ಯಕ್ಷ ಮೆಲುಕು | ಕರ್ಣ-ಶಲ್ಯ ವಾದ ವಿವಾದ: ಎಂಪೆಕಟ್ಟೆ ರಾಮಯ್ಯ ರೈ ಅವರ ನೆನಪು

ಎಂಪೆಕಟ್ಟೆ ರಾಮಯ್ಯ ರೈಗಳ ವೇಷ (ವಾಟ್ಸಪ್ ಕೃಪೆ)
ಧರ್ಮಸ್ಥಳ ಮೇಳದ ತಿರುಗಾಟದ ಅವಧಿಯಲ್ಲಿ ಎಂಪೆಕಟ್ಟೆ ರಾಮಯ್ಯ ರೈಗಳ ಕರ್ಣ ಪಾತ್ರ ಮಿಂಚುತ್ತಿದ್ದ ಕಾಲವದು. ಮಳೆಗಾಲದ ತಾಳಮದ್ದಳೆಯಾಗಲೀ, ಮೇಳದ ಆಟವೇ ಆಗಲಿ. ಕರ್ಣನ ಪಾತ್ರವನ್ನು ಅವರು ತುಂಬ ಚೆನ್ನಾಗಿ ಕಟ್ಟಿಕೊಡುತ್ತಿದ್ದರು. ಆದರೆ ಎದುರಿನ ಶಲ್ಯ ಅರ್ಥಧಾರಿ ಹದ ತಪ್ಪಿದಾಗ, ಎಂಪೆಕಟ್ಟೆಯವರದೂ ಮಾತಿನ ಏಟು. ನೆನಪಿಸಿಕೊಂಡಿದ್ದಾರೆ ಹಿರಿಯ ಗುರು ಹರಿನಾರಾಯಣ ಬೈಪಾಡಿತ್ತಾಯರು.
ಹಿಂದೆ ಧರ್ಮಸ್ಥಳ ಮೇಳದಲ್ಲಿದ್ದಾಗ ಆಗಿನ ಖಾವಂದರಾದ ಮಂಜಯ್ಯ ಹೆಗ್ಗಡೆಯವರು ಕಲಾವಿದರ ಮಳೆಗಾಲದ ಉತ್ಪತ್ತಿಗಾಗಿ ಒಂದು ವ್ಯವಸ್ಥೆ ಮಾಡಿದ್ದರು. ಇದರೊಂದಿಗೆ ಯಕ್ಷಗಾನದ ಸೇವೆಯೂ ಅವರ ಉದ್ದೇಶವಾಗಿತ್ತು ಎನ್ನಬಹುದು. ಅಂದರೆ, ಮಳೆಗಾಲದಲ್ಲಿ ಮನೆಮನೆಯಲ್ಲಿ ತಾಳಮದ್ದಳೆ ಮಾಡಬೇಕು ಅಂತ ಅವರು ಸೂಚಿಸಿದ್ದರು.

ಹೀಗಾಗಿ ಮೇಳಗಳು ಒಳಗಾದ ಬಳಿಕ ಮನೆಮನೆಗೆ ಹೋಗಿ ತಾಳಮದ್ದಳೆ ಮಾಡುತ್ತಿದ್ದೆವು. ಸುತ್ತಮುತ್ತಲಿರುವವರು ಕಲಾವಿದರಾಗಿ ಭಾಗವಹಿಸುತ್ತಿದ್ದರು. ಮೇಳದ ಕಲಾವಿದರು ಬಂದರೆ ಅವರಿಗೂ ಅವಕಾಶ ಕೊಡಬೇಕು ಎಂಬ ಸೂಚನೆಯಿತ್ತು.

ಹೀಗೆಯೇ ಒಮ್ಮೆ, ಕರ್ಣಾರ್ಜುನ ಕಾಳಗ ಪ್ರಸಂಗ. ನಾನು ಮದ್ದಳೆಗಿದ್ದೆ, ರಾಘವೇಂದ್ರ ತೋಳ್ಪಡಿತ್ತಾಯರ ಭಾಗವತಿಕೆ. ಎಂಪೆಕಟ್ಟೆ ರಾಮಯ್ಯ ರೈಗಳದು ಕರ್ಣನ ಪಾತ್ರ. ಅವರ ಕರ್ಣ ಪಾತ್ರವೆಂದರೆ ಅದೊಂದು ರಸವೈಭವವೇ. ಇದಕ್ಕಾಗಿಯೇ ಪ್ರೇಕ್ಷಕರು ಬರುವವರಿದ್ದರು. ಅಷ್ಟು ಚೆನ್ನಾದ ಪಾತ್ರ ಚಿತ್ರಣ ಅವರದಾಗಿತ್ತು. ಇನ್ನೊಬ್ಬರದು (ಹೆಸರು ನೆನಪಿಲ್ಲ) ಶಲ್ಯನ ಪಾತ್ರ. ಈ ಪ್ರಸಂಗದಲ್ಲಿ ಕರ್ಣ-ಶಲ್ಯರ ಸಂವಾದ ಸರಿಯಾಗಿ ಹೋದರೆ ಆಯಿತು. ಒಬ್ಬ ಏನಾದರೂ ಪೆದಂಬು ಮಾತಾಡಿದರೆ ಅಥವಾ ತಪ್ಪಿ ಮಾತನಾಡಿದರೆ ಅದು ಸಂವಾದವಾಗದೆ, ವಾದವೂ, ವಿವಾದವೂ ಆಗುವುದು ಖಚಿತ.

ಹೀಗೆಯೇ, ಶಲ್ಯ-ಕರ್ಣರ ಸಂವಾದ ಸಾಗುತ್ತಿತ್ತು. ಶಲ್ಯ ಪಾತ್ರಧಾರಿ ತರ್ಕ ಮಾಡಿದ್ದಲ್ಲದೆ, ಕುತರ್ಕಕ್ಕೆ ಇಳಿದ. ಶಲ್ಯ ತಾನಾಗಿ ರಥವಿಳಿದು ಹೋಗಬೇಕಿತ್ತು. ಆದರೆ ಎಷ್ಟು ಹೇಳಿದರೂ ವಾದ ಮುಗಿಸಲೊಲ್ಲ. ತಾಳಮದ್ದಳೆ ಮುಗಿಸುವ ಸಮಯವೂ ಸಮೀಪಿಸುತ್ತಿತ್ತು. ಈತನ ವಾಗ್ವೈಖರಿ ಮುಂದುವರಿದೇ ಇತ್ತು.

ಎಂಪೆಕಟ್ಟೆಯವರಿಗೂ ಬಹುಶಃ ಕೋಪ ಬಂದಿತ್ತೋ ಅಥವಾ ಅಯ್ಯೋ ಪಾಪ ಅನಿಸಿತ್ತೋ ಗೊತ್ತಿಲ್ಲ. ಕೊನೆಗೂ ಶಲ್ಯ ನಿರ್ಗಮನದ ಕ್ಷಣದಲ್ಲಿ ಈ ಮಾತು ಹೇಳಿಯೇ ಬಿಟ್ಟರು.

ನಿಮ್ಮಂಥವರಿಂದಾಗಿ ಕೌರವನಿಗೆ ಮೊದಲೇ ತಲೆಬಿಸಿ ಜಾಸ್ತಿಯಾಗಿದೆ. ಆದರೆ ಅವನು ಛಲದಂಕ ಮಲ್ಲ. ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿ, ಕುರುಕ್ಷೇತ್ರ ಯುದ್ಧರಂಗದಿಂದ ಹೊರ ನಡೆದದ್ದು ಕೌರವನಿಗೆ ತಲೆಕೂದಲು ಹೋದಂತಾಯಿತಷ್ಟೇ. ಮತ್ತೆ, ದ್ರೋಣರು ಕೂಡ ಏನೋ ನೆಪ ಹೇಳಿ ಯುದ್ಧರಂಗದಿಂದ ವಿಮುಖವಾಗಿದ್ದು ಮೀಸೆ ಹೋದಂತಾಯಿತು. ಈಗ ನೀನೂ ಹೊರಟಿದ್ದೀಯಾ. ನೀನು ಹೋದರೂ ಕೌರವನಿಗೇನೂ ನಷ್ಟವಿಲ್ಲ. ಇನ್ನೂ ಕೆಳಗಿನದ್ದು ಹೋದಂತಾಯಿತಷ್ಟೇ ಎಂದಾಗ ಭಾಗವತರಾಗಿದ್ದ ಶ್ರೀಯುತ ರಾಘವೇಂದ್ರ ತೋಳ್ಪಾಡಿತ್ತಾಯರಿಗೆ ನಕ್ಕು ನಕ್ಕು ಸುಸ್ತಾಗಿ, ಮುಂದಿನ ಪದ ತೆಗೆದುಕೊಳ್ಳುವುದಕ್ಕೆ ಸ್ವಲ್ಪ ಸುಧಾರಿಸಿಕೊಳ್ಳಬೇಕಾಯಿತು.

ಇನ್ನೊಂದು ಕಡೆ, ಧರ್ಮಸ್ಥಳ ಮೇಳದ ಆಟ. ಮಹಾರಥಿ ಕರ್ಣ. ಕಡತೋಕ ಭಾಗವತರು, ಚೆಂಡೆಗೆ ಗುರುಗಳಾದ ನೆಡ್ಲೆ ನರಸಿಂಹ ಭಟ್ರು, ನಾನು ಮದ್ದಳೆಗಿದ್ದೆ. ಪ್ರಸಂಗ ಇದೇ ಕರ್ಣಾರ್ಜುನ. ಎಂಪೆಕಟ್ಟೆಯವರ ಕರ್ಣ. ಮೇಳದ ಪ್ರಸಿದ್ಧ ಕಲಾವಿದರೊಬ್ಬರದು ಶಲ್ಯನ ಪಾತ್ರ. ಹೀಗೆಯೇ ವಾದ-ವಿವಾದ ಮುಂದುವರಿಯಿತು. ಎಷ್ಟೇ ಹೊತ್ತಾದರೂ ಶಲ್ಯ ಮಾತು ನಿಲ್ಲಿಸುತ್ತಿಲ್ಲ, ಕಥೆಯ ಪ್ರಕಾರ ರಂಗದಿಂದ ತಾನಾಗಿ ನಿರ್ಗಮಿಸುತ್ತಲೂ ಇಲ್ಲ.

ಎಂಪೆಕಟ್ಟೆಯವರಿಗೆ ರೋಸಿ ಹೋಯಿತು. ಹಲವಿದೇತಕೆ ಪದದ ಅರ್ಥವಾದಾಗಲೂ ವಾದ-ವಿವಾದ ತಾರಕಕ್ಕೇರಿದಾಗ, ಶಲ್ಯ ಹೋಗುವುದಿಲ್ಲ ಎಂದು ತಿಳಿದು ಕೋಪದಿಂದ, 'ನಿನ್ನ ಅಗತ್ಯ ನನಗಿಲ್ಲ, ನಡಿ ನೀನು' ಅಂತ ಶಲ್ಯನನ್ನು ಯುದ್ಧರಂಗದಿಂದ ಹೋಗುವಂತೆ ತಾವಾಗಿಯೇ ಸೂಚಿಸಿಬಿಟ್ಟರು!

ಆಟ ಮುಗಿದು ಚೌಕಿಯ ಬಳಿ, ಶಲ್ಯ ಪಾತ್ರಧಾರಿಗಳು ಎಂಪೆಕಟ್ಟೆಯವರಲ್ಲಿ ಹೇಳುವುದು ಕೇಳಿಸುತ್ತಿತ್ತು, 'ಇಂಚಲಾ ಪನ್ಪಿನಾ ಮಾರಾಯ್ರೇ!' (ಹೀಗೂ ಹೇಳುವುದಾ ಮಹಾರಾಯರೇ) ಅಂತ!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು