ಕೋಳ್ಯೂರು ರಾಮಚಂದ್ರ ರಾವ್ -90: ಕೋಳ್ಯೂರು ವೈಭವಕ್ಕೆ ಚಾಲನೆ

ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಮರಣಿಕೆ ನೀಡಿದರು

ಧರ್ಮಸ್ಥಳ:
ಯಕ್ಷಗಾನದ ಶ್ರೇಷ್ಠ ಕಲಾಸಾಧಕರಾದ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ 90 ವರ್ಷ ತುಂಬಿದ ಶುಭವಸರದಲ್ಲಿ, ಉಡುಪಿಯ ಯಕ್ಷಗಾನ ಕಲಾರಂಗ ಸಂಯೋಜಿಸಿದ್ದ 'ಕೋಳ್ಯೂರು ವೈಭವ'ವನ್ನು ಗುರುವಾರ (ಅ.14, 2021) ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.

ಒಂದು ತಿಂಗಳ ಪರ್ಯಂತ ನಡೆಯಲಿರುವ ಕೋಳ್ಯೂರು ವೈಭವ ಕಾರ್ಯಕ್ರಮಗಳನ್ನು ಮತ್ತು ಕೋಳ್ಯೂರರ ಕುರಿತು ಸಮಗ್ರ ಪರಿಚಯ ಒಳಗೊಂಡಿರುವ 'ಕ್ವೀನ್ ಆಫ್ ಯಕ್ಷಗಾನ' ಜಾಲತಾಣವನ್ನು ಡಾ.ಹೆಗ್ಗಡೆ ಉದ್ಘಾಟಿಸಿದರು.


ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಕಲೆ, ಕಲಾವಿದರ ಕ್ಷೇಮ ಚಿಂತನೆಯೂ ಸೇರಿದಂತೆ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಡಾ.ಹೆಗ್ಗಡೆ ಹೇಳಿದರು.

ರಂಗದ ಮೇಲೆ ರಾಣಿಯಾಗಿ ಮೆರೆದ ಕೋಳ್ಯೂರರು ನಿಜ ಬದುಕಿನಲ್ಲಿ ನಿಗರ್ವಿಯಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದಿರುವುದು ಅನುಕರಣೀಯವಾದ ನಡವಳಿಕೆ. ಎಲ್ಲ ಪ್ರತಿಕೂಲಗಳ ನಡುವೆ ಏಳು ದಶಕಗಳ ಕಾಲ ನಿರಂತರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆ ಮಾಡುತ್ತಾ ಬಂದ ಕೋಳ್ಯೂರರ ಕಲಾತಪಸ್ಸು ಈಗಿನ ಕಲಾವಿದರಿಗೆ ಅನುಸರಣೀಯವಾದುದಾಗಿದೆ. ವೆಬ್‌ಸೈಟ್ ನಿರ್ಮಾಣದ ಮೂಲಕ ಅವರ ಕಲಾಸಾಧನೆ ಶಾಶ್ವತವಾಗಿ ಉಳಿಯುವಂತಾದುದು ಸ್ತುತ್ಯರ್ಹ ಕಾರ್ಯ ಎಂದ ಅವರು, ಕೋಳ್ಯೂರರಿಗೆ ಶ್ರೀ ಮಂಜುನಾಥ ಸ್ವಾಮಿಯ ಕೃಪೆ ಇರಲೆಂದು ಶುಭ ಹಾರೈಸಿದರು.

ಕೋಳ್ಯೂರರ ಸುಪುತ್ರ ಕೆ.ಶ್ರೀಧರ ರಾವ್ ಹಾಗೂ ಮೊಮ್ಮಗ ನಟರಾಜ್ ಗೋಪಾಡಿ ಕಾರ್ಯಕ್ರಮ ಸಂಯೋಜಿಸಿದ್ದರು. ಶ್ರೀಕ್ಷೇತ್ರದ ವತಿಯಿಂದ ಕೋಳ್ಯೂರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ.ಶೆಟ್ಟಿ ಅವರು ಹೆಗ್ಗಡೆಯವರಿಗೆ ಫಲಪುಷ್ಪ ಸಮರ್ಪಿಸಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಜತೆಕಾರ್ಯದರ್ಶಿ ಪ್ರೊ.ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು. ಸಮಾರಂಭದಲ್ಲಿ ಕೋಳ್ಯೂರರ ಪತ್ನಿ ಶ್ರೀಮತಿ ಭಾಗೀರಥಿ ರಾವ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಲಾವಿದ ಚಂದ್ರಶೇಖರ ಧರ್ಮಸ್ಥಳ, ಯಕ್ಷಗಾನ ಕಲಾರಂಗದ ಸದಸ್ಯರಾದ ಅನಂತರಾಜ ಉಪಾಧ್ಯ, ಎಚ್.ಎನ್ ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ, ಪೃಥ್ವಿರಾಜ ಕವತ್ತಾರ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು