ಪುರಾಣ ತಿಳಿಯೋಣ by ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಹೆಚ್ಚು ಕಡಿಮೆ ಈಗಿನ ಪಾಕಿಸ್ತಾನದ ಸಿಂಧೂ ನದಿ ಬಯಲಿನ ಪ್ರದೇಶವು ಹಿಂದೆ ಪುರಾಣದ ಕಾಲದಲ್ಲಿ ಮಾದ್ರ ಅಥವಾ ಮದ್ರ ಎಂಬ ದೇಶವಾಗಿತ್ತು ಮತ್ತು ಇಂದಿನ ಸಿಯಾಲ್‌ಕೋಟ್ ನಗರವು ಅಂದು ಶಾಕಲ ನಗರ ಎಂಬ ಹೆಸರಿನಲ್ಲಿ ಅದರ ರಾಜಧಾನಿಯಾಗಿತ್ತು. ಒಂದು ಕಾಲದಲ್ಲಿ ಆ ದೇಶವನ್ನು ಸ್ವಾಯಂಭೂ ಮನುವಿನ ಮರಿ ಮಗನಾದ ಅಶ್ವಪತಿ ಎಂಬ ಅರಸನು ಆಳಿಕೊಂಡಿದ್ದನು. ಮಾಳವೀ ಅಥವಾ ಮಾಲವೀ ದೇವಿ ಎಂಬವಳು ಅವನ ಪತ್ನಿಯಾಗಿದ್ದಳು. ಅಶ್ವಪತಿಯು ಧರ್ಮಾತ್ಮನೂ, ಸತ್ಯಸಂಧನೂ, ಜಿತೇಂದ್ರಿಯನೂ ಆಗಿದ್ದನು. ಅವನ ರಾಜ್ಯವು ಕೂಡಾ ಹೇರಳವಾದ ಧನ ಧಾನ್ಯ ಸಂಪತ್ತುಗಳಿಂದ ತುಂಬಿ ಸುಭಿಕ್ಷವಾಗಿತ್ತು.
ಆದರೆ ಅವನಿಗೆ ಮಕ್ಕಳಿರಲಿಲ್ಲ. ವಯಸ್ಸನ್ನು ದಾಟಿದ್ದರಿಂದ ಅವನಿಗೆ ಇದೊಂದು ತೀವ್ರ ಸಂತಾಪದ ವಿಷಯವೇ ಆಗಿತ್ತು. ಹೀಗಿರುವಾಗ ಒಂದು ದಿನ ಆತನ ರಾಣಿಯು ತನ್ನರಸನಲ್ಲಿ "ಸ್ವಾಮೀ, ನಮಗೆ ಇಷ್ಟೆಲ್ಲ ಸಿರಿತನವಿದ್ದರೂ ಕೂಡಾ ಮಕ್ಕಳಿಲ್ಲದೇ ಇರುವುದು ಬಹುದೊಡ್ಡ ಕೊರತೆಯಾಗಿದೆ. ಜನರು ನನ್ನನ್ನು ಬಂಜೆ ಎಂದು ಹಾಸ್ಯ ಮಾಡುವಂತಾಯಿತಲ್ಲ ಎಂಬ ದುಃಖ ನನ್ನನ್ನು ಕಾಡುತ್ತಿದೆ" ಎನ್ನುತ್ತಾಳೆ. ಅದಕ್ಕೆ ಅರಸನು "ನಿಜ, ನನಗೂ ಕೂಡಾ ಅದೇ ಚಿಂತೆಯಾಗಿದೆ. 'ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೋ ನೈವ ಚ ನೈವ ಚ' ಅಂತೆ. ಅಂದರೆ 'ಪುತ್ರನಿಲ್ಲದವನಿಗೆ ಸದ್ಗತಿಯಿಲ್ಲ, ಸ್ವರ್ಗ ಪ್ರಾಪ್ತಿಯಂತೂ ಇಲ್ಲವೇ ಇಲ್ಲ' ಎಂದು ಇದರ ಅರ್ಥ. ಹೀಗಾಗಿ ಜನ್ಮ ಜನ್ಮಾಂತರಗಳವರೆಗೂ ನರಕದಲ್ಲಿಯೇ ಇರಬೇಕಾಯಿತಲ್ಲ ಎಂಬುದಾಗಿ ನಾನು ಚಿಂತಿಸುತ್ತಾ ಇದ್ದೇನೆ" ಎನ್ನುತ್ತಾನೆ.
ಹೀಗೆ ಗಂಡ ಹೆಂಡತಿ ಇಬ್ಬರೂ ಚಿಂತೆಯಲ್ಲಿ ಇರುವಾಗ ಅಲ್ಲಿಗೆ ನಾರದ ಮಹರ್ಷಿಗಳು ಆಗಮಿಸುತ್ತಾರೆ. ಸತಿಪತಿಗಳಿಬ್ಬರೂ ಭಕ್ತಿಯಿಂದ ನಾರದರ ಪಾದಪೂಜೆಯನ್ನು ನೆರವೇರಿಸಿ ಅವರನ್ನು ಉಪಚರಿಸುತ್ತಾರೆ. ಆಗ ಇವರಿಬ್ಬರ ಮನದ ಚಿಂತೆಯನ್ನು ಅರಿತ ನಾರದರು ಅವರಿಗೆ ಧೈರ್ಯ ಹೇಳುತ್ತಾರೆ. "ಅಶ್ವಪತಿ, 'ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೋ ನೈವ ಚ ನೈವ ಚ' ಅಂತ ಅಷ್ಟು ಮಾತ್ರ ನೀನು ಹೇಳ್ತಾ ಇದ್ದಿ, ಅದರ ಮುಂದಿನ ಸಾಲನ್ನು ನೀನು ಹೇಳ್ತಾ ಇಲ್ಲ. 'ಏನ ಕೇನಾಪಿ ಉಪಾಯೇನ ಕಾರ್ಯಂ ಜನ್ಮ ಸುತಸ್ಯ ಹಿ' ಇದು ಅದರ ಮುಂದಿನ ಸಾಲು. ಅಂದರೆ, 'ಹೇಗಾದರೂ ಮಾಡಿ ಪುತ್ರ ಸಂತಾನವನ್ನು ಪಡೆಯಬೇಕು' ಎಂಬುದು ಇದರ ತಾತ್ಪರ್ಯ. ಅಂದರೆ ನೀನು ಸ್ವಲ್ಪ ಪರಿಶ್ರಮವಹಿಸಬೇಕು. ನೀವಿಬ್ಬರೂ ಕಾಡಿಗೆ ಹೋಗಿ ಸಾವಿತ್ರೀ ದೇವಿಯನ್ನು ಕುರಿತು ತಪ್ಪಸ್ಸನ್ನು ಆಚರಿಸಬೇಕು. ಆಕೆಯ ಕಾರುಣ್ಯದಿಂದ ನಿನಗೆ ಖಂಡಿತವಾಗಿಯೂ ಮಕ್ಕಳಾಗುತ್ತದೆ" ಎಂದು ಹೇಳಿ ನಾರದರು ತೆರಳುತ್ತಾರೆ.
ನಾರದರ ಸಲಹೆಯಂತೆ ಅಶ್ವಪತಿಯು ರಾಜ್ಯದ ಹೊಣೆಯನ್ನು ಮಂತ್ರಿಗಳಿಗೆ ಒಪ್ಪಿಸಿ ಸತಿಯೊಡನೆ ಅರಣ್ಯಕ್ಕೆ ತೆರಳಿ ಸಾವಿತ್ರೀ ದೇವಿಯನ್ನು ಪೂಜಿಸತೊಡಗುತ್ತಾನೆ. ಸಾವಿತ್ರೀ ದೇವಿ ಅಂದರೆ ಗಾಯತ್ರೀ ದೇವಿಯ ರೂಪಾಂತರ. ಹೀಗಾಗಿ ದಂಪತಿಗಳು, "ಓಂ ಭೂರ್ಭುವಃ ಸ್ವಃ ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಎಂಬ ಗಾಯತ್ರೀ ಮಂತ್ರದಿಂದ ನಿರಂತರವಾಗಿ 18 ವರ್ಷಗಳ ಕಾಲ ಸಾವಿತ್ರೀ ದೇವಿಯನ್ನು ಪೂಜಿಸುತ್ತಾರೆ. ಆಗ ಅವರ ಭಕ್ತಿಗೆ ದೇವಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾಗುತ್ತಾಳೆ. ಅವನು ದೇವಿಯಲ್ಲಿ ಪುತ್ರ ಸಂತಾನವನ್ನು ಬೇಡುತ್ತಾನೆ. ಆದರೆ ದೇವಿಯು "ರಾಜಾ, ನಿನಗೆ ಸದ್ಯ ಪುತ್ರ ಸಂತಾನದ ಭಾಗ್ಯ ಇಲ್ಲ. ಹೀಗಾಗಿ ನಿನ್ನ ಪಿತಾಮಹನಾದ ಸ್ವಾಯಂಭೂವಿನ ಇಚ್ಛೆಯಂತೆ ನಿನಗೆ ಪರಮ ತೇಜಸ್ವಿನಿಯಾದ ಓರ್ವಳು ಪುತ್ರಿಯನ್ನು ಅನುಗ್ರಹಿಸುತ್ತಾ ಇದ್ದೇನೆ. ಮುಂದೆ ಅವಳು ಪರಮ ಪತಿವ್ರತೆಯಾಗಿ ವಿಖ್ಯಾತಳಾಗುತ್ತಾಳೆ. ಮಾತ್ರವಲ್ಲದೇ ಅವಳಿಂದಾಗಿಯೇ ನಿನ್ನ ಮನೆಯಲ್ಲೂ ಹಾಗೂ ಅವಳ ಗಂಡನ ಮನೆಯಲ್ಲೂ ಪುತ್ರೋತ್ಸವವಾಗುತ್ತದೆ" ಎಂದು ಹೇಳಿ ಅಂತರ್ಧಾನಳಾಗುತ್ತಾಳೆ. ಸತಿಪತಿಯರೀರ್ವರೂ ಸಂತೋಷದಿಂದ ಅರಮನೆಗೆ ಹಿಂದಿರುಗುತ್ತಾರೆ.
ಕೆಲವು ಕಾಲ ಕಳೆದ ನಂತರ ದೇವಿಯ ಅನುಗ್ರಹದಂತೆ ಅಶ್ವಪತಿಯ ರಾಣಿ ಮಾಲವಿಯು ಗರ್ಭವತಿಯಾಗುತ್ತಾಳೆ. ನವಮಾಸ ತುಂಬಿದ ಬಳಿಕ ಸಕಾಲದಲ್ಲಿ ಹೆಣ್ಣು ಮಗುವೊಂದನ್ನು ಹೆರುತ್ತಾಳೆ. ಸಾವಿತ್ರೀದೇವಿಯ ವರಪ್ರಸಾದದಿಂದ ಹುಟ್ಟಿದವಳಾದುದರಿಂದ ಮಗುವಿಗೆ "ಸಾವಿತ್ರೀ" ಎಂದೇ ಹೆಸರಿಡುತ್ತಾರೆ. ಸಾವಿತ್ರಿಯು ಸಾಕ್ಷಾತ್ ಶ್ರೀಲಕ್ಷ್ಮಿಯೇ ಭೂಲೋಕದಲ್ಲಿ ಅವತರಿಸಿರುವಳೋ ಎನ್ನುವಂತೆ ಅತೀವ ಸುಂದರಿಯಾಗಿ ಬೆಳೆಯುತ್ತಾಳೆ. ವಿನಯಶೀಲೆಯೂ, ಗುಣವತಿಯೂ ಆಗಿ ದೇವಕನ್ಯೆಯಂತೆ ಕಂಗೊಳಿಸುತ್ತಿರುವ ಸಾವಿತ್ರಿಗೆ ಮದುವೆಯ ವಯಸ್ಸು ಪ್ರಾಪ್ತವಾದಾಗ ಅರಸನು ಅವಳಿಗೆ ಸ್ವಯಂವರವನ್ನು ಏರ್ಪಡಿಸುತ್ತಾನೆ. ಆ ಸ್ವಯಂವರಕ್ಕೆ ಅನೇಕ ಪರಾಕ್ರಮಶಾಲಿಗಳೂ, ವಿನಯವಂತರೂ, ಧೀರರೂ, ಶೂರರೂ ಆದ ರಾಜಕುಮಾರರು ಆಗಮಿಸುತ್ತಾರೆ. ಆದರೆ, ಅಂದು ಸ್ವಯಂವರಕ್ಕೆ ಬಂದಿದ್ದ ಯಾವ ರಾಜಕುಮಾರನನ್ನೂ ಸಾವಿತ್ರಿಯು ಒಪ್ಪುವುದಿಲ್ಲ. ಹೀಗಾಗಿ ಬಂದಿರುವ ಅರಸು ಕುವರರೆಲ್ಲರೂ ಅಶ್ವಪತಿಯನ್ನು ನಿಂದಿಸಿ ತೆರಳುತ್ತಾರೆ. ಇದರಿಂದಾಗಿ ಅಶ್ವಪತಿ ಮಹಾರಾಜನಿಗೆ ಪುನಹ ಚಿಂತೆ ಆರಂಭವಾಗುತ್ತದೆ.
ತಂದೆಯ ಚಿಂತೆ ಏನೆಂಬುದು ಸಾವಿತ್ರಿಗೂ ಅರ್ಥವಾಗಿರುತ್ತದೆ. ಆದರೆ ಅವಳು ದೇವರ ಮೇಲೆ ದೃಢವಾದ ವಿಶ್ವಾಸ ಇಟ್ಟವಳು. ಹೀಗಾಗಿ ಆಕೆ ಯಾವಾಗಲೂ ತನ್ನದೇ ಆದ ವ್ರತ ಪೂಜೆಗಳಲ್ಲಿಯೇ ನಿರತಳಾಗಿರುತ್ತಾಳೆ. ಒಂದು ಹುಣ್ಣಿಮೆಯ ದಿನದಂದು ಸಾವಿತ್ರಿಯು ಉಪವಾಸದಿಂದಿದ್ದು ದೇವರನ್ನು ಪೂಜಿಸಿ, ನಂತರ ಪ್ರಸಾದದ ತಟ್ಟೆಯೊಡನೆ ತಂದೆಯ ಬಳಿಗೆ ಹೋಗುತ್ತಾಳೆ. ತಂದೆಗೆ ಪ್ರಸಾದವನ್ನು ಕೊಟ್ಟು ಅವನ ಪಾದಗಳಿಗೆ ಎರಗುತ್ತಾಳೆ. ಕಾಲಿಗೆರಗಿದ ಮಗಳನ್ನುಸಂತೋಷದಿಂದ ಹಿಡಿದೆತ್ತಿದ ಅರಸನು ಆಕೆಗೆ ತನ್ನ ಮನದ ಚಿಂತೆಯನ್ನು ವಿವರಿಸುತ್ತಾನೆ. "ಮಗಳೇ, ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಿಸಲಾರದ ತಂದೆ, ಋತುಸ್ನಾತೆಯಾದ ಮಡದಿ ಇದ್ದಾಗ್ಯೂ ಆಕೆಯಿಂದ ಮಕ್ಕಳನ್ನು ಪಡೆಯದ ಪತಿ ಹಾಗೂ ತಂದೆ ಅಳಿದ ಮೇಲೆ ವಿಧವೆಯಾದ ತಾಯಿಯನ್ನು ನೋಡಿಕೊಳ್ಳದ ಪುತ್ರ ಈ ಮೂವರನ್ನು ದೇವತೆಗಳು ನಿಂದಿಸುತ್ತಾರೆ. ನಿನ್ನನ್ನು ಮದುವೆಯಾಗಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ. ಹೀಗಾಗಿ ನಿನ್ನ ಪತಿಯನ್ನು ನೀನೇ ಇಷ್ಟಪಟ್ಟು ಆರಿಸಿಕೋ. ಅದರಲ್ಲಿ ತಪ್ಪೇನಿಲ್ಲ. ಧರ್ಮಶಾಸ್ತ್ರಗಳನ್ನು ಓದಿ ತಿಳಿದ ದ್ವಿಜರೇ ಈ ಸಲಹೆಯನ್ನು ಕೊಟ್ಟಿದ್ದಾರೆ. ಆದ್ದರಿಂದ ನಿನಗೆ ಅನುರೂಪನಾದ ವರನನ್ನು ಹುಡುಕಿಕೊಂಡು, ನಾನು ದೇವತೆಗಳ ನಿಂದನೆಗೊಳಾಗಾಗದಂತೆ ಮಾಡು" ಎನ್ನುತ್ತಾನೆ.
ಪಿತೃ ವಚನವನ್ನು ಸಾವಿತ್ರಿಯು 'ಆಜ್ಞೆ' ಎಂದು ಸ್ವೀಕರಿಸಿ ವರಾನ್ವೇಷಣೆಗೆ ಹೊರಡಲು ಸಿದ್ಧಳಾಗುತ್ತಾಳೆ. ಅವಳೊಂದಿಗೆ ಹೊರಡಲು ವೃದ್ಧಮಂತ್ರಿಗಳಿಗೆ ಅರಸನು ಆಜ್ಞಾಪಿಸುತ್ತಾನೆ. ರಾಜಕುಮಾರಿಯೊಂದಿಗೆ ಅವಳ ದಾಸದಾಸಿಯರೂ, ಪರಿವಾರದವರೂ, ರಕ್ಷಕ ಭಟರೂ ಹೊರಡುತ್ತಾರೆ. ಅವರೆಲ್ಲ ದೇಶವಿದೇಶಗಳನ್ನು ಸುತ್ತುತ್ತಾ, ವೃದ್ಧರು ಹಾಗು ಋಷಿಗಳನ್ನು ಕಂಡು ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾ, ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ, ಅಲ್ಲಲ್ಲಿ ದಾನಧರ್ಮಗಳನ್ನು ಮಾಡುತ್ತಾ ಮುಂದುವರಿಯುತ್ತಾರೆ.
ಇತ್ತ ಮದ್ರ ದೇಶದ ದಕ್ಷಿಣದಲ್ಲಿರುವ ನೆರೆಯ ಸಾಲ್ವ ದೇಶದಲ್ಲಿ ಆಗ ದ್ಯುಮತ್ಸೇನ ಎಂಬವನು ಅರಸನಾಗಿದ್ದನು. ಅವನು ವೀರನೂ, ಪರಮಧಾರ್ಮಿಕನೂ, ಸತ್ಯಸಂಧನೂ ಆಗಿದ್ದನು. ಶೈಭ್ಯೆ ಎಂಬವಳು ಆತನ ರಾಣಿಯಾಗಿದ್ದಳು. ಅವರಿಬ್ಬರಿಗೆ ಮೊದಲು ಮಕ್ಕಳಿಲ್ಲದೇ ವಯಸ್ಸು ಕಳೆದ ನಂತರ ಚಿತ್ರಾಶ್ವನೆಂಬ ಮಗನು ಜನಿಸಿದ್ದನು. ಅವನನ್ನು ಸತ್ಯವಾನ ಎಂತಲೂ ಕರೆಯುತ್ತಿದ್ದರು. ಸತ್ಯವಾನನು ಕೂಡಾ ತಂದೆಯಂತೆಯೇ ಶೂರನಾಗಿದ್ದನು. ಸಾಲ್ವದೇಶವು ಮದ್ರ ದೇಶದಷ್ಟು ವಿಸ್ತಾರವಾಗಿ ಇರದಿದ್ದರೂ ಕೂಡಾ ಮದ್ರದೇಶದಷ್ಟೇ ಸಂಪದ್ಭರಿತವಾಗಿ ಸುಭಿಕ್ಷವಾಗಿತ್ತು. ಹೀಗಾಗಿ ಶತ್ರು ರಾಷ್ಟ್ರದ ಅರಸರುಗಳಿಗೆ ಸಾಲ್ವದೇಶದ ಸಂಪತ್ತಿನ ಮೇಲೆ ಕಣ್ಣಿತ್ತು.
ತಾನು ಮುದುಕನಾಗಿರುವುದರಿಂದ ದ್ಯುಮತ್ಸೇನನು ಮಗನಿಗೆ ಪಟ್ಟಕಟ್ಟಿ ಅಧಿಕಾರವನ್ನು ಹಸ್ತಾಂತರಿಸಲು ಬಯಸಿದನು. ಆದರೆ ಸತ್ಯವಾನನು "ಅಪ್ಪಾ, ನಾನು ಮೊದಲು ದೇಶ ಸಂಚಾರ ಮಾಡಿ ದೇಶ ವಿದೇಶಗಳಲ್ಲಿರುವ ಜನರ ಕ್ಲೇಶಗಳನ್ನು ಅರಿತುಕೊಳ್ಳಬೇಕು, ಇನ್ನಷ್ಟು ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಆನಂತರ ಬಂದು ಪಟ್ಟವನ್ನು ಏರುತ್ತೇನೆ" ಎನ್ನುತ್ತಾನೆ. "ಮುದುಕರಾಗಿರುವ ನಮ್ಮಿಬ್ಬರನ್ನು ಬಿಟ್ಟು ಹೋಗುವುದು ತರವಲ್ಲ" ಎಂದು ದ್ಯುಮತ್ಸೇನನು ಎಚ್ಚರಿಸಿದರೂ ಸತ್ಯವಾನನು ಕೇಳುವುದಿಲ್ಲ. ತಾನು ಅತಿ ಶೀಘ್ರದಲ್ಲಿ ಮರಳುವುದಾಗಿ ತಿಳಿಸಿ, ತಂದೆಯಿಂದ ಬೀಳ್ಗೊಂಡು ಹೊರಟೇ ಬಿಡುತ್ತಾನೆ.
ಇದೇ ಸಂದರ್ಭಕ್ಕಾಗಿ ಕಾದಿದ್ದ ಮಗಧ ದೇಶದ ಅರಸನಾದ ವೀರಸಿಂಹ ಎಂಬವನು ಸೇನಾ ಸಮೇತನಾಗಿ ಬಂದು ಸಾಲ್ವ ದೇಶದ ಮೇಲೆ ದಾಳಿ ಇಡುತ್ತಾನೆ. ಅರಿಗಳ ಆಗಮನದ ವಿಷಯ ತಿಳಿದ ವೃದ್ಧ ದ್ಯುಮತ್ಸೇನನು ಕೋಪಗೊಂಡು ಧೈರ್ಯದಿಂದ ವೀರಸಿಂಹನನ್ನು ಎದುರಿಸುತ್ತಾನೆ. ಆದರೆ ಮುದುಕನಾಗಿರುವುದರಿಂದ ಯುದ್ಧದಲ್ಲಿ ಕೈಸೋಲುತ್ತಾನೆ. ಯುದ್ಧದಲ್ಲಿ ಗೆದ್ದ ವೀರಸಿಂಹನು ಸಾಲ್ವದೇಶವನ್ನು ವಶಪಡಿಸಿಕೊಂಡು ಅಲ್ಲಿನ ಸಂಪತ್ತನ್ನೆಲ್ಲಾ ದೋಚುತ್ತಾನೆ. ದ್ಯುಮತ್ಸೇನನನ್ನು ಸೆರೆಹಿಡಿದು ಅವನ ಎರಡೂ ಕಣ್ಣುಗಳನ್ನು ಕೀಳಿಸುತ್ತಾನೆ. ನಂತರ ಅವನನ್ನು ಅವನ ರಾಣಿಯಾದ ಶೈಬ್ಯೆಯೊಡನೆ ಕಾಡಿಗೆ ಅಟ್ಟುತ್ತಾನೆ.
ಇತ್ತ ದೇಶಾಂತರ ಹೋಗಿದ್ದ ಸತ್ಯವಾನನಿಗೆ ಈ ವಿಷಯ ತಿಳಿದು ಅವನು ಕೂಡಲೇ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಶತ್ರುಗಳನ್ನು ಓಡಿಸಿ ರಾಜ್ಯವನ್ನು ಮರಳಿ ಪಡೆಯುವ ಮೊದಲು ತಂದೆತಾಯಿಯರನ್ನು ರಕ್ಷಿಸಿಕೊಳ್ಳಬೇಕಾದುದು ಕರ್ತವ್ಯ ಎಂದು ತಿಳಿದ ಅವನು ಅವರನ್ನು ಅರಸುತ್ತಾ ಕಾಡಿಗೆ ಹೋಗುತ್ತಾನೆ. ಅಲ್ಲಿ ತನ್ನ ತಾಯ್ತಂದೆಯರನ್ನು ಕಂಡು ಅವರಲ್ಲಿ ಕ್ಷಮೆ ಯಾಚಿಸುತ್ತಾನೆ. ತಂದೆಯ ಮಾತನ್ನು ಮೀರಿ ತಾನು ಅವರನ್ನು ತೊರೆದು ಹೋದುದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಈ ಕೂಡಲೇ ಶತ್ರುಗಳನ್ನು ಸದೆಬಡಿಯುತ್ತೇನೆ ಎಂದು ಹೊರಡುತ್ತಾನೆ. ಆಗ ಅವನನ್ನು ತಡೆದ ದ್ಯುಮತ್ಸೇನನು "ಪುನಹ ನಮ್ಮನ್ನು ತೊರೆದು ಹೋಗಬೇಡ, ಏಕಾಂಗಿಯಾಗಿ ಶತ್ರುಗಳನ್ನು ಎದುರಿಸುವುದು ಸಾಧ್ಯವಿಲ್ಲ, ಎಲ್ಲದಕ್ಕೂ ಕಾಲ ಬರಲಿ ಮತ್ತೆ ನೋಡೋಣ" ಎನ್ನುತ್ತಾನೆ. ಹೀಗಾಗಿ ಸತ್ಯವಾನನು ಕಾಡಿನಲ್ಲಿಯೇ ಆಶ್ರಮವೊಂದನ್ನು ರಚಿಸಿಕೊಂಡು ಅದರಲ್ಲಿ ಕುರುಡನಾದ ತಂದೆ ಹಾಗೂ ವೃದ್ಧೆಯಾದ ತಾಯಿಯರ ಸೇವೆ ಮಾಡಿಕೊಂಡು ಕಾಡಿನಲ್ಲಿಯೇ ಇರುತ್ತಾನೆ.
ಇತ್ತ ವರಾನ್ವೇಷಣೆಗೆಂದು ತೆರಳಿದ್ದ ಸಾವಿತ್ರಿಯು ತನಗೆ ತಕ್ಕುದಾದ ವರನನ್ನು ಎಲ್ಲಿಯೂ ಕಾಣದೇ, ಪರಿವಾರದೊಂದಿಗೆ ತಮ್ಮ ರಾಜ್ಯಕ್ಕೆ ಹಿಂದಿರುಗಿ ಹೊರಡುತ್ತಾಳೆ. ಹಿಂದಿರುಗುತ್ತಿರುವಾಗ ಕಾಡಿನಲ್ಲಿ ಫಲ ಪುಷ್ಪಗಳನ್ನು ಸಂಗ್ರಹಿಸುತ್ತಿರುವ ಸತ್ಯವಾನನನ್ನು ನೋಡುತ್ತಾಳೆ. ಮೊದಲ ನೋಟದಲ್ಲಿಯೇ ಸತ್ಯವಾನನಲ್ಲಿರುವ ಗಾಂಭೀರ್ಯವನ್ನೂ, ಧೀರತನವನ್ನೂ ಸಾವಿತ್ರಿಯು ಗುರುತಿಸುತ್ತಾಳೆ. ಸತ್ಯವಾನನೂ ಕೂಡಾ ಇವಳಾರೋ ಖೇಚರ ಕನ್ಯೆ, ಪರಿವಾರ ಸಹಿತಳಾಗಿ ಭೂಲೋಕಕ್ಕೆ ವಿಹಾರಕ್ಕೆ ಬಂದಿರಬೇಕು ಎಂದುಕೊಂಡು ಅವಳನ್ನು ಮಾತನಾಡಿಸುತ್ತಾನೆ. ಇಬ್ಬರೂ ಪರಸ್ಪರ ಪರಿಚಯಿಸಿಕೊಳ್ಳುತ್ತಾರೆ. ನಂತರ ಸತ್ಯವಾನನು ಅವಳನ್ನು ತನ್ನ ಆಶ್ರಮಕ್ಕೆ ಕರೆದೊಯ್ದು ತಂದೆ ತಾಯಿಯರಿಗೂ ಪರಿಚಯಿಸುತ್ತಾನೆ. ಸಾವಿತ್ರಿಯು ವೃದ್ಧ ದಂಪತಿಗಳ ಕಾಲಿಗೆರಗಿ ಅವರ ಅಶೀರ್ವಾದವನ್ನು ಪಡೆಯುತ್ತಾಳೆ.
ಸತ್ಯವಾನನ ನಡೆನುಡಿಗಳನ್ನು ಮೆಚ್ಚಿದ ಸಾವಿತ್ರಿಯು, ಸತ್ಯವಂತನೂ ಗುಣವಂತನೂ ಆಗಿರುವ ಈತನೇ ತನ್ನ ಪತಿಯಾಗಲು ಯೋಗ್ಯನೆಂದು ನಿರ್ಧರಿಸುತ್ತಾಳೆ. ಅವನಲ್ಲಿ ತನ್ನ ಬಯಕೆಯನ್ನು ತಿಳಿಸುತ್ತಾಳೆ. ಅದಕ್ಕೆ ಸತ್ಯವಾನನು "ಕಡು ಬಡವರು ನಾವು, ಉಡಲು ತೊಡಲು ಒಡವೆ ನಮಗಿಲ್ಲ, ಪೊಡವಿಗರಸನ ಕುವರಿಯಾದ ನೀನು ಕಾಡವಾಸಿಯಾದ ನನ್ನನ್ನು ಬಯಸಿ ಕೆಡಬೇಡ" ಎನ್ನುತ್ತಾನೆ. ಅದಕ್ಕವಳು "ಈ ದೊರೆತನ ಸಿರಿತನ ಯಾವುದೂ ಶಾಶ್ವತವಲ್ಲ, ಇಂದು ನೀನು ಅಡವಿಗೊಡೆಯನಾದರೂ ಮುಂದೆ ಪೊಡವಿಗೊಡೆಯನಾಗಬಾರದೆಂದೇನೂ ಇಲ್ಲ. ನಾನು ನಿನ್ನನ್ನು ಮೆಚ್ಚಿದ್ದೇನೆ. ನನ್ನನ್ನು ತಿರಸ್ಕರಿಸಬೇಡ, ನನ್ನ ತಂದೆಯಲ್ಲಿ ಹೇಳಿ ಮದುವೆಗೆ ಏರ್ಪಾಡು ಮಾಡಿಸುತ್ತೇನೆ" ಎನ್ನುತ್ತಾ ಆತನ ಕಾಲಿಗೆರಗಿ ಆತನಿಂದ ಬೀಳ್ಗೊಳ್ಳುತ್ತಾಳೆ.
ಸಂತೋಷದಿಂದ ಅರಮನೆಗೆ ಮರಳಿದ ಸಾವಿತ್ರಿಯು ನೇರವಾಗಿ ತಂದೆಯ ಬಳಿಗೆ ತೆರಳುತ್ತಾಳೆ. ತಂದೆಗೆ ನಮಸ್ಕರಿಸಿ, ಅವನಿಗೆ ಸತ್ಯವಾನನ ವಿಷಯವನ್ನೆಲ್ಲಾ ತಿಳಿಸಿ, ತನ್ನನ್ನು ಅವನಿಗೆ ಕೊಟ್ಟು ಮದುವೆ ಮಾಡಿಸುವಂತೆ ಕೇಳಿಕೊಳ್ಳುತ್ತಾಳೆ. "ರಾಜ್ಯಭ್ರಷ್ಟರಾಗಿರಲಿ, ಕಡುಬಡವರೇ ಆಗಿರಲಿ, ಕಾಡಾಡಿಗಳೇ ಆಗಿರಲಿ ಅವರು ನಮ್ಮಂತೆಯೇ ಕ್ಷತ್ರಿಯರು. ಧರ್ಮಾತ್ಮರು. ಕತ್ತಲೆ ಕಳೆದ ನಂತರ ಬೆಳಕು ಬರುವ ಹಾಗೆ ಧರ್ಮಿಷ್ಠರಾದವರ ಬಾಳಲ್ಲಿ ಕಷ್ಟಗಳು ಕಳೆದ ನಂತರ ಸುಖವು ಬಂದೇ ಬರುತ್ತದೆ. ನನ್ನ ಮಗಳ ಕಾಲ್ಗುಣದಿಂದಾಗಿ ಅವಳು ಕಾಲಿಟ್ಟ ದಿನದಿಂದಲೇ ದ್ಯುಮತ್ಸೇನನ ಸಂಸಾರದಲ್ಲಿ ಒಳ್ಳೆಯ ದಿನಗಳು ಬಂದಾವು. ಪುತ್ರನಿಲ್ಲದ ನನಗೆ ಅಳಿಯನೇ ಪುತ್ರ ಸಮಾನನು, ಮುಂದೆ ಅವನಿಗೇ ಈ ರಾಜ್ಯದ ಪಟ್ಟವನ್ನು ಕಟ್ಟುತ್ತೇನೆ. ಏನೇ ಆಗಲಿ ನನ್ನ ಮಗಳಿಗೆ ಅನುರೂಪನಾದ ವರನೊಬ್ಬ ದೊರೆತನಲ್ಲ, ಅದೇ ನನಗೆ ಸಂತೋಷ" ಎಂದು ಅರಸನು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಅಲ್ಲಿಗೆ ಸುರಮುನಿ ನಾರದರು ಆಗಮಿಸುತ್ತಾರೆ.
ತಂದೆ ಮಗಳು ಇಬ್ಬರೂ ಸೇರಿ ನಾರದರನ್ನು ಸತ್ಕರಿಸಿ ಕುಳ್ಳಿರಿಸುತ್ತಾರೆ. ನಾರದರಿಗೆ ತನ್ನ ಮಗಳು ಆರಿಸಿದ ವರನ ವಿಷಯವನ್ನು ತಿಳಿಸುತ್ತಾನೆ. ಪರಮ ಜ್ಞಾನಿಗಳಾದ ನಾರದರು ಕ್ಷಣ ಹೊತ್ತು ಯೋಚಿಸಿ ಬಳಿಕ ಅಶ್ವಪತಿಯನ್ನು ಕುರಿತು ''ಅರಸಾ, ನಿನ್ನ ಮಗಳ ಆಯ್ಕೆ ಸರಿಯಾಗಿಯೇ ಇದೆ. ಆ ಸತ್ಯವಾನನಿಗೆ ಚಿಕ್ಕಂದಿನಿಂದಲೂ ಕುದುರೆಗಳನ್ನು ಕಂಡರೆ ಬಹಳ ಇಷ್ಟ. ಯಾವಾಗಲೂ ಕುದುರೆಗಳ ಚಿತ್ರಗಳನ್ನು ಬರೆಯುತ್ತಾ ಇದ್ದುದರಿಂದ ಅವನಿಗೆ 'ಚಿತ್ರಾಶ್ವ'ನೆಂದು ಹೆಸರಿಟ್ಟರು. ಆದರೆ, ಅವನು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದುದರಿಂದ ಅವನಿಗೆ 'ಸತ್ಯವಾನ' ಎಂಬ ಹೆಸರು ಅನ್ವರ್ಥವಾಗಿ ಬಂತು. ಆತ ಸೂರ್ಯನ ಹಾಗೆ ತೇಜಸ್ಸುಳ್ಳವನೂ, ಬುದ್ಧಿವಂತನೂ, ಶೂರನೂ, ರೂಪವಂತನೂ, ಉದಾರಿಯೂ, ಸ್ನೇಹಪರನೂ, ಅಸೂಯೆ ಇಲ್ಲದವನೂ ಆಗಿದ್ದಾನೆ. ಅವನಲ್ಲಿ ಯಾವ ವಿಧವಾದ ದೋಷವೂ ಇಲ್ಲ. ಅವನು ಗುಣಗಳ ಗಣಿ. ಆದರೆ ವಿಧಿ ಅವನಿಗೆ ಮುನಿದಿದೆ. ಅವನು ಅಲ್ಪಾಯು, ಮದುವೆಯಾದ ದಿನದಿಂದ ಸರಿಯಾಗಿ ಒಂದು ವರ್ಷಕ್ಕೆ ಅವನ ಆಯುಸ್ಸು ಮುಗಿಯುತ್ತದೆ. ಈ ವಿಷಯ ಅವನಿಗಾಗಲೀ ಅವನ ತಾಯ್ತಂದೆಯರಿಗಾಗಲೀ ತಿಳಿದಿಲ್ಲ. ಸಾವಿತ್ರಿಯೂ ಕೂಡಾ ಈ ವಿಷಯವನ್ನು ತಿಳಿಯದೇ ಅವನನ್ನು ಆರಿಸಿಬಿಟ್ಟಿದ್ದಾಳೆ" ಎನ್ನುತ್ತಾರೆ.
ಈ ವಿಷಯವನ್ನು ಕೇಳಿದ ಅಶ್ವಪತಿಗೆ ಬಹಳ ದುಃಖವಾಗುತ್ತದೆ. ಅವನು ಮಗಳನ್ನು ಹತ್ತಿರಕ್ಕೆ ಕರೆದು "ಮಗೂ, ನಿನ್ನ ಆಯ್ಕೆಯೇನೋ ಉತ್ತಮವಾಗಿಯೇ ಇದೆ. ಆದರೆ, ಅವನು ಅಲ್ಪಾಯು ಎಂದು ತಿಳಿದೂ ಕೂಡಾ ಅವನಿಗೆ ನಿನ್ನನ್ನು ಹೇಗೆ ಧಾರೆಯೆರೆಯಲಿ ? ಆದ್ದರಿಂದ ಬೇರೊಬ್ಬನನ್ನು ಹುಡುಕೋಣ" ಎನ್ನುತ್ತಾನೆ. ನಾರದರೂ ಕೂಡಾ ಅದೇ ಮಾತನ್ನು ಹೇಳುತ್ತಾರೆ. ಆದರೆ ಸಾವಿತ್ರಿಯು "ಅಪ್ಪಾ, ಆಸ್ತಿಯನ್ನು ಒಂದೇ ಬಾರಿ ವಿಂಗಡಿಸುತ್ತಾರೆ, ದಾನವನ್ನು ಒಂದೇ ಬಾರಿ ನೀಡಲಾಗುತ್ತದೆ, ಹಾಗೆಯೇ ಕನ್ಯಾದಾನವನ್ನೂ ಕೂಡಾ ಒಂದೇ ಬಾರಿ ಮಾಡಲಾಗುತ್ತದೆ. ಈ ಮೂರನ್ನೂ ಇನ್ನೊಮ್ಮೆ ಪುನರ್ವಿಮರ್ಶೆಗೆ ಒಳಪಡಿಸುವುದಿಲ್ಲವಲ್ಲ. ಅದೇರೀತಿ, ನಾನು ಅವನನ್ನು ನನ್ನ ಪತಿಯನ್ನಾಗಿ ವರಿಸಿ ಆಗಿದೆ. ಇನ್ನು ಎರಡನೇ ಬಾರಿ ಇನ್ನೊಬ್ಬನನ್ನು ನಾನು ವರಿಸುವುದು ಸರಿಯಲ್ಲ. ದೀರ್ಘಾಯುವಿರಲಿ ಅಥವಾ ಅಲ್ಪಾಯುವಿರಲಿ, ಸುಗುಣನಿರಲಿ ಅಥವಾ ನಿರ್ಗುಣನಿರಲಿ, ನಾನು ಮನಸ್ಸಿನಲ್ಲಿ ನಿರ್ಧಾರಮಾಡಿ ಆಗಿದೆ ಅಪ್ಪಾ, ನಾನು ಅವಿಧೇಯಳು ಎಂದು ಭಾವಿಸಬೇಡ. ನನ್ನನ್ನು ಅವನಿಗೇ ಕೊಟ್ಟು ಮದುವೆ ಮಾಡಪ್ಪಾ" ಎನ್ನುತ್ತಾಳೆ.
ಆಗ ಅಶ್ವಪತಿಯು "ನಾರದರೇ, ನೀವಾದರೂ ಅವಳಿಗೆ ಸ್ವಲ್ಪ ಬುದ್ಧಿ ಹೇಳಿ" ಎನ್ನುತ್ತಾನೆ. ಅದಕ್ಕೆ ನಾರದರು "ರಾಜಾ, ನಿನ್ನ ಮಗಳ ಸಂಕಲ್ಪ ದೃಢವಾಗಿದೆ. ಧರ್ಮದಲ್ಲಿ ನೆಲೆಗೊಂಡಿರುವ ಇವಳ ಮನಸ್ಸನ್ನು ಯಾರಿಗೂ ಬದಲಿಸಲು ಸಾಧ್ಯ ಇಲ್ಲ. ಸತ್ಯವಾನನಂತೆ ಸದ್ಗುಗುಣಗಳನ್ನು ಪಡೆದ ಪುರುಷರು ಬೇರೆ ಸಿಗಲಿಕ್ಕಿಲ್ಲ. ಆದ್ದರಿಂದ ನಿನ್ನ ಮಗಳನ್ನು ಅವನಿಗೇ ಕೊಡು. ಎಲ್ಲವೂ ಮಂಗಳವಾಗುತ್ತದೆ" ಎನ್ನುತ್ತಾನೆ. ಅಲ್ಲದೇ ಸಾವಿತ್ರಿಯನ್ನು ಬಳಿಗೆ ಕರೆದು "ಮಗಳೇ, ನೀನು ವಟ ಸಾವಿತ್ರೀ ವ್ರತವನ್ನು ಕೈಗೊಂಡು, ಪ್ರತಿ ನಿತ್ಯವೂ ಆ ಸಾವಿತ್ರೀದೇವಿಯನ್ನು ಬಿಡದೇ ಅರ್ಚಿಸುತ್ತಾ ಇರು, ಅವಳಲ್ಲಿ ನಿನ್ನ ಗಂಡನ ಪ್ರಾಣವನ್ನು ಉಳಿಸಿ ಅವನ ಆಯುಸ್ಸನ್ನು ವೃದ್ಧಿಸುವಂತೆ ಪ್ರಾರ್ಥಿಸು, ಆಗ ನಿನ್ನ ಪತಿವ್ರತಾ ಧರ್ಮವೇ ಅವನನ್ನು ರಕ್ಷಿಸುತ್ತದೆ, ನಿನಗೆ ಮಂಗಳವಾಗಲಿ" ಎಂದು ಹೇಳಿ ನಾರದರು ತೆರಳುತ್ತಾರೆ.
ನಾರದರ ಶುಭ ಹಾರೈಕೆಯಿಂದಾಗಿ ಅಶ್ವಪತಿಗೆ ಧೈರ್ಯ ಬರುತ್ತದೆ. ಒಂದು ಶುಭದಿನದಲ್ಲಿ ಮಿತಪರಿವಾರದೊಡನೆ ಅಶ್ವಪತಿಯು ದ್ಯುಮತ್ಸೇನನ ಆಶ್ರಮಕ್ಕೆ ಪ್ರಯಾಣ ಮಾಡುತ್ತಾನೆ. ಕುರುಡ ನೃಪನೊಡನೆ ಉಭಯಕುಶಲೋಪರಿ ಮಾತುಗಳಾದ ಬಳಿಕ ಮಗಳನ್ನು ಕರೆದು "ಈಕೆ ನನ್ನ ಮಗಳು ಸಾವಿತ್ರಿ. ಇವಳನ್ನು ನಿಮ್ಮ ಸೊಸೆಯನ್ನಾಗಿ ಮಾಡಿಕೊಳ್ಳಬೇಕು" ಎಂದು ಪ್ರಾರ್ಥಿಸುತ್ತಾನೆ. ಅದಕ್ಕೆ ದ್ಯುಮತ್ಸೇನನು "ಮಹಾರಾಜ, ನಾವು ರಾಜ್ಯವನ್ನು ಕಳೆದುಕೊಂಡು ಕಾಡಿನಲ್ಲಿರುವವರು. ರಾಜಕುಮಾರಿಯಾದ ಈ ಸಾವಿತ್ರಿಯು ಈ ಕಷ್ಟವನ್ನು ಹೇಗೆ ಸಹಿಸಬಲ್ಲಳು ? ಅವಳು ಕಾಡಿನಲ್ಲಿರಬಲ್ಲಳೆ ? ಕಂದ ಮೂಲಗಳನ್ನು ತಿಂದು ಜೀವಿಸಬಲ್ಲಳೆ ?" ಎಂದು ಕೇಳುತ್ತಾನೆ. ಅದಕ್ಕೆ ಅಶ್ವಪತಿಯು "ನಿಮ್ಮೆಲ್ಲರ ಪ್ರೀತಿಯಲ್ಲಿ ಅವಳು ಎಂತಹ ಕಷ್ಟಗಳನ್ನು ಬೇಕಾದರೂ ಮರೆಯಬಲ್ಲಳು. ನನ್ನ ಮಗಳು ನಿಮಗೆ ಕೀರ್ತಿಯನ್ನು ತರುತ್ತಾಳೆಂಬ ನಂಬಿಕೆ ನನಗಿದೆ, ನನ್ನ ಕೋರಿಕೆಯನ್ನು ಮನ್ನಿಸಿ, ಇವಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಬೇಕು" ಎನ್ನುತ್ತಾನೆ. ಆಗ ದ್ಯುಮತ್ಸೇನನು "ಆಗಲಿ, ನನಗೆ ಮೊದಲೇ ಈ ಸಂಬಂಧ ಇಷ್ಟ ಇದ್ದಿತ್ತು. ಆದರೆ, ರಾಜ್ಯವನ್ನು ಕಳೆದುಕೊಂಡ ನಂತರ ನಾವು ಕಾಡಿನಲ್ಲಿರುವಾಗ ಕೇಳುವುದಾದರೂ ಹೇಗೆ ಎಂದು ಸುಮ್ಮನಾದೆ. ಈಗ ನನಗೆ ಬಹಳ ಸಂತೋಷವಾಗಿದೆ. ನಡೆಯಲಿ ಮಂಗಳ ಕಾರ್ಯ" ಎನ್ನುತ್ತಾನೆ.
ಸತ್ಯವಾನ-ಸಾವಿತ್ರಿಯರ ಮದುವೆಯು ವನದಲ್ಲಿ ಸರಳವಾಗಿ ನೆರವೇರುತ್ತದೆ. ತಾನು ಮೆಚ್ಚಿದ ಗಂಡ ತನಗೆ ದೊರೆತನಲ್ಲ ಎಂದು ಸಾವಿತ್ರಿಗೆ ಸಂತೋಷವಾದರೆ, ಸಾವಿತ್ರಿಯಂತಹ ರೂಪವತಿಯೂ ಗುಣವತಿಯೂ ಆದ ಹೆಂಡತಿ ತನಗೆ ಸಿಕ್ಕಳಲ್ಲ ಎಂದು ಸತ್ಯವಾನನಿಗೆ ಸಂತೋಷವಾಗುತ್ತದೆ. ಪ್ರೇಮದ ಪುತ್ರಿ ಸಾವಿತ್ರಿಯನ್ನು ವನದ ಆಶ್ರಮದಲ್ಲಿ ಬಿಟ್ಟು ಹೋಗುವುದು ಅಶ್ವಪತಿ ಹಾಗೂ ಮಾಲವೀ ದಂಪತಿಗಳಿಗೆ ಕಷ್ಟವಾಗುತ್ತದೆ. ಆದರೂ ಅನಿವಾರ್ಯವಾದ್ದರಿಂದ ಭಾರವಾದ ಹೃದಯದಿಂದ ಮಗಳನ್ನು ಒಪ್ಪಿಸಿಕೊಟ್ಟು ತಮ್ಮ ರಾಜ್ಯಕ್ಕೆ ಹಿಂದಿರುಗುತ್ತಾರೆ. (ಸಶೇಷ)
ಲೇಖನ: ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ