ವೇಷಗಳನ್ನು ರಮ್ಯಾದ್ಭುತವಾಗಿಸಿದ್ದ ದೊಂದಿ ಬೆಳಕು; ವಿದ್ಯುದ್ದೀಪಗಳಿಂದ ಕಲಾವಿದರಿಗೆ ಆಯಾಸ

ಯಕ್ಷಗಾನ ಕಲೆ - ಪ್ರೇಕ್ಷಕ ವರ್ಗ- ಬದಲಾದ ದೃಷ್ಟಿಕೋನ ಸರಣಿಯ 18ನೇ ಕಂತು: ಯಕ್ಷಗಾನದಲ್ಲಿ ಬೆಳಕಿನ ಬಳಕೆಯಲ್ಲಿ ಆದ ಬದಲಾವಣೆಯ ಕುರಿತು ಅವಲೋಕನ ಮಾಡಿದ್ದಾರೆ ಸುರೇಂದ್ರ ಪಣಿಯೂರು

ಸಾಮಾನ್ಯವಾಗಿ ರಾತ್ರಿಕಾಲದಲ್ಲಿ ಪ್ರದರ್ಶನ ಹೊಂದುತ್ತಿದ್ದ ರಂಗಕಲೆಗಳು ರಂಗದಲ್ಲಿ ಅಲೌಕಿಕ ಲೋಕವನ್ನು ಅಭಿವ್ಯಕ್ತಿಸುವ ವಿಚಾರದಲ್ಲಿ ಬೆಳಕಿನ ಪಾತ್ರ ದೊಡ್ಡದು. ರೂಪಕಗಳಲ್ಲಿ ಅಭಿನಯಿಸಲ್ಪಡುವ ಪಾತ್ರಗಳ ಅಭಿನಯದ ಭಾವಗಳು ಸ್ಪುಟವಾಗಿ ಗೋಚರವಾಗಬೇಕಾದರೆ ರಂಗದಲ್ಲಿ ಬೆಳಕಿನ ಕಾಂತಿ ಸಮರ್ಪಕವಾಗಿರಬೇಕು ಹಾಗೂ ಪರಿಣಾಮಕಾರಿಯಾಗಿರಬೇಕು. ಯಕ್ಷಗಾನದಲ್ಲಿ ಪ್ರದರ್ಶನ ಹೊಂದುತ್ತಿದ್ದ ಪ್ರಸಂಗಗಳು ಅಲೌಕಿಕವಾದ ಜಗತ್ತಿಗೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿದುದಾಗಿದ್ದವು. ಹಾಗಾಗಿ ಈ ಅಲೌಕಿಕ ಲೋಕದ ಅನಾವರಣಕ್ಕೆ ಲೌಕಿಕ ಹಾಗೂ ಅಲೌಕಿಕ ಜಗತ್ತಿನ ನಡುವಿನ ಕೊಂಡಿ ಕಡಿದು ಒಂದು ರೀತಿಯ ಕೌತುಕ ಹಾಗೂ ವಿಸ್ಮಯ ವಾತಾವರಣ ನಿರ್ಮಾಣವಾಗುವಲ್ಲಿ ಬೆಳಕಿನ ಪಾತ್ರ ಹಿರಿದು.

ಯಕ್ಷಗಾನ ಕಲೆಯು ರಂಗಾವರಣ ಹೊಂದಿದ ಆದಿ ಭಾಗದಲ್ಲಿ ಆಧುನಿಕ ಬೆಳಕಿನ ಆಕರಗಳು ಇರಲಿಲ್ಲ. ಎಲ್ಲ ಕಡೆ ಬೆಳಕಿಗಾಗಿ ಆಶ್ರಯಿಸಿದ್ದುದು ದೊಂದಿಯ ಬೆಳಕನ್ನು. ಪ್ರಕೃತಿಯಲ್ಲಿ ಸಿಗುವ ಎಣ್ಣೆ ಬೀಜಗಳಿಂದ ಸಂಸ್ಕರಿಸಿ ಪಡೆದ ಎಣ್ಣೆಯಿಂದ ಉರಿಸಿದ ಬೆಳಕು ಮನುಷ್ಯನ ನಿತ್ಯ ಬಳಕೆಗೆ ಹಾಗೂ ಈ ರೀತಿಯ ರಂಗಕಲೆ, ದೇವಸ್ಥಾನದ ಪೂಜೆಗೆ, ಜಾತ್ರೆಗೆ, ಹಬ್ಬ ಹಾಗೂ ಜಾನಪದ ಆಚರಣೆಗಳಲ್ಲಿ ಉಪಯೋಗಿಸಲ್ಪಡುತಿತ್ತು. ಇದೇ ರೀತಿಯಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲೂ ದೀವಟಿಗೆ ಬೆಳಕಿನಲ್ಲೇ ಪ್ರದರ್ಶನ ಹೊಂದುತ್ತಾ ಇತ್ತು.

ದೀವಟಿಗೆ ಬೆಳಕಿನ ಮಂದವಾದ ಕಡುಹಳದಿ ಜ್ವಾಲೆಯು ವೇಷಗಳ ಬಿಂಬದ ಮೇಲೆ ಕಾಂತಿಯನ್ನು ಬೀರಿ ರಂಗದ ಉಳಿದ ಭಾಗವನ್ನು ಅನಂತದ ಕತ್ತಲೆಯೊಡನೆ ಐಕ್ಯವಾಗಿಸುವಲ್ಲಿ ಸಹಕಾರಿಯಾಗಿತ್ತು.

ದೀವಟಿಕೆ ಬಳಕಿನ ಯಕ್ಷಗಾನದ ಅಂದ-ಚಂದ ವೀಕ್ಷಿಸಿ:

ಹಾಗಾಗಿ ವೇಷಗಳು ಮಾತ್ರ ಪ್ರಕಾಶಿಸಿ ರಂಗದಲ್ಲಿ ಉಳಿದೆಲ್ಲವೂ ಗೌಣವಾಗಿ ಪ್ರೇಕ್ಷಕರ ಏಕಾಗ್ರತೆಯ ರಂಗ ವೀಕ್ಷಣೆಗೆ ಅನುಕೂಲವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಯಕ್ಷಗಾನದಲ್ಲಿ ಬಳಸುವ ಆಹಾರ್ಯದಲ್ಲಿ ಬಿಳಿ, ಹಸಿರು, ಕೆಂಪು, ಹಳದಿ, ಕಪ್ಪು ವರ್ಣಗಳು ಪ್ರಾಮುಖ್ಯತೆ ಹೊಂದಿದ್ದವು. ಈ ರೀತಿಯ ಸಾಂಪ್ರದಾಯಿಕ ಬೆಳಕಿನಲ್ಲಿ ಯಕ್ಷಗಾನ ಬಯಲಾಟವು ರಮ್ಯಾದ್ಬುತವಾಗಿ ಪ್ರದರ್ಶನ ಹೊಂದುತ್ತಾ ಇತ್ತು.

ಬೆಳಕಿನ ವಿಚಾರದಲ್ಲಿ ಆದ ಮಾರ್ಪಾಟುಗಳ ಮುಂದುವರಿದ ಭಾಗವಾಗಿ ಯಕ್ಷಗಾನ ರಂಗದಲ್ಲಿ ಬೆಳಕಿನ ವ್ಯವಸ್ಥೆಯಾಗಿ ಗ್ಯಾಸ್ ಲೈಟ್ ಬಂತು. ಅದರಿಂದಲೂ ಮುಂದುವರಿದು ವಿದ್ಯುತ್ ದೀಪದ ಬಳಕೆಯಲ್ಲಿ ಬಲ್ಬುಗಳು, ಹ್ಯಾಲೋಜನ್ ದೀಪಗಳು, ಸ್ಪಾಟ್ ಲೈಟ್‌ಗಳು, ಫ್ಲಿಕರಿಂಗ್ ಡಿಸ್ಕೋ ಲೈಟ್‌ಗಳೆಲ್ಲವೂ ರಂಗದಲ್ಲಿ ಬಂದು ರಾಶಿ ಬಿದ್ದವು. ಇದರ ಉಪಯೋಗವನ್ನು ಅರಿಯದೆ ಕೆಲವರಂತೂ ಕೇವಲ ಆಡಂಬರಕ್ಕಾಗಿ ಬಳಸಿದರು.

ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನ ವೀಕ್ಷಣೆಗಾಗಿ ರಂಗದ ಎದುರು ಕುಳಿತ ಪ್ರೇಕ್ಷಕರ ದೃಷ್ಟಿಯ ವ್ಯಾಪ್ತಿಯು ಸರ್ವ ಸಾಧಾರಣವಾಗಿ 40 ಅಡಿಯಷ್ಟು ದೂರ ಮಾತ್ರ. ಪ್ರಖರವಾದ ವಿದ್ಯುತ್ ಬೆಳಕಿನ ವ್ಯವಸ್ಥೆ ಬಂದಾಗ ಈ ವ್ಯಾಪ್ತಿಯು ವಿಸ್ತರಣೆ ಆಯ್ತು. ಪ್ರಖರವಾದ ಬೆಳಕಿನ ವ್ಯವಸ್ಥೆಯ ಕಾರಣವಾಗಿ ರಂಗದ ಎದುರು ಸಾಮಾನ್ಯವಾಗಿ ಪ್ರೇಕ್ಷಕರು ಕುಳಿತುಕೊಳ್ಳಲು ಇದ್ದ ಜಾಗವು 80 ಅಡಿ ದೂರದವರೆಗೆ ವಿಸ್ತರಣೆ ಆಯ್ತು. ಅಷ್ಟು ದೂರದ ತನಕವೂ ಯಕ್ಷಗಾನದ ವೇಷಗಳು ಸ್ಪಷ್ಟವಾಗಿ ಗೋಚರಿಸಿದವು. ವೇಷಗಳ ಮುಖವು ಸ್ಪಷ್ಟವಾಗಿ ಭಾವಾಭಿನಯ ಪ್ರೇಕ್ಷಕರಿಗೆ ಸುಲಭವಾಗಿ ತಲುಪಿತು. ಇದು ಬೆಳಕಿನ ವ್ಯವಸ್ಥೆಯಲ್ಲಿ ಆದ ಸುಧಾರಣೆಯಿಂದಾದ ಲಾಭ. ಆದರೇ...

ದೀವಟಿಗೆಯ ಮಂದಬೆಳಕಿನ ಕಡು ಹಳದಿ ಛಾಯೆಯಲ್ಲಿ ವೇಷಗಳು ತಮ್ಮ ವರ್ಣ ವೈವಿಧ್ಯತೆಯ ಸೊಬಗನ್ನು ಇಮ್ಮಡಿಗೊಳಿಸಿ ಶೋಭಿಸುತ್ತಿದ್ದವು. ದೀವಟಿಕೆಯ ಬೆಳಕು ರಂಗದ ಒಳಗೆ ವೇಷದ ಹೊರತಾಗಿ ಉಳಿದೆಲ್ಲವನ್ನೂ ಮಬ್ಬಾಗಿಸಿತ್ತು. ಕತ್ತಲೆಯ ಹಿನ್ನೆಲೆಯಲ್ಲಿ ವೇಷಗಳು ಅನಂತದಿಂದ ಬಂದು ಅನಂತದಲ್ಲಿ ಸೇರಿ ಹೋಗುವ ಹಾಗಿನ ಪರಿಕಲ್ಪನೆಯು ವಿಶೇಷವಾದ ಸೊಬಗನ್ನು ನೀಡುತ್ತಿತ್ತು. ಇದೆಲ್ಲ ರೀತಿಯ ಸೊಬಗನ್ನು ಪ್ರಖರವಾದ ಬಿಳಿ ಛಾಯೆಯ ವಿದ್ಯುತ್ ಬೆಳಕು ನುಂಗಿ ಹಾಕಿತು. ಯಕ್ಷಗಾನದ ವೇಷಭೂಷಣಗಳಲ್ಲಿ ಅಳವಡಿಸಿದ ಬಂಗಾರದ ಬಣ್ಣದ ಆಭರಣಗಳು ಪೇಲವವಾಗಿ ಕಂಡವು. ವಿದ್ಯುತ್ ಬೆಳಕಿನ ಪ್ರಖರತೆಯಿಂದ ಕಲಾವಿದರ ದೃಷ್ಟಿಗೆ ಹಾನಿಯಾಯಿತು. ಅತಿಯಾದ ಬೆಳಕಿನ ಪ್ರಖರತೆಯಿಂದಾಗಿ ರಂಗದಲ್ಲಿ ಉಷ್ಣತೆ ಹೆಚ್ಚಾಗಿ ಕಲಾವಿದರ ದೇಹಕ್ಕೆ ಶಾಖವುಂಟಾಗಿ ಆಯಾಸವೂ ಹೆಚ್ಚಿತು. ವೇಷಗಳ ನರ್ತನದ ಬಾಗು ಬಳುಕುವಿಕೆಯ ದೇಹಲಾಲಿತ್ಯದ ಭಾಷೆಯ ಸೊಬಗು ಮರೆಯಾಯಿತು. ರಂಗದಲ್ಲಿ ವಿಶೇಷ ಆಕರ್ಷಣೆಯಾಗಿ ಬಳಸಿದ ವಿದ್ಯುತ್ ದೀಪದ ಮಿನಿಯೇಚರ್ ಲೈಟುಗಳು (ಮಿಣುಕು ದೀಪಗಳು), ಸ್ಪಾಟ್ ಲೈಟ್‌ಗಳು, ಫ್ಲಿಕರಿಂಗ್ ಡಿಸ್ಕೋ ಲೈಟ್‌ಗಳೆಲ್ಲವನ್ನು ಯದ್ವಾ ತದ್ವಾ ಅಂದರೆ ಬಳಸಲೇಬೇಕೆಂಬ ಹಠಕ್ಕೆ ತೊಟ್ಟವರಂತೆ ಆಡಂಬರಕ್ಕಾಗಿ ಬಳಸಿದರು. ಎಲ್ಲಿತನಕ ಅಂದರೆ ವೇಷಗಳನ್ನು ಕುಣಿಸುವುದು ಈ ಲೈಟ್‌ಗಳೋ ಅಥವಾ ಹಿಮ್ಮೇಳದವರ ಚೆಂಡೆ ಮದ್ದಳೆಯ ನುಡಿತವೋ? ಎನ್ನುವಷ್ಟರ ಮಟ್ಟಿಗೆ ಅನುಮಾನಗೊಳ್ಳುವಷ್ಟು!

ಇದಕ್ಕೆಲ್ಲ ಕಾರಣ ದೀವಟಿಗೆ ಬೆಳಕಿನ ಕಡು ಹಳದಿ ಕಾಂತಿ ಮರೆಯಾದದ್ದು. ಈ ಕುರಿತು ನಾನು ವಿದ್ಯುತ್ ಬೆಳಕಿನಲ್ಲಿಯೇ ಕಡು ಹಳದಿ ಕಾಂತಿಯನ್ನು ಬೀರಬಲ್ಲ ಸಾಧನದ ಕುರಿತು ಬಹಳಷ್ಟು ಅಧ್ಯಯನ ಮಾಡಿ ಅವುಗಳನ್ನು ರಂಗದಲ್ಲಿ ಅಳವಡಿಸಲು ಯೋಚಿಸಿ ಯೋಜನೆ ಹಾಕಿದಾಗ ಅದಕ್ಕೆ ಆಗುವ ಖರ್ಚು ವೆಚ್ಚ ಹಾಗೂ ನಿರ್ವಹಣೆಯು ದುಬಾರಿಯಾದ ಕಾರಣ ಕೈ ಬಿಟ್ಟೆ. ಈ ರೀತಿಯಾಗಿ ಬೆಳಕಿನಲ್ಲಿ ಆದ ಆಧುನಿಕತೆ ರಂಗಕ್ಕೆ ಒಳಿತು ಕೆಡುಕು ಎರಡನ್ನೂ ನೀಡಿತು. (ಸಶೇಷ)

✍ -ಸುರೇಂದ್ರ ಪಣಿಯೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು