ಯಕ್ಷ ಮೆಲುಕು 04: ಬಿಸಿ ಬಿಸಿ ಏನುಂಟು ಎಂದಾಗ ಕೆಂಡ ತಂದಿಟ್ಟ ಸಪ್ಲಯರ್; ನೆಡ್ಲೆ ನರಸಿಂಹ ಭಟ್ಟರು ಮಾಡಿದ್ದೇನು?

ಚೆಂಡೆಯ ಗಂಡುಗಲಿ ನೆಡ್ಲೆ ನರಸಿಂಹ ಭಟ್ (ವಿಡಿಯೊ ಕ್ಲಿಪ್‌ನಿಂದ)
ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯರ ನೆನಪಿನಂಗಳದಿಂದ...
ನ್ನ ಚೆಂಡೆಯ ಗುರುಗಳೂ, ಯಕ್ಷಗಾನ ಲೋಕ ಕಂಡ ಮಹಾನ್ ಮದ್ಲೆಗಾರರೂ ಆದ ನೆಡ್ಲೆ ನರಸಿಂಹ ಭಟ್ಟರು ಎಷ್ಟು ಗಂಭೀರವೋ, ಅವರ ಹಾಸ್ಯಪ್ರಜ್ಞೆಯೂ ಗಂಭೀರವಾಗಿಯೇ ಇತ್ತು. ಅಂದರೆ, ಅವರು ನಗಲಾರರು, ಬೇರೆಯವರನ್ನು ನಗಿಸಿಬಿಡುತ್ತಾರೆ.

ಈ ಘಟನೆ ನಡೆದದ್ದು ದಶಕಗಳ ಹಿಂದೆ ಕಟೀಲು ಮೇಳದ ತಿರುಗಾಟದ ಅವಧಿಯಲ್ಲಿ. ಆಗ ಹಿರಿಯ ಮದ್ಲೆಗಾರರಾಗಿದ್ದ ನೆಡ್ಲೆಯವರೊಂದಿಗೆ ಸ್ತ್ರೀವೇಷಧಾರಿ ಉಮೇಶ ಹೆಬ್ಬಾರರು ಕೂಡ ಕಟೀಲು ಮೇಳದಲ್ಲಿದ್ದರು.

ಆಟ ಮುಗಿಸಿ ಬೆಳಿಗ್ಗೆ ಮತ್ತೊಂದು ಊರಿಗೆ ಹೊರಡುವ ಮುಂಚೆ ಎಲ್ಲ ಕಲಾವಿದರು ವೇಷ ತೆಗೆದು, ಸಿದ್ಧವಾಗಿರಬೇಕು. ಅಂತೆಯೇ ರಂಗಸ್ಥಳ ಹಾಕುವವರು ರಂಗಸ್ಥಳವನ್ನೆಲ್ಲ ಬಿಚ್ಚಿ, ಚೌಕಿಯ ವೇಷ-ಭೂಷಣದ ಸಾಮಾನುಗಳೊಂದಿಗೆ ಲಾರಿಗೆ ಲೋಡ್ ಮಾಡಬೇಕಿತ್ತು. ಎಲ್ಲ ಏರಿಸಿ ಆದ ಮೇಲೆ ಅದರಲ್ಲೇ ಮತ್ತೊಂದೂರಿನ ಯಕ್ಷಗಾನ ಪ್ರದರ್ಶನಕ್ಕೆ ಪಯಣ.

ಅದು ಬಹುಶಃ ನವೆಂಬರ್-ಡಿಸೆಂಬರ್ ಅವಧಿ. ತಡೆಯಲಾರದ ಚಳಿಯ ಕಾಲ. ಹೇಗೂ ಹಸಿವಿನ ಸಮಯ. ಮುಂದೆ ಸಾಗುವಾಗ, ಬಿಸಿಬಿಸಿ ಇಡ್ಲಿ ಸಾಂಬಾರ್ ತಿನ್ನಲು ಒಳ್ಳೆಯ ಹೋಟೆಲ್ ಎಲ್ಲಿದೆ ಎಂಬುದು ಎಲ್ಲ ಕಲಾವಿದರಿಗಿರುವ ಸಹಜ ಕುತೂಹಲ. ಆಗ ಸಂಪಾದನೆಯೂ ತೀರಾ ಕಡಿಮೆ ಇದ್ದುದರಿಂದ ಕಡಿಮೆ ಹಣಕ್ಕೆ ಒಳ್ಳೆಯ ತಿಂಡಿ ಸಿಗುವ ಹೋಟೆಲಿಗೆ ಹೋಗುವುದು ವಾಡಿಕೆ.

ಹಾಗೇ ಒಂದು ದಿನ, ಯಕ್ಷಗಾನ ಮುಗಿಸಿದ ಮೇಳದ ಕಲಾವಿದರು ಲಾರಿಯಲ್ಲಿ ಹೊರಟರು. ಉಮೇಶ್ ಹೆಬ್ಬಾರರು ಹೇಳುವಂತೆ, ಹೋಟೆಲೊಂದರ ಎದುರು ಲಾರಿ ನಿಂತಿತು. ಒಳಗೆ ಹೋದಾಗ, ಹೋಟೆಲ್‌ನ ಸಪ್ಲಯರ್ ಬಳಿ ನೆಡ್ಲೆ ನರಸಿಂಹ ಭಟ್ಟರು, "ತೂಕಾ, ಬೆಚ್ಚ ಬೆಚ್ಚ ದಾದ ಉಂಡು ಮಾರಾಯಾ" (ಬಿಸಿ ಬಿಸಿ ಏನಿದೆ ಮಾರಾಯ?) ಅಂತ ಕುಶಾಲಿನ ಧ್ವನಿಯಲ್ಲೇ ಕೇಳಿದರು. ಆ ಕಾಲದಲ್ಲಿ ಹೋಟೆಲ್ ಸಪ್ಲಯರ್‌ಗಳು ಸುಶಿಕ್ಷಿತರೇನಲ್ಲ. ಹಾಗೆಯೇ ಇವರೆದುರು ಮುಂಡಾಸು ಕಟ್ಟಿಕೊಂಡು ಬಂದ ಸಪ್ಲಯರ್ ಒಬ್ಬ ಬಹುಶಃ 'ಪೆದಂಬ' ಇದ್ದಿರಬೇಕು. (ಯಕ್ಷಗಾನ ಕಲಾವಿದರು ಆ ಕಾಲದಲ್ಲಿ ಪೆದಂಬು ಅಂದರೆ ಉಲ್ಟಾ ಮಾತನಾಡುವವರನ್ನು ಅರ್ಥಾತ್ ಸರಿಯಾಗಿ ಮಾತನಾಡದೆ ವಾದ ಮಾಡುವವರನ್ನು ಕರೆಯುತ್ತಿದ್ದುದೇ ಹಾಗೆ). ಆತನಿಗೆ ನೆಡ್ಲೆಯವರನ್ನು ಕಂಡು ಏನನ್ನಿಸಿತೋ, ಅಥವಾ ಕೆಲಸದ ಒತ್ತಡವಿತ್ತೋ... ಮುಂಡಾಸು ತೆಗೆಯುತ್ತಾ, "ಬೆಚ್ಚ ಬೆಚ್ಚ ದಿಕ್ಕೆಲ್ಡ್ ಗೆಂಡ ಉಂಡು" (ಬಿಸಿ ಬೇಕಿದ್ರೆ ಒಲೆಯೊಳಗೆ ಕೆಂಡ ಉಂಟು) ಅಂತ ಹೇಳಿಬಿಟ್ಟ.

ನೆಡ್ಲೆಯವರೇನು ಕಮ್ಮಿ? "ಹಾಂ, ಅದನ್ನೇ ಒಂದು ಪ್ಲೇಟ್ ತಗೊಂಡುಬಾ" ಎಂದುಬಿಟ್ಟರು. ಮುಖಕ್ಕೇ ಬಾರಿಸಿದಂತಾಯಿತು ಸಪ್ಲಯರ್ ಗೆ. ಇವರಿಗೆ ಕಲಿಸುತ್ತೇನೆ ಅಂದುಕೊಂಡು ಸೀದಾ ಒಳ ಹೋದವನೇ, ಒಂದು ಪ್ಲೇಟಿನಲ್ಲಿ ಒಲೆಯಿಂದ ಕೆಂಡವನ್ನೇ ತಂದಿಟ್ಟ. 

ನೆಡ್ಲೆಯವರು ಸುಮ್ಮನಿರಬೇಕೇ? ಆಚೀಚೆ ನೋಡಿ, ತಮ್ಮ ಕಿಸೆಯಿಂದ ಒಂದು ಬೀಡಿಯನ್ನು ತೆಗೆದು, ಕೆಂಡಕ್ಕೆ ಮುಟ್ಟಿಸಿ ಬೀಡಿ ಹೊತ್ತಿಸಿಕೊಂಡು, ಹೊರ ನಡೆದೇಬಿಟ್ಟರು! ಸಪ್ಲೈಯರ್ ಇದನ್ನು ನೋಡಿಯೇ ಬಾಕಿ! ನಗುವುದೋ, ಕೂಗಾಡುವುದೋ ತಿಳಿಯದೆ ತಲೆ ಚಚ್ಚಿಕೊಂಡ.

ಆ ಹೋಟೆಲಿನಲ್ಲಿ ತಿಂಡಿ ತಿನ್ನದೆ ಮುಂದಿನ ಹೋಟೆಲಿನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದರು ನೆಡ್ಲೆಯವರು.

ಇಂಥ ಪ್ರತ್ಯುತ್ಪನ್ನಮತಿತ್ವ ಯಕ್ಷಗಾನ ಕಲಾವಿದರಿಗೇನೂ ಹೊಸದಲ್ಲವಲ್ಲ!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು