ಪುರಾಣ ತಿಳಿಯೋಣ: ಸುಂದ ಉಪಸುಂದರು ಯಾರು?

Yakshagana Sundopasunda Kalaga
ಸುಂದ ಉಪಸುಂದರು. ಚಿತ್ರ: ಮಧುಸೂದನ ಅಲೆವೂರಾಯ
ಪುರಾಣ ತಿಳಿಯೋಣ: ಹೆಣ್ಣಿಗಾಗಿ ಪ್ರಾಣವನ್ನೇ ತೆತ್ತ ಅಪೂರ್ವ ಸಹೋದರರಾದ ಸುಂದೋಪಸುಂದರ ಆಖ್ಯಾನವನ್ನು ಪಾಂಡವರಿಗೆ ಹೇಳಿದ್ದು ನಾರದ ಮಹರ್ಷಿಗಳು.
ದೇವತಾಂಗನೆ ತಿಲೋತ್ತಮೆಗಾಗಿ ಪ್ರಾಣತೆತ್ತ ಸುಂದ ಉಪಸುಂದರ ಕಥೆಯು ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಯುಧಿಷ್ಠಿರ ಮತ್ತವನ ನಾಲ್ವರು ತಮ್ಮಂದಿರು, ತಮ್ಮ ಭಾಗಕ್ಕೆ ಬಂದ ಇಂದ್ರಪ್ರಸ್ಥಕ್ಕೆ ಬಂದು ನೆಲೆಯಾದ ಸಂದರ್ಭ. ದೇವ ಋಷಿ ನಾರದರು ಲೋಕಸಂಚಾರ ಮಾಡುತ್ತಾ, ಯುಧಿಷ್ಠಿರನಿಗೆ ಕೆಲವು ಹಿತನುಡಿಗಳನ್ನು ಹೇಳಲೆಂದು, ಅದರಲ್ಲೂ ಒಬ್ಬಳೇ ಪತ್ನಿಯನ್ನು ಹೊಂದಿರುವ ಅವರ ನಡುವೆ ದ್ರೌಪದಿಯ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಸ್ಪರ್ಧೆ ಏರ್ಪಟ್ಟು, ಅನರ್ಥವಾಗದೇ ಇರಲೆಂಬ ಉದ್ದೇಶದಿಂದ, ಹೇಗೆ ಅನ್ಯೋನ್ಯವಾಗಿ ಜೀವಿಸಿದ್ದ ಇಬ್ಬರು ಅಣ್ಣತಮ್ಮಂದಿರು, ಒಬ್ಬ ಹೆಣ್ಣಿಗಾಗಿ ತಮ್ಮಲ್ಲೇ ಬಡಿದಾಡಿಕೊಂಡು ಸತ್ತರು ಎಂಬ ಕಥೆಯನ್ನು ಹೇಳುತ್ತಾರೆ.

ಸುಂದನೂ ಉಪಸುಂದನೂ ನಿಕುಂಭನೆಂಬ ಅಸುರನ ಮಕ್ಕಳು. ಇವರಿಬ್ಬರೂ ಅನ್ಯೋನ್ಯ ಸೋದರರು. ಒಂದೇ ಹಾಸಿಗೆ, ಒಂದೇ ತಟ್ಟೆ, ಒಂದೇ ಬಟ್ಟೆ, ಒಂದೇ ಜೀವ, ಎರಡು ದೇಹ ಎಂಬಷ್ಟು ಅನ್ಯೋನ್ಯತೆಯಿಂದ ಇದ್ದರು. ಇವರು ಬ್ರಹ್ಮನನ್ನು ಮೆಚ್ಚಿಸಿ ನಮಗೆ ಪರಸ್ಪರ ನಮ್ಮಿಂದಲೇ ಹೊರತು ಬೇರೆ ಇನ್ಯಾರಿಂದಲೂ ಮರಣ ಬಾರದಿರಲಿ ಎಂಬ ವರ ಪಡೆದುಕೊಳ್ಳುತ್ತಾರೆ. ಇವರಿಬ್ಬರಿಗೂ ತಮ್ಮ ತಮ್ಮ ನಡುವಿನ ಭ್ರಾತೃಪ್ರೇಮವು ಎಂದೆಂದಿಗೂ ಅಚಲವೆಂಬ ವಿಶ್ವಾಸವಿದ್ದಿತು.

ವರ ಪಡೆದುಕೊಂಡ ರಾಕ್ಷಸರು ಎಲ್ಲ ದುರುಳರಂತೆ ಯಜ್ಞಯಾಗಾದಿಗಳನ್ನು ಹಾಳುಗೆಡವುತ್ತಾ, ದೇವತೆಗಳನ್ನು ಪೀಡಿಸುತ್ತಾ, ಜನರನ್ನು ಕೊಲ್ಲುತ್ತಾ ಅಟ್ಟಹಾಸ ಮಾಡಲಾರಂಭಿಸಿದರು. ಇವರ ಹಾವಳಿ ವಿಪರೀತವಾದಾಗ, ದೇವತೆಗಳೂ, ಋಷಿಗಳೂ ಹಿಂಡು ಕಟ್ಟಿಕೊಂಡು ಬ್ರಹ್ಮನ ಬಳಿ ಹೋಗಿ ಪರಿಹಾರ ಬೇಡಿದರು.


ಬ್ರಹ್ಮನು ಇವರಿಬ್ಬರ ನಡುವೆ ಭೇದವನ್ನು ತರಲೇಬೇಕೆಂದು ನಿಶ್ಚಯಿಸಿ, ವಿಶ್ವಕರ್ಮನನ್ನು ಕರೆದು, ಇದುವರೆಗೂ ಯಾರೂ ಸೃಷ್ಟಿಸಲಾಗದ ಒಬ್ಬ ಅಪೂರ್ವ ಸುಂದರಿಯನ್ನು ನಿರ್ಮಿಸೆಂದು ಆಜ್ಞೆ ಮಾಡುತ್ತಾನೆ. ಅದರಂತೆಯೇ ವಿಶ್ವಕರ್ಮನು, ನೋಡುವವರ ಚಿತ್ತವನ್ನು ಅಪಹರಿಸುವಂತೆ ಮನೋಹರವಾಗಿರುವ ಒಬ್ಬ ಹೆಣ್ಣನ್ನು ಸೃಷ್ಟಿ ಮಾಡುತ್ತಾನೆ. ಆಕೆಯ ಅನುಪಮ ಸೌಂದರ್ಯವನ್ನು ಕಂಡ ಬ್ರಹ್ಮನು, ಈಕೆಯ ದೇಹದ ತಿಲ ಭಾಗವೂ ಬಿಡದಂತೆ (ಎಳ್ಳಿನ ಗಾತ್ರದಷ್ಟು ಸಣ್ಣ ಭಾಗವೂ) ಉತ್ಕೃಷ್ಟವೂ, ಉತ್ತಮವೂ ಆಗಿರುವುದರಿಂದ, ಅಂದರೆ ಈಕೆಯಲ್ಲಿ ಎಳ್ಳಷ್ಟೂ ಲೋಪವೆಂಬುದೇ ಇಲ್ಲವಾಗಿರುವುದರಿಂದ, ಈಕೆಗೆ ತಿಲೋತ್ತಮೆ ಎಂದು ನಾಮಕರಣ ಮಾಡುತ್ತಾನೆ.

ಈಕೆ ಲೋಕದಲ್ಲೆಲ್ಲಾ ತನ್ನ ರೂಪಿನ ಕಂಪನ್ನು ಚೆಲ್ಲುತ್ತಾ, ನಡೆದು ಬರುತ್ತಿದ್ದಳು. ಕಡೆಗೂ ಈಕೆಯು ಸುಂದೋಪಸುಂದರ ಎದುರಿಗೆ ಬಂದು ನಿಲ್ಲುತ್ತಾಳೆ. ಅವಳ ರೂಪಲಾವಣ್ಯದಿಂದ ಆಕರ್ಷಿತರಾದ ಸುಂದ ಉಪಸುಂದರು, ಈಕೆ ನನ್ನವಳು! ಅಲ್ಲ, ಈಕೆ ನನ್ನವಳು!! ಎಂದು ತಮ್ಮ ತಮ್ಮಲ್ಲೇ ಹೊಡೆದಾಟ ಮಾಡಿಕೊಳ್ಳುತ್ತಾರೆ.

ಕೊನೆಗೆ ಅವರು ಪಡೆದ ವರದಂತೆ ಇಬ್ಬರೂ ಪರಸ್ಪರ ಬಡಿದಾಡಿಕೊಂಡು ಸಾಯುತ್ತಾರೆ. ನಾರದರಿಂದ ಈ ಅಪೂರ್ವ ಸೋದರರ ಕಥೆ ಕೇಳಿದ ಪಾಂಡವರು ತಮ್ಮಲ್ಲೇ ಒಂದು ಕರಾರು ಮಾಡಿಕೊಳ್ಳುತ್ತಾರೆ. ಅದೇನೆಂದರೆ, ಪಾಂಚಾಲಿಗೆ ಸರಣಿಯಂತೆ ಒಂದು ವರ್ಷದ ಅವಧಿಗೆ ಒಬ್ಬನು ಮಾತ್ರವೇ ಪತಿಯಾಗಿ ಇರತಕ್ಕದ್ದು. ಉಳಿದ ನಾಲ್ವರು ಸೋದರರ ಪೈಕಿ ಯಾರೇ ಇವರ ಏಕಾಂತಕ್ಕೆ ಭಂಗ ತಂದರೂ ಒಂದು ವರ್ಷ ಆಕೆಯಿಂದ ದೂರವಿರಬೇಕು ಮತ್ತು ತೀರ್ಥಯಾತ್ರೆ ಮಾಡಬೇಕು ಎಂಬ ಕರಾರು.
ಸಂ.: ದಾಮೋದರ ಶೆಟ್ಟಿ, ಇರುವೈಲು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು