ಎಡನೀರಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಪಂಚಕ ಉದ್ಘಾಟನೆ

ಯಕ್ಷಗಾನ ತಾಳಮದ್ದಳೆ ಯಕ್ಷ ಪಂಚಕ


ಕಾಸರಗೋಡು: ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ನಿಮಿತ್ತ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಐದು ದಿನಗಳ ಕಾಲ ಜರುಗುವ "ಯಕ್ಷಪಂಚಕ" ಕಾರ್ಯಕ್ರಮವನ್ನು ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಉದ್ಘಾಟಿಸಿದರು.


ಈ ಸಂದರ್ಭ ಮಾತನಾಡಿದ ಶ್ರೀಗಳು "ಯಕ್ಷಗಾನ ಕ್ಷೇತ್ರಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕೊಡುಗೆ ಅಪಾರ. ಯಕ್ಷಗಾನಕ್ಕೆ ಸಂಬಂಧಿಸಿ ಪೂರ್ವರಂಗ, ಅರ್ಥಗಾರಿಕೆ, ಬಣ್ಣಗಾರಿಕೆ ಹಾಗೂ ರಂಗನಡೆಗಳ ಬಗ್ಗೆ ಹತ್ತು ಹಲವು ಜಾಗೃತಿ ಕಮ್ಮಟಗಳನ್ನು ನಡೆಸಿ ಈಗಾಗಲೇ ಮಹತ್ತರ ಕೊಡುಗೆಯನ್ನು ಪ್ರತಿಷ್ಠಾನ ಕೈಗೊಂಡಿರುವುದು ಶ್ಲಾಘ್ಯ. ಕೊರೊನಾ ಪಿಡುಗಿನ ಸಂದರ್ಭದಲ್ಲೂ ಸದಾ ಕಲಾಸೇವೆ ಗೈಯುತ್ತಿರುವ ಪ್ರತಿಷ್ಠಾನಕ್ಕೆ ಯಶಸ್ಸಾಗಲಿ" ಎಂದು ಮೆಚ್ಚು ನುಡಿಗಳನ್ನಾಡಿದರು.

ಸಭಾ ಸಮಾರಂಭದಲ್ಲಿ ಧಾರ್ಮಿಕ ನೇತಾರರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಹಿರಿಯರಾದ ರಾಜೇಂದ್ರ ಕಲ್ಲೂರಾಯ, ಪ್ರತಿಷ್ಠಾನದ ಅಧ್ಯಕ್ಷರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸದಸ್ಯರಾದ ಸಿರಿಬಾಗಿಲು ಶಂಕರನಾರಾಯಣ ಮಯ್ಯ, ಸದಾಶಿವ ಭಟ್ ಎದುರ್ಕಳ, ತಿಮ್ಮಪ್ಪ ಮಜಲು, ಜಗದೀಶ ಕೂಡ್ಲು, ಗುರುರಾಜ ಹೊಳ್ಳ ಬಾಯಾರು ಉಪಸ್ಥಿತರಿದ್ದರು.

ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಸಂಸ್ಮರಣೆಗೈದರು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ 'ಕಾಯಕಲ್ಪ' ತಾಳಮದ್ದಳೆ ಜರಗಿತು. ಐದು ದಿನಗಳ ಕಾಲ ಸಂಜೆ ತಾಳ ಮದ್ದಳೆ ಜರುಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು