ಪುರಾಣ ತಿಳಿಯೋಣ: ಕೌರವರ ನಿರ್ನಾಮಕ್ಕೆ ಶಕುನಿ ಪಣ ತೊಟ್ಟಿದ್ದೇಕೆ?

kurukshetra
ಕುರುಕ್ಷೇತ್ರಕ್ಕೊಂದು ಆಯೋಗ - ಯಕ್ಷಗಾನದ ಆಖ್ಯಾನದ ದೃಶ್ಯ (ಸಾಂಕೇತಿಕ)
ಮಹಾಭಾರತದಲ್ಲಿ ಕೌರವರ ಮಾವ ಶಕುನಿಯು ಹಸ್ತಿನಾವತಿ ಸೇರಿಕೊಂಡು, ತನ್ನ ತಂಗಿಯ ಕುಲವನ್ನೇ ನಾಶ ಮಾಡುವುದರ ಹಿಂದಿನ ಕಥೆಯ ಮಾಹಿತಿ ಇಲ್ಲಿದೆ.
ಶಕುನಿ ಮಹಾಭಾರತದ ಬಹಳ ಪ್ರಮುಖ ಪಾತ್ರಗಳಲ್ಲೊಂದು. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧಾರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಾಭಾರತದ ಯುದ್ಧಕ್ಕೆ ಮತ್ತು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ.

ದುರ್ಯೋಧನನು ಚಿಕ್ಕವನಿದ್ದಾಗ ತಮ್ಮ ಪ್ರೀತಿಯ ತಂಗಿ ಗಾಂಧಾರಿಯನ್ನು ನೋಡಲು ಗಾಂಧಾರ ದೇಶದಿಂದ 100 ಸಹೋದರರು ಹಸ್ತಿನಾವತಿಗೆ ಬರುತ್ತಾರೆ. ಹಾಗೆ ಬರುವಾಗ ದಾರಿಯಲ್ಲಿ ಒಂದು ಗರಿಕೆಯ ಹುಲ್ಲು ಎಡವಿ ಶಕುನಿಯ ಸಹೋದರರಲ್ಲೊಬ್ಬ ಕೆಳಗೆ ಬೀಳುತ್ತಾನೆ. ಸಿಟ್ಟಿಗೆದ್ದ ಆ ಸಹೋದರರು ಆ ಗರಿಕೆಯ ಮೂಲ ಬೇರನ್ನು ಹುಡುಕಿ ಅಗೆದು ತೆಗೆದು ಸುಟ್ಟು ಹಾಕುತ್ತಾರೆ.
ಇದನ್ನು ದುರ್ಯೋಧನನು ನೋಡುತ್ತಾನೆ. ಇವರನ್ನು ಹೀಗೆಯೇ ಬಿಟ್ಟರೆ ತನಗೂ ತೊಂದರೆ ತಪ್ಪಿದ್ದಲ್ಲ ಎಂದೆಣಿಸಿ ಆ 100 ಮಂದಿಯನ್ನು ಕಾರಾಗೃಹಕ್ಕೆ ತಳ್ಳಿ, ಅವರೆಲ್ಲರಿಗೆ ಕೇವಲ ಒಂದು ಹಿಡಿ ಅನ್ನ ನೀಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಆ ಸಹೋದರರು ಆ ಒಂದು ಹಿಡಿ ಅನ್ನವನ್ನು ಬಹಳ ಬುದ್ಧಿವಂತನಾದ ತಮ್ಮ ಕಿರಿಯ ಸಹೋದರ ಶಕುನಿಗೆ ನೀಡಿ, ಕೌರವರ ವಿರುದ್ದ ಸೇಡು, ಪ್ರತೀಕಾರ ತೀರಿಸಿಕೊಳ್ಳುವಂತೆ ಮಾತು ತೆಗೆದುಕೊಂಡು ಅವರೆಲ್ಲರೂ ಸಾಯುತ್ತಾರೆ. ಕಾಲಾನಂತರ ತಂಗಿ ಗಾಂಧಾರಿ ಇರುವ ಹಸ್ತಿನಾವತಿಯಲ್ಲಿ ಶಕುನಿಯು ಆಶ್ರಯ ಪಡೆದುಕೊಂಡು ತನ್ನ ಕೃತ್ರಿಮವನ್ನು ಸಾಧಿಸುತ್ತಾನೆ.

ಒಂದು ಕಥೆಯ ಪ್ರಕಾರ, ಶಕುನಿಯ ತಂದೆ ಸುಬಲ ಮಹಾರಾಜನ ಎಲುಬಿನಿಂದ ಮಾಡಿದ ದಾಳದಿಂದ ಶಕುನಿಯು ಧರ್ಮರಾಯನೊಂದಿಗೆ ಜೂಜಾಡಿದ್ದಂತೆ. ನಂತರ ಶಕುನಿಯು ಕೌರವರ ಪಕ್ಷ ಸೇರಿ ಅವರ ನಾಶಕ್ಕೆ ಕಾರಣನಾಗುವುದಲ್ಲದೆ ಮಹಾಭಾರತ ಯುದ್ದದಲ್ಲಿ ತಾನೂ ಸಹದೇವನಿಂದ ಹತನಾಗುತ್ತಾನೆ. (ಈ ಕಥೆ ಮೂಲ ವ್ಯಾಸ ಭಾರತದಲ್ಲಿಲ್ಲ. ಬಹುಶಃ ತುರಂಗ ಭಾರತದಲ್ಲಿದ್ದಿರಬೇಕು).
ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು