ಕೋವಿಡ್: ಆರ್ಥಿಕ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ಇಲಾಖೆಯಿಂದ ಧನ ಸಹಾಯ ಪಡೆಯುವುದು ಹೇಗೆ?

ಸುಂದರ ಚಿತ್ರ: ಪನೆಯಾಲ ರವಿರಾಜ, ಯಕ್ಷಗಾನ ಕಲಾವಿದ
ಕೋವಿಡ್ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಲಾ 3 ಸಾವಿರ ರೂ.ಗಳ ನೆರವು ನೀಡಲಾಗುತ್ತಿದೆ. ಇದಕ್ಕಾಗಿ ಕಲಾವಿದರು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ತಮ್ಮೂರಿನ ಸೇವಾ ಸಿಂಧು ಕೇಂದ್ರಗಳ ಮೂಲಕವಾಗಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಲಾವಿದರು ತಮ್ಮ ಅರ್ಜಿಗಳನ್ನು ಭರ್ತಿ ಮಾಡಿ ಬಳಿಕ ಆನ್‌ಲೈನ್‌ನಲ್ಲೇ (ಸೇವಾ ಸಿಂಧು ಮೂಲಕ) ಸಲ್ಲಿಸಬೇಕಾಗುತ್ತದೆ.

ಇದಕ್ಕೆ, ಆರ್ಥಿಕ ಸಂಕಷ್ಟದಲ್ಲಿರುವ ವೃತ್ತಿಪರ ಕಲಾವಿದರು ಮಾತ್ರ ಅರ್ಹರು. ತಾವು ಕಲಾ ಸೇವೆ ಸಲ್ಲಿಸುತ್ತಿರುವ ಕನಿಷ್ಠ ಒಂದು ಫೋಟೋ, ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ (ಅದರಲ್ಲಿ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಶಾಖೆ, ಐಎಫ್ಎಸ್‌ಸಿ ಕೋಡ್ ಕಾಣಿಸುವಂತೆ) ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ. ಹಾಗೂ ಮೊಬೈಲ್ ನಂಬರ್ ಬೇಕಾಗುತ್ತದೆ.

ಆದರೆ, ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮ ಇಲ್ಲಿಯೂ ಇರುತ್ತದೆ ಎಂಬುದನ್ನು ಗಮನಿಸಬೇಕು.

ಸಲ್ಲಿಸಬೇಕಾದ ಮಾಹಿತಿ
ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕಲಾಸೇವೆ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ. ಅರ್ಜಿಯ ಜೊತೆಗೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ, ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕಾಗುತ್ತದೆ.

ಎಷ್ಟು ಹಣ ಸಿಗಲಿದೆ?
ಕೋವಿಡ್-19ರ ಎರಡನೇ ಅಲೆ ಬಾಧಿಸುತ್ತಿರುವ ಅವಧಿಯಲ್ಲಿ ಪ್ರತೀ ಅರ್ಹ ಕಲಾವಿದರಿಗೆ ಒಮ್ಮೆ ಮಾತ್ರವೇ ತಲಾ 3 ಸಾವಿರ ರೂ.  ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಮಾನದಂಡ ಏನು?
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರಿಗೆ ಈ ಸೌಕರ್ಯ ಇಲ್ಲ.
* ಯಾವುದೇ ಸರ್ಕಾರಿ/ಅರೆಸರ್ಕಾರಿ ನೌಕರರು ಈ ಸೌಲಭ್ಯ ಪಡೆಯುವಂತಿಲ್ಲ.
* 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಲಾವಿದರು ಇದಕ್ಕೆ ಅರ್ಹರಾಗುವುದಿಲ್ಲ.
* ಕಲೆಯ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುವುದು ಕಡ್ಡಾಯ.

ಆಯ್ಕೆ ಹೇಗೆ
ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳ ಅಧ್ಯಕ್ಷರು ಅಥವಾ ಸದಸ್ಯರನ್ನೊಳಗೊಂಡ ಗರಿಷ್ಠ 5 ಜನರಿರುವ ಸಮಿತಿ ರಚಿಸಬೇಕು. ಅಧ್ಯಕ್ಷ, ಸದಸ್ಯರಿಲ್ಲದಿದ್ದರೆ ಹಿರಿಯ ಕಲಾವಿದರನ್ನು ಸೇರಿಸಿಕೊಳ್ಳಬಹುದು. ನಂತರ ಈ ಸಮಿತಿಯು ಅರ್ಜಿ ಪರಿಶೀಲನೆ ಮಾಡಿ, ಅರ್ಹ ಕಲಾವಿದರ ಪಟ್ಟಿ ತಯಾರಿಸಿ, ಕೇಂದ್ರ ಕಚೇರಿ ಅಥವಾ ಸಂಬಂಧಿತ ಜಂಟಿ ನಿರ್ದೇಶಕರಿಗೆ ಸಲ್ಲಿಸುತ್ತದೆ.

9 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಎರಡು ದಿನದಲ್ಲಿ ಅರ್ಜಿ ಪರಿಶೀಲನೆ ನಡೆಸಿ, ನಿರ್ದೇಶನಾಲಯ ಹಂತದಲ್ಲಿ 4 ದಿನ ಪರಿಶೀಲನೆ ನಡೆಸಿ, ಒಟ್ಟು 15 ದಿನಗಳೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಂತರ ಅರ್ಹರ ಖಾತೆಗೆ ಹಣ ರವಾನೆಯಾಗುತ್ತದೆ.

ಎಚ್ಚರಿಕೆ: ತಪ್ಪು ಮಾಹಿತಿ ನೀಡಿ, ಈ ಯೋಜನೆಯ ದುರ್ಲಾಭ ಪಡೆದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ.

- ಈ ಸಂದೇಶವನ್ನು ಅಗತ್ಯವಿರುವವರಿಗೆ ಶೇರ್ ಮಾಡಿಕೊಳ್ಳಿ, ಕಲಾವಿದರಿಗೆ ನೆರವಾಗುವಲ್ಲಿ ಕೈಜೋಡಿಸಿ.

ಯಕ್ಷಗಾನಂ ಗೆಲ್ಗೆ! ಯಕ್ಷಗಾನಂ ಬಾಳ್ಗೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು