ಯಕ್ಷಗಾನದ ಶಕ್ತಿ - ಉಜಿರೆ ಅಶೋಕ ಭಟ್ಟರೆಂಬ ಸವ್ಯಸಾಚಿ

 

ತಾಳಮದ್ದಳೆಯ ಪ್ರಬುದ್ಧ ಅರ್ಥಧಾರಿ, ಯಕ್ಷಗಾನ ಉಭಯ ತಿಟ್ಟಿನ ವೇಷಧಾರಿ, ಸಮರ್ಥ ಸಂಘಟಕ, ಉತ್ತಮ ಪ್ರವಚನಕಾರ, ಭರವಸೆಯ ಭಾಷಣಕಾರ - ಹೀಗೆ ಕಲಾವಿದ ಉಜಿರೆ ಅಶೋಕ ಭಟ್ಟರು ಸವ್ಯಸಾಚಿಯಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಲೇ ಇದ್ದಾರೆ. ಇಂಥ ವ್ಯಕ್ತಿ-ಶಕ್ತಿಯ ಬಗ್ಗೆ ಮಾಹಿತಿಯುಕ್ತ ಲೇಖನವನ್ನು ಕಟ್ಟಿಕೊಟ್ಟಿದ್ದಾರೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ.
ಉಜಿರೆ ಹೆಸರನ್ನು ಯಕ್ಷಗಾನ ಕ್ಷೇತ್ರದಲ್ಲಿ ಮೈಲುಗಲ್ಲಾಗಿಸಿ ಅನುರಣಿಸುವಂತೆ ಮಾಡಿದವರು ಉಜಿರೆ ಅಶೋಕ ಭಟ್ಟರು. ಯಕ್ಷಗಾನ ಕ್ಷೇತ್ರದಲ್ಲಿ ಉಜಿರೆ ಹೆಸರು ಉಜ್ವಲವಾಗಿ ಉದ್ದೀಪನಗೊಂಡದ್ದು ಉಜಿರೆ ಅಶೋಕ ಭಟ್ಟರಿಂದ ಎಂದರೆ ಅತಿಶಯೋಕ್ತಿಯಲ್ಲ. ಅವರನ್ನು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸವ್ಯಸಾಚಿಯೆನ್ನಬಹುದು. ಯಾಕೆ?

ಅಶೋಕ ಭಟ್ಟರಿಗೆ ಎಳವೆಯಲ್ಲಿಯೇ ಯಕ್ಷಗಾನದ ಆಸಕ್ತಿ. ಶಾಲಾ ಕಾಲೇಜು ದಿನಗಳಲ್ಲಿ ವೇಷ ಮಾಡಿದವರು. ಕಾಲೇಜು ದಿನಗಳಲ್ಲಿಯೇ ಯಕ್ಷಗಾನವನ್ನು ಸಂಘಟಿಸಿದವರು. ಶೇಣಿ, ಪೆರ್ಲ, ಮೂಡಂಬೈಲು, ತೆಕ್ಕಟ್ಟೆ, ಸಾಮಗ, ಜೋಶಿ ಹೀಗೆ ಎಳವೆಯಲ್ಲಿಯೇ ಪ್ರಸಿದ್ಧ ಅರ್ಥಧಾರಿಗಳ ಸಂಸರ್ಗ ಅವರನ್ನು ಉತ್ತಮ ತಾಳಮದ್ದಳೆ ಅರ್ಥಧಾರಿಯಾಗಿ ರೂಪಿಸಿತು.

ತಾಳಮದ್ದಳೆ ಕ್ಷೇತ್ರವೇ ಸ್ಪರ್ಧೆಯ ಕಣ. ಮುನ್ನೆಲೆಗೆ ಬರುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಅಶೋಕ ಭಟ್ಟರನ್ನು ಮೂರು ವಿಧದಲ್ಲಿ ನೋಡಬಹುದು. ಆಕ್ರಮಣಕಾರಿ ಅಶೋಕ ಭಟ್ಟರು, ರಂಜಿಸುವ ಅಶೋಕ ಭಟ್ಟರು ಮತ್ತು ಪ್ರಬುದ್ಧ ಅಶೋಕ ಭಟ್ಟರು.

ಪ್ರಾರಂಭಿಕ ದಿನಗಳಲ್ಲಿ ಅಶೋಕ ಭಟ್ಟರು ಆಕ್ರಮಣಕಾರಿ ಹೊಂತಕಾರಿ ಅರ್ಥಗಾರಿಕೆಯಿಂದ ಗುರುತಿಸಿಕೊಂಡರು. ಯಾರೇ ಎದುರು ಅರ್ಥಧಾರಿಯಿರಲಿ, ಆಕ್ರಮಣವೇ ಅವರ ವಿಶಿಷ್ಟತೆಯಾಗಿತ್ತು. ಆ ಕಾಲದಲ್ಲಿ ಅವರನ್ನು 'ಮಹಾಪೆದಂಬ' ಎಂದದ್ದೂ ಇದೆ. ಆದರೆ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಸ್ಥಾಪಿಸಿದರು. ತಾಳಮದ್ದಳೆಗೆ ಅವರೊಬ್ಬ ಅನಿವಾರ್ಯ ಕಲಾವಿದರಾದರು. ಶೇಣಿ-ಸಾಮಗರಂಥವರಿದ್ದ ವೇದಿಕೆಯಲ್ಲಿ ಅವರ ಜೊತೆಯಾಗಿ, ಎದುರಾಗಿ ಅರ್ಥಗಾರಿಕೆಯನ್ನು ಮಾಡಿದರು.

ನಂತರದಲ್ಲಿ ತುಸು ರಂಜನಾತ್ಮಕವಾಗಿ ಅರ್ಥಗಾರಿಕೆಯನ್ನು ಮುಂದುವರಿಸಿದರು. ಗ್ರಾಮ್ಯ ಉದಾಹರಣೆಗಳನ್ನು ಢಾಳಾಗಿ ಉಪಯೋಗಿಸಿದರು. ಜನರಂಜನೆಯನ್ನೂ ಒದಗಿಸಿದರು. ನಂತರದಲ್ಲಿ 50ರ ನಂತರ ಅಶೋಕ ಭಟ್ಟರದ್ದು ಪ್ರಬುದ್ಧ ಅರ್ಥಗಾರಿಕೆ. ನಾಯಕ -ಪ್ರತಿನಾಯಕ ಎರಡೂ ಪಾತ್ರಗಳಲ್ಲಿ ಹೊಸ ಹೊಳಹುಗಳು, ನಿಲುವುಗಳು, ಅದ್ಭುತ ಪಾತ್ರಚಿತ್ರಣ, ಅನ್ಯಾದ್ರಶ ಪಾತ್ರ ಪೋಷಣೆ, ಪಾತ್ರಕ್ಕೆ ತಕ್ಕಂತಹಾ ಮಾತುಗಾರಿಕೆ. ಅನಾವಶ್ಯಕ ತರ್ಕಕ್ಕೆ ನಿಲ್ಲದೆ, ಕಥೆಯ ಓಘಕ್ಕೆ ತಕ್ಕಂತೆ ಪ್ರಸಂಗ ಕೊಂಡೊಯ್ಯುವ ರೀತಿ, ಪದ್ಯಕ್ಕೆ ಎತ್ತುಗಡೆ ಕೊಡುವ ಕ್ರಮ, ಪಾತ್ರದ ಪೀಠಿಕೆಯಿಂದಲೇ ಪಾತ್ರವನ್ನು ಕಟ್ಟುವ ಪರಿ, ಅನೂಹ್ಯವಾದದ್ದು.

ಅಶೋಕ ಭಟ್ಟರಲ್ಲಿ ಶೇಣಿ, ಸಾಮಗ, ತೆಕ್ಕಟ್ಟೆ, ಜೋಶಿ, ವಾಸುದೇವ ಸಾಮಗ ಹೀಗೆ ಎಲ್ಲರ ಪ್ರಭಾವ ಇದೆ. ಆದರೆ ಅನುಕರಣೆ ಇಲ್ಲ. ಸ್ವಂತಿಕೆಯಿದೆ. ತಮ್ಮದೇ ನಡೆಯಿದೆ. ಹೊಸ ಹೊಳಹುಗಳಿವೆ.

ಶೇಣಿಯವರಂತೆ ಆಕ್ರಮಣಕಾರಿಯಾಗಿ ಮಾತಾಡಬಲ್ಲವರು, ತೆಕ್ಕಟ್ಟೆಯವರಂತೆ ಚುರುಕಾದ ಅರ್ಥಗಾರಿಕೆ - ಅದ್ಭುತವಾದ ಪ್ರತ್ಯುತ್ಪನ್ನಮತಿತ್ವ, ವಾಸುದೇವ ಸಾಮಗರಂತೆ ರಂಜನೆಯ ಅರ್ಥಗಾರಿಕೆ, ಮೂಡಂಬೈಲಿನವರಂತೆ ಪುರಾಣ ಜ್ಞಾನ, ಜೋಶಿಯವರಂತೆ ಸಹ ಅರ್ಥಧಾರಿಗಳೊಂದಿಗೆ ಸಂಭಾಷಣೆ ಬೆಳೆಸುವ ಪರಿ... ಇದೆಲ್ಲವನ್ನೂ ಅರಿತವರು. ಹಿಂದೆಯೇ ತಿಳಿಸಿದಂತೆ ಈ ಮೂರು ವಿಧದಲ್ಲಿ ಅಶೋಕ ಭಟ್ಟರನ್ನು ಕಾಣಬಹುದು.

ವರ್ತಮಾನದಲ್ಲಿ ಅಶೋಕ ಭಟ್ಟರ ಅವಸಾನದ ಕರ್ಣ ಅದ್ಭುತ, ಅನೂಹ್ಯ. ಅನ್ಯಾದೃಶ. ಅವರ ನಿರ್ಯಾಣದ ರಾಮ, ವಧೆಯ ಮಾಗಧ, ಸಂಧಾನದ ಕೌರವ ಮತ್ತು ಕೃಷ್ಣ, ಅತಿಕಾಯ, ವಧೆಯ ವಾಲಿ, ಪರ್ವದ ಭೀಷ್ಮ, ಕರ್ಣಾರ್ಜುನದ ಅರ್ಜುನ, ಶಲ್ಯ, ಬಲಿ, ಶುಕ್ರಾಚಾರ್ಯ, ಪೌರುಷದ ಉತ್ತರ, ವೀರಮಣಿ, ಹನುಮಂತ, ಸುಧನ್ವ ಹೀಗೆ ಯಾವುದೇ ಪಾತ್ರವಿರಲಿ - ಅಶೋಕ ಭಟ್ಟರು ಸಮರ್ಥವಾಗಿ ನಿರ್ವಹಿಸಬಲ್ಲರು.

ಅಶೋಕಭಟ್ಟರು ಮಾತಿನ ಮೋಡಿಯಿಂದ ಪ್ರೇಕ್ಷಕರನ್ನು ಸಮ್ಮೋಹನಕ್ಕೊಳಪಡಿಸಬಲ್ಲ ಮೋಡಿಗಾರ. ತನ್ನ ವಿಭಿನ್ನ ದೃಷ್ಟಿಕೋನದ ಪಾತ್ರ ಪ್ರಸ್ತುತಿಯಿಂದ ಎದುರು ಅರ್ಥಧಾರಿಯನ್ನು ತಬ್ಬಿಬ್ಬುಗೊಳಿಸಬಲ್ಲ ತೀಕ್ಷ್ಣಮತಿ. ತನ್ನ ಕ್ಷಿಪ್ರ ಪ್ರತ್ಯುತ್ಪನ್ನಮತಿತ್ವದಿಂದ ಯಾವುದೇ ಪಾತ್ರಕ್ಕೆ ಅನಿರೀಕ್ಷಿತ ತಿರುವುಗಳನ್ನು ಕೊಡಬಲ್ಲ ಚಾಣಾಕ್ಷ. ಯಾವುದೇ ಉಪೇಕ್ಷಿತ ಪಾತ್ರಗಳನ್ನು ತನ್ನ ಮಾತಿನಮೋಡಿಯಿಂದ ಮುನ್ನೆಲೆಗೆ ತರಬಲ್ಲ ಚತುರಮತಿಸಂಪನ್ನ. ಯಾವುದೇ ಪಾತ್ರವನ್ನು ಸಿದ್ಧ ನಡೆಗೆ ಭಿನ್ನವಾಗಿ, ಪಾತ್ರದ ಸ್ಥಾಯೀ ಭಾವಕ್ಕೆ ಧಕ್ಕೆ ಬಾರದಂತೆ ಕಡೆದು ನಿಲ್ಲಿಸಬಲ್ಲ ಪ್ರತಿಭಾವಂತ. ಯುವ ಸಹ ಅರ್ಥಧಾರಿಗಳನ್ನು ಸಂಭಾಷಣೆಗೆ ಸೆಳೆದು ಪ್ರೋತ್ಸಾಹಿಸಬಲ್ಲ ಹೃದಯವಂತ.

ಅಶೋಕ ಭಟ್ಟರಿಗೆ ತಾಳಮದ್ದಳೆ ಪ್ರಸಂಗ ನಡೆಯ ಬಗ್ಗೆ, ಪ್ರಸಂಗ ಪದ್ಯದ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಖಚಿತತೆಯಿದೆ. ಕವಿಯ, ಪ್ರಸಂಗದ ಆಶಯವನ್ನು ಗಮನಿಸಿ ಅರ್ಥಗಾರಿಕೆಯನ್ನು ಮಾಡಬಲ್ಲವರು. ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಿಗಿದೆ. ಅವರ ಅರ್ಥಗಾರಿಕೆ ವಿವರಣೆಗೆ ನಿಲುಕುವಂತಹದ್ದಲ್ಲ - ಚಿಂತನೆಗೆ ಗ್ರಾಸವಾಗುವಂತಹದು. ತಾಳಮದ್ದಳೆ ಮುಗಿದ ಬಳಿಕವೂ ಅವರು ನಿರ್ವಹಿಸಿದ ಪಾತ್ರ ಮನದಲ್ಲಿ ಉಳಿದಿರುತ್ತದೆ, ಅನುರಣಿಸುತ್ತಿರುತ್ತದೆ.

ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಅವರು ಪಾತ್ರವಾಗಿ ತೊಡಗಿಸಿಕೊಳ್ಳುವಿಕೆ (Involvement) ಅನುಸರಣೀಯವಾದದ್ದು. ಅವರ ಸ್ವರದ ಏರಿಳಿತ, ಹಾವಭಾವ, ಆಂಗಿಕ ಅಭಿನಯಗಳಿಂದ ಅವರು ನಿರ್ವಹಿಸಿದ ಪಾತ್ರವು ಪ್ರೇಕ್ಷಕರನ್ನು ಮುಟ್ಟುತ್ತದೆ ಮತ್ತು ತಟ್ಟುತ್ತದೆ. ತಾಳಮದ್ದಳೆಗಳಲ್ಲಿ ಇದು ಅತ್ಯಂತ ಗಮನಿಸಬೇಕಾದ ವಿಷಯ.

ಅಶೋಕ ಭಟ್ಟರ ಸಂಘಟನೆಯೆಂದರೆ ಅಚ್ಚುಕಟ್ಟು. ಯಾವುದೇ ಕಿರಿ ಕಿರಿ ಇಲ್ಲ. ಎಲ್ಲವೂ ಸಂಯೋಜಿತ, ಸುಲಲಿತ ಮತ್ತು ಸೂತ್ರಬದ್ಧ. ಅಶೋಕ ಭಟ್ಟರು ಸ್ವಾಭಿಮಾನಿ, ನಿಷ್ಠುರವಾದಿ. ಅರ್ಥ ಮಾಡಿಕೊಳ್ಳದವರಿಗೆ ಒರಟರಂತೆಯೂ ಅನಿಸಿರಬಹುದು. ಅಶೋಕ ಭಟ್ಟರಂತೆ ಅತ್ಯಂತ ಸುಲಲಿತವಾಗಿ, ಸುಂದರವಾಗಿ, ಹೃದ್ಯವಾಗಿ ಅಭಿನಂದನಾ ಭಾಷಣ ಮಾಡುವವರು ಸದ್ಯಕ್ಕೆ ಡಾ.ಪ್ರಭಾಕರ ಜೋಶಿಯವರ ಹೊರತಾಗಿ ಯಾರೂ ಇಲ್ಲ. ಅಶೋಕ ಭಟ್ಟರ ಅಭಿನಂದನಾ ಭಾಷಣಗಳಲ್ಲಿ ಜೋಶಿಯವರ ಛಾಯೆ ಇದ್ದಂತೆ ಕಂಡರೂ ಅನುಕರಣೆ ಇಲ್ಲ. 
ಅಶೋಕ ಭಟ್ಟರು ವೇಷಧಾರಿಯಾಗಿ ಮತ್ತು ಅರ್ಥಧಾರಿಯಾಗಿ ತೆಂಕಿನಲ್ಲಿ ಮಾತ್ರವಲ್ಲದೆ ಬಡಗಿನಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಅಶೋಕ ಭಟ್ಟರದ್ದು ಬಹುಮುಖಿ ಪ್ರತಿಭೆ. ಆಕಾಶವಾಣಿಯಲ್ಲಿ 'ಎ' ಶ್ರೇಣಿಯ ಕಲಾವಿದ. ತೆಂಕು ಬಡಗು ತಿಟ್ಟುಗಳ ಸವ್ಯಸಾಚಿ ಕಲಾವಿದ, ಮೇಳವೊಂದರ ಯಶಸ್ವಿ ವ್ಯವಸ್ಥಾಪಕ ಮತ್ತು ವೇಷಧಾರಿಯಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಕಲಾವಿದನಾಗಿ 40 ವರ್ಷ ಮತ್ತು ಅರ್ಥಧಾರಿಯಾಗಿ 35 ವರ್ಷ ಸೇವೆ ಸಲ್ಲಿಸಿದವರು. ಸಂಘಟಕರಾಗಿಯೂ 35 ವರ್ಷಕ್ಕೂ ಮಿಕ್ಕ ಅನುಭವ ಅವರಿಗಿದೆ. ಅತ್ಯುತ್ತಮ ಭಾಷಣಕಾರ, ಧಾರ್ಮಿಕ ಉಪನ್ಯಾಸಕಾರ ಮತ್ತು ಪ್ರವಚನಕಾರರೂ ಹೌದು.

ಅಶೋಕ ಭಟ್ಟರು ಹಲವು ಮೊದಲುಗಳ ಸರದಾರ. ಮೊದಲ ಬಾರಿಗೆ ಭಾಗವತಿಕೆಯಲ್ಲಿ ಅಂತ್ಯಾಕ್ಷರಿ, ಆಶು ಸಾಹಿತ್ಯ ಪ್ರಾತ್ಯಕ್ಷಿಕೆಗಳ ಪ್ರವರ್ತಕ. ಪ್ರಥಮವಾಗಿ ಪುರಭವನದಲ್ಲಿ 9 ಜನ ಭಾಗವತರು ಮತ್ತು 9 ಮಂದಿ ಮದ್ದಳೆಗಾರರ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಕಾಲಿಕ ದಾಖಲೆ. ಕೋಳ್ಯೂರು, ಮೂಡಂಬೈಲು, ಡಾ.ಜೋಶಿ, ಸೂರಿಕುಮೇರು ಕೇಂದ್ರಿತ ತಾಳಮದ್ದಳೆ ಸಪ್ತಾಹ, ಸೂರಿಕುಮೇರು ಕೇಂದ್ರಿತ ಎರಡು ಬಯಲಾಟ ಸಪ್ತಾಹಗಳು, ಕುರಿಯ ಮತ್ತು ಪದ್ಯಾಣ ಶಂಕರಣ್ಣ ಕೇಂದ್ರಿತ ಸಪ್ತಾಹ. ಹೊಳ್ಳ ಕೇಂದ್ರಿತ ಸಪ್ತಾಹ. ತೆಂಕುತಿಟ್ಟು ಸಮಗ್ರ ಪೂರ್ವರಂಗ ದಾಖಲಿಕರಣ. ಪದ್ಯಾಣ ಶಂಕರಣ್ಣ ಅಭಿನಂದನ ಗ್ರಂಥ "ನಾದಶಂಕರ" ದ ಸಂಪಾದಕತ್ವ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಆಯೋಜಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 45 ವರ್ಷಗಳಿಂದ ನಡೆಯುತ್ತಿರುವ ಪುರಾಣ ವಾಚನದಲ್ಲಿ ನಿರಂತರ 33 ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಕಳೆದ 23 ವರ್ಷಗಳಿಂದ ಹಿರಿಯ ನಿವೃತ್ತ ಕಲಾವಿದರಿಗೆ ಸನ್ಮಾನ, ಪ್ರಶಸ್ತಿ, ನಿಧಿ ಸಮರ್ಪಣೆ, ಪ್ರದರ್ಶನ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 48 ವಾರಗಳ ಸಂಪೂರ್ಣ ಮಹಾಭಾರತ ಹಾಗೂ 18 ವಾರಗಳ ಸಂಪೂರ್ಣ ರಾಮಾಯಣ ತಾಳಮದ್ದಳೆ ಆಯೋಜನೆ ಒಂದು ವೈಶಿಷ್ಟ್ಯಪೂರ್ಣ, ಅದ್ಭುತವಾದ ಸಾರ್ವಕಾಲಿಕ ದಾಖಲೆ.


ಬಹಳ ವರುಷಗಳ ಹಿಂದೆಯೇ ಯಕ್ಷಗಾನ ಧ್ವನಿ ಸುರುಳಿಗಳ ಭರಾಟೆಯ ಸಮಯದಲ್ಲಿ, ಬಲಿಪ - ಹೊಳ್ಳರ ದ್ವಂದ್ವ, ಹೊಳ್ಳ - ಪದ್ಯಾಣರ ದ್ವಂದ್ವ, ಬಲಿಪ, ಹೊಳ್ಳ, ಪದ್ಯಾಣ, ಅಮ್ಮಣ್ಣಾಯ - ಇವರ ಭಾಗವಹಿಸುವಿಕೆಯಲ್ಲಿ ಧ್ವನಿಸುರುಳಿಗಳ ಸಂಯೋಜನೆಯನ್ನು ಮಾಡಿದವರಲ್ಲಿ ಇವರು ಮೊದಲಿಗರು.

ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣವರ್ಷ ಪ್ರಯುಕ್ತ ಬಿಡುಗಡೆಯಾದ "ಯಕ್ಷ ಸುವರ್ಣ" ಗ್ರಂಥದ ಸಂಪಾದಕರಾಗಿ ಅಶೋಕ ಭಟ್ಟರು ಕೆಲಸ ಮಾಡಿದ್ದಾರೆ. ಹೀಗೆ ಅಸಂಖ್ಯ ಕಾರ್ಯಕ್ರಮಗಳ ಆಯೋಜನೆ ಭಾಗವಹಿಸುವಿಕೆಗಳಲ್ಲಿ ತೊಡಗಿಸಿಕೊಂಡವರು ಅಶೋಕ ಭಟ್ಟರು. ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಾರದು.

ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವಹಿಂದೂ ಪರಿಷತ್‌ನಲ್ಲಿ ಸಕ್ರಿಯರಾಗಿದ್ದವರು. 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಶೇಣಿ ಸಮ್ಮಾನ ಶತಕದ ಗೌರವ ಪ್ರಶಸ್ತಿ ಅತ್ಯಂತ ಅರ್ಹವಾಗಿ ಇವರಿಗೆ ಸಂದಿದೆ. ಅಶೋಕ ಭಟ್ಟರು ಬಹರೇನ್ ಕನ್ನಡ ಸಂಘದಿಂದಲ್ಲೂ ಸನ್ಮಾನ ಮತ್ತು ಗೌರವ ಸ್ವೀಕರಿಸಿದವರಿದ್ದಾರೆ. ಉಜಿರೆ ಅಶೋಕ ಭಟ್ಟರ ಅರ್ಹತೆಗೆ ಸರಿಯಾಗಿಯೇ 43ಕ್ಕೂ ಹೆಚ್ಚು ಸನ್ಮಾನ, ಗೌರವ, ಪ್ರಶಸ್ತಿಗಳು ವಿವಿಧ ಸಂಘ ಸಂಸ್ಥೆಗಳಿಂದ ಸಂದಿವೆ.

ಯಕ್ಷಗಾನದ ಕುರಿತು ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಹೀಗೆ ವಾಮನರೂಪಿ ಅಶೋಕ ಭಟ್ಟರು ತ್ರಿವಿಕ್ರಮನಾಗಿ ಜನ ಮಾನಸದಲ್ಲಿ ಸ್ಥಾನವನ್ನು ಪಡೆದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಅಶೋಕ ಭಟ್ಟರು ಧರ್ಮಸ್ಥಳದ ಖಾವಂದರಿಗೆ ಅತ್ಯಂತ ನಿಕಟವರ್ತಿಗಳು. ಬ್ರಹ್ಮೈಕ್ಯರಾದ ಎಡನೀರು ಶ್ರೀಗಳ ಪ್ರೀತಿಯ ಶಿಷ್ಯರು. ಪ್ರಸ್ತುತ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ನಿಕಟವರ್ತಿ ಮತ್ತು ಈಗಿನ ನೆಚ್ಚಿನ ಶಿಷ್ಯ.
ಹೀಗೆ ಅಶೋಕ ಭಟ್ಟರು ಅರ್ಥಧಾರಿಯಾಗಿ, ವೇಷಧಾರಿಯಾಗಿ, ಪ್ರವಚನಕಾರರಾಗಿ, ಭಾಷಣಕಾರರಾಗಿ, ಲೇಖಕರಾಗಿ, ಸಂಘಟಕರಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ತೊಡಗಿಸಿಗೊಂಡ ಸವ್ಯಸಾಚಿ. ಇವರಂತೆ ವರ್ತಮಾನ ಕಾಲದಲ್ಲಿ ಸವ್ಯಸಾಚಿಯಾಗಿ ಯಾರೂ ಕಾಣಸಿಗರು.

ಶ್ರೀಯುತ ಅಶೋಕ ಭಟ್ಟರು ಈಶ್ವರ ಭಟ್ಟ ಮತ್ತು ಕಲ್ಯಾಣಿ ಅಮ್ಮ ದಂಪತಿಗಳ ಪುತ್ರನಾಗಿ 1964ರಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾಮದ ಅಡ್ಕಸ್ಥಳ ಸಮೀಪದ ನೇರೋಳು ಎಂಬಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸದ ಬಳಿಕ ಉಜಿರೆಯಲ್ಲಿ ಬಿ.ಕಾ೦. ಪದವಿ ಪೂರೈಸಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕು ಉಜಿರೆಯ ತಮ್ಮ ಸ್ವಂತ ಮನೆ "ಚಿನ್ಮಯ"ದಲ್ಲಿ ನೆಮ್ಮದಿಯಿಂದಿದ್ದಾರೆ.

ಎಸ್.ಬಿ.ನರೇಂದ್ರ ಕುಮಾರ್ ಧರ್ಮಸ್ಥಳ ಇವರಿಂದ ಯಕ್ಷ ನೃತ್ಯವನ್ನು ಕಲಿತ ಇವರಿಗೆ ಕೆ.ಗೋವಿಂದ ಭಟ್ಟರು ವೇಷಗಾರಿಕೆಗೆ ಪ್ರೇರಣೆ. ಅರ್ಥಗಾರಿಕೆಗೆ ದಿವಂಗತ ಶೇಣಿ ಗೋಪಾಲಕೃಷ್ಣ ಭಟ್ಟರು ಪ್ರೇರಣೆಯನ್ನಿತ್ತಿದ್ದಾರೆ. ಹೀಗೆ ಅದ್ಭುತ ಪ್ರತಿಭಾ ಸಂಪನ್ನ, ವಾಗ್ಮಿ, ಉಜಿರೆ ಅಶೋಕ ಭಟ್ಟರಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯು ಅವರ ಸೇವೆಯು ಯಕ್ಷಕಲಾ ಪ್ರಪಂಚಕ್ಕೆ ಇನ್ನಷ್ಟು ದೊರಕುವಂತೆ ಅನುಗ್ರಹಿಸಲಿ ಎಂದು ಆಶಿಸುತ್ತೇನೆ.

 ಕುಮಾರ ಸುಬ್ರಹ್ಮಣ್ಯ ಮುಳಿಯಾಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು