![]() |
ಹನೂಮಂತನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ. ಚಿತ್ರ: ಸುರೇಶ್ ಸೂರಿ ಫೋಟೋಗ್ರಫಿ, ಒಡ್ಡೋಲಗ |
ಯಕ್ಷಗಾನ ಕಲೆ - ಪ್ರೇಕ್ಷಕ ವರ್ಗ- ಬದಲಾದ ದೃಷ್ಟಿಕೋನ ಸರಣಿಯ 17ನೇ ಕಂತಿನಲ್ಲಿ ಯಕ್ಷಗಾನದ ಆಹಾರ್ಯಗಳಲ್ಲಿ ಆದ ಬದಲಾವಣೆಗಳು, ಅದರ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದ್ದಾರೆ ಲೇಖಕ ಸುರೇಂದ್ರ ಪಣಿಯೂರ್
ಯಕ್ಷಗಾನ ಬದಲಾಗಿದೆ. ಸುಧಾರಣೆಯ ಕಾರಣಕ್ಕೆ ಬದಲಾಗಿದೆ. ಎಷ್ಟು ಬದಲಾಗಿದೆ? ಹೇಗೆ ಬದಲಾಗಿದೆ? ಎನ್ನುವುದನ್ನು ನೋಡಬೇಕಾದರೆ ಯಕ್ಷಗಾನ ಕಲೆಯ ಮೂಲ ಸ್ವರೂಪವನ್ನು ಅವಲೋಕಿಸುವ ಅಗತ್ಯ ಇದೆ. ಹಾಗಾದರೆ ಮೂಲ ಹೇಗಿತ್ತು ? ನೋಡೋಣ.
ಯಕ್ಷಗಾನದ ಆಹಾರ್ಯದ ವಿಭಾಗವನ್ನು ನೋಡುವುದಾದರೆ, ರಮ್ಯಾದ್ಭುತ ಕಲೆಯಾದ ಯಕ್ಷಗಾನವು ಸಾದೃಶ್ಯತೆಯನ್ನು ಕಾಣುವಲ್ಲಿ ಆಹಾರ್ಯವೇ ಪ್ರಮುಖವಾದ ಅಂಶ. ಕಲಾವಿದನು ಅಲೌಕಿಕ ಪ್ರಪಂಚವನ್ನು ಪ್ರೇಕ್ಷಕರ ಎದುರು ರಂಗದಲ್ಲಿ ಪ್ರದರ್ಶಿಸುವಾಗ ಆ ಕಥಾನಕದ ಪಾತ್ರಗಳಾಗಿಯೇ ರಂಗದಲ್ಲಿ ಪ್ರಸ್ತುತಗೊಳ್ಳಬೇಕು. ಪ್ರತಿಯೊಂದು ಪಾತ್ರಗಳ ರೂಪವು ಆಯಾ ಪಾತ್ರಗಳ ಗುಣಧರ್ಮಕ್ಕೆ ಅನುಗುಣವಾಗಿರಬೇಕು. ಇದು ಸಾಕಾರಗೊಳ್ಳುವುದು ಆಹಾರ್ಯದಿಂದ. ಅಮೂರ್ತವಾದ ಅಲೌಕಿಕ ಜಗತ್ತು ರಂಗದಲ್ಲಿ ಆಹಾರ್ಯ ಹಾಗೂ ವಾಚಿಕದ ಮೂಲಕ ಮೂರ್ತ ರೂಪ ಪಡೆದು ಅನಾವರಣಗೊಳ್ಳುತ್ತದೆ. ತನ್ಮೂಲಕ ಗೇಯ ಪ್ರಬಂಧವು ಜೀವತಳೆದು ದೃಶ್ಯ ಮೂಲಕ ಗೋಚರಿಸುತ್ತದೆ.
ಮನುಷ್ಯನು ನಿರಾಕಾರವಾದ ದೇವರುಗಳನ್ನು ಮೂರ್ತಿಯ ಮೂಲಕ ಸಾದೃಶ್ಯವಾಗಿರಿಸಿಕೊಂಡು ಪೂಜೆ ಮಾಡಿದ. ಇಲ್ಲಿ ಆತನಿಗೆ ಮೂರ್ತಿ ಶಿಲ್ಪ ಹೇಗಿರಬೇಕೆಂದು ಹೇಳುವ ಪ್ರತಿಮಾಲಕ್ಷಣ ಶಾಸ್ತ್ರ ಇತ್ತು. ಅದೇ ರೀತಿಯಲ್ಲಿ ಯಕ್ಷಗಾನ ರಂಗದಲ್ಲಿ ಪುರಾಣ ಕಥೆಗಳು ಪ್ರದರ್ಶನ ಹೊಂದುವ ಸಮಯದಲ್ಲಿ ಕಲಾವಿದರು ಅಲ್ಲಿರುವ ವ್ಯಕ್ತಿಗಳ ರೂಪವನ್ನು ತಮ್ಮ ಕಲ್ಪನಾ ಶಕ್ತಿಯ ಮೂಲಕವೂ ಆಹಾರ್ಯದಿಂದಲೂ ಸಾದೃಶ್ಯಗೊಳಿಸಿದರು.
ಈ ರೀತಿಯ ಕ್ರಿಯೆಯಲ್ಲಿ ಬಣ್ಣಗಳನ್ನು ಬಳಸಿಕೊಂಡು ಮುಖವರ್ಣಿಕೆಯನ್ನು ಸಂಯೋಜಿಸುವ ಮೂಲಕ ಪಾತ್ರಗಳ ಬಿಂಬ ರಚನೆಯನ್ನು ಮಾಡುತ್ತಾ ಇದ್ದರು. ಬಣ್ಣಗಳ ಗುಣಗಳಿಂದ ಸಾಂಕೇತಿಕವಾಗಿ ಪಾತ್ರ ಸ್ವಭಾವವನ್ನು ತಿಳಿಯಪಡಿಸುತ್ತಿದ್ದರು. ಅದಕ್ಕೆ ಹೊಂದಿಕೆಯಾಗುವ ವಸ್ತ್ರವಿನ್ಯಾಸ, ಧರಿಸುವ ಆಯುಧ ಇತ್ಯಾದಿಗಳಿಂದ ಪುರಾಣ ಲೋಕದ ವ್ಯಕ್ತಿತ್ವಗಳು ರಂಗದಲ್ಲಿ ಸಾಕಾರಗೊಳ್ಳುತ್ತಿದ್ದವು.
ಈ ಕಾರ್ಯದಲ್ಲಿ ಕಲಾವಿದನ ಸೃಜನಾತ್ಮಕ, ಕಲಾತ್ಮಕ ದೃಷ್ಟಿಕೋನವು ಪರಿಪೂರ್ಣವಾಗಿ ಬಳಕೆಗೊಂಡಿದೆ. ಇದಕ್ಕಾಗಿ ಪೂರ್ವದಲ್ಲಿ ಕಲಾವಿದರು ಪರಿಸರದಲ್ಲಿ ಲಭ್ಯವಿದ್ದ ಸಾಮಾಗ್ರಿಗಳನ್ನು ಆಹಾರ್ಯದ ಪರಿಕರವನ್ನಾಗಿಸಿ ಬಳಸಿಕೊಳ್ಳುತ್ತಿದ್ದರು.
ಮೊದಲೆಲ್ಲ ಯಕ್ಷಗಾನ ಮುಖವರ್ಣಿಕೆಯಲ್ಲಿ ನೈಸರ್ಗಿಕವಾಗಿ ಲಭ್ಯವಿದ್ದ ಬಣ್ಣಗಳನ್ನು ಬಳಸುತ್ತಿದ್ದರು. ಉದಾ. ಹಳದಿ ಬಣ್ಣಕ್ಕೆ ಅರದಾಳ, ಕೆಂಪು ಬಣ್ಣಕ್ಕೆ ಒಂದು ನಮೂನೆಯ ಕೆಂಪು ಕಲ್ಲನ್ನು ಅರೆದು ಮಾಡಿದ ಪುಡಿ. ಕಪ್ಪು ಬಣ್ಣಕ್ಕೆ ಹೊನ್ನೆ ಎಣ್ಣೆಯಿಂದ ಮಾಡಿದ ಕಾಡಿಗೆ. ರಕ್ಕಸ ವೇಷಗಳ ಮುಖವರ್ಣಿಕೆಗೆ ಅಕ್ಕಿ ಹಿಟ್ಟು ಮತ್ತು ಸುಣ್ಣದ ಮಿಶ್ರಣದಿಂದ ತಯಾರಿಸಿದ ಚುಟ್ಟಿ ಇಡುತ್ತಿದ್ದರು. ಆ ದಿನಗಳಲ್ಲಿ ಮುಖವರ್ಣಿಕೆಗೆ ತುಂಬಾ ಬಣ್ಣಗಳನ್ನು ಉಪಯೋಗಿಸುತ್ತಿರಲಿಲ್ಲವೆಂದು ಹಿರಿಯ ಕಲಾವಿದರು ಹೇಳುತ್ತಿದ್ದರು.
ಕಲೆಯೆನ್ನುವುದು ನಿಂತ ನೀರಲ್ಲ. ಮನುಷ್ಯ ನಾಗರಿಕತೆಯತ್ತ ನಡೆದು ಬಂದ ಹಾಗೆ ಸುಧಾರಣೆ ಹಾಗೂ ಬದಲಾವಣೆಗಳನ್ನು ಹೊಂದುತ್ತಾ ಬಂದ. ಅದೇ ರೀತಿಯಲ್ಲಿ ಯಕ್ಷಗಾನ ಕಲೆಯೂ ಒಂದಷ್ಟು ಸುಧಾರಣೆ, ಬದಲಾವಣೆಯನ್ನು ಕಂಡಿತು.
Yakshagana.in Updates ಗಾಗಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಯಕ್ಷಗಾನದ ವೇಷಭೂಷಣಗಳಲ್ಲಿ ಬಳಕೆ ಆಗುತ್ತಾ ಇದ್ದದ್ದು ಎಲ್ಲವೂ ನೈಸರ್ಗಿಕವಾಗಿ ಲಭ್ಯವಿದ್ದ ವಸ್ತುಗಳು. ಉದಾ. ಹತ್ತಿಯ ಬಟ್ಟೆಗಳು, ಬೆಂಡಿನ ಮರಗಳಿಂದ ಕೊರೆದು ಮಾಡಿ ಬೇಗಡೆ ಹಚ್ಚಿದ ಕಿರೀಟ, ಆಯುಧ ಹಾಗೂ ಆಭರಣದ ಸಾಮಾನುಗಳು. ನಾರಿನಿಂದ ಕೂದಲು, ಜಗಮಗಿಸಲು ಕನ್ನಡಿ ಹರಳುಗಳು, ನವಿಲುಗರಿಗಳು, ಕೆಂಜಳಿನ ಬಾಲ, ಹಕ್ಕಿಯ ರೆಕ್ಕೆ ಪುಕ್ಕಗಳು ಬಸವನ ಕೋಡು, ಬಾಳೆದಿಂಡಿನ ನಾರುಗಳು ಇತ್ಯಾದಿಗಳು... ಇವೆಲ್ಲವೂ ಕಲಾವಿದನ ಕಲ್ಪನೆಯಲ್ಲಿ ಕಲೆಯಾಗಿ ಅರಳುತ್ತಿದ್ದವು. ಈ ರೀತಿಯಲ್ಲಿದ್ದ ವಸ್ತ್ರಾಭರಣಗಳಲ್ಲಿ ಬಳಸುತ್ತಿದ್ದ ಕಚ್ಚಾ ವಸ್ತುಗಳು ಸುಧಾರಣೆಗೊಂಡು ನೈಸರ್ಗಿಕ ಬಣ್ಣಗಳ ಜಾಗದಲ್ಲಿ ಸಿಂಥೆಟಿಕ್ ಬಣ್ಣಗಳು, ಪಾಲಿಯೆಸ್ಟರ್ ಬಟ್ಟೆಗಳು ಬಂದವು. ಮುಖವರ್ಣಿಕೆಯಲ್ಲಿ ಅದ್ಭುತ ಸುಧಾರಣೆಗಳಾದವು. ಕೈ ಬೆರಳಿನಿಂದ ಎಳೆಯುತ್ತಿದ್ದ ರೇಖೆಗಳು, ಕಡ್ಡಿ ಹಾಗೂ ಬ್ರಶ್‌ಗಳಿಂದ ಸೂಕ್ಷ್ಮತೆಯನ್ನು ಕಂಡುಕೊಂಡು ಸೌಂದರ್ಯವನ್ನು ಗಳಿಸಿದವು. ಪಾಲಿಯೆಸ್ಟರ್ ಬಟ್ಟೆಗಳು ನಿರಂತರ ಬೆವರು ಬಿಸಿಲಿನಲ್ಲೂ ಹತ್ತಿಯ ಬಟ್ಟೆಯ ರೀತಿಯಲ್ಲಿ ಬಣ್ಣಗುಂದದೆ ಬಾಳಿಕೆ ಬರುವಂತಾಯ್ತು.
ಆದರೇ ಇದೇ ಸುಧಾರಣೆಗಳನ್ನು ಬಳಕೆ ಮಾಡುವಲ್ಲಿ ಆದ ಕೊರತೆ ಏನು? ಅತಿಯಾದ ಬಣ್ಣಗಳ ಬಳಕೆಯಿಂದ ಮುಖವರ್ಣಿಕೆಯು ವಿಜೃಂಭಣೆ ಹೊಂದಿ, ಅರಸ- ಆಳು, ರಾಣಿ-ದಾಸಿ, ಧನಿಕ-ತಿರುಕ ಎಂಬ ವ್ಯತ್ಯಾಸ ತಿಳಿಯದೆ ಎಲ್ಲವನ್ನೂ ಎಲ್ಲದಕ್ಕೂ ಬಳಸಿಕೊಂಡು ವಿಜೃಂಭಿಸಲಾಯಿತು.
ವೇಷಗಳು ಧರಿಸಿದ ಹತ್ತಿಯ ಬಟ್ಟೆಗಳು ಮಂದ ಬೆಳಕಿನಲ್ಲಿ ಪ್ರತಿಫಲಿಸದೆ ಆ ಬೆಳಕನ್ನು ಹೀರಿಕೊಂಡು ಕಣ್ಣಿನ ಆರೋಗ್ಯಕ್ಕೆ ಹಾನಿಯಾಗದೆ, ಮನೋಹರವಾಗಿ ಕಂಡು ಬಂದು ಮುದ ನೀಡುತ್ತಿದ್ದವು. ಜೊತೆಗೆ ಶಾಖವನ್ನೂ ನೀಡದೆ ಕಲಾವಿದನಿಗೆ ಬೆವರಿನ ತೊಂದರೆ ನೀಡದೆ ರಂಗದ ಕಸುಬಿಗೆ ಅನುಕೂಲಕರವಾಗಿದ್ದವು. ಅದೇ ಜಾಗದಲ್ಲಿ ಬಂದ ಪೊಲಿಯೆಸ್ಟರ್ ಹಾಗೂ ಜರಿ ಬಟ್ಟೆಗಳು ಅತಿಯಾದ ಬಣ್ಣಗಳಿಂದ ರಂಗದಲ್ಲಿಯ ಪ್ರಖರವಾದ ಕಣ್ಣು ಕುಕ್ಕುವ ಬೆಳಕಿಗೆ ವೇಷಗಳ ಸ್ವಭಾವದ ನೈಜತೆಯನ್ನು ಕಾಪಾಡದೆ ಸೊರಗುವಂತಾದುದು ವಿಪರ್ಯಾಸ. ಜೊತೆಗೆ ಶಾಖ ಹೀರುವ ಗುಣರಹಿತವಾದ ಬಟ್ಟೆಗಳಿಂದ ಅತಿಯಾದ ಬೆವರು ಉತ್ಪತ್ತಿಯಾಗಿ ಕಲಾವಿದರ ಆರೋಗ್ಯಕ್ಕೆ ಹಾನಿಯಾದುದೂ ಸುಸ್ಪಷ್ಟ. ಅದಕ್ಕಿಂತಲೂ ಮಿಗಿಲಾಗಿ ಅತಿಯಾದ ಬಣ್ಣಗಳಿಂದ ವೇಷಗಳ ಕಲಾತ್ಮಕವಾದ ಭಾವಗಳು ಕಾಣೆಯಾಗಿ ರಂಗದಲ್ಲಿರುವ ಎಲ್ಲಾ ವೇಷಗಳು ಒಂದೇ ರೀತಿಯಾಗಿ ತೋರಿಬಂದು ಒಂದು ರೀತಿಯ ಸಮವಸ್ತ್ರ ಸಂಹಿತೆಯಾಗಿ ತೋರಿ ಬರುವುದೂ ದಿಟ. ಇದರಿಂದಾಗಿ ಪಾತ್ರಗಳ ನೈಜ ಭಾವಕ್ಕೆ ಕೊರತೆಯಾದುದೂ ಕಂಡು ಬರುತ್ತದೆ. (ಸಶೇಷ).
✍ ಸುರೇಂದ್ರ ಪಣಿಯೂರ್
Tags:
ಲೇಖನ