ಯವನಾಶ್ವನೇ ಗರ್ಭ ಧರಿಸಿ ಪುತ್ರನಿಗೆ ಜನ್ಮದಾತನಾದ ಕಥನ

ಯವನಾಶ್ವನು ಸಂತಾನಕ್ಕಾಗಿ ಮಾಡಿದ ಯಾಗದ ಸಂದರ್ಭದಲ್ಲಿ ತಿಳಿಯದೇ ಕುಡಿದ ಜಲದಿಂದಾಗಿ ಅವನೇ ಮಗನನ್ನು ಹೆರುವಂತಾಗುತ್ತದೆ. ಈ ವಿಶೇಷ ಕಥೆಯ ಮಾಹಿತಿ ಇಲ್ಲಿದೆ.
ಹಿಂದೆ ಯವನಾಶ್ವ ಎಂಬ ಅರಸನಿದ್ದ. ಅವನಿಗೆ ನೂರಾರು ಮಂದಿ ರಾಣಿಯರು. ಆದರೂ ಅವನಿಗೆ ಮಕ್ಕಳಾಗಿರಲಿಲ್ಲ. ಅದರಿಂದಾಗಿ ಬೇಸರಗೊಂಡ ಆತ ಭೃಗು ಮುನಿಗಳ ಬಳಿ ಪರಿಹಾರ ಕೇಳುತ್ತಾನೆ.

ಭೃಗು ಮುನಿಗಳು ಪುತ್ರಕಾಮೇಷ್ಠಿ ಯಾಗ ಮಾಡುವಂತೆ ಹೇಳುತ್ತಾರೆ. ಅದಕ್ಕೊಪ್ಪಿದ ಯವನಾಶ್ವನು ಯಾಗ ಮಾಡುತ್ತಾನೆ. ಭೃಗು ಮುನಿಗಳೇ ಯಾಗ ನಡೆಸಿಕೊಡುತ್ತಾರೆ. ಯಾಗದ ನಡುವೆ ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಭೃಗು ಮುನಿಗಳು ಕಮಂಡಲದಲ್ಲಿ ತುಂಬಿಸಿ ಇಟ್ಟಿರುತ್ತಾರೆ. ಆ ಜಲವನ್ನು ಯವನಾಶ್ವನ ಪತ್ನಿ ಕುಡಿದನಂತರ ಅವಳಿಗೆ ಸಂತಾನ ಪ್ರಾಪ್ತಿಯಾಗಬೇಕಿತ್ತು.
ಆದರೆ ತುಂಬಾ ದಾಹವಾಯಿತು ಎಂದು ಆ ನೀರಿನ ಮಹತ್ವ ತಿಳಿಯದೇ ಯವನಾಶ್ವನೇ ಅದನ್ನು ಕುಡಿದು ಬಿಡುತ್ತಾನೆ. ಇದರಿಂದಾಗಿ ಅವನಲ್ಲಿಯೇ ಗರ್ಭ ಧಾರಣೆಯಾಗುತ್ತದೆ. ಕಾಲಕ್ರಮೇಣ ಅವನೇ ಒಂದು ಮಗುವಿಗೆ ಜನ್ಮ ನೀಡುತ್ತಾನೆ. ಯವನಾಶ್ವನ ಪಕ್ಕೆಯಿಂದ ಅವನಿಗೆ ನೋವಾಗದಂತೆ ಆ ಮಗು ಹೊರ ಬಂತಂತೆ.

ಆ ಮಗುವಿನ ಹೆಸರು ಮಾಂಧಾತ. ಹೀಗೆ ಮಾಂಧಾತನಿಗೆ ಯವನಾಶ್ವ ತಾಯಿಯೂ ಹೌದು, ತಂದೆಯೂ ಹೌದು. ಮಾಂಧಾತನು ತನ್ನ ಪೌರುಷ, ಸತ್ಯವಂತಿಕೆ ಮತ್ತು ಆಡಳಿತದಿಂದ ಹೆಸರು ಪಡೆದನು. ಯಾದವ ರಾಜನಾದ ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂರು ಮಂದಿ ಗಂಡು ಮಕ್ಕಳು ಮತ್ತು ಐವತ್ತು ಮಂದಿ ಹೆಣ್ಣುಮಕ್ಕಳು.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು