ಯಕ್ಷ ಮೆಲುಕು 08: ಸ್ಟಾರ್ ಪಟ್ಟ, ಪೊಲ್ಯರು 'ವಿಮಾನ' ಭಾಗವತರು, ಟೆಂಟ್ ಮೇಳಕ್ಕೆ ಭರ್ಜರಿ ಕಲೆಕ್ಷನ್

ಟೆಂಟ್ ಒಳಗಿನ ನೋಟ
ಯಕ್ಷಗಾನದಲ್ಲಿ ಕಳೆದ ಶತಮಾನದ 70-80ರ ದಶಕ ಸುವರ್ಣ ಯುಗದಂತಿತ್ತು. ಆಗ ವಾಟ್ಸ್ಆ್ಯಪ್, ಫೇಸ್‌ಬುಕ್, ಯೂಟ್ಯೂಬ್ ಇರಲಿಲ್ಲ. ಕಲಾವಿದರು ಸುದೀರ್ಘ ಕಾಲದ ಪರಿಶ್ರಮದಿಂದಲೇ ಸ್ಟಾರ್ ಗಿರಿ ಸಂಪಾದಿಸಬೇಕಿತ್ತು. ಭರ್ಜರಿ ಪ್ರೇಕ್ಷಕರಿಂದಾಗಿ ಟೆಂಟ್ ಬಿಚ್ಚಬೇಕಾಗಿ ಬಂದ ಹಲವು ಘಟನೆಗಳು ಘಟಿಸಿವೆ. ಈ ಕುರಿತು ನೆನಪಿಸಿಕೊಂಡಿದ್ದಾರೆ ಯಕ್ಷಗಾನದ ಹಿರಿಯ ಗುರು ಹರಿನಾರಾಯಣ ಬೈಪಾಡಿತ್ತಾಯರು.
ಈಗೆಲ್ಲಾ ಯಕ್ಷಗಾನ ರಂಗದಲ್ಲಿ ಕೂಡ ಸ್ಟಾರ್ ಪಟ್ಟ ಸಿಗುವುದು ತೀರಾ ಸುಲಭ. ಒಂದೆರಡು ಆಡಿಯೊ ಅಥವಾ ವೀಡಿಯೊ ವೈರಲ್ ಆದರಾಯಿತು. ಆತ/ಆಕೆ ಯಕ್ಷಗಾನದ ಸ್ಟಾರ್ ಅಂತ ಪರಿಗಣಿಸುತ್ತಾರೆ ಮತ್ತು ಅವರ ಅಭಿಮಾನಿ ಬಳಗವೂ ಹುಟ್ಟಿಕೊಳ್ಳುತ್ತದೆ. ಇದು ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮ.

ಆದರೆ, ಹಿಂದೆ ಹಾಗಿರಲಿಲ್ಲವಲ್ಲ... ದಾಮೋದರ ಮಂಡೆಚ್ಚರಾಗಲೀ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಾಗಲೀ, ಕಾಳಿಂಗ ನಾವಡರೇ ಆಗಲಿ - ತಮ್ಮ ಪರಿಶ್ರಮದಿಂದ ಯಕ್ಷಗಾನದಲ್ಲಿ ಸ್ಟಾರ್-ಗಿರಿ ಸಂಪಾದಿಸಿದವರು. ಅದೇ ರೀತಿ, ದಿವಾಣರು, ನೆಡ್ಲೆಯವರು, ಕುದ್ರೆಕೂಡ್ಲು, ಶೇಣಿ, ಗೋವಿಂದ ಭಟ್ಟರು, ಕುಂಬಳೆ, ಇರಾ ಭಾಗವತರು, ಬಲಿಪರು, ದಾಸರಬೈಲು ಚನಿಯ ನಾಯ್ಕ - ಇವರೆಲ್ಲರೂ ಪರಿಶ್ರಮದಿಂದ, ರಾತ್ರಿಯಿಡೀ ನಿದ್ದೆಗೆಟ್ಟು, ಹಗಲು ಕೂಡ ಯಕ್ಷಗಾನದ ಕೆಲಸ ಮಾಡುತ್ತಲೇ ಜೀವ ತೇದು, ಯಕ್ಷಗಾನವೆಂಬ ಕಲೆಯನ್ನು ಈಗಿನ ಶ್ರೀಮಂತ ಸ್ಥಿತಿಗೆ ತಂದು ನಿಲ್ಲಿಸುವಲ್ಲಿ ದೊಡ್ಡ ಕಾಣಿಕೆ ನೀಡಿದ್ದಾರೆ, ಅವರೂ ಸ್ಟಾರ್‌ಗಳಾಗಿಯೇ ಮೆರೆದಿದ್ದಾರೆ.

ಹೀಗೆಯೇ, ಆಗಿನ ಕಾಲದಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಸೆಳೆಯಲು ಸಾಕಷ್ಟು ಕಸರತ್ತು ಕೂಡ ಮಾಡಲಾಗುತ್ತಿತ್ತು ಎಂಬುದನ್ನು ನಾವೆಲ್ಲರೂ ನೋಡಿ, ಓದಿ ತಿಳಿದುಕೊಂಡವರು. ಕಲಾವಿದರ ಬಡತನದಿಂದಾಗಿ ಶಿಕ್ಷಣವನ್ನೂ ಪೂರೈಸಲು ಸಾಧ್ಯವಾಗದೆ, ಈ ರಂಗಕ್ಕೆ ಬಂದ ಬಳಿಕವೇ ಸತತ ಅಧ್ಯಯನ, ಮನನ, ಶ್ರವಣದಿಂದ ಸುಶಿಕ್ಷಿತರಾಗುತ್ತಿದ್ದವರು. ಅಂಥ ಮಹಾನ್ ಆಸರೆ ನೀಡಿದ ಯಕ್ಷಗಾನವೆಂಬ ಕಮನೀಯ ಕಲೆಯ ಮಹತ್ವ ಎಷ್ಟೆಂಬುದಕ್ಕೆ ನಾನೂ ಉದಾಹರಣೆಯೇ. ನಾನೂ ಓದಿದ್ದು ಏಳನೇ ತರಗತಿಯಷ್ಟೇ. ಶಿಕ್ಷಣ ಮುಂದುವರಿಸಲಾಗಿರಲಿಲ್ಲ. ಅದೇ ರೀತಿ, ಬಣ್ಣದ ಮಾಲಿಂಗರು, ಪುತ್ತೂರು ನಾರಾಯಣ ಹೆಗ್ಡೆ, ಬಣ್ಣದ ಕುಟ್ಯಪ್ಪು ಮುಂತಾದ ಹಿರಿಯರು ಕೂಡ, ತೀರಾ ಕಡಿಮೆ ವಿದ್ಯಾಭ್ಯಾಸ ಮಾಡಿದವರು. ಆದರೆ, ಯಕ್ಷಗಾನ ರಂಗದಲ್ಲಿ ಅವರ ಸಾಧನೆ, ಸುಶಿಕ್ಷಿತರಿಗಿಂತಲೂ ಮಿಗಿಲಾದದ್ದೇ.

20ನೇ ಶತಮಾನದ ಉತ್ತರಾರ್ಧದಲ್ಲಿ ಟೆಂಟ್ (ಡೇರೆ) ಮೇಳಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಕೂಡ. ಕೂಡ್ಲು, ಕರ್ನಾಟಕ, ಕದ್ರಿ, ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್ ಮುಂತಾದ ಡೇರೆ ಮೇಳಗಳಲ್ಲಿ ಸ್ಫರ್ಧಾತ್ಮಕ ಮನೋಭಾವವೂ ಇತ್ತು. ಈ ಕಾರಣದಿಂದಾಗಿ, ಅಲ್ಲಲ್ಲಿ ಕೂಡಾಟ, ಜೋಡಾಟ ಏರ್ಪಟ್ಟು ಅದು ಕೂಡ ಒಂದು ರೀತಿಯಲ್ಲಿ ಸ್ಫರ್ಧೆ ಎಂಬ ಭಾವನೆಯನ್ನೇ ಮೂಡಿಸಲಾಗುತ್ತಿತ್ತು. 

ಅಂಥದ್ದೇ ಸಂದರ್ಭದಲ್ಲಿ, 1970ರ ದಶಕದ ಕೊನೆಯಲ್ಲಿ ಪತ್ನಿ ಲೀಲಾಳನ್ನು (ಬೈಪಾಡಿತ್ತಾಯ) ಭಾಗವತಿಕೆಗೆ ಸಿದ್ಧಗೊಳಿಸಿದ ಬಳಿಕ, ಅವಳ ಹಾಡು ಕೇಳಿದವರು ನಿಧಾನವಾಗಿ ಅದರ ಬಗ್ಗೆ ಆಕರ್ಷಿತರಾಗುತ್ತಿದ್ದರು. ಮಹಿಳೆಯೊಬ್ಬಳು ಹಾಡುತ್ತಾಳೆ ಎಂಬುದೇ ಕುತೂಹಲಕ್ಕೆ ಕಾರಣವಾಗಿ, ಸಂದೇಹವಾಗಿ ಪರಿವರ್ತನೆಗೊಂಡು, ನಂತರ ವಾಸ್ತವ ನೋಡಿದ ಬಳಿಕ, ಜನ 'ಭೇಷ್' ಅಂದದ್ದಿದೆ.

ಯಕ್ಷಗಾನ ಭಾಗವತಿಕೆಯ ಮೂಲಕ ಅವಳಿಗರಿವಿಲ್ಲದಂತೆಯೇ ಮಹಿಳಾ ಕ್ರಾಂತಿಯನ್ನೇ ಮಾಡಿಬಿಟ್ಟಿದ್ದಳು. ಒಬ್ಬ ಮಹಿಳೆಯು ಯಕ್ಷಗಾನವನ್ನೇ ನೋಡಬಾರದೆಂಬ ಕಟ್ಟುಪಾಡುಗಳಿದ್ದ ದಿನಗಳಲ್ಲಿ, ಯಕ್ಷಗಾನದಲ್ಲೇ ತೊಡಗಿಕೊಂಡು, ಪ್ರತಿದಿನ ಬೇರೆ ಬೇರೆ ಊರುಗಳಿಗೆ ಹೋಗಿ ರಾತ್ರಿಯಲ್ಲಿ ಹಾಡುವುದೆಂದರೆ?

ಹಲವರ ವಿರೋಧವೂ ಇತ್ತೆನ್ನಿ. ಆದರೆ, ಗಂಡನ ಆಶ್ರಯವಿದ್ದುದರಿಂದಾಗಿ ಆಕೆ ಯಾವುದಕ್ಕೂ ಎದೆಗುಂದಲಿಲ್ಲ. ಆಗ ವಿವಿಧ ಮೇಳಗಳಿಗೆ ಅತಿಥಿ ಕಲಾವಿದೆಯಾಗಿ ಹೋಗುತ್ತಿದ್ದ ಕಾಲವದು. ಬಡಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರು, ತೆಂಕಿನಲ್ಲೂ ಹಾಡಿ, ತಮ್ಮ ಕಂಚಿನ ಕಂಠದ ಮೂಲಕ ಗಮನ ಸೆಳೆಯುತ್ತಿದ್ದರು.

ಅವರಿಗೆ ವಿಮಾನ ಭಾಗವತರು ಎಂದೇ ಹೆಸರಾಗಿತ್ತು ಎಂಬುದು ಈಗಿನವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ, ಅವರ ಭಾಗವತಿಕೆಗೆ ಜನಾಕರ್ಷಣೆಯಿತ್ತು. ಅವರ ಕಂಠವೇ ಅವರಿಗೆ ಸ್ಟಾರ್ ಪಟ್ಟ ಕೊಟ್ಟಿತ್ತು. ಮುಂಬಯಿಯಲ್ಲಿದ್ದ ಅವರನ್ನು ಆಟ ಆಡಿಸುವವರು ವಿಮಾನದಲ್ಲಿ ಕರೆಸುತ್ತಿದ್ದರು! ಹೀಗಾಗಿ, ವಿಮಾನದಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮರಳಿ ವಿಮಾನದಲ್ಲೇ ಬೊಂಬಾಯಿಗೆ ವಾಪಸಾಗುವ ಅವರಿಗೆ ಆ ಹೆಸರು ಬಂದಿತ್ತು.

ಅವರ ಜನಾಕರ್ಷಣೆ ಎಷ್ಟಿತ್ತೆಂದರೆ, ಅವರು ಬಂದರೆ ಟೆಂಟ್ ಹೌಸ್‌ಫುಲ್ ಆಗಿರುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಟೆಂಟ್ ಬಿಚ್ಚಿಸಿ, ಜನರಿಗೆ ಅವಕಾಶ ಮಾಡಿಕೊಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಇಂಥದ್ದೇ ಕಾಲದಲ್ಲಿ ಯಕ್ಷಗಾನ ರಂಗಕ್ಕೆ ಕಾಲಿಟ್ಟಿದ್ದ ಲೀಲಾ ಬೈಪಾಡಿತ್ತಾಯ ಕೂಡ ಇದೇ ರೀತಿಯ ಸ್ಟಾರ್ ಪಟ್ಟವನ್ನು ಅರಿವಿಲ್ಲದಂತೆ ಗಳಿಸಿಕೊಂಡಿದ್ದರು. ಅವರು ಅತಿಥಿ ಭಾಗವತರಾಗಿ ಹೋಗುತ್ತಿದ್ದಲ್ಲಿ ಯಕ್ಷಗಾನ ಹೌಸ್ ಫುಲ್ ಆಗುತ್ತಿದ್ದವು. ಹಗಲು ಹೊತ್ತಿನಲ್ಲಿ ಆಟ ಆಗುವಲ್ಲಿ ಅನೌನ್ಸ್‌ಮೆಂಟ್ ಮಾಡುವಾಗಲೆಲ್ಲಾ, "ವಿಶೇಷ ಆಕರ್ಷಣೆಯಾಗಿ ಲೀಲಾ ಬೈಪಾಡಿತ್ತಾಯರ ಕೋಗಿಲೆ ಕಂಠದ ಹಾಡುಗಾರಿಕೆ ಕೇಳಲು ಮರೆಯದಿರಿ, ಮರೆತು ನಿರಾಶರಾಗದಿರಿ" ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿತ್ತು. ಪತ್ರಿಕೆಯಲ್ಲಿಯೂ, ಕರಪತ್ರಗಳಲ್ಲಿಯೂ ಇವುಗಳ ಪ್ರಚಾರ ಮಾಡಲಾಗುತ್ತಿತ್ತು. ಹಂ, ಆಗೆಲ್ಲಾ ವಾಟ್ಸ್ಆ್ಯಪ್, ಫೇಸ್‌ಬುಕ್ಕುಗಳಿರಲಿಲ್ಲವಲ್ಲ!

ಹೀಗೆ ಪ್ರಚಾರ ಮಾಡಿದ ಆಟಕ್ಕೆ ಫುಲ್ ಕಲೆಕ್ಷನ್ ಆಗುತ್ತಿತ್ತು. ಇನ್ನು ಪೊಲ್ಯರು ಹಾಗೂ ಲೀಲಾ ಕೂಡ ಅತಿಥಿ ಭಾಗವತರಾಗಿ ಬಂದರೆ ಕೇಳಬೇಕೇ? ಆಟ ಆಡಿಸಿದವರಿಗೆ ಭರ್ಜರಿ ಕಲೆಕ್ಷನ್. ಯಕ್ಷಗಾನದ ಸುವರ್ಣಯುಗ ಆಗಿತ್ತದು ಎಂದರೆ ತಪ್ಪಾಗಲಿಕ್ಕಿಲ್ಲ.

ಆ ಕಾಲದ ಮೇಳದ ಧಣಿ (ಯಜಮಾನರು)ಗಳು ಕೂಡ, ವಿಶೇಷ ಆಕರ್ಷಣೆ ಏರ್ಪಡಿಸಿ ಸಾಕಷ್ಟು ಹಣ ಮಾಡುತ್ತಿದ್ದರು. ನನ್ನ ಗಮನಕ್ಕೆ ಬಂದ ವಿಚಾರವೊಂದು ಇಲ್ಲಿದೆ. ಲೀಲಾ ಬೈಪಾಡಿತ್ತಾಯರು ಬರಬೇಕಿದ್ದರೆ 100 ರೂಪಾಯಿ ಹೆಚ್ಚು ಕೊಡಬೇಕು ಅಂತ ಆಟ ಆಡಿಸುವವರಲ್ಲಿ ಯಜಮಾನರು/ಮ್ಯಾನೇಜರ್ ಮೊದಲೇ ಮಾತನಾಡಿರುತ್ತಿದ್ದರು. ಅದರಲ್ಲಿ 50 ರೂಪಾಯಿ ಲೀಲಾಳಿಗೆ ನೀಡಲಾಗುತ್ತಿತ್ತು.

ಇನ್ನು ಕೆಲವರು, ಲೀಲಾರನ್ನು ಕರೆಸಬೇಕಿದ್ದರೆ ವಿಶೇಷ ಕಾರು ಮಾಡಿ ಕರೆಸಬೇಕು ಅಂತೆಲ್ಲ ಹೇಳಿ ಹೆಚ್ಚು ಹಣವನ್ನು ಕೇಳುತ್ತಿದ್ದರು. ಇದು ಮೇಳವನ್ನು ಬೆಳೆಸಲು ಇರುವದಕ್ಕೆ ಇರುವ ಮಾರ್ಗಗಳಲ್ಲೊಂದು. ಆದರೆ, ಲೀಲಾ ವಿಷಯದಲ್ಲಿ, ವಾಸ್ತವವಾಗಿ ಅವಳ ಜೊತೆಯಲ್ಲಿ ನಾನೇ ಇರುತ್ತಿದ್ದೆನಾದ್ದರಿಂದ, ಅವಳನ್ನು ಸಮೀಪದಲ್ಲಾದರೆ ಸೈಕಲ್ಲಿನಲ್ಲಿ, ಸ್ವಲ್ಪ ದೂರವಿದ್ದರೆ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ತುಂಬಾ ದೂರದ ಊರುಗಳಿಗಾದರೆ, ಆಟ ಆಡಿಸುವವರೇ ಕಾರು ಕಳುಹಿಸಿ ಕರೆಸಿಕೊಂಡದ್ದಿದೆ.

ಬಸ್ಸಲ್ಲಿ ಹೋಗುವಾಗ, "ಅಲ ಅಲ... ಲೀಲಾ ಬೈಪಾಡಿತ್ತಾಯೆರ್ ಕುಲ್ಲುದಿನ..." ಅಂತ ಪಿಸು ಮಾತಿನಲ್ಲಿ ಹಿಂದಿನ ಸೀಟಿನವರು ಹೇಳುತ್ತಿದ್ದರು. ಕೆಲವರಂತೂ ನಮಸ್ಕಾರ ಮಾಡುತ್ತಿದ್ದರು. ಹೋದಲ್ಲಿ, ಬಂದಲ್ಲಿ, ಗೌರವ ಭಾವದಿಂದ ಎದ್ದು ದಾರಿ ಮಾಡಿಕೊಡುತ್ತಿದ್ದರು. "ಪದ ಎಡ್ಡೆ ಪಂಡರಮ್ಮಾ, ಕುಸಿಯಾಂಡ್" ಅಂತ ಕೆಲವರು ಧೈರ್ಯ ಮಾಡಿ, ಮಾತನಾಡಿಸುತ್ತಿದ್ದರು. ಈಕೆ 'ಸ್ಟಾರ್' ಎಂಬ ಭಾವದಿಂದ, ಕೆಲವರು ಮಾತನಾಡಿಸಲು ಹಿಂಜರಿದು, ದೂರದಿಂದಲೇ ನೋಡಿ ಸಂಭ್ರಮಿಸುತ್ತಿದ್ದರು.

ಹೀಗೆ, ಆ ಕಾಲದಲ್ಲಿ ಸ್ಟಾರ್-ಗಿರಿ ದೊರೆತಿದ್ದರೂ, ನಮ್ಮನ್ನೂ ಸೇರಿದಂತೆ ಮನೆ ನಡೆಸುವುದೇ ಕಷ್ಟವಿದ್ದ ಯಕ್ಷಗಾನ ಕಲಾವಿದರ ಆರ್ಥಿಕವಾಗಿ ಅಷ್ಟೇನೂ ಅನುಕೂಲ ಆಗಲಿಲ್ಲ ಎಂಬುದು ಕಾಲದ ಸತ್ಯ. ಈಗೆಲ್ಲಾ ಯಕ್ಷಗಾನ ಅಭಿಮಾನಿಗಳೂ ಸ್ಥಿತಿವಂತರಾಗಿರುವುದರಿಂದ, ಸ್ಟಾರ್ ಕಲಾವಿದರ ಸ್ಥಿತಿಯೂ ಅದಕ್ಕೆ ತಕ್ಕಂತೆ ಬೆಳೆದಿರುವುದು ಯಕ್ಷಗಾನದ ಮಟ್ಟಿಗೆ ದೊಡ್ಡ ಅನುಕೂಲವೇ ಸರಿ. (ಯಕ್ಷಗಾನ.ಇನ್)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು