ಯಕ್ಷ ಮೆಲುಕು | ನಾಟ್ಯ ವೈಭವ, ಗಾನ ವೈಭವ: ಹೊಸದೇನಲ್ಲ, 60ರ ದಶಕದಲ್ಲೂ ಇತ್ತು!

(ಪ್ರಾತಿನಿಧಿಕ ಚಿತ್ರ.)
ಯಕ್ಷ ಮೆಲುಕು-02:
ಹಿರಿಯ ಯಕ್ಷಗಾನ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಹಂಚಿಕೊಂಡ ಈ ಮಾಹಿತಿಯು ಆ ಕಾಲದ ಯಕ್ಷಗಾನದ ಮೇಲೂ ಬೆಳಕು ಚೆಲ್ಲುತ್ತದೆ.
ಅದು ಅರುವತ್ತರ ದಶಕದಾರಂಭ. ಆಗಷ್ಟೇ ನಾನು ಯಕ್ಷಗಾನಕ್ಕೆ ಪ್ರವೇಶಿಸಿದ ದಿನಗಳು. ಆಗ ಕಲ್ಲಾಡಿ ಕೊರಗ ಶೆಟ್ರ ನೇತೃತ್ವದಲ್ಲಿ ಇರಾ ಸೋಮನಾಥೇಶ್ವರ ದೇವಸ್ಥಾನದಿಂದ ನಡೆಯುತ್ತಿದ್ದ ಕುಂಡಾವು ಮೇಳ. ಅದು ಟೆಂಟ್ ಮೇಳವಾಗಿದ್ದು, ಯಕ್ಷಗಾನದ ವಾಣಿಜ್ಯೀಕರಣವೂ ಒಂದು ಹಂತದಲ್ಲಿತ್ತು.

ಗಾನ ವೈಭವ, ನಾಟ್ಯ ವೈಭವ ಮುಂತಾದವುಗಳಿಂದಾಗಿ ಯಕ್ಷಗಾನಕ್ಕೆ ಹೊಡೆತ ಬೀಳುತ್ತಿದೆ, ಸಂಪ್ರದಾಯ, ಪರಂಪರೆಗೆ ಧಕ್ಕೆ ಆಗಿದೆ ಅಂತೆಲ್ಲ ಈಗ ಒಂದು ಮೂಲೆಯಿಂದ ಕೂಗೇನೋ ಕೇಳಿಬರುತ್ತಿದೆ. ಆದರೆ ಆ ದಿನಗಳ ನೆನಪಿನ್ನೂ ಹಸಿರಾಗಿದೆ. ಪೂರ್ವರಂಗದ ಬದಲು ಹಾಡು, ನಾಟ್ಯ ವೈಭವವು ಅಂದು ಕೂಡ ನಡೆಯುತ್ತಿತ್ತೆಂಬುದು ಎಷ್ಟು ಮಂದಿಗೆ ಗೊತ್ತು? ಹೌದು. ನಾನು ಹೇಳಹೊರಟಿರುವುದು ನನ್ನದೇ ನೆನಪುಗಳನ್ನು.

ಹೇಗೂ ಟೆಂಟ್ ಮೇಳ. ದುಡ್ಡು ಕೊಟ್ಟು ಜನ ಬರುವಂತೆ ಮಾಡಬೇಕಿದ್ದರೆ ಎಲ್ಲ ರೀತಿಯ ಕಸರತ್ತು ಕೂಡ ಮಾಡಬೇಕಿತ್ತು ಎಂಬುದು ನನಗೆ ಆಗಷ್ಟೇ ಅರಿವಿಗೆ ಬಂದಿದ್ದ ವಿಚಾರ. ನನ್ನ ನೆನಪಿನ ಪ್ರಕಾರ, ಕುಡಾಣ ಗೋಪಾಲಕೃಷ್ಣ ಭಟ್, ಅರಾಟೆ ಮಂಜುನಾಥ, ಗೋವಿಂದ ಭಟ್, ಕೊಕ್ಕಡ ಈಶ್ವರ ಭಟ್ ಮುಂತಾದವರಿದ್ದ ಗಜ ಮೇಳವದು.

ಕೆಲವರು ನಂಬಲಾಗದ ಸತ್ಯವಿದು. ಅಲ್ಲಿ ಪೂರ್ವರಂಗ ಇರಲಿಲ್ಲ. ಚುಮು ಚುಮು ಚಳಿಯಿಂದ ರಕ್ಷಣೆ ಕೊಡುವ ಬೆಚ್ಚನೆಯ ಟೆಂಟ್ ಒಳಗೆ ಹಾಡು ಹಾಗೂ ನೃತ್ಯ ವೈಭವದಿಂದಲೇ ಯಕ್ಷಗಾನ ಪ್ರಸಂಗಕ್ಕೆ ಪ್ರೇಕ್ಷಕರನ್ನು ಸೆಳೆಯಲು ಅಡಿಪಾಯ ಹಾಕಲಾಗುತ್ತಿತ್ತು. ಪೂರ್ವರಂಗದ ಕೋಡಂಗಿಯಾಗಲೀ, ಬಾಲಗೋಪಾಲರಾಗಲೀ, ಮುಖ್ಯ ಸ್ತ್ರೀವೇಷವಾಗಲೀ ಇರಲಿಲ್ಲ. ಬದಲಾಗಿ ಅಲ್ಲಿ ರಂಗು ರಂಗಿನ ರಂಗ ವೇದಿಕೆಯಲ್ಲಿ ಇದ್ದದ್ದು ಸಂಗೀತವೂ, ಡ್ಯಾನ್ಸ್ ಕೂಟವೂ!

ಹೌದು. ಆರಂಭದಲ್ಲಿ, ನಿತ್ಯಾನಂದ ಬೋಳಾರ್ಕರ್ ಎಂಬವರಿಂದ ಉತ್ತರಾದಿ ವಯಲಿನ್. ಅದಕ್ಕೆ ನನ್ನ ಮೃದಂಗದ ಗುರುಗಳಾದ ಕಾಂಚನ ಕೆ.ವಿ.ಮೂರ್ತಿ ಅವರ ಮೃದಂಗ ವಾದನ. ಸುಮಾರು ಅರ್ಧ ಗಂಟೆ ಈ ಮನರಂಜನೆಯಾದ ಬಳಿಕ, ಅದೇ ವೇದಿಕೆಯಲ್ಲಿ ಸ್ತ್ರೀಯರಿಬ್ಬರ ನರ್ತನ. ಅದರ ಹಿಮ್ಮೇಳಕ್ಕೆ ಮದ್ದಳೆಯನ್ನೇ ಹೋಲುವ, ಅತ್ತ ಡೋಲ್ಕಿಯೂ ಅಲ್ಲದ, ಬಲಭಾಗದಲ್ಲಿ ಕರ್ಣ (ಶಾಯಿ) ಇಲ್ಲದ ವಾದ್ಯ. ಯಕ್ಷಗಾನದ ಮದ್ದಳೆಯನ್ನು ಉದ್ದಕ್ಕಿಟ್ಟು (ಬಲವು ಮೇಲಿರುವಂತೆ) ಸ್ವರ ಸೇರಿಸುವುದು.

ವಯಲಿನ್‌ನಲ್ಲೇ ಹಾಡುಗಳ ನುಡಿಸುವಿಕೆಗೆ ಈ ಹೆಣ್ಮಕ್ಕಳು ಕುಣಿಯುತ್ತಿದ್ದರು. ಜನರ ಚಪ್ಪಾಳೆ, ಹರ್ಷೋದ್ಗಾರ. ಮೊದಲ ವರ್ಷ ಕಾಂಚನ ಮೂರ್ತಿಗಳು ಮೃದಂಗ ನುಡಿಸಿದರೆ, ಎರಡನೇ ವರ್ಷ ನಾನು ಆ ಮೇಳಕ್ಕೆ ಕಾಲಿಟ್ಟಾಗ, ಈ ವಾದನದ ಹೊಣೆ ನನ್ನ ಹೆಗಲಿಗೆ. ಆಗ ನಾನು ಅರ್ಧ ಮದ್ದಳೆಗಾರ. ಹೀಗಾಗಿ ಕಲಿಯುವ ಹುಮ್ಮಸ್ಸಿನಿಂದ, ಮೃದಂಗದ ನಡೆಗಳನ್ನು ಬಾರಿಸುತ್ತಲೇ, ವಯಲಿನ್‌ಗೂ ಸಾಥ್ ನೀಡಿದೆ, ಈ ಹೆಣ್ಣು ಮಕ್ಕಳನ್ನು ಕುಣಿಸುವ ಹೊಣೆಯೂ ಬಿತ್ತು.

ಕೂಡ್ಲು ಮೇಳವು ಆರಂಭವಾದಾಗ ಕುಂಡಾವು ಮೇಳದ ಕಲಾವಿದರೆಲ್ಲರೂ ಈ ಮೇಳಕ್ಕೆ ಜಿಗಿದರು. ಕುಂಡಾವು ಮೇಳ ನಿಂತಾಗ ನಾನೂ ಕೂಡ್ಲು ಮೇಳ ಸೇರಿಕೊಂಡೆ. ಅಲ್ಲಿಯೂ ಇದೇ 'ಪರಂಪರೆ' ಮುಂದುವರಿಯಿತು. ಅದಕ್ಕೆ ಹೊಸ ಹೊಳಹು ಸಿಕ್ಕಿತ್ತು. ಕಾರಣವೆಂದರೆ, ಮದ್ರಾಸಿನಿಂದ ಗಾಯಕರೊಬ್ಬರನ್ನು ಕರೆಸಲಾಗಿತ್ತು.

ಆತನ ಹೆಸರು ಸೈಗಲ್ ಜೋಸೆಫ್. ಅದ್ಭುತ ಕಂಠ ಅವರದು. ಹಾರ್ಮೋನಿಯಂ ಹಿಡಿದು ಬಾರಿಸುತ್ತಿದ್ದರು. ಹಗಲು ಹೊತ್ತು ಅಡ್ವರ್ಟೈಸ್ (ಆಟದ ಟೆಂಪೋದಲ್ಲಿ ಕಟ್ಟಿದ ಮೈಕಿನಲ್ಲಿ ಆಟದ ಬಗ್ಗೆ ಕೂಗಿ ಹೇಳುವುದು) ಮಾಡುವ ಕೆಲಸ ಅವರದು. ರಾತ್ರಿ ಯಕ್ಷಗಾನ ಆರಂಭಕ್ಕೆ ಮುನ್ನ, ಈತನ ಹಾಡುಗಾರಿಕೆ. ಜನರಂಜನೆಯ ಮಲಯಾಳಂ ಹಾಡುಗಳು, ಹಿಂದಿ-ಕನ್ನಡ ಚಿತ್ರಗೀತೆಗಳು, ಜಾನಪದ ಗೀತೆಗಳನ್ನು ಕೇಳಲೆಂದೇ ಜನರು ಸೇರುತ್ತಿದ್ದದ್ದು ಸತ್ಯ. ಚಪ್ಪಾಳೆಯೋ ಚಪ್ಪಾಳೆ, ಶಿಳ್ಳೆಯೋ ಶಿಳ್ಳೆ. ಈ ಪದ ಹೇಳಿ, ಆ ಪದ ಹೇಳಿ ಅಂತ ಪ್ರೇಕ್ಷಕರ ಕಡೆಯಿಂದ ಚೀಟಿ ಬೇರೆ ಬರುತ್ತಿತ್ತು. ಜಾನಪದ ಹಾಡುಗಳು, ಗೀಗಿ ಪದ ಕೂಡ ಆತನ ಕಂಠದಿಂದ ಹೊರಬಂದು ಅಲ್ಲೊಂದು ಹೊಸ ಲೋಕ ಸೃಷ್ಟಿಯಾಗುತ್ತಿತ್ತು.

ಅವನ ಪದ್ಯ ಕೇಳಲೆಂದೇ ದೂರದಿಂದ ಜನರು ಬಂದು ಟಿಕೆಟ್ ತಗೊಂಡು ಟೆಂಟಿನೊಳಗೆ ಬರುತ್ತಿದ್ದರು. ಇದಕ್ಕೆ ನಾನು ಕೂಡ ಮದ್ದಳೆ, ಮೃದಂಗ ಹಾಗೂ ಡೋಲ್ಕಿಯನ್ನೂ ನುಡಿಸುತ್ತಿದ್ದೆ.

ಮುಂದಿನ ವರ್ಷದಲ್ಲಿ ನಿತ್ಯಾನಂದ ಬೋಳಾರ್ಕಾರ್ ಅವರ ವಯಲಿನ್ ಕಚೇರಿಯಾಗುತ್ತಿತ್ತು. ಜೊತೆಗೆ, ಜಾನಪದೀಯವಾದ ಚೆಲುವಯ್ಯ ಚೆಲುವೋ, ತಾನಿ ತಂದಾನ ಮುಂತಾದ ಕೋಲಾಟದ ಪದಗಳು. ಅದಕ್ಕೆ ನನ್ನ ಮೃದಂಗ.

ಕೊಕ್ಕಡ ಈಶ್ವರ ಭಟ್, ಕುಡಾಣ ಗೋಪಾಲಕೃಷ್ಣ ಭಟ್ ಮುಂತಾದವರು ರಂಗ ಪೂಜಾ ನೃತ್ಯ, ಶಿವತಾಂಡವ ಮುಂತಾದವನ್ನು ಮಾಡುತ್ತಿದ್ದರು. ಕೊನೆಯಲ್ಲಿ ಕೋಲಾಟ. ಪಾಹಿ ಪಾರ್ವತಿ ನಂದನ ಗಣಪತಿ.... ಎಂಬ ಹಾಡು ಈಗಲೂ ನೆನಪಾಗುತ್ತಿದೆ.

ಇದಾದ ಬಳಿಕ ಪ್ರಸಂಗ ಪೀಠಿಕೆಯೇ ಶುರುವಾಗುತ್ತಿತ್ತು.

ಕೂಡ್ಲು, ಕುಂಡಾವು ಹಾಗೂ ಕರ್ನಾಟಕ ಮೇಳಗಳಲ್ಲಿ ಈ ರೀತಿಯ ಪ್ರದರ್ಶನಗಳಿತ್ತೆಂಬುದು ನನ್ನ ನೆನಪು. ನಂತರ, ಈ ಬಗ್ಗೆ ಜನರಿಂದ ಹೆಚ್ಚು ಆಕ್ಷೇಪ ಬಂತು. ಇದು ಯಕ್ಷಗಾನಕ್ಕೆ ಅಪಚಾರವಾಗುತ್ತದೆ. ಆರಾಧನಾ ಕಲೆಯಾಗಿರುವ ಯಕ್ಷಗಾನದಲ್ಲಿ ಹೀಗೆ ಮಾಡಿದರೆ ದೋಷವೂ ಬರಬಹುದು ಎಂಬ ಆತಂಕವೂ ಎದುರಾಯಿತು. ಈ ಹಿನ್ನೆಲೆಯಲ್ಲಿ ಬಳಿಕ ಎಲ್ಲ ಮೇಳಗಳಲ್ಲಿಯೂ ಪೂರ್ವರಂಗವನ್ನೇ ಮರಳಿ ಆರಂಭ ಮಾಡಲಾಯಿತು.

ಆದರೆ, ಗಮನಿಸಬೇಕಾಗಿರುವುದೆಂದರೆ, 60ರ ದಶಕದಲ್ಲಿದ್ದ ಈ ರೀತಿಯ ನಾಟ್ಯವೈಭವ- ಗಾನ ವೈಭವಗಳೆಂದಿಗೂ ಯಕ್ಷಗಾನದೊಳಗೆ ನುಸುಳಿರಲಿಲ್ಲ. ಪೂರ್ವರಂಗದ ಬದಲಾಗಿ, ಪ್ರಸಂಗ ಆರಂಭವಾಗುವ ಮುನ್ನ ಇವೆಲ್ಲ ನಡೆದು ಮುಗಿಯುತ್ತಿತ್ತು. ಯಕ್ಷಗಾನವಂತೂ ಯಕ್ಷಗಾನೀಯವಾಗಿಯೇ ಇರುತ್ತಿತ್ತು.

ಈಗ ಕಾಲ ಬದಲಾಗಿದೆ. ಯಕ್ಷಗಾನದೊಳಗೆಯೇ ನಾಟ್ಯ ವೈಭವ, ಗಾನ ವೈಭವ ನುಸುಳಿಬಿಟ್ಟಿದೆ.

2 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. ಏನೇ ಆದರೂ ಎಲ್ಲಾ‌ ಯಕ್ಷಗಾನದ ಹೊರಗೇ ನಡೆಯುತ್ತಿತ್ತು , ಆದರೆ ಈಗ ಮೆಲ್ಲ‌ ಮೆಲ್ಲನೆ ಒಳಕ್ಕೇ ಸುಳಿಯುತ್ತಿದೆ‌ ಅದು ಬೇಜಾರದ ಅಂಗತಿ

    ಪ್ರತ್ಯುತ್ತರಅಳಿಸಿ
  2. ಹೌದು ಲ.ನಾ.ಭಟ್, ಈಗಂತೂ ಕೋವಿಡ್ ಕಾಲದಲ್ಲಿ ಒಳಗೂ ಇಲ್ಲದಂತಾಗಿದೆ.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು