ಅಬ್ಬರದ ಅಣಿ ವೇಷ ಖ್ಯಾತಿಯ ಯಕ್ಷಗಾನ ಕಲಾವಿದ ಗೋಪಾಲ ಗೌಡ ಮೃತ್ಯು

ಗೋಪಾಲ ಗೌಡ
ಉಡುಪಿ: ಉತ್ತರಕನ್ನಡ ಜಿಲ್ಲೆಯ ಕುಮಟಾದ ಯುವ ಯಕ್ಷಗಾನ ಕಲಾವಿದ ಕಂದವಳ್ಳಿ ಗೋಪಾಲ ಗೌಡ (29 ವರ್ಷ) ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.

ಆಗಸ್ಟ್ 14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಅವರು ನಾಪತ್ತೆಯಾಗಿದ್ದರು. ಅವರ ಮೃತದೇಹವು ಇಂದು (17-08-2021) ಕುಮಟಾ ಹೆಡ್ ಬಂದರ್ ಬೀಚ್ ಬಳಿ ದೊರಕಿದ್ದು, ಇವರ ನಿಧನದಿಂದ ಇಡೀ ಯಕ್ಷಗಾನ ಕ್ಷೇತ್ರ ತಲ್ಲಣಗೊಂಡಿದೆ.
ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನರ ಪ್ರೇರಣೆಯಿಂದ ಯಕ್ಷಗಾನವನ್ನು ಕಲಿತು ಸಿಗಂದೂರು, ಮಡಾಮಕ್ಕಿ, ಮೇಗರವಳ್ಳಿ, ಹಟ್ಟಿಯಂಗಡಿ ಪ್ರಕೃತ ಬೊಳ್ಳಂಬಳ್ಳಿ ಮೇಳದಲ್ಲಿ ಒಟ್ಟು 13 ವರ್ಷ ಅವರು ಕಲಾಸೇವೆಗೈದಿದ್ದರು.

ಅಭಿಮನ್ಯು, ಬಬ್ರುವಾಹನ ಮುಂತಾದ ವೇಷಗಳ ಜೊತೆಗೆ ಹೊಸ ಪ್ರಸಂಗದ ವಿಶಿಷ್ಟ ವೇಷಗಳನ್ನು ಕೂಡ ಸೊಗಸಾಗಿ ನಿರ್ವಹಿಸುತ್ತಿದ್ದರು. ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಗೋಪಾಲ ಗೌಡ ಒಬ್ಬ ಅಪ್ರತಿಮ ಕಲಾವಿದನಾಗಿದ್ದು, ಸರಳ ಸ್ನೇಹಜೀವಿಯಾಗಿ ಚೌಕಿಯಲ್ಲಿಯೂ ರಂಗದಲ್ಲಿಯೂ ಇರುತ್ತಿದ್ದರು. ಆರಂಭದಲ್ಲಿ ಸಿಗಂದೂರು ಮೇಳ ಹೊರಟಾಗ ಬಯಲಾಟಕ್ಕೆ 25-30 ಜನ ಸೇರುತ್ತಿದ್ದ ಕಾಲದಲ್ಲಿ ಕ್ಷೇತ್ರ ಮಹಾತ್ಮೆಗಳ ಅಬ್ಬರದ ವೇಷಕ್ಕೆ ಗೋಪಾಲ ಗೌಡರ ಪ್ರವೇಶವಾಗುವ ಹೊತ್ತಿಗೆ ಸಾವಿರಾರು ಪ್ರೇಕ್ಷಕರು ಬರುತ್ತಿದ್ದರೆಂದು ಅವರನ್ನು ತಿಳಿದವರು ನೆನಪಿಸಿಕೊಳ್ಳುತ್ತಾರೆ. ಗೋಪಾಲ ಗೌಡರ ಅಬ್ಬರದ ಕುಣಿತ,ಅಣಿ ವೇಷವನ್ನು ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು