ಸಿರಿಬಾಗಿಲು ರಾಮಕೃಷ್ಣ ಮಯ್ಯ ನೇತೃತ್ವದ 'ಯಕ್ಷಾನುಗ್ರಹ' ವಾಟ್ಸ್ಆ್ಯಪ್ ಬಳಗದ ಸಾರ್ಥಕ ಸಾಧನೆ
ಯಕ್ಷಾನುಗ್ರಹ ಎಂಬ ಹೆಸರಿನ ವಾಟ್ಸ್ಆ್ಯಪ್ ಬಳಗವು ಕೋವಿಡ್ ಸಂಕಷ್ಟದ ದಿನಗಳನ್ನು ಸಮರ್ಥವಾಗಿ ಬಳಸಿಕೊಂಡು, ಯಕ್ಷಗಾನವನ್ನು ಮೆರೆಸಿದ ಕೀರ್ತಿಶೇಷರನ್ನು ಸ್ಮರಿಸಿಕೊಳ್ಳುವ ಅಪೂರ್ವ, ಚಾರಿತ್ರಿಕ ಕೆಲಸಕ್ಕೆ ಕೈ ಹಚ್ಚಿತು. ಇದರ ಪರಿಣಾಮವಾಗಿ, ಪ್ರತಿ ದಿನವೂ ಯಕ್ಷಗಾನಕ್ಕೆ ಕೀರ್ತಿ ತಂದು ಗತಿಸಿದ ಮಹಾನುಭವರನ್ನು ಸ್ಮರಿಸುವ ಲೇಖನ ಸರಣಿಗಳು. ಸದಸ್ಯರೇ ಲೇಖಕರು. ಮಾಹಿತಿಯೆಲ್ಲ ಕಲೆ ಹಾಕುತ್ತಾ ಸಂದುಹೋದ ಕಲಾವಿದರನ್ನೆಲ್ಲ ಸ್ಮರಿಸುತ್ತಾ ಸಾರ್ಥಕವಾಗಿ ವಾಟ್ಸ್ಆ್ಯಪ್ ಬಳಗವನ್ನು ಸದುಪಯೋಗ ಮಾಡಿಕೊಂಡಿದ್ದಾರೆ ಯಕ್ಷಾನುಗ್ರಹ ಸದಸ್ಯರು. ಇದರ ಹಿಂದಿರುವ ರೂವಾರಿ ಧರ್ಮಸ್ಥಳ ಮೇಳದ ಭಾಗವತರು, ಸಿರಿಬಾಗಿಲು ಪ್ರತಿಷ್ಠಾನದ ಸಿರಿಬಾಗಿಲು ರಾಮಕೃಷ್ಣ ಮಯ್ಯ. ಅವರ ಕನಸಿನ ಕೂಸು ಸೆ.04ರಂದು 100ನೇ ದಿನದ ಸಂಭ್ರಮ ಆಚರಿಸುತ್ತಿದೆ. (ದೇರಾಜೆಯವರ ಕುರಿತು 3 ದಿನ, ಶೇಣಿಯವರ ಬಗ್ಗೆ 2 ದಿನ ಮಾಹಿತಿ ವಿನಿಮಯ, ಸ್ಮರಣೆ ನಡೆದಿತ್ತು).
ಇಲ್ಲಿ, ಮೊದಲೇ ನಿಗದಿಯಾದಂತೆ ಬಳಗದ ಸದಸ್ಯರೇ ಮಾಹಿತಿ ಸಂಗ್ರಹಿಸಿ ಲೇಖನಗಳನ್ನು ಪ್ರಕಟಿಸುತ್ತಾರೆ. ಅದಕ್ಕೆ ಸದಸ್ಯರು ಪೂರಕ ಮಾಹಿತಿಗಳನ್ನು ಚಿಕ್ಕ ಬರಹಗಳ ಮೂಲಕ ನೀಡುತ್ತಾರೆ. ಪ್ರತಿ ದಿನವೂ ಸಂಜೆ 5 ಗಂಟೆಗೆ ಗಣಪತಿ ಸ್ತುತಿಯ ಯಕ್ಷಗಾನ ಆಡಿಯೋ ಮೂಲಕ ಕಾರ್ಯಕ್ರಮ ಆರಂಭವಾಗಿ, ರಾತ್ರಿ 10ಕ್ಕೆ ಮಂಗಳ ಪದ್ಯದ ಆಡಿಯೋ ಇರುತ್ತದೆ. ಮಧ್ಯೆ ಓದುಗರಿಗಾಗಿ ಒಂದು ಕ್ವಿಜ್. ವಿಜೇತರನ್ನು ಅಭಿನಂದಿಸಿ ಅವರಿಗೆ ಪುಸ್ತಕ ಬಹುಮಾನ ಕಳುಹಿಸಲಾಗುತ್ತದೆ. ತೆಂಕು-ಬಡಗು ಕಲಾವಿದರ ಭೇದವಿಲ್ಲ, ಯಕ್ಷಗಾನಕ್ಕೆ ಕೊಡುಗೆ ನೀಡಿದವರೆಲ್ಲರನ್ನೂ ಸ್ಮರಿಸಲಾಗುತ್ತದೆ.
ಈ ಸರಣಿಯ 101, 102, 103ನೇ (ಸೆ.3, 4 ಮತ್ತು 5) ದಿನಗಳಂದು ಎಡನೀರು ಮಠದ ಬ್ರಹೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮೃತಿಗಾಗಿ ಮೀಸಲಿಡಲಾಗಿದೆ.
ಶನಿವಾರ ಸೆಪ್ಟೆಂಬರ್ 4ರಂದು ಬೆಳಗ್ಗೆ 9-30ರಿಂದ 12-30ರ ವರೆಗೆ ಯಕ್ಷಾನುಗ್ರಹ ಬಳಗದ 'ಮರೆಯಲಾಗದ ಮಹಾನುಭಾವರು' ಅಂಕಣದ ಶತದಿನೋತ್ಸವ ಕಾರ್ಯಕ್ರಮ ಪ್ರಯುಕ್ತ ಶ್ರೀ ಎಡನೀರು ಮಠದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸಿರಿಬಾಗಿಲು ಪ್ರತಿಷ್ಠಾನ ತಿಳಿಸಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ವಾಟ್ಸಪ್ ಬಳಗದಿಂದ ನಡೆಯುತ್ತಿರುವ 'ಮರೆಯಲಾಗದ ಮಹಾನುಭಾವರು' ಸರಣಿಯ ಬಗ್ಗೆ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕವಿ, ಸಾಹಿತಿ ಡಾ.ಶ್ರೀಧರ್ ಡಿ.ಎಸ್. ಅವರ ಅನಿಸಿಕೆ ಇಲ್ಲಿದೆ.
ಇದು ಇಪ್ಪತ್ತೈದರ ಆಸುಪಾಸಿನ ಯೋಜನೆಯಾದೀತು ಎಂದೇ ಗ್ರಹಿಸಿದ್ದೆ. ನೂರಾಯಿತು. ಇನ್ನೂ ಹೀಗೇ ಸಾಗೀತು ಎಂಬುದಕ್ಕೆ ಆತಂಕವಿಲ್ಲ. ಈ ಪ್ರಯತ್ನದ ಕುರಿತಂತೆ ಈಗ ಸಾಕಷ್ಟು ಪ್ರಚಾರವೂ ಆಗಿದೆ. ಅನೇಕ ಹಿರಿಯರಿಗೇ ತಿಳಿಯದಿರಲು ಕಾರಣ, ಅವರು ವಾಟ್ಸಪ್‌ನಂತಹ ಮಾಧ್ಯಮ ಮಕ್ಕಳಾಟಿಕೆ ಎಂದು ಇನ್ನೂ ಗ್ರಹಿಸಿರುವುದೇ! ನನಗೆ ಬಹುಕಾಲದಿಂದಲೂ ಇಂತಹ ಜಾಲತಾಣಗಳು ಅಮೂಲ್ಯ ವಿಚಾರಗಳ ಚಿಂತನ ವೇದಿಕೆಯಾದರೆ ಎಷ್ಟು ಸೊಗಸು ಅನ್ನಿಸಿತ್ತು. ಆದರೆ ಇನ್ನೂರೈವತ್ತು ಮನಸ್ಸುಗಳು ಅವರವರ ಮಾನಸಿಕ ಮಟ್ಟದಲ್ಲೇ ವ್ಯವಹರಿಸತೊಡಗಿದಾಗ ಇದು ನನಗಲ್ಲ ಎಂದು ಹಲವು ಗುಂಪುಗಳಿಂದ ತಣ್ಣಗೆ ಜಾರಿಕೊಂಡೆ. ಯಕ್ಷಗಾನದಂತಹ ಉನ್ನತ ಕಲೆಯ ಚಿಂತನೆಯನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಳ್ಳಬಹುದು ಎಂಬುದಕ್ಕೆ ಯಕ್ಷಾನುಗ್ರಹದ ನೂರುದಿನ ಈಗ ಸರ್ವರಿಗೂ ಮಾದರಿಯಾಯಿತು.
ನಮ್ಮ ಕಲೆಯನ್ನು ನಿಸ್ವಾರ್ಥ ಮನೋಭಾವದಿಂದ ಬೆಳೆಸಿದ ಕಲಾರತ್ನಗಳ ಪರಿಚಯವೆಂಬುದು ಸಣ್ಣ ಸಾಧನೆಯಲ್ಲ. ಸಾಮಾನ್ಯವಾಗಿ ಅಭಿನಂದನ ಗ್ರಂಥ, ಸಂಸ್ಮರಣ ಗ್ರಂಥಗಳಲ್ಲಿ ಕಲಾವಿದರ ವೈಯಕ್ತಿಕ ಗುಣಸ್ವಭಾವಗಳ ಚಿತ್ರಣವಿರುವುದಿಲ್ಲ. ರಂಗದಲ್ಲಿ ಅವರ ಸಾಧನೆಯ ಪರಿಚಯ ಮಾತ್ರ ಸಿಗಬಹುದು. ಇಲ್ಲಿ ಹಾಗಲ್ಲ. ಕಲಾವಿದರ ವೈಯಕ್ತಿಕ ವಿಚಾರಗಳು, ಸುಖದುಃಖಗಳು, ಅವರು ಕಲಾ ಬದುಕಿಗಿಂತ ಹೊರತಾಗಿ ಕಂಡುಂಡ ನೋವು ನಲಿವುಗಳು, ಅವರ ಒಡನಾಡಿಗಳ ಅನುಭವಗಳು, ಸಾಂಸಾರಿಕ ವಿಚಾರಗಳು, ಚೌಕಿಯ ಸುದ್ದಿಗಳು, ರಂಗದ ಹೊರಗಿನ ವಿಚಾರಗಳೆಲ್ಲ ಚರ್ಚಿತವಾದವು. ಇದೇ ವಿಶೇಷ.
ದೇರಾಜೆಯವರ ಕುರಿತು ಮೂರು ದಿನ, ಶೇಣಿಯವರನ್ನು ಕುರಿತು ಎರಡು ದಿನ ಹೀಗೆ ಚಿಂತನ ನಡೆದಿದೆ. ಉಳಿದ ಅನೇಕರ ವಿಚಾರವಾಗಿಯೂ ರಾತ್ರಿ ಹತ್ತಕ್ಕೇ ಮುಗಿಯದೆ ಮರುದಿನದುದ್ದಕ್ಕೂ ಸಾಗಿದ್ದರಿಂದ ಅನೇಕ ಕಲಾವಿದರ ಚಿಂತನೆಗಳು ಎರಡು ದಿನಗಳೇ ಎನ್ನಬಹುದು.
ಮತ್ತೊಂದು ಸಂತೋಷದ ವಿಚಾರವೆಂದರೆ ಉಭಯ ತಿಟ್ಟುಗಳ ಅಭಿಮಾನಿಗಳು ಇಲ್ಲಿ ಏಕತ್ರಗೊಂಡು ಚಿಂತಿಸಿದ್ದು. ಹಿಂದೆ ಬಡಗಿನ ಕಲಾವಿದರ ಸಾಧನೆ ತೆಂಕಿನವರಿಗೆ, ತೆಂಕಿನವರದ್ದು ಬಡಗಿನವರಿಗೆ ತಿಳಿದದ್ದೇ ಇರಲಿಲ್ಲ. ಇಲ್ಲಿ ಅದು ಸಾಧಿತವಾಯಿತು. ಇದು ಈ ಬಳಗದ ಬಹುದೊಡ್ಡ ಸಾಧನೆ ಎಂದು ಭಾವಿಸುತ್ತೇನೆ. ಸಾಮಾನ್ಯವಾಗಿ ಕಲಾವಿದರು ಎಂದರೆ ವೇಷಧಾರಿಗಳು, ಭಾಗವತರು ಇಲ್ಲಿಗೇ ಮುಗಿಯುತ್ತಿತ್ತು. ಮದ್ದಲೆಗಾರರು, ಸಂಘಟಕರು, ವಿಮರ್ಶಕರೂ ಇಲ್ಲಿ ಗಣನೆಗೆ ಬಂದರು.
ತುಂಬಾ ಹಿಂದಿನ ಕಲಾವಿದರನ್ನು ಕುರಿತ ವಿಚಾರ ಅವರ ಬಗ್ಗೆ ಬಂದ ಲಿಖಿತ ಮಾಹಿತಿಗಳಿಂದಲೇ ತಿಳಿಯಬೇಕು. ಅಂತಹ ಸಂದರ್ಭಗಳಲ್ಲಿ ಸಾಕಷ್ಟು ಚರ್ಚೆ ನಡೆಯಲಿಲ್ಲ. ಹೆಚ್ಚು ಜನ ನೋಡದ, ಕೇಳದ ಕಲಾವಿದರ ಬಗ್ಗೆ ಕೂಡಾ ಹಾಗೇ ಆಗಿದೆ. ಇದು ಸಹಜ. ನಾವು ಯಾವಾಗಲೂ ನೋಡುವ ವ್ಯಕ್ತಿಗಳ ಕುರಿತು ಇರುವ ಅರಿವು ಏನೂ ತಿಳಿಯದವರ ಬಗ್ಗೆ ಇರಲು ಅಸಾಧ್ಯವಷ್ಟೆ. ಅನೇಕ ಕಲಾವಿದರನ್ನು ಕುರಿತ ಮಾಹಿತಿ ಲೇಖನಗಳು ಗ್ರಂಥಾಧಾರಿತ. ಲೇಖಕರು ತೀರಾ ಈಚಿನವರಾದರೆ ಅದು ಸಹಜವೇ. ಅತ್ಯುತ್ಸಾಹದಿಂದ ಹತ್ತಾರು ಲೇಖನಗಳನ್ನು ಬರೆದವರಿದ್ದಾರೆ. ಅವರು ಅಭಿನಂದನೀಯರು. ಕಲಾವಿದರನ್ನು ಕುರಿತು ಚರ್ಚಿಸುವುದು ಬೇರೆ. ಅವರನ್ನು ಕುರಿತು ಲೇಖನವನ್ನು ಬರೆಯುವುದಕ್ಕೆ ಸಾಕಷ್ಟು ಪ್ರಯತ್ನಗಳೂ ಅಗತ್ಯ. ಆದ್ದರಿಂದ ಪ್ರಧಾನ ಲೇಖನವನ್ನು ಬರೆದ ಮಹನೀಯರೆಲ್ಲರೂ ಅಭಿನಂದನೀಯರು.
ಸರಣಿಗೆ ಸೇರ್ಪಡೆಯಾಗಬಹುದಾದ ಪ್ರಮುಖರು ಇನ್ನೂ ಹಲವರಿದ್ದಾರೆ. ಡಾ. ಶಿವರಾಮ ಕಾರಂತರು, ಕು. ಶಿ. ಹರಿದಾಸ ಭಟ್ಟರು,ಕುಬಣೂರು ಬಾಲಕೃಷ್ಣ ರಾವ್, ಉತ್ತರ ಕನ್ನಡದ (ಈ ಬಳಗದಲ್ಲಿ ಸಾಕಷ್ಟು ಮಂದಿ ಆ ಕಡೆಯವರಿಲ್ಲದೆ ಇರುವುದರಿಂದ) ಬೆಳಸಲಿಗೆ ಗಣಪತಿ ಹೆಗಡೆ, ವಿ. ತಿ. ಶೀಗೆಹಳ್ಳಿ, ಜಾನಕೈ ತಿಮ್ಮಪ್ಪ ಹೆಗಡೆ, ತೆಂಕೋಡುಮನೆ ಮಹಾಬಲಗಿರಿಯಪ್ಪ, ನಿಸ್ರಾಣಿ ರಾಮಚಂದ್ರ ಹೆಗಡೆ ಮುಂತಾದ ಪ್ರಖ್ಯಾತರ ಬಗ್ಗೆ ಚಿಂತನೆ ಬಗ್ಗೆ ಮುಂದೆ ಗಮನಿಸಬಹುದು ಎಂಬುದಕ್ಕೆ ಈ ಸೂಚನೆ. ಉಳಿದವರನ್ನು ಬಲ್ಲವರು ನೆನಪಿಸಬಹುದು. ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು, ಸಿಮಂತೂರು ನಾರಾಯಣ ಶೆಟ್ಟರು... ಹೀಗೆ.
ಒಂದು ಸುಹೃತ್ ಸಂವಾದ ತುಂಬಾ ತುಂಬಾ ಯಸ್ವಿಯಾಗಿದೆ. ಮುಂದುವರಿದಿದೆ... ಸಾಗುತ್ತಿರಲಿ. ಇದು ಗ್ರಂಥಸ್ಥವಾಗಲೇಬೇಕು. ಏಕೆಂದರೆ ಯಾವ ವಿಶ್ವವಿದ್ಯಾಲಯವೂ ಮಾಡದ ಸಾಧನೆ ಇದು. ನನಗನ್ನಿಸುವಂತೆ ಒಂದು ಪುಸ್ತಕದಲ್ಲಿ ಕಷ್ಟವಿರಬಹುದು. ಎರಡು ಭಾಗ ಮಾಡಿದರೂ ತೊಂದರೆಯಾಗದು. ಬಳಗದ ಗೆಳೆಯರೆಲ್ಲ ಕೈಜೋಡಿಸಿದರೆ ಕಷ್ಟವಾಗದು. ಕಾರ್ಯ ಕೈಗೂಡುವಂತಾಗಲಿ. ಈ ಬಳಗದ ಮುಂಚೂಣಿಯ ನಾಯಕರಾದ ಭಾಗವತ ರಾಮಕೃಷ್ಣ ಮಯ್ಯರಿಗೆ, ಇದನ್ನು ಸಂಗ್ರಹಿಸಿ ಸಂಚಯನಗೊಳಿಸುತ್ತಿರುವ ರಾಘವೇಂದ್ರ ಉಡುಪರಿಗೆ, ಬಳಗದ ಎಲ್ಲಾ ಆತ್ಮೀಯ ಬಂಧುಗಳಿಗೆ ಸಂತೃಪ್ತಿಯ ಸಂಭ್ರಮದ ನಮನಗಳು.
ಇದುವರೆಗೆ 100 ದಿನಗಳಲ್ಲಿ ಸ್ಮರಿಸಲ್ಪಟ್ಟ ಯಕ್ಷಗಾನ ರಂಗದ ಮರೆಯಲಾರದ ಮಹಾನುಭಾವರು:
1. ಅಗರಿ ಶ್ರೀನಿವಾಸ ಭಾಗವತರು
2. ದಾಸರಬೈಲು ಚನಿಯ ನಾಯ್ಕ
3. ಅರಾಟೆ ಮಂಜುನಾಥ
4. ಪಕಳಕುಂಜ ಕೃಷ್ಣ ನಾಯ್ಕ
5. ಬೇಲ್ತೂರು ರಾಮ ಬಳೆಗಾರ
6. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು
7. ಹೊಸ್ತೋಟ ಮಂಜುನಾಥ ಭಾಗವತ
8. ಕಡತೋಕ ಮಂಜುನಾಥ ಭಾಗವತರು
9. ಬಲಿಪ ನಾರಾಯಣ ಭಾಗವತರು
10. ವೀರಭದ್ರ ನಾಯಕ
11. ಕುರಿಯ ವಿಠಲ ಶಾಸ್ತ್ರೀ 12. ಮೊಳಹಳ್ಳಿ ಹೆರಿಯ ನಾಯ್ಕ್
13. ಮಿಜಾರು ಅಣ್ಣಪ್ಪ
14. ಕೆರೆಮನೆ ಶಿವರಾಮ ಹೆಗಡೆ
15. ಜತ್ತಿ ಈಶ್ವರ ಭಾಗವತರು
16. ಮಲ್ಪೆ ಶಂಕರನಾರಾಯಣ ಸಾಮಗರು
17. ನೆಬ್ಬೂರು ನಾರಾಯಣ ಭಾಗವತರು
18. ಗೇರುಕಟ್ಟೆ ಗಂಗಯ್ಯ ಶೆಟ್ಟಿ
19. ಕೊಳಗಿ ಅನಂತ ಹೆಗಡೆ 20. ಅಜ್ಜನಗದ್ದೆ ಗಣಪಯ್ಯ ಭಾಗವತರು
21. ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ
22. ಪುತ್ತಿಗೆ ರಾಮಕೃಷ್ಣ ಜೋಯಿಸ
23. ನೀಲಾವರ ಮಹಾಲ ಶೆಟ್ಟಿ
24. ಮಾಂಬಾಡಿ ನಾರಾಯಣ ಭಾಗವತರು
25. ಕೆರೆಮನೆ ಮಹಾಬಲ ಹೆಗಡೆ
26. ವಿಟ್ಲ ಗೋಪಾಲಕೃಷ್ಣ ಜೋಶಿ
27. ಕೆರೆಮನೆ ಶಂಭು ಹೆಗಡೆ
28. ದಾಮೋದರ ಮಂಡೆಚ್ಚ
29. ನಾರಾಯಣಪ್ಪ ಉಪ್ಪೂರು
30. ಶೇಣಿ ಗೋಪಾಲಕೃಷ್ಣ ಭಟ್
31. ಪುತ್ತೂರು ನಾರಾಯಣ ಹೆಗ್ಡೆ
32. ಮರವಂತೆ ನರಸಿಂಹ ದಾಸರು
33. ಬಣ್ಣದ ಮಾಲಿಂಗ
34. ಕೆರೆಮನೆ ಗಜಾನನ ಹೆಗಡೆ
35. ಇರಾ ಗೋಪಾಲಕೃಷ್ಣ ಭಾಗವತರು
36. ಕಾಳಿಂಗ ನಾವುಡ
37. ಅಳಿಕೆ ರಾಮಯ್ಯ ರೈ
38. ಕೋಟ ವೈಕುಂಠ
39. ಹೊಸಹಿತ್ಲು ಮಹಾಲಿಂಗ ಭಟ್
40. ಜಲವಳ್ಳಿ ವೆಂಕಟೇಶ ರಾವ್
41. ದಿವಾಣ ಭೀಮ್ ಭಟ್
42. ಕುಂಜಾಲು ರಾಮಕೃಷ್ಣ
43. ಚಂದ್ರಗಿರಿ ಅಂಬು
44. ನಗರ ಜಗನ್ನಾಥ ಶೆಟ್ಟಿ
45. ಪುಳಿಂಚ ರಾಮಯ್ಯ ಶೆಟ್ಟಿ
46. ವಂಡ್ಸೆ ನಾರಾಯಣ ಗಾಣಿಗ
47. ಕಡಂದೆಲೆ ಪುರುಷೋತ್ತಮ ಭಟ್
48. ಕುಮಟಾ ಗೋವಿಂದ ನಾಯ್ಕ
49. ದೇರಾಜೆ ಸೀತಾರಾಮಯ್ಯ
50. ಕುಬಣೂರು ಶ್ರೀಧರ ರಾವ್
51. ರಾಮ ನಾಯಿರಿ
52. ಕಲ್ಲಾಡಿ ಕೊರಗ ಶೆಟ್ಟರು
53. ವೇಣೂರು ಸುಂದರ ಆಚಾರ್ಯ
54. ತೆಕ್ಕಟ್ಟೆ ಆನಂದ ಮಾಸ್ತರ್
55. ಕಿರೀಕ್ಕಾಡು ವಿಷ್ಣುಮಾಸ್ತರ್
56. ಎಂಪೆಕಟ್ಟೆ ರಾಮಯ್ಯ ರೈ
57. ಪೊಳಲಿ ಶಂಕರನಾರಾಯಣ ಶಾಸ್ತ್ರಿ
58. ದೇವಕಾನ ಕೃಷ್ಣ ಭಟ್
59. ನಯನ ಕುಮಾರ್
60. ಉಪ್ಪಳ ಕೃಷ್ಣ ಮಾಸ್ಟರ್
61. ಬೆಳೆಯೂರು ಕೃಷ್ಣಮೂರ್ತಿ
62. ಪಡ್ರೆ ಚಂದು
63. ಶಿರಿಯಾರ ಮಂಜು ನಾಯ್ಕ
64. ಮಾಣಂಗಾಯಿ ಕೃಷ್ಣ ಭಟ್
65. ಗುಂಡೂ ಸೀತಾರಾಮ್ ತಲವಾಟ
66. ಮಲ್ಪೆ ವಾಸುದೇವ ಸಾಮಗ
67. ಕೊರ್ಗಿ ವೆಂಕಟೇಶ ಉಪಾದ್ಯಾಯ
68. ಕಲ್ಲಾಡಿ ವಿಠಲ ಶೆಟ್ಟಿ
69. ವೆಂಕಟರಮಣ ಭಟ್ ಪಟ್ಟಾಜೆ
70. ಕುಂಬಳೆ ಕುಟ್ಯಪ್ಪು
71. ಹಿರಿಯಡ್ಕ ಗೋಪಾಲ ರಾವ್
72. . ಚಿಟ್ಟಾಣಿ ರಾಮಚಂದ್ರ ಹೆಗಡೆ
73. ಎಚ್. ಬಿ. ಯಲ್. ರಾವ್
74. ಮಧೂರು ನಾರಾಯಣ ಹಾಸ್ಯಗಾರ
75. ಬೆಳಾಲು ಧರ್ಣಪ್ಪ ನಾಯ್ಕ
76. ಕುಂಜಾಲು ಶೇಷಗಿರಿ ರಾವ್
77. ನೆಡ್ಲೆ ನರಸಿಂಹ ಭಟ್
78. ಮಧೂರು ಗಣಪತಿ ರಾವ್
79. ಬೊಟ್ಟಿಕೆರೆ ಪುರುಷೋತ್ತಮ ಪೂಂಜ
80. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ
81. ಶ್ರೀ ಪಾದಹೆಗಡೆ ಹಡಿನಬಾಳು
82. ಚೇವಾರು ರಾಮಕೃಷ್ಣ ಕಾಮತ್
83. ಮತ್ಯಾಡಿ ನರಸಿಂಹ ಶೆಟ್ಟಿ
84. ಕಣ್ಣಿಮನೆ ಗಣಪತಿ ಭಟ್
85. ಕರ್ಕಿ ಪರಮಯ್ಯ ಹಾಸ್ಯಗಾರ
86. ದಾಮೋದರ ಶೆಟ್ಟಗಾರ್ ಕಿನ್ನಿಗೊಳಿ
87. ತೆಕ್ಕುಂಜ ಗೋಪಾಲಕೃಷ್ಣ ಭಟ್
88. ಹಾರಾಡಿ ರಾಮ ಗಾಣಿಗ
89. ಕುಕ್ಕಿಲ ಕೃಷ್ಣ ಭಟ್
90. ಹಾರಾಡಿ ಕುಷ್ಠ ಗಾಣಿಗ
91. ಸಿದ್ದಕಟ್ಟೆ ಚೆನ್ನಪ್ಫ ಶೆಟ್ಟಿ
92. ಕೆ. ಬಿ. ನಾರಾಯಣ ಶೆಟ್ಟಿ ಕಿಲ್ಲೆ
93. ಪಣಂಬೂರು ವೆಂಕಟ್ರಾಯ ಐತಾಳ
94. ಗುಂಡ್ಮಿ ರಾಮಚಂದ್ರ ನಾವಡ
95. ಕೇದಗಡಿ ಗುಡ್ಡಪ್ಪ ಗೌಡ
96. ಮಲ್ಪೆ ರಾಮದಾಸ ಸಾಮಗ
97. ಕುಬಣೂರು ಬಾಲಕೃಷ್ಣ ರಾವ್
(ದೇರಾಜೆ ಬಗ್ಗೆ 3 ದಿನ, ಶೇಣಿಯವರ ಬಗ್ಗೆ 2 ದಿನ ಮೀಸಲಿಡಲಾಗಿತ್ತು. ಹೀಗಾಗಿ ಇಂದು ಇಂದು (ಸೆ.02) ನೂರನೇ ದಿನ. ಕುಬಣೂರು ಬಾಲಕೃಷ್ಣ ರಾವ್ ಸ್ಮರಣೆ.)
Tags:
ಲೇಖನ