ಯಕ್ಷಗಾನ ಲೋಕ ಕಂಡ ಮಹಾನ್ ಪ್ರತಿಭೆ ಕಾಳಿಂಗ ನಾವಡರು ಗತಿಸಿ ಇಂದಿಗೆ 31 ವರ್ಷ. ಅವರ ಜೊತೆಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ ವೈದ್ಯರೂ, ಯಕ್ಷಗಾನ ಕಲಾ ಪೋಷಕರೂ ಆಗಿರುವ ಡಾ. ಎಚ್.ಎಸ್.ಮೋಹನ್.
ಕಾಳಿಂಗ ನಾವಡರು ಗತಿಸಿ 31 ವರ್ಷಗಳಾದರೂ ಅವರ ನೆನಪು ಸದಾ ಹಸಿರಾಗಿರುತ್ತದೆ. 1985ರಲ್ಲಿ ಸಾಗರದಲ್ಲಿ ನಾನು ಒಂದು ಯಕ್ಷಗಾನ ಸಂಯೋಜನೆ ಮಾಡಿದ್ದೆ. ಕಂಸ ವಧೆ - ಭೀಷ್ಮ ವಿಜಯ ಎರಡು ಪ್ರಸಂಗಗಳು.
ಕಡತೋಕ ಮಂಜುನಾಥ ಭಾಗವತರು ಕಂಸವಧೆಗೂ, ಕಾಳಿಂಗ ನಾವಡರು ಭೀಷ್ಮ ವಿಜಯಕ್ಕೂ ಭಾಗವತರು. ಮಣಿಪಾಲದ ನನ್ನ ಮಿತ್ರರು ಡಾ. ಭಾಸ್ಕರಾನಂದ ಕುಮಾರ್ ಅವರು ಕಂಸನ ಪಾತ್ರ ನಿರ್ವಹಣೆ ಮಾಡಿದ್ದರು. ನಾವಡರು ಚೌಕಿಯಲ್ಲಿ ಕುಳಿತವರು ಕಂಸನ ನಡೆ, ಮಾತು, ಅಭಿನಯ ಎಲ್ಲಾ ಗಮನಿಸುತ್ತಾ ಇದ್ದರು. ಅವರಿಗೆ ಡಾ. ಭಾಸ್ಕರಾನಂದರ ಕಂಸ ಬಹಳ ಇಷ್ಟ ಆಯಿತು.
ಅಲ್ಲಿಯೇ ಇದ್ದ ನನ್ನನ್ನು ಕರೆದು ಕೇಳಿದರು. "ಹ್ವಾಯ್ ಡಾಕ್ಟರೇ, ಈ ಕಂಸ ನಾ ಮಾಡ್ಸೂಕೆ ಆತಿಲ್ಯಾ?" ಅಂದರು. ನಾನು "ಏನು ಮಾರರೆ, ನೀವು ದೊಡ್ಡ ಭಾಗವತರು, ನೀವು ಮಾಡ್ಸುದು ಏನೂ ಕಷ್ಟ ಇಲ್ಲ" ಎಂದೆ. ಹಂಗಾರೆ ಸ್ವಲ್ಪ ಡಾಕ್ಟರಿಗೆ ಹೇಳಿನಿ (ಡಾ. ಭಾಸ್ಕರಾನಂದರಿಗೆ) ಎಂದಾಗ, ಆಯ್ತು ಎಂದೆ. ಡಾ.ಭಾಸ್ಕರಾನಂದರ ಜೊತೆಗೆ ಮಾತನಾಡಿದೆ, ಅವರು ಒಪ್ಪಿದರು. ಮುಂದಿನ 15 ದಿವಸಗಳಲ್ಲಿ ಮಂಗಳೂರಿನ ಪುರಭವನದಲ್ಲಿ ನಾವಡರು ಆಟ ಫಿಕ್ಸ್ ಮಾಡಿಯೇ ಬಿಟ್ಟರು.
ಆ ಮಧ್ಯೆ, ಎರಡು ಬಾರಿ ಮಣಿಪಾಲದ ಡಾ ಭಾಸ್ಕರಾನಂದರ ಮನೆಗೆ ಬಂದು ರಿಹರ್ಸಲ್ ಮಾಡಿಕೊಂಡು ಹೋದರು. (ಡಾ.ಭಾಸ್ಕರರಿಗೆ ಆಗ ರಿಹರ್ಸಲ್ ಬೇಕಾಗುತ್ತಿತ್ತು.) ಯಕ್ಷಗಾನಕ್ಕೆ ನನಗೂ ಬರಲು ಒತ್ತಾಯಿಸಿದ್ದರು ನಾವಡರು ಮತ್ತು ಡಾ. ಭಾಸ್ಕರರು.
ನಾನು ಆ ದಿನ ಸ್ವಲ್ಪ ಮೊದಲು ಹೋಗಿದ್ದೆ. (ಆಗ ನಾನು ಮಣಿಪಾಲದಲ್ಲಿಯೇ ಇದ್ದೆ). ಆ ದಿನ ರಾತ್ರಿ ಬೆಳಗಿನವರಗೆ ಆಟ. ಆರಂಭದಲ್ಲಿ ತೆಂಕಿನ ಶರಸೇತು ನಂತರ ಬಡಗಿನ ಕಂಸ ವಧೆ ಹಾಗೂ ಕನಕಾಂಗಿ ಕಲ್ಯಾಣ - ಹೀಗೆ ಮೂರು ಪ್ರಸಂಗಗಳು.
ನಾನು ಹೋದಾಗ ನಾವಡರು ಚೌಕಿಯಲ್ಲಿ ಬಹಳ ಗಡಿಬಿಡಿಯಲ್ಲಿದ್ದರು. "ಏನು ನಾವಡರೆ, ಭಾರೀ ಗಡಿಬಿಡಿ?" ಅಂತ ಕೇಳಿದೆ. ಅವರು " ಏ ಮಾರರೆ, ಗಂಡಾಂತರ ಆಯಿತ್ತು. ಕಂಸ ವಧೆ ತೊಂದರೆ ಇಲ್ಯೆ, ಈ ಕನಕಾಂಗಿ ಕಲ್ಯಾಣ ನಾನು ಆಡಿಸದೆ 9 ವರ್ಷ ಆಯಿತ್ತು. ಪ್ರಸಂಗದ ಪಟ್ಟಿ ಇಲ್ಯೆ. ಒಬ್ಬ ಭೂಪನತ್ತರ ತರಲು ಹೇಳಿದ್ದೆ, ಅವ ಬರ್ಲೇ ಇಲ್ಲ ಕಾಣಿ, ಈಗ ಎಂತಾ ಮಾಡುದು ಗೊತ್ತಾತಿಲ್ಲ ಮಾರರ" ಅಂದರು.
ಕನಕಾಂಗಿ ಕಲ್ಯಾಣದಲ್ಲಿ ಆ ದಿನ ಚಿಟ್ಟಾಣಿಯವರ ಘಟೋತ್ಗಜ, ಗೋಡೆಯವರ ಬಲರಾಮ, ಯಾಜಿಯವರ ಕೃಷ್ಣ, ಭಾಸ್ಕರ ಜೋಷಿ ಸುಭದ್ರೆ - ಹೀಗೆ ಒಳ್ಳೆಯ ಕಲಾವಿದರುಗಳು ಇದ್ದರು. ನಾವಡರು ಈ ಸಂದರ್ಭದಲ್ಲಿ ಏನು ಮಾಡ್ತಾರೆ ಅಂತ ಅವರ ಜೊತೆಗೇ ಇದ್ದೆ. ಆಗ ಅವರು ಕುಂಜಾಲು ರಾಮಕೃಷ್ಣ ಮತ್ತು ಆರ್ಗೋಡು ಮೋಹನದಾಸ ಶೆಣೈ ಅವರಿಬ್ಬರನ್ನು ಕರೆದು, ಒಂದು ಬಿಳಿ ಕಾಗದ ತೆಗೆದುಕೊಂಡು ಮೂರೂ ಜನರು ನೆನಪು ಮಾಡಿಕೊಳ್ಳುತ್ತಾ ಒಂದು ಕಡೆಯಿಂದ ಪದ್ಯ ಬರೆಯಲು ಆರಂಭಿಸಿದರು. ಸುಮಾರು ಒಂದು 45-50 ನಿಮಿಷಗಳಲ್ಲಿ ಮುಗಿಸಿಯೇ ಬಿಟ್ಟರು!
ನಾನು ಆಟ ನೋಡಲು ಹೋದೆ. ಮೂರೂ ಪ್ರಸಂಗಗಳು ತುಂಬಾ ಚೆನ್ನಾಗಿ ಆದವು. ಮೊದಲ ಪ್ರಸಂಗಕ್ಕೆ ದಿನೇಶ್ ಅಮ್ಮಣ್ಣಾಯರು ಭಾಗವತರು. ಆಟ ಮುಗೀತಿದ್ದ ಹಾಗೆ ನಾನು ಮಂಗಳೂರಿನ ಬಸ್ ಸ್ಟ್ಯಾಂಡ್‌ಗೆ ಬಂದು ಉಡುಪಿ ಬಸ್ ಹತ್ತಿದೆ. ಕುಳಿತುಕೊಳ್ಳಲು ಸೀಟ್ ಸಿಗದೆ ನಿಲ್ಲುವ ಸೀಟ್. (ಬೆಳಗಿನ 6 ಗಂಟೆಗೆ) ಬಸ್ ಇನ್ನೇನು ಹೊರಡಬೇಕು ಅನ್ನುವಾಗ ನಾವಡರೂ ಓಡೋಡಿ ಬಂದು ಬಸ್ ಹತ್ತಿದರು. ಅವರಿಗೆ ಎಲ್ಲಾದರೂ ಸೀಟ್ ಮಾಡಿಕೊಡುವಾ ಅಂತ ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಮೂಲ್ಕಿಯಲ್ಲಿ ಒಂದು ಸೀಟ್ ದೊರಕಿತು. ಅವರಿಗೆ ಕುಳ್ಳಿರಿಸಿದೆ. ನಂತರ ಮಣಿಪಾಲದ ನಮ್ಮ ಮನೆಗೆ ಬಂದು ಬೆಳಗಿನ ಉಪಹಾರ ಸ್ವೀಕರಿಸಿ ತಮ್ಮ ಮನೆಗೆ ತೆರಳಿದರು.
ಒಂದು ವಾರದ ನಂತರ ಉಡುಪಿಯಲ್ಲಿ ಅಕಸ್ಮಾತ್ ಗೋಡೆ ನಾರಾಯಣ ಹೆಗಡೆಯವರು ಭೇಟಿ ಆದರು. ಅವರಲ್ಲಿ ಕೇಳಿದೆ - ಮಂಗಳೂರಿನ ಕನಕಾಂಗಿ ಕಲ್ಯಾಣ ಪ್ರಸಂಗದಲ್ಲಿ ಪದ್ಯಗಳು ಏನಾದರೂ ವ್ಯತ್ಯಾಸ ಆಗಿದ್ದವಾ ಎಂದು ವಿಚಾರಿಸಿದೆ. ಅವರು "ಇಲ್ಲ, ತನಗೆ ಮಾತ್ರ ಅಲ್ಲ, ಯಾವ ಕಲಾವಿದರಿಗೂ ನಾವಡರು ಪ್ರಸಂಗ ಪಟ್ಟಿ ಸಿಗದೆ ಪದ್ಯ ಬರೆದುಕೊಂಡು ಆಟ ಆಡಿಸಿದ್ದು ಅಂತ ಗೊತ್ತಿಲ್ಲ. ಆತ ದೊಡ್ಡ ಭಾಗವತ, ಈ ತರಹದ ಸಂದರ್ಭ ಹೇಗೆ ಸುಧಾರಿಸುವುದು ಎಂದು ಗೊತ್ತಿದೆ" ಅಂದರು. ನಾವಡರಿಗೆ ಮನಸ್ಸಿನಲ್ಲಿಯೇ ದೊಡ್ಡ ಸಲಾಂ ಹಾಕಿದೆ.
ಲೇಖನ: ಡಾ.ಎಚ್.ಎಸ್.ಮೋಹನ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ