ಪುರಾಣ ತಿಳಿಯೋಣ: ಧೃತರಾಷ್ಟ್ರನ ಕಣ್ಣು ಸಂಜಯ

ಸಂಜಯನಾಗಿ ಉಜಿರೆ ಅಶೋಕ ಭಟ್. ಚಿತ್ರಕೃಪೆ: ಸಚಿನ್ ಹೆಗ್ಡೆ
ಮಹಾಭಾರತ ಯುದ್ಧದಲ್ಲಿ ದೃಷ್ಟಿಹೀನ ಧೃತರಾಷ್ಟ್ರನಿಗೆ ಕಣ್ಣಾಗಿದ್ದ ಸಂಜಯ ಯಾರು? ಯುದ್ಧಾನಂತರ ಅವನ ವಿಶೇಷತೆ ಏನು? ಇಲ್ಲಿದೆ 'ಪುರಾಣ ತಿಳಿಯೋಣ' ಮಾಹಿತಿ.
ಧೃತರಾಷ್ಟ್ರನಿಗೆ ಗವಲ್ಗಣ ಎಂಬ ಹೆಸರಿನ ಮಂತ್ರಿಯಿದ್ದ. ಈತನು ಧೃತರಾಷ್ಟ್ರನಿಗೆ ಸಾರಥಿಯ ಕೆಲಸವನ್ನೂ ಮಾಡುತ್ತಿದ್ದ. ಈ ಗವಲ್ಗಣನ ಮಗನೇ ಸಂಜಯ. ಈತನೂ ಧೃತರಾಷ್ಟ್ರನಿಗೆ ಮಂತ್ರಿಯೂ, ಸಾರಥಿಯೂ ಆಗಿದ್ದ. ಧೃತರಾಷ್ಟ್ರನು ಹುಟ್ಟು ಕುರುಡನಾಗಿದ್ದರಿಂದ ಸಂಜಯನು ಅನುಗಾಲವೂ ಧೃತರಾಷ್ಟ್ರನ ಜೊತೆಯಲ್ಲಿಯೇ ಇರುತ್ತಿದ್ದ. ಮಹಾಭಾರತದ ಯುದ್ಧ ವೇಳೆಯಲ್ಲಿ ಮಹರ್ಷಿ ವೇದವ್ಯಾಸರು ಸಂಜಯನಿಗೆ  ದಿವ್ಯದೃಷ್ಟಿಯನ್ನು ನೀಡಿದರು. ಇದರಿಂದಾಗಿ ಸಂಜಯನು ಕುಳಿತೆಡೆಯಿಂದಲೇ ಮಹಾಭಾರತದ ಯುದ್ಧವನ್ನು ನೋಡುತ್ತಾ ಪ್ರತಿಯೊಂದು ಅಂಶವನ್ನೂ ಧೃತರಾಷ್ಟ್ರನಿಗೆ ವರದಿ ಮಾಡುತ್ತಿದ್ದನು.

ಹದಿನೆಂಟನೆಯ ದಿನ ಇದ್ದಕ್ಕಿದ್ದಂತೆ ಕೌರವನು ಸಂಜಯನ ದೃಷ್ಟಿಯಿಂದ ಮರೆಯಾದಾಗ, ಕೌರವನನ್ನು ಹುಡುಕಿಕೊಂಡು ರಣರಂಗಕ್ಕೆ ಬರುತ್ತಾನೆ. ಆಗ ಅವನನ್ನು ನೋಡಿದ ಅಶ್ವತ್ಥಾಮ, ಸಂಜಯನನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ವೇದವ್ಯಾಸರು ಪ್ರಕಟವಾಗಿ ಸಂಜಯನನ್ನು ಕೊಲ್ಲದಂತೆ ಅಶ್ವತ್ಥಾಮನನ್ನು ನಿರ್ಬಂಧಿಸುತ್ತಾರೆ.

ಭಗವದ್ಗೀತೆಯು ಧೃತರಾಷ್ಟ್ರನ ಈ ಮಾತಿನಿಂದ ಆರಂಭಗೊಳ್ಳುತ್ತದೆ.
"ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಸಮವೇತಾ ಯುಯುತ್ಸವಃ|
ಮಾಮಕಾಃ ಪಾಂಡವಾಶ್ಚೈವ
ಕಿಮಕುರ್ವತ ಸಂಜಯ||"
(ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧಾಭಿಲಾಷಿಗಳಾಗಿ ಒಟ್ಟಾಗಿರುವ ನನ್ನವರೂ ಮತ್ತು ಪಾಂಡವರು ಏನು ಮಾಡಿದರು ಸಂಜಯಾ'?. ಇಲ್ಲಿ ಧೃತರಾಷ್ಟ್ರನು 'ಮಾಮಕಾಃ' ಮತ್ತು ' ಪಾಂಡವಾಃ' ಎಂಬ ಪದಗಳನ್ನು ಬಳಸಿರುವುದನ್ನು ಗಮನಿಸಿ. 'ಮಾಮಕಾಃ' ಅಂದರೆ ನನ್ನವರು ಎಂದು ಅರ್ಥ. ಅಂದರೆ ಪಾಂಡವರು ನನ್ನವರಲ್ಲ ಎನ್ನುವ ಧೃತರಾಷ್ಟ್ರನ ಸಂಕುಚಿತ ಭಾವನೆ ಇಲ್ಲಿ ಧ್ವನಿತವಾಗುತ್ತಿದೆ).

ಭಗವಂತ ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲೇ ತನ್ನ ವಿಶ್ವರೂಪ ದರ್ಶನ ಮಾಡಿಸಿದನಷ್ಟೇ. ಈ ವಿಶ್ವರೂಪವನ್ನು ಅರ್ಜುನನ ಹೊರತುಪಡಿಸಿ ನೋಡಿದವನೆಂದರೆ ಸಂಜಯನೊಬ್ಬನೇ.

ಮಹಾಭಾರತ ಅಂತ್ಯದಲ್ಲಿ ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿ‌ ಅರಣ್ಯದಲ್ಲಿ ಕಾಳ್ಗಿಚ್ಚಿಗೆ ಸಿಕ್ಕಿ ಮೃತರಾಗುತ್ತಾರೆ. ಆ ವೇಳೆಗೆ ಸಂಜಯನಿಗೆ  ಸಂಪೂರ್ಣ ವೈರಾಗ್ಯ ಬಂದಿರುತ್ತದೆ. ಈ ಮೂವರ ಮರಣಾನಂತರ ಸಂಜಯನು ಹಿಮವತ್ಪರ್ವದ ಕಡೆಗೆ ಹೊರಟು ಹೋಗುತ್ತಾನೆ. ನಂತರ ಅವನು ಏನಾದನೆಂದು ಮಾಹಿತಿ ಇಲ್ಲ.
ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು