದ ಕಟ್ಟಿಗೆಯನ್ನು ಕಡಿಯುತ್ತಾ ಇರುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನ ಮೈಯೆಲ್ಲ ಬೆವರಲಾರಂಭಿಸುತ್ತದೆ. ಆತನಿಗೆ ತಲೆಯಲ್ಲಿ ಅಸಾಧ್ಯವಾದ ನೋವು ಉಂಟಾಗಿ ಆತ ತಲೆ ತಿರುಗಿ "ಸಾವಿತ್ರೀ" ಎಂದು ಕೂಗುತ್ತಾ ನೆಲಕ್ಕೆ ಬೀಳುತ್ತಾನೆ. ಪಕ್ಕದಲ್ಲೇ ಇದ್ದ ಸಾವಿತ್ರಿಯು ಕೂಡಲೇ ಓಡಿ ಹೋಗಿ ಗಂಡನನ್ನು ಎಬ್ಬಿಸಿ ಕರೆತಂದು ಅಲ್ಲೇ ಇದ್ದ ವಟ ವೃಕ್ಷದ (ಆಲದ ಮರದ) ನೆರಳಲ್ಲಿ ನೆಲದ ಮೇಲೆ ಕುಳಿತುಕೊಂಡು ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಳ್ಳುತ್ತಾಳೆ. ಸತ್ಯವಾನನು ತಲೆಬೇನೆಯಿಂದ ನರಳುತ್ತಾ ಇರುತ್ತಾನೆ. ಆಗ ನಾರದರ ಮಾತುಗಳನ್ನು ನೆನಪಿಸಿಕೊಂಡ ಸಾವಿತ್ರಿಯು ಬಹುಶಃ ಆ ಕಾಲನು ತನ್ನ ಗಂಡನನ್ನು ಸಮೀಪಿಸುತ್ತಿರಬೇಕು, ಅದಕ್ಕೇ ಅವರಿಗೆ ಹೀಗೆಲ್ಲಾ ವೇದನೆ ಆಗುತ್ತಿದೆ ಎಂದುಕೊಂಡು, ಕಣ್ಣು ಮುಚ್ಚಿಕೊಂಡು ಒಂದೇ ಸಮನೆ ಸಾವಿತ್ರೀದೇವಿಯನ್ನು ನೆನೆಯುತ್ತಾ ಧೈರ್ಯದಿಂದ ಇರುತ್ತಾಳೆ. 

ಅಷ್ಟರಲ್ಲಿ ಅಲ್ಲಿಗೆ ಯಮನ ಭಟರು ಬರುತ್ತಾರೆ. ಅವರನ್ನು ಗಮನಿಸಿದರೂ ಗಮನಿಸದಂತೆ ಸಾವಿತ್ರಿಯು ಸಾವಿತ್ರೀದೇವಿಯ ಸ್ಮರಣೆಯಲ್ಲೇ ಇರುತ್ತಾಳೆ. ಆಗ ಅವರು ಸತ್ಯವಾನನಿಗೆ ಪಾಶಹಾಕಲು ಹತ್ತಿರ ಬರುತ್ತಾರೆ. ಆದರೆ, ಆಗ ಸತ್ಯವಾನ ಹಾಗೂ ಸಾವಿತ್ರಿಯರ ಸುತ್ತಲೂ ವೃತ್ತಾಕಾರದಲ್ಲಿ ಅಗ್ನಿಯು ಭುಗಿಲೇಳುತ್ತದೆ. ಇದರಿಂದಾಗಿ ಯಮಭಟರು ಹೆದರಿ ಓಡಿ ಹೋಗಿ ಯಮನಲ್ಲಿ ದೂರುತ್ತಾರೆ. ಭಟರು ಹೇಳಿದ ವೃತ್ತಾಂತದಿಂದ ಆಶ್ಚರ್ಯಗೊಂಡ ಯಮನಿಗೆ ನಾರದರು ಆಡಿದ ಮಾತಿನ ಸತ್ಯದ ಅರಿವಾಗುತ್ತದೆ. ಆದರೂ ತಾನೇ ಕೋಣನನ್ನು ಏರಿಕೊಂಡು ಸತ್ಯವಾನನು ಮಲಗಿದ್ದ ವಟ ವೃಕ್ಷದ ಕಡೆಗೆ ಬರುತ್ತಾನೆ. ಪಾಶವನ್ನು ಹಾಕಿ ಸತ್ಯವಾನನನ್ನು ಎಳೆಯಲಾರಂಭಿಸುತ್ತಾನೆ. ತಲೆ ತಗ್ಗಿಸಿಕೊಂಡು ಸಾವಿತ್ರೀದೇವಿಯ ಸ್ಮರಣೆಯಲ್ಲೇ ನಿರತಳಾಗಿದ್ದ ಸಾವಿತ್ರಿಯು, ಸತ್ಯವಾನನು ಏಕಾಏಕಿ ನಿಸ್ತೇಜನಾಗಿ ನರಳಲು ಆರಂಭಿಸಿದುದನ್ನು ಕಂಡು ತಲೆ ಎತ್ತಿ ನೋಡುತ್ತಾಳೆ. 

ಹಳದಿಬಣ್ಣದ ವಸ್ತ್ರವನ್ನುಟ್ಟು ತೇಜಸ್ಸಿನಲ್ಲಿ ಆದಿತ್ಯನಂತೆ ಹೊಳೆಯುತ್ತಿದ್ದ ಕಿರೀಟಧಾರಿಯಾದ ಕರ್ರಗಿನ ಭಯಾನಕ ವ್ಯಕ್ತಿಯೋರ್ವನು ಕೋಣನ ಮೇಲೆ ಕುಳಿತುಕೊಂಡು ಪಾಶವನ್ನು ಬೀಸುತ್ತಿರುವುದನ್ನು ಕಾಣುತ್ತಾಳೆ. ಅವನೇ ಯಮ ಎಂಬುದು ಸಾವಿತ್ರಿಗೆ ದೃಢವಾಗುತ್ತದೆ. ಅದೇ ಕ್ಷಣಕ್ಕೆ ಸರಿಯಾಗಿ ಸತ್ಯವಾನನ ಪ್ರಾಣಪಕ್ಷಿಯು ಹಾರಿಹೋಗುತ್ತದೆ. ಸಾವಿತ್ರಿಗೆ ಅತೀವ ದುಃಖವಾಗುತ್ತದೆ. ಆದರೂ ಈ ಸಂದರ್ಭದಲ್ಲಿ ತಾನು ಧೃತಿಗೆಡಬಾರದು, ಹೆದರಿದರೆ ಕಾರ್ಯ ಕೆಟ್ಟುಹೋಗುತ್ತದೆ ಎಂದುಕೊಂಡು ತೊಡೆಯ ಮೇಲಿದ್ದ ಸತ್ಯವಾನನ ತಲೆಯನ್ನು ಕೆಳಕ್ಕಿರಿಸಿ, ಧೈರ್ಯದಿಂದ ಯಮನ ಬಳಿಗೆ ಹೋಗಿ ಆತನಿಗೆ ನಮಸ್ಕರಿಸುತ್ತಾ "ಅಯ್ಯಾ, ಯಮಧರ್ಮರಾಯ ನಿನಗಿದೋ ನನ್ನ ವಂದನೆಗಳು" ಎನ್ನುತ್ತಾಳೆ. ಇದನ್ನು ಕೇಳಿದ ಯಮನಿಗೆ ಆಶ್ಚರ್ಯವಾಗುತ್ತದೆ. 

ಅವನು ಸಾವಿತ್ರಿಯನ್ನು ನೋಡಿ "ಎಲಾ ಹೆಣ್ಣೇ, ಮನುಷ್ಯರಿಗೆ ಯಾರಿಗೂ ನನ್ನನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ನನ್ನೊಡನೆ ಮಾತನಾಡಲೂ ಸಾಧ್ಯವಿಲ್ಲ, ಆದರೂ ನಿನ್ನ ಕಣ್ಣಿಗೆ ನಾನು ಕಾಣಿಸಿದ್ದೇನೆ ಮಾತ್ರವಲ್ಲದೇ ನೀನು ನನ್ನೊಡನೆ ಮಾತನಾಡುತ್ತಿರುವಿ ಅಂದರೆ ನೀನೋರ್ವಳು ಭಗವದ್ಭಕ್ತೆಯೇ ಆಗಿರಬೇಕು. ಅಮ್ಮಾ, ಆಯುಸ್ಸು ಮುಗಿದು ಹೋದವರ ಪ್ರಾಣವನ್ನು ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ, ನಿನ್ನ ಗಂಡನ ಆಯುಸ್ಸು ಮುಗಿದಿದೆ, ಆದ್ದರಿಂದ ಅವನ ಪ್ರಾಣವನ್ನು ತೆಗೆದುಕೊಂಡು ಹೋಗುತ್ತಿರುವೆ" ಎಂದು ಹೇಳಿ ಪಾಶದಿಂದ ಅವನ ಜೀವವನ್ನು ಬಂಧಿಸಿ ಎಳೆದುಕೊಂಡು ದಕ್ಷಿಣಾಭಿಮುಖವಾಗಿ ಸಾಗುತ್ತಾನೆ. ಕೂಡಲೇ ಸಾವಿತ್ರಿಯು ವಟವೃಕ್ಷಕ್ಕೆ ಪ್ರದಕ್ಷಿಣೆ ಬಂದು "ಅಮ್ಮಾ ವೃಕ್ಷಮಾತೆಯೇ, ನಾನು ಮರಳಿ ಬರುವ ತನಕ ನನ್ನ ಗಂಡನ ಈ ಭೌತಿಕ ಶರೀರವನ್ನು ಕಾದುಕೊಂಡಿರು" ಎನ್ನುತ್ತಾ ಆ ವಟವೃಕ್ಷಕ್ಕೆ ವಂದಿಸಿ, ದುಃಖಿಸುತ್ತಾ ಯಮನನ್ನು ಹಿಂಬಾಲಿಸಿ ಹೊರಡುತ್ತಾಳೆ. 

ಸಾವಿತ್ರಿಯು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಕಂಡ ಯಮನಿಗೆ ಆಶ್ಚರ್ಯವಾಗುತ್ತದೆ. ಈ ಹಿಂದೆ ಅದೆಷ್ಟೋ ಜೀವಿಗಳನ್ನು ಅವನೂ ಅವನ ದೂತರೂ ಯಮಲೋಕಕ್ಕೆ ಸೆಳೆದುಕೊಂಡು ಹೋಗಿದ್ದರು. ಆದರೆ ಸತ್ತವರ ಹಿಂದೆ ಹೀಗೆ ಯಾರೂ ಹೆಜ್ಜೆ ಹಾಕಿರಲಿಲ್ಲ. ತನ್ನನ್ನು ಹಿಂಬಾಲಿಸಿ ಬರುತ್ತಿರುವ ಈ ಹೆಣ್ಣುಮಗಳ ಧೈರ್ಯವನ್ನು ಮೆಚ್ಚಿಕೊಂಡ ಯಮನು ಆಕೆಯೊಡನೆ "ಸಾವಿತ್ರಿ, ಹೀಗೆ ಎಷ್ಟು ದೂರ ನಿನ್ನ ಗಂಡನನ್ನು ಹಿಂಬಾಲಿಸುತ್ತೀಯೇ ? ಬದುಕಿದ್ದಾಗ ಅವನಿಗೆ ನೆರಳಾಗಿದ್ದು ಅವನ ಸೇವೆ ಮಾಡಿದ್ದಿ. ಇನ್ನು ಹಿಂತಿರುಗು. ನಿನ್ನ ಅವನ ಋಣ ತೀರಿತು. ಹೋಗಿ ಅವನ ಶವಸಂಸ್ಕಾರ ಮಾಡು" ಎನ್ನುತ್ತಾನೆ. ಅದಕ್ಕೆ ಸಾವಿತ್ರಿಯು "ಓ ಯಮಧರ್ಮನೇ, ದೇವತೆಗಳನ್ನು ಮನುಷ್ಯರು ಕಂಡರೆ ಅವರಿಗೆ ಪುಣ್ಯ ಲಭಿಸುತ್ತದಂತೆ. ಈಗ ನಿನ್ನನ್ನು ನೋಡಿದ್ದರಿಂದ ಲಭಿಸಿದ ಪುಣ್ಯದ ಫಲವನ್ನು ನನಗೆ ನೀಡು, ನನ್ನ ಗಂಡನ ಪ್ರಾಣವನ್ನು ಕೊಟ್ಟು ಹೋಗು" ಎನ್ನುತ್ತಾಳೆ. 

ಹೇಗಾದರೂ ಮಾಡಿ ಈಕೆಯನ್ನು ಹಿಂದೆ ಕಳುಹಿಸಬೇಕು ಎಂದುಕೊಂಡ ಯಮನು "ಸಾವಿತ್ರಿ, ನಿನ್ನ ಮಾತುಗಳಿಂದ ನನಗೆ ಬಹಳ ಸಂತೋಷವಾಗಿದೆ. ಆದರೆ ಸತ್ಯವಂತನ ಪ್ರಾಣವೊಂದನ್ನು ಬಿಟ್ಟು ಬೇರೆ ಯಾವ ವರವನ್ನು ಬೇಕಾದರೂ ಕೇಳು, ಕೊಡುತ್ತೇನೆ" ಎನ್ನುತ್ತಾನೆ. ಆಗ ಸಾವಿತ್ರಿಯು "ಯಮಧರ್ಮರಾಜ, ಅನುಗ್ರಹೀತಳಾದೆ. ನನಗಾಗಿ ಏನೂ ಬೇಡ, ನಿನ್ನ ಕೃಪೆಯಿಂದಾಗಿ ಕುರುಡನಾದ ನನ್ನ ಮಾವನಿಗೆ ಕಣ್ಣು ಬರಲಿ ಹಾಗೂ ಅವರ ಸ್ವಂತ ರಾಜ್ಯ, ಸಂಪದ, ಬಲಗಳು ಮರಳಿ ಸಿಗುವಂತಾಗಲಿ" ಎಂದು ಒಂದನೇ ವರವನ್ನು ಕೇಳುತ್ತಾಳೆ. ಸಾವಿತ್ರಿ ತನ್ನ ಅತ್ತೆ ಮಾವಂದಿರಲ್ಲಿ ಇಟ್ಟ ಪ್ರೀತಿಯನ್ನು ಕಂಡು ಯಮನಿಗೆ ಸಂತೋಷವಾಗುತ್ತದೆ. ಅವನು "ತಥಾಸ್ತು" ಎಂದು ವರವನ್ನಿತ್ತು, ಪುನಹ ಪಾಶದ ಗಂಟನ್ನು ಸರಿಪಡಿಸಿಕೊಂಡು ಸತ್ಯವಾನನ ಜೀವವನ್ನು ಬಂಧಿಸಿ ಎಳೆದುಕೊಂಡು ಮುಂದೆ ಸಾಗುತ್ತಾನೆ. 

ಮತ್ತೆ ಪುನಹ ಸಾವಿತ್ರಿಯು ಆತನನ್ನು ಹಿಂಬಾಲಿಸುತ್ತಾಳೆ. ಬಹುದೂರ ಸಾಗಿದ ನಂತರ ಇವಳನ್ನು ಗಮನಿಸಿದ ಯಮನು ಆಕೆಯೊಡನೆ "ಸಾವಿತ್ರಿ, ನಿನಗೆ ಒಂದು ವರವನ್ನು ಕೊಟ್ಟಿದ್ದೇನಲ್ಲ. ಮತ್ತೇಕೆ ನನ್ನನ್ನು ಹಿಂಬಾಲಿಸುತ್ತಾ ಇರುವೆ ? ಈಗಾಗಲೇ ನೀನು ಬಹುದೂರ ನಡೆದು ಬಂದು ಬಳಲಿದ್ದೀಯೆಂದು ತೋರುತ್ತಿದೆ. ಹಿಂದಿರುಗಿ ಹೋಗು. ಅವನ ದೇಹದ ಸಂಸ್ಕಾರಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡು" ಎನ್ನುತ್ತಾನೆ. ಅದಕ್ಕೆ ಸಾವಿತ್ರಿಯು "ಪ್ರಭೂ, ನನ್ನ ಗಂಡನನ್ನು ಹಿಂಬಾಲಿಸುವ ನನಗೆ ಆಯಾಸವೆಲ್ಲಿಂದ ಬರುತ್ತದೆ ? ಅವನಿದ್ದಲ್ಲಿ ನಾನಿರಬೇಕಾದುದು ಧರ್ಮ ತಾನೇ ? ಏಳು ಹೆಜ್ಜೆ ಜೊತೆಯಾಗಿ  ನಡೆದರೆ ಅಂತಹವರು ಸ್ನೇಹಿತರಾಗುತ್ತಾರಂತೆ. ನಿನ್ನೊಡನೆ ಇಷ್ಟು ದೂರ ಬಂದಿದ್ದೇನೆ. ಅದರಿಂದಾಗಿ ನೀನು ನನ್ನ ಸ್ನೇಹಿತನಾದೆ. ಆದ್ದರಿಂದ ನಿನ್ನಲ್ಲಿ ಒಂದು ಕೋರಿಕೆ, ನನ್ನ ಗಂಡನ ಜೊತೆಯಾಗಿ ಬರಲು ನನಗೆ ಅವಕಾಶ ನೀಡು" ಎನ್ನುತ್ತಾಳೆ. 

ಆಗ ಯಮನು "ಸಾವಿತ್ರೀ, ನಿನ್ನ ಈ ಮಾತುಗಳು ಬಾಯಾರಿಕೆಯಿಂದ ಬಳಲಿದವನಿಗೆ ನೀರು ಕುಡಿಸಿದಂತೆ ಹಿತಕರವಾಗಿವೆ. ನಿನ್ನ ಮಾತುಗಳಿಂದ ಸಂತೋಷಿತನಾಗಿದ್ದೇನೆ. ಆದ್ದರಿಂದ ಈ ಸತ್ಯವಾನನ ಜೀವವೊಂದನ್ನು ಬಿಟ್ಟು ನಿನಗಿಷ್ಟವಾದ ಬೇರೆ ಯಾವುದೇ ವರವನ್ನು ಕೇಳು, ಕೊಡುತ್ತೇನೆ" ಎನ್ನುತ್ತಾನೆ. ಅದಕ್ಕೆ ಸಾವಿತ್ರಿಯು "ಯಮರಾಜಾ, ನನ್ನ ತಂದೆ ಅಶ್ವಪತಿ ರಾಜನಿಗೆ ಗಂಡು ಮಕ್ಕಳಿಲ್ಲ. ಆದ್ದರಿಂದ ಅವನಿಗೆ ಕುಲವನ್ನು ಮುಂದುವರೆಸಿಕೊಂಡು ಹೋಗಲು ಪುತ್ರ ಸಂತಾನವನ್ನು ನೀಡು" ಎಂಬುದಾಗಿ ಎರಡನೇ ವರವನ್ನು ಬೇಡುತ್ತಾಳೆ. ಅದಕ್ಕೆ ಯಮರಾಜನು "ಇಷ್ಟೇ ತಾನೇ, ತಥಾಸ್ತು. ನಿನ್ನ ತಂದೆಗೆ ಒಂದಲ್ಲ ಎರಡಲ್ಲ ನೂರು ನೂರು ಮಂದಿ ಪುತ್ರರಾಗಲಿ. ತೃಪ್ತಿಯಾಯಿತಲ್ಲ. ನೀನಿನ್ನು ತೆರಳು" ಎನ್ನುತ್ತಾ ಸತ್ಯವಾನನ ಪಾಶವನ್ನು ಪುನಹ ಬಿಗಿಗೊಳಿಸಿ ಹಿಡಿದುಕೊಂಡು ವೇಗವಾಗಿ ಎಳೆದುಕೊಂಡು ಹೋಗುತ್ತಾನೆ.

ಅಷ್ಟೇ ವೇಗವಾಗಿ ಸಾವಿತ್ರಿಯೂ ಆತನನ್ನು ಹಿಂಬಾಲಿಸುತ್ತಾಳೆ. ಬಹುದೂರ ಸಾಗಿದ ನಂತರ ಒಮ್ಮೆ ಹಿಂತಿರುಗಿ ನೋಡುತ್ತಾನೆ, ಅಲ್ಲಿ ಮತ್ತೆ ಸಾವಿತ್ರಿ. ಈ ಸಲ ಅವನಿಗೆ ಕೋಪ ಬರುತ್ತದೆ. ಕೋಪದಿಂದ "ಎಲ್ಲಾ ಹೆಣ್ಣೇ, ಈ ರೀತಿಯಲ್ಲಿ ನನ್ನನ್ನು ಹಿಂಬಾಲಿಸಿ ಬರುವುದು ನೀತಿಯಲ್ಲ. ಅದೋ ನೋಡು, ಅಲ್ಲಿ ಹರಿಯುತ್ತಿರುವುದು ವೈತರಿಣೀ ನದಿ. ಆ ನದಿಯನ್ನು ದಾಟಲು ಯಾವ ಮನುಷ್ಯರಿಗೂ ಸಾಧ್ಯವಿಲ್ಲ. ಅದರಾಚೆ ಇರುವುದು ಯಮಮಾರ್ಗ ಅಂದರೆ ಸಾಕ್ಷಾತ್ ಯಮಲೋಕವೇ. ನೀನು ಪತಿವ್ರತೆ ಎಂಬುದನ್ನು ನಾನು ಒಪ್ಪುತ್ತೇನೆ, ಸಾಕಲ್ಲವೇ ? ಪತಿವ್ರತೆ ಎಂಬ ಬಿರುದನ್ನು ಪಡೆದುಕೊಂಡು, ಹಠವನ್ನು ಬಿಟ್ಟು ಇಲ್ಲಿಂದಲೇ ಹಿಂತಿರುಗಿ ಭೂಲೋಕಕ್ಕೆ ಹೋಗು" ಎನ್ನುತ್ತಾನೆ. 

ಅದಕ್ಕೆ ಸಾವಿತ್ರಿಯು "ಓ ಪ್ರೇತಪತಿಯೇ, ಸಿಟ್ಟಾಗಬೇಡ. ನನ್ನ ನಾಥನನ್ನು ನೀನು ಕರೆದೊಯ್ಯುತ್ತಾ ಇದ್ದೀಯ, ಅದನ್ನು ತಪ್ಪು ಎಂದು ನಾನು ಹೇಳಲಾರೆ. ಏಕೆಂದರೆ ಅದು ನಿನ್ನ ಕರ್ತವ್ಯ. ನೀನು ಪ್ರಜೆಗಳನ್ನು ನಿಯಮಮಾತ್ರದಿಂದ ನಿಯಂತ್ರಿಸುತ್ತಾ ಇದ್ದೀಯ. ನಿನಗೆ ಬೇಕು ಅಂತಲ್ಲದೇ ಇದ್ದರೂ ನಿಯಮದಿಂದಾಗಿ ಅವರನ್ನು ನೀನು ಕೊಂಡೊಯ್ಯುತ್ತಾ ಇದ್ದೀಯ. ಅದೇ ನಿನಗೆ ಧರ್ಮ. ಹೀಗಾಗಿ ನಿನಗೆ 'ಯಮಧರ್ಮ’ ಎನ್ನುತ್ತಾರೆ. ಓ ಯಮರಾಯ, ನನ್ನನ್ನು ಹಿಂದೆ ಹೋಗು ಎನ್ನುತ್ತಿಯಲ್ಲ, ನನ್ನ ನಾಥನನ್ನು ಬಿಟ್ಟು ನಾನು ಹೋಗುವುದಾದರೂ ಎಲ್ಲಿಗೆ ? ಯಾವ ಸುಖಕ್ಕಾಗಿ ನಾನು ಹಿಂದೆ ಹೋಗಲಿ ? ನಾನು ಪತಿವ್ರತೆ ಎಂಬುದು ಸತ್ಯವೇ ಆದರೆ ನನ್ನ ಗಂಡನನ್ನು ನನಗೆ ಬಿಟ್ಟು ಕೊಡು" ಎನ್ನುತ್ತಾಳೆ. 

ಅದಕ್ಕೆ ಸಿಟ್ಟಾದ ಯಮನು "ಅದು ಎಂದಿಗೂ ಸಾಧ್ಯವಿಲ್ಲ, ಅದೊಂದನ್ನು ಬಿಟ್ಟು ಬೇರೆ ಏನು ಬೇಕಾದರೂ ಕೇಳು, ಕೊಡುತ್ತೇನೆ" ಎನ್ನುತ್ತಾನೆ. ಜಾಣೆಯಾದ ಸಾವಿತ್ರಿಯು ಕೂಡಲೇ "ನೀನು ಕೊಡುವುದೇ ಹೌದಾದರೆ, ಸತ್ಯವಾನ ಹಾಗೂ ನನ್ನ ಅಂದರೆ ನಮ್ಮಿಬ್ಬರ ವಂಶೋದ್ಧಾರಕನಾದ  ಔರಸ ಪುತ್ರನನ್ನು ನನಗೆ ನೀಡು" ಎಂದು ಮೂರನೇ ವರವನ್ನು ಬೇಡುತ್ತಾಳೆ. ಕೂಡಲೇ ಯಮನು "ಇಷ್ಟೇ ಅಲ್ಲವೇ, ತಥಾಸ್ತು, ಒಂದಲ್ಲ ನೂರು ಔರಸ ಪುತ್ರರು ನಿನಗೆ ಜನಿಸಲಿ, ಸಾಕಲ್ಲ, ಇನ್ನು ನಡೆ ಹಿಂದಕ್ಕೆ" ಎನ್ನುತ್ತಾ ಪಾಶವನ್ನು ಹಿಡಿದು ಎಳೆದುಕೊಂಡು ವೇಗವಾಗಿ ಓಡುತ್ತಾನೆ. 

ಅಷ್ಟೇ ವೇಗವಾಗಿ ಸಾವಿತ್ರಿಯೂ ಆತನನ್ನು ಹಿಂಬಾಲಿಸುತ್ತಾಳೆ. ಸಾವಿತ್ರಿಗೆ ಹಿಂಬಾಲಿಸಲು ಸಾಧ್ಯವಾಗದಂತೆ ಯಮನು ಬಹಳ ವೇಗವಾಗಿ ಕೋಣವನ್ನು ಓಡಿಸುತ್ತಾನೆ. ಹಿಂಬಾಲಿಸಿ ಬಂದಳೇನೋ ಎಂದುಕೊಂಡು ನಡು ನಡುವೆ ಹಿಂತಿರುಗಿ ನೋಡುತ್ತಾನೆ. ಬಹುದೂರ ಸಾಗಿದ ನಂತರ ಏದುಸಿರು ಬಿಡುತ್ತಾ ಒಂದು ಕಡೆ ನಿಲ್ಲುತ್ತಾನೆ. ಅಷ್ಟರಲ್ಲಿ ಅಷ್ಟರಲ್ಲಿ ಅಲ್ಲಿಗೆ ಸಾವಿತ್ರಿ ಬಂದು ತಲುಪುತ್ತಾಳೆ. ಅವಳನ್ನು ನೋಡಿದಾಕ್ಷಣ ಯಮನ ಕೋಪ ಉಕ್ಕೇರುತ್ತದೆ. 

ಅವನು "ಎಲಾ ಗಾಡಗಾತಿಯೇ, ಹಿಂತಿರುಗಿ ಹೋಗು ಎಂದರೂ ಕೇಳದೇ ಮತ್ತೂ ಮತ್ತೂ ನನ್ನನ್ನು ಹಿಂಬಾಲಿಸುತ್ತಾ ಇದ್ದೀಯ, ನಿನಗೆ ಅದೆಷ್ಟು ವರಗಳನ್ನು ಕೊಟ್ಟೆ, ಇನ್ನೂ ನಿನಗೆ ವರಗಳ ದಾಹವೇ ? ಮತ್ತೂ ನನ್ನ ಹಿಂದೆಯೇ ಬರುತ್ತಾ ಇದ್ದೀಯಲ್ಲ, ಎಷ್ಟು ಸೊಕ್ಕು ನಿನಗೆ, ಹೆಣ್ಣು ಎಂಬುದಾಗಿ ಸುಮ್ಮನೇ ಬಿಡುತ್ತಾ ಇದ್ದೇನೆ, ಇನ್ನೂ ನನ್ನನ್ನು ಹಿಂಬಾಲಿಸಿದರೆ ನನ್ನ ಭಟರ ಕೈಯಿಂದ ನಿನ್ನನ್ನು ತಳ್ಳಿಸಿಯೇನು ಜೋಕೆ" ಎಂದು ಕೂಗಾಡುತ್ತಾನೆ. 

ಆಗ ಸಾವಿತ್ರಿಯು ಯಮನಿಗೆ ಕೈಮುಗಿದು "ಸ್ವಾಮೀ, ನಾನು ವರಗಳ ಆಸೆಯಿಂದ ನಿನ್ನ ಹಿಂದೆ ಓಡಿ ಬಂದಿಲ್ಲ, ನಾನು ವರ ಕಾಮಿಯಲ್ಲ. ಯಾವ ಸಿರಿ ಸಂಪದದ ಆಸೆಯೂ ನನಗಿಲ್ಲ, ನಾನು ಸಿರಿ ಕಾಮಿಯೂ ಅಲ್ಲ. ಹೀಗಾಗಿ ನಾನು ನನಗಾಗಿ ಏನನ್ನೂ ನಿನ್ನಲ್ಲಿ ಕೇಳಿಲ್ಲ. ನನಗೆ ನೂರು ಪುತ್ರರಾಗಲಿ ಎಂದು ನೀನೇ ವರವನ್ನು ಕೊಟ್ಟಿದ್ಧೀಯ. ಆದರೂ ನನ್ನ ಪತಿಯನ್ನು ಒಯ್ಯುತ್ತಿದ್ದೀಯ. ಪತಿಯಿಲ್ಲದೇ ನಾನು ಮಕ್ಕಳನ್ನು ಪಡೆಯುವುದಾದರೂ ಹೇಗೆ ದೇವ ? ನೀನಿತ್ತ ವರವು ಸನ್ಮಾರ್ಗದಲ್ಲಿಯೇ ನನಗೆ ಲಭಿಸಲಿ ಎಂದು ಬಯಸುತ್ತೇನೆ, ನಾನು ಪರ ಕಾಮಿಯಲ್ಲ. ನಾನು ನನ್ನವರ ಕಾಮಿ. ನಾನು ನನ್ನ ಗಂಡನಿಗಾಗಿಯೇ ನಿನ್ನ ಹಿಂದೆ ಓಡಿ ಬರುತ್ತಾ ಇದ್ದೇನೆ. ಸತ್ಯವಾನನನ್ನು ಬದುಕಿಸಿ ನನ್ನೊಡನೆ ಕಳುಹಿಸು, ಆಗ ಮಾತ್ರ ನಿನ್ನ ವರ ಸತ್ಯವಾಗುತ್ತದೆ" ಎನ್ನುತ್ತಾಳೆ.

ಅಷ್ಟರಲ್ಲಿ ಮೇಲ್ಗಡೆಯಲ್ಲಿ ಯಾರೋ ನಕ್ಕಂತಾಗುತ್ತದೆ. ಮುಖವೆತ್ತಿ ನೋಡುತ್ತಾನೆ, ಕಿಲಕಿಲನೆ ನಗುತ್ತಿರುವ ನಾರದರು ಇಳಿದು ಬರುತ್ತಿದ್ದಾರೆ. ನಾರದರು ಬಂದವರೇ ಯಮಧರ್ಮರಾಯನನ್ನು ಅಣಕಿಸುತ್ತಾರೆ. "ಏನಯ್ಯ ನೀನು ಯಮಧರ್ಮನಾಗಿ ಒಂದು ಹೆಣ್ಣಿಗೆ ಹೆದರಿ ಓಡುತ್ತಾ ಇದ್ದೀಯಲ್ಲ, ನಾಚಿಕೆಗೇಡು" ಎನ್ನುತ್ತಾರೆ. ಅದಕ್ಕೆ ಯಮನು "ನಾನು ಅವಳಿಗೆ ಹೆದರಿ ಓಡುತ್ತಾ ಇಲ್ಲ, ಇವಳ ಕಣ್ಣಿಗೆ ಬೀಳಬಾರದು ಅಂತ ವೇಗವಾಗಿ ಹೋಗುತ್ತಾ ಇದ್ದೇನೆ ಅಷ್ಟೇ" ಎನ್ನುತ್ತಾನೆ. ಆಗ ನಾರದರು "ನೋಡುವವರ ಕಣ್ಣಿಗೆ ಎರಡೂ ಒಂದೇ ಬಿಡಯ್ಯ" ಎನ್ನುತ್ತಾರೆ. ಮತ್ತೂ ಮುಂದುವರಿದು "ಅಲ್ಲಯ್ಯ, ನೀನು ಇವಳಿಗೆ ನೂರು ಮಕ್ಕಳಾಗಲಿ ಅಂತ ವರ ಕೊಟ್ಟು, ಇವಳ ಗಂಡನನ್ನು ನಿನ್ನ ಜೊತೆ ಕರೆದುಕೊಂಡು ಹೋದರೆ ಇವಳಿಗೆ ಮಕ್ಕಳಾಗುವುದು ಹೇಗಯ್ಯ ? ಇವಳೇನು ಹಾದರ ಮಾಡಬೇಕು ಅನ್ನುವುದು ನಿನ್ನ ನಿರೀಕ್ಷೆಯೋ ಹೇಗೆ ?" ಎಂದು ಕೇಳುತ್ತಾರೆ. 

ಆಗ ಯಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವನು ಸಾವಿತ್ರಿಯೊಡನೆ "ಎಲೈ ಹೆಣ್ಣೇ,  ನೀನು ಹೇಗೆ ಹೇಗೋ ಸುತ್ತಿ ಬಳಸಿ ಮಾತನಾಡಿ, ನನ್ನ ತಲೆಯನ್ನೇ ಕೆಡಿಸಿಬಿಟ್ಟೆ. ಮಾತಿನಲ್ಲೇ ಈ ಯಮನನ್ನು ನೀನು ಸೋಲಿಸಿದೆ. ಇದು ನಿಜವಾಗಿಯೂ ಯಮನ ಸೋಲೇ ಆಗಿದೆ. ಒಪ್ಪಿಕೊಳ್ಳುತ್ತೇನೆ. ನನಗೇ ಅರಿವಿಲ್ಲದೇ ನಾನು ನಿನಗೆ ವರಗಳನ್ನು ಕೊಟ್ಟೆ. ವರಗಳನ್ನು ಕೊಟ್ಟು ನಾನು ಕೆಟ್ಟೆ. ಅಯ್ಯೋ ಶಿವನೇ, ಈಗೇನು ಮಾಡಲಿ ನಾನು? ಈ ಸಮಸ್ಯೆಗೆ ಪರಿಹಾರವೇನು ?" ಎಂದು ಕೈ ಕೈ ಹಿಸುಕಿಕೊಳ್ಳುತ್ತಾ ಇರುವಾಗ ಸಾವಿತ್ರೀದೇವಿಯು ಪ್ರತ್ಯಕ್ಷಳಾಗುತ್ತಾಳೆ.  

ಮೂವರೂ ದೇವಿಗೆ ನಮಸ್ಕರಿಸುತ್ತಾರೆ. ದೇವಿಯು ಯಮನನ್ನು ಕುರಿತು "ಯಮರಾಯ, ಕರ್ತವ್ಯ ಲೋಪವಾವಾಗುತ್ತದೆ ಎಂಬ ಸಂಶಯ ನಿನಗೆ ಬೇಡ, ಸತ್ಯವಾನನನ್ನು ಹಿಂದಕ್ಕೆ ಕೊಡು" ಎನ್ನುತ್ತಾಳೆ. ಅದಕ್ಕೆ ಯಮನು "ಆಗಲಿ ತಾಯೀ, ನಿಮ್ಮ ಅಪ್ಪಣೆಯಂತೆಯೇ ಆಗಲಿ" ಎನ್ನುತ್ತಾ ಪುನಹ ವಂದಿಸುತ್ತಾನೆ. 

ದೇವಿಯು ಸಾವಿತ್ರಿಯೆಡೆಗೆ ತಿರುಗುತ್ತಾಳೆ. ಆಗ ಸಾವಿತ್ರಿಯು ಪುನಹ ದೇವಿಗೆ ವಂದಿಸುತ್ತಾ "ಜಗತ್ ಪೂಜ್ಯೇ ಜಗನ್ಮಾತಃ ಸಾವಿತ್ರೀ ಪತಿದೈವತೇ । ಪತ್ಯಾ ಸಹಾऽವಿಯೋಗಂ ಮೇ ವಟಸ್ಥೇ ಕುರು ತೇ ನಮಃ" ಎಂದು ಪ್ರಾರ್ಥಿಸುತ್ತಾಳೆ. ದೇವಿಯು ಸಾವಿತ್ರಿಯನ್ನು ಎತ್ತುತ್ತಾ "ಮಗಳೇ ಸಾವಿತ್ರೀ, ಎದ್ದೇಳಮ್ಮಾ, ಧರೆಯಲ್ಲಿ ಸತೀಧರ್ಮವನ್ನು ಮೆರೆಸುತ್ತಾ ನೂರ್ಕಾಲ ಸುಖವಾಗಿ ಬಾಳು. ಇದು ವಟ ಸಾವಿತ್ರೀ ವ್ರತವನ್ನು ನಡೆಸಿದ್ದರಿಂದಾಗಿ ನಿನಗೆ ದೊರೆತ ಪುಣ್ಯದ ಫಲ ಎಂದೇ ತಿಳಿ. ನಿನಗೆ ಮಂಗಳವಾಗಲಿ. ನಾನಿನ್ನು ಬರುತ್ತೇನೆ" ಎನ್ನುತ್ತಾ ಮಾಯವಾಗುತ್ತಾಳೆ.

ನಂತರ ಯಮನು ಸಾವಿತ್ರಿಯೊಡನೆ "ಅಮ್ಮಾ, ನಾನು ಆಗಲೇ ನಿನ್ನ ಗಂಡನನ್ನು ಬಿಟ್ಟುಕೊಡುತ್ತಿದ್ದೆ. ಆದರೆ ಹಾಗೆ ಮಾಡಲು ನನಗೆ ಅಧಿಕಾರ ಇರಲಿಲ್ಲ. ಈಗ ನನಗೆ ಅಧಿಕಾರ ಸಿಕ್ಕಂತಾಯಿತು. ಇಗೋ ನಿನ್ನ ಗಂಡನನ್ನು ಬಿಟ್ಟು ಕೊಟ್ಟಿದ್ದೇನೆ. ಅವನಿಗೆ ಪೂರ್ಣ ಆಯುಸ್ಸನ್ನು ನೀಡುತ್ತಾ ಇದ್ದೇನೆ. ನಿನ್ನ ಗಂಡನ ದೇಹವನ್ನು ಆ ವಟವೃಕ್ಷದ ಅಡಿಯಲ್ಲಿ ಬಿಟ್ಟು ಬಂದಿದ್ದೀಯ. ಆ ವಟವೃಕ್ಷದ ಆಯುಸ್ಸಿನಷ್ಟೇ ಕಾಲ ಅಂದರೆ ನಾನೂರು ವರ್ಷಗಳ ಕಾಲ ಆತ ಬಾಳಿ ಬದುಕಲಿ. ನೀವಿಬ್ಬರೂ ನಿಮ್ಮ ಮಕ್ಕಳೊಂದಿಗೆ ಸಂತೋಷವಾಗಿ ಬಾಳಿರಿ. ನಿಮ್ಮ ಮಕ್ಕಳು ಸಾವಿತ್ರರೆಂದು ಹೆಸರು ಪಡೆಯುತ್ತಾರೆ. ನಿನ್ನ ತಂದೆಗೂ ಗಂಡು ಮಕ್ಕಳಾಗಿ ಅವರು ಮಾಳವರೆಂದು ಪ್ರಸಿದ್ಧ ರಾಗುತ್ತಾರೆ. ಸಾವಿತ್ರೀ ವ್ರತದಿಂದ ಗಂಡನನ್ನು ನೀನು ಬದುಕಿಸಿಕೊಂಡೆ. ನಿನಗೆ ಸಮನಾದವರಿಲ್ಲ. ಇನ್ನು ಹಿಂತಿರುಗು. ನಿನಗೆ ಶುಭವಾಗಲಿ" ಎಂದು ಹೇಳಿ ಯಮನು ಪಾಶಗಳನ್ನು ಬಿಡಿಸುತ್ತಾನೆ. 

ನಾರದರು ಸಾವಿತ್ರಿಯನ್ನು ಕುರಿತು "ಸಾವಿತ್ರೀ, ನಿನ್ನ ಆಸೆ ಈಡೇರಿತಲ್ಲವೇ, ಆಗಲಿ ಒಳ್ಳೇದಾಗಲಿ. ಪ್ರಳಯ ಕಾಲದಲ್ಲಿ ಆಲದ ಎಲೆಯ ಮೇಲೆ ಮಲಗಿ ತೇಲುತ್ತಿರುವ ವಿಷ್ಣುವಿನ ಕುರಿತು 'ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ’ ಎಂಬ ಸ್ತೋತ್ರ ಇದೆಯಲ್ಲವೇ. ಜಗವೆಲ್ಲ ಅಳಿದರೂ ಅಳಿಯದೇ ಇರುವ ಆ ಆಲದ ಎಲೆಯು ಲಕ್ಷ್ಮಿಯ ಸಂಕೇತ, ಅದರ ಮೇಲೆ ಮಲಗಿದ ನಾರಾಯಣನು ನಿತ್ಯಪತಿತ್ವದ ಸಂಕೇತ. ಹೀಗಾಗಿ ವಟವೃಕ್ಷದ ಬುಡದಲ್ಲಿ ನೀನು ಸಾವಿತ್ರೀ ದೇವಿಯನ್ನು ಪೂಜಿಸಿದರೂ, ಆ ಪೂಜೆಯು ಲಕ್ಷ್ಮೀನಾರಾಯಣನಿಗೆ ಸಲ್ಲುತ್ತದೆ. ಹೀಗಾಗಿ ವಟಸಾವಿತ್ರೀ ವ್ರತ ಮಾಡಿದವರ ದಾಂಪತ್ಯವು ಆ ಲಕ್ಷ್ಮೀನಾರಾಯಣರ ದಾಂಪತ್ಯ ದಂತೆಯೇ ಶಾಶ್ವತವಾಗುತ್ತದೆ. ಇಂದು ಜ್ಯೇಷ್ಠ ಮಾಸದ ಪೂರ್ಣಿಮೆ. ಇನ್ನು ಮುಂದೆ ವಟಸಾವಿತ್ರೀ ವ್ರತಕ್ಕೆ ಈ ಜ್ಯೇಷ್ಠ ಮಾಸದ ಪೂರ್ಣಿಮೆಯ ದಿನವೇ ಪ್ರಶಸ್ತವಾದ ಪುಣ್ಯ ದಿನವಾಗಲಿ. ಎಲ್ಲರಿಗೂ ಮಂಗಳವಾಗಲಿ" ಎನ್ನುತ್ತಾನೆ. ಸಾವಿತ್ರಿಯು ಇಬ್ಬರಿಗೂ ನಮಸ್ಕರಿಸುತ್ತಾಳೆ. ಅವರಿಬ್ಬರೂ ಮಾಯವಾಗುತ್ತಾರೆ. 

ನಂತರ ದೇವಲೋಕದಿಂದ ಬಂದ ವಿಮಾನವೊಂದು ಸಾವಿತ್ರಿಯನ್ನು ಸತ್ಯವಾನನಿದ್ದಲ್ಲಿಗೆ  ತಂದು ಬಿಡುತ್ತದೆ. ಆಗ ಮೂಡಣ ಬಾನಲ್ಲಿ ಹುಣ್ಣಿಮೆಯ ಚಂದಿರನು ಮೂಡುತ್ತಾ ಇರುತ್ತಾನೆ. ಸತ್ಯವಾನನು ನಿದ್ದೆಯಿಂದ ಎಚ್ಚೆತ್ತವನಂತೆ ಎದ್ದು ಕುಳಿತುಕೊಳ್ಳುತ್ತಾನೆ. ಕಟ್ಟಿಗೆ ಒಯ್ಯುವುದು ತಡವಾಯಿತೆಂದು ಸಾವಿತ್ರಿಯೊಡನೆ ಓಡಿಕೊಂಡೇ ಆಶ್ರಮಕ್ಕೆ ಮರಳಿದ ಸತ್ಯವಾನನಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ತಂದೆಗೆ ದೃಷ್ಟಿಯು ಮರಳಿ ಬಂದಿತ್ತು. ಅದೇ ಸಮಯದಲ್ಲಿ ರಾಜ್ಯವನ್ನು ಕಸಿದುಕೊಂಡಿದ್ದ ವೀರಸಿಂಹನು ಸದ್ದಿಲ್ಲದೇ ಓಡಿಹೋದನೆಂಬ ವರ್ತಮಾನವು ತಲುಪುತ್ತದೆ. ಈ ಎಲ್ಲಾ ಪವಾಡಗಳು ಹೇಗಾದವು ? ಎಂಬುದಾಗಿ ಎಲ್ಲರೂ ಆಶ್ಚರ್ಯ ಪಡುತ್ತಿರುವಾಗ ಸಾವಿತ್ರಿಯು ನಡೆದುದೆಲ್ಲವನ್ನೂ ವಿವರಿಸುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ. ಸತ್ತು ಬದುಕಿದ ಮಗ ಸತ್ಯವಾನ ಹಾಗೂ ಸಾವನ್ನೇ ಜಯಿಸಿದ ಸೊಸೆ ಸಾವಿತ್ರಿ. ದ್ಯುಮತ್ಸೇನ ದಂಪತಿಯರ ಆನಂದಕ್ಕೆ ಪಾರವೇ ಇಲ್ಲ. ಎಲ್ಲರೂ ರಾಜ್ಯಕ್ಕೆ ಮರಳಿ ಆನಂದದಿಂದ ರಾಜ್ಯಭಾರವನ್ನು ಮುಂದುವರಿಸುತ್ತಾರೆ. 

- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು