ಸುದರ್ಶನ ಶಾಪಗ್ರಸ್ಥನಾಗಿ ಕಾರ್ತವೀರ್ಯನಾದ ಕಥನ

ಸುದರ್ಶನ: ಅಮ್ಮುಂಜೆ ಮೋಹನ್, ಲಕ್ಷ್ಮಿ: ಅರುಣ್ ಕೋಟ್ಯಾನ್, ವಿಷ್ಣು: ದಿನೇಶ್ ಶೆಟ್ಟಿ ಕಾವಳಕಟ್ಟೆ.
ಪುರಾಣ ತಿಳಿಯೋಣ: ಸುದರ್ಶನ ವಿಜಯ ಪ್ರಸಂಗವೊಂದು ಕಲ್ಪಿತ ಮತ್ತು ಯಕ್ಷಗಾನಕ್ಕಾಗಿಯೇ ರೂಪುಗೊಂಡ ಕಥಾನಕ ಎಂದು ಹೇಳಲಾಗುತ್ತಿದೆ. ಈ ಕಥೆಯ ಮೇಲೆ ಬೆಳಕು ಚೆಲ್ಲುವ ಲೇಖನ.
ಹಿಂದೆ ಲೋಹವತೀ ಪಟ್ಟಣವನ್ನು ಶತ್ರುಪ್ರಸೂದನನೆಂಬ ರಕ್ಕಸನು ಆಳುತ್ತಿದ್ದನು. ಅವನು ಒಂದು ವಿಚಿತ್ರ ವರವನ್ನು ಪಡೆದಿದ್ದನು. ಒಂದು ಶಸ್ತ್ರವೇ ದೇಹಧಾರಿಯಾಗಿ ಬಂದು ಯುದ್ಧ ಮಾಡಿದರೆ ಮಾತ್ರ ಅವನಿಗೆ ಮರಣ. ಈ ವರಬಲದಿಂದ ಅವನು ಅಜೇಯನಾಗಿ ಮೆರೆಯುತ್ತಿದ್ದ. ಸ್ವರ್ಗ, ಮರ್ತ್ಯ, ಪಾತಾಳಗಳೂ ಅವನಿಗೆ ವಶವಾಗಿದ್ದವು. ಹೀಗಿರುತ್ತಾ ಅವನನ್ನು ವಧಿಸಲು ಒಮ್ಮೆ ಶ್ರೀಹರಿಯೇ ಹೋಗುತ್ತಾನೆ. ಆದರೆ ಶ್ರೀಹರಿಗೂ ಅವನನ್ನು ಸೋಲಿಸಲು ಆಗುವುದಿಲ್ಲ.

ಆಗ ಸುದರ್ಶನನು ಶ್ರೀಹರಿಯ ಕೈಯಿಂದ ಇಳಿದು ಬಂದು ದೇಹಧಾರಿಯಾಗಿ ಶತ್ರುಪ್ರಸೂದನನೊಡನೆ ಯುದ್ಧಕ್ಕೆ ತೆರಳುತ್ತಾನೆ. ಶತ್ರುಪ್ರಸೂದನನೊಡನೆ ನಡೆದ ಯುದ್ಧದಲ್ಲಿ ಅವನನ್ನು ಕೊಂದು ಮರಳಿ ವೈಕುಂಠಕ್ಕೆ ಬರುತ್ತಾನೆ. ಆಗ ವಿಷ್ಣುವು ಅವನನ್ನು ಮರಳಿ ಸುದರ್ಶನ ಆಯುಧವಾಗಿ ತನ್ನ ಕರವೇರುವಂತೆ ಕರೆಯುತ್ತಾನೆ.

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಆದರೆ ಮದೋನ್ಮತ್ತನಾದ ಸುದರ್ಶನನು ಶ್ರೀಹರಿಯ ಕೈಯನ್ನು ಸೇರಲು ನಿರಾಕರಿಸುತ್ತಾನೆ. ಮಾತ್ರವಲ್ಲ ಹರಿಗಿಂತಲೂ ತಾನೇ ಬಲಿಷ್ಠನೆಂಬಂತೆ ಮಾತಾಡುತ್ತಾನೆ. ಶ್ರೀಹರಿಯು ಬಗೆ ಬಗೆಯಿಂದ ಕೇಳಿಕೊಂಡರೂ ಸುದರ್ಶನ ಕೇಳದೇ ಇದ್ದಾಗ ನೀನು ಭೂಲೋಕದಲ್ಲಿ ಮಾನವನಾಗಿ ಹುಟ್ಟು ಅಂತ ಶಾಪ ಕೊಡುತ್ತಾನೆ.

ಆಗ ಸುದರ್ಶನನಿಗೆ ತಪ್ಪಿನ ಅರಿವಾಗುತ್ತದೆ. ಶ್ರೀಹರಿಯ ಪಾದಕ್ಕೆ ಬಿದ್ದು ಕ್ಷಮೆಯನ್ನು ಬೇಡುತ್ತಾನೆ. ಅವನ ಪಶ್ಚಾತ್ತಾಪಕ್ಕಾಗಿ ಮನ ಕರಗಿದ ಶ್ರೀಹರಿ ಹೀಗೆಂದು ಪ್ರತಿ ಶಾಪ ಕೊಡುತ್ತಾನೆ "ನೀನು ಭೂಲೋಕದಲ್ಲಿ ಮಾಹಿಷ್ಮತಿಯ ಅರಸ ಕೃತವೀರ್ಯ- ರಾಕಾದೇವಿ ದಂಪತಿಗೆ ಮಗನಾಗಿ ಹುಟ್ಟು. ನನ್ನ ಅಂಶದಿಂದಲೇ ಸಂಜನಿಸಿದ ದತ್ತಾತ್ರೇಯನಾಗಿ ನಿನಗೆ ವಿದ್ಯಾಭ್ಯಾಸ ಮಾಡಿಸುತ್ತೇನೆ. ನಂತರ ನಾನೇ ಭಾರ್ಗವ ರಾಮನಾಗಿ ಹುಟ್ಟಿ ನಿನ್ನನ್ನು ವಧಿಸಿ ಮತ್ತೆ ವೈಕುಂಠಕ್ಕೆ ಕರೆಸಿಕೊಳ್ಳುತ್ತೇನೆ."

(ಇದು ಕೂಡಾ ಇತರ ಕೆಲ ಪ್ರಸಂಗದ ಹಾಗೆ ಯಕ್ಷಗಾನಕ್ಕಾಗಿಯೇ ಬರೆದ ಕಥೆ ಇರಬೇಕು. ವಿಷ್ಣುವಿನ ಎಲ್ಲ ಅವತಾರಗಳಲ್ಲಿಯೂ ತಾನೇ ಕೆಲಸ ಮಾಡಿದ್ದು ಎಂದು ಸುದರ್ಶನನು ಲಕ್ಷ್ಮೀದೇವಿಯಲ್ಲಿ ಹೇಳುವ, ಸುದರ್ಶನನ ಗರ್ವ ಭಂಗ ಮಾಡಬೇಕೆಂಬ ವಿಷ್ಣುವಿನ ನಿರ್ಣಯದ ಕಥೆಯದು.)
ಸಂ.: ದಾಮೋದರ ಶೆಟ್ಟಿ, ಇರುವೈಲು

ಜಬ್ಬಾರ್ ಸಮೊ ಅವರಿಂದ ಹೆಚ್ಚುವರಿ ಮಾಹಿತಿ:
ಶ್ರೀ ಮಧುಕುಮಾರರು ರಚಿಸಿದ 'ಸುದರ್ಶನ ವಿಜಯ' ಪ್ರಸಂಗದಲ್ಲಿ 'ಆಯುಧವೇ ಮೈದಳೆದು ಜೀವಂತವಾಗಿ ಇದಿರಾದರೆ ಮಾತ್ರ ಶತ್ರುಪ್ರಸೂದನನಿಗೆ ಮರಣ' ಎಂಬ ಪ್ರಸ್ತಾಪವಿಲ್ಲ. ತಪಸ್ಸಿನ ಮೂಲಕ ಶಿವನನ್ನು ಮೆಚ್ಚಿಸಿ, ವರ ರೂಪದಲ್ಲಿ ಶಕ್ತ್ಯಾಯುಧವೊಂದನ್ನು ಪಡೆಯುತ್ತಾನೆ. ಇದನ್ನು ತುಂಡರಿಸಿದ ಧೀರನಿಂದ ಮಾತ್ರವೇ ಮರಣ ಬರುವುದೆಂಬ ಅಭಯವನ್ನು ಹರನು ನೀಡುತ್ತಾನೆ. ಬಯಲಾಟದ ರೂಪದಲ್ಲಿ ಈ ಪ್ರಸಂಗವು ಅದ್ಭುತ ಯಶಸ್ಸನ್ನು ಪಡೆಯಿತು. ಜೊತೆಗೆ ಆಯುಧವೇ ಮೂರ್ತರೂಪದಿಂದ ಎದುರಾಗಬೇಕೆನ್ನುವ ಶರ್ತವಿರುವಂತೆ ತಿದ್ದುಪಡಿಯನ್ನೂ ಮಾಡಲಾಯಿತು.

ಇನ್ನು ಶತ್ರುಪ್ರಸೂದನನ ಉಲ್ಲೇಖವು ಪುರಾಣಗಳಲ್ಲೆಲ್ಲೂ ನನಗೆ ಕಾಣಸಿಗಲಿಲ್ಲ. ರೇಣುಕಾದೇವಿ ಮಹಾತ್ಮೆಯ ಪ್ರಕಾರ, ಕಾರ್ತವೀರ್ಯ ಧರ್ಮ ಸ್ಥಾಪನೆಗಾಗಿ ವಿಷ್ಣುವಿನಿಂದಲೇ ನಿರ್ದೇಶಿತನಾಗಿ ಭೂಮಿಯಲ್ಲಿ ಜನಿಸಿದನು. ಶಾಪದ ವೃತ್ತಾಂತವಿರುವುದಿಲ್ಲ. ಏನೇ ಇರಲಿ, ಸುದರ್ಶನ ವಿಜಯ ಪ್ರಸಂಗ ಮಾತ್ರ ಮನೋಜ್ಞವಾಗಿ ನಿರೂಪಿಸಲ್ಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು