![]() |
ದೂರದಿಂದ ಕಾಣುವ ಯಕ್ಷಗಾನದ ರಂಗಸ್ಛಳ, ಟೆಂಟ್, ಚೌಕಿ |
ಯಕ್ಷಗಾನ ತಿರುಗಾಟದ ಸಂದರ್ಭದ ಮೆಲುಕು ಯಕ್ಷಗಾನದ ಹಿರಿಯ ಗುರು ಹರಿನಾರಾಯಣ ಬೈಪಾಡಿತ್ತಾಯರಿಂದ.
ಕೂಡ್ಲು ಮೇಳಕ್ಕೆ ಅರ್ಧ ಮದ್ದಳೆಗಾರನಾಗಿ ನಾನು ಸೇರಿದ್ದ ಕಾಲವದು. ಪಟ್ಲಗುತ್ತು ಮಹಾಬಲ ಶೆಟ್ಟರು ಆಗ ಮೇಳದಲ್ಲಿ ಮದ್ದಳೆಗಿದ್ದರು. ಬಲಿಪರದು (ಕಿರಿಯ ಬಲಿಪ ನಾರಾಯಣ ಭಾಗವತರು) ಭಾಗವತಿಕೆ. ಮಹಾಬಲ ಶೆಟ್ಟರಿಗೆ ಕ್ಯಾಂಪ್ ನಿಗದಿಪಡಿಸುವ ಹೊಣೆ ನೀಡಿದಾಗ ನನಗೆ ಒತ್ತು ಮದ್ದಳೆಗಾರನಾಗಿ ಬಡ್ತಿ ಸಿಕ್ಕಿತು. ಇದು ನೆನೆದರೆ, ಕಲಾವಿದನೊಬ್ಬ ಹಂತ ಹಂತವಾಗಿ ಬಡ್ತಿ ಪಡೆಯುವ ಪ್ರಕ್ರಿಯೆಯೂ ಅಲ್ಲಿ ನೆನಪಾಗುತ್ತದೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ಆ ಕಾಲದಲ್ಲಿ ಹನ್ನೆರಡು ತಿಂಗಳೂ ಟೆಂಟ್ ಹಾಕಿದ ಆಟ ನಡೆಯುತ್ತಿತ್ತು. ಅಲ್ಲೊಂದು ಕೌತುಕದ ಸಂಗತಿ ಇತ್ತು. ಈಗಲೂ ನೆನಪಿದೆ. ವರ್ಷಪೂರ್ತಿ ಆಟವಿದ್ದರೆ, ಅಲ್ಲಿನ ಹೋಟೆಲುಗಳಿಗೆ (ಲಾಡ್ಜ್‌ಗಳಿಗೆ) ವ್ಯಾಪಾರಕ್ಕೆ ಧಕ್ಕೆಯಾಗುತ್ತಿತ್ತಂತೆ! ಇದಕ್ಕಾಗಿ ಈ ಮೇಳದ ಪ್ರದರ್ಶನದ ವಿರುದ್ಧ ಅಂದಿನ ಹೋಟೆಲ್ ಮಾಲೀಕರು ಪೊಲೀಸರಿಗೆ ಕಂಪ್ಲೇಟ್ ಕೂಡ ಕೊಟ್ಟಿದ್ದರು. ಯಾಕೆ ಗೊತ್ತೇ?
ಟಿಕೆಟ್ ಖರೀದಿಸಿ ಆಟ ನೋಡುವುದಿದ್ದರೆ ಅಲ್ಲಿ 1ರಿಂದ 3 ರೂಪಾಯಿವರೆಗೆ ಹಣ ನೀಡಬೇಕಿತ್ತು. ಆ ಕಾಲದಲ್ಲಿ ಇದೇ ದೊಡ್ಡ ಮೊತ್ತವಾಗಿತ್ತು. ಚಳಿಗಾಲದಲ್ಲಿ, ಗಟ್ಟಿಯಾದ ಟೆಂಟ್ ಹಾಕಲಾಗಿದ್ದು, ಮಳೆಯಿಂದಲೂ ರಕ್ಷಣೆಯಿತ್ತು. ಒಳಗೆ ಚಳಿಯ ಅನುಭವವೂ ಇಲ್ಲ. ಬೆಚ್ಚನೆಯ ವಾತಾವರಣ. ಜೊತೆಗೆ ಬೇಕಿದ್ದರೆ ಮನರಂಜನೆ. 1-2-3 ರೂಪಾಯಿಗೆ ಇಷ್ಟೆಲ್ಲ ಸಿಗುವಾಗ, ಹತ್ತಾರು ರೂಪಾಯಿ ಕೊಟ್ಟು ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಯಾರು ಹೋಗುತ್ತಿದ್ದರು? ಈ ಟೆಂಟಿನೊಳಗೇ ಮಲಗಿ, ಬೆಳಿಗ್ಗೆದ್ದು ಹೋಗುತ್ತಿದ್ದರು. ಅವರಿಗೆ ಹಣ ಉಳಿತಾಯವಾದರೆ, ಲಾಡ್ಜ್‌ನವರಿಗೆ ವ್ಯಾಪಾರ ನಷ್ಟ!
ಇದು ಯಕ್ಷಗಾನ ಎಂಬ ನಿಧಿಯು ಅಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಆವರಿಸಿರುವ ಕಥೆಯೂ ಹೌದಲ್ಲವೇ?
Tags:
ಯಕ್ಷ ಮೆಲುಕು