ಯಕ್ಷಗಾನದ ಹಿರಿಯ ಅರ್ಥಧಾರಿ, ನಿವೃತ್ತ ಮುಖ್ಯೋಪಾಧ್ಯಾಯ ಮಂಚಿ ದೂಮಣ್ಣ ರೈ (84) ಮಂಗಳವಾರ (ಆಗಸ್ಟ್ 24) ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ನಿಧನ ಹೊಂದಿದರು.
ಇರಾ ಗ್ರಾಮದ ಕುಕ್ಕಾಜೆಬೈಲು ನಿವಾಸಿಯಾದ ಅವರು ಪತ್ನಿ ದೇವಕಿ ರೈ ಮತ್ತು ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿ, ಸಾಹಿತಿ ಧರಣೀದೇವಿ ಮಾಲಗತ್ತಿ ಸಹಿತ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗಡಿನಾಡ ಕವಿ ಕಯ್ಯಾರ ಕಿಞ್ಞಣ್ಣ ರೈಯವರ ಶಿಷ್ಯರಾಗಿದ್ದ ಅವರು, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಮಂಚಿ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ದೂಮಣ್ಣ ರೈ, ಬಂಟ್ವಾಳ ಪರಿಸರದಲ್ಲಿ ನಡೆಯುತ್ತಿದ್ದ ಹತ್ತಾರು ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ಪ್ರಸಿದ್ಧರಾಗಿದ್ದರು. ವಿವಿಧ ಸಂಘ ಸಂಸ್ಥೆಗಳ ಬೆಳವಣಿಗೆಗೂ ಕಾರಣಕರ್ತರಾಗಿದ್ದ ಅವರು, ಹವ್ಯಾಸಿ ವೇಷಧಾರಿಗಳಾಗಿಯೂ ಗಮನ ಸೆಳೆದಿದ್ದರು.
ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ.
ಇತ್ತೀಚೆಗೆ ನಿಧನರಾಗಿದ್ದ ಕುಕ್ಕಾಜೆ ಚಂದ್ರಶೇಖರ ರಾವ್, ಮೇರಾವು ಮಹಾಬಲ ರೈ ಮತ್ತು ದೂಮಣ್ಣ ರೈ ಯಕ್ಷಗಾನದ ತ್ರಿಮೂರ್ತಿಗಳಂತೆ ಜತೆಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದು ವಿಶೇಷವಾಗಿತ್ತು. ಪ್ರಗತಿಪರ ಕೃಷಿಕರಾಗಿ, ದೈವಾರಾಧನೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೂ ಮನೆತನದ ಯಜಮಾನರಾಗಿ ಅವರು ಖ್ಯಾತರು.
ದೂಮಣ್ಣ ರೈ ಅವರ ನಿಧನಕ್ಕೆ ಇರಾ ಗ್ರಾಮ ಪಂಚಾಯತಿ, ಯಕ್ಷಾಂಗಣ ಮಂಗಳೂರು ಸೇರಿದಂತೆ ವಿವಿಧ ಯಕ್ಷಗಾನ ಸಂಘಗಳು ಮತ್ತು ಯಕ್ಷರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ
Tags:
ಸುದ್ದಿ