ಯಕ್ಷಗಾನ ರಂಗದ ಅಜಾತ ಶತ್ರುವಾಗಿ ಮೆರೆದು, ಕಿರಿಯ ಬಲಿಪರೆಂದು ಜನಮನ್ನಣೆ ಗಳಿಸಿದ ಬಲಿಪ ನಾರಾಯಣ ಭಾಗವತ (85) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮೂಡುಬಿದಿರೆ ಸಮೀಪದ ಗಂಟಾಲಕಟ್ಟೆಯ ಬಲಿಪ ನಿವಾಸದಲ್ಲಿ ಗುರುವಾರ ಸಂಜೆ 6.30ರ ಸುಮಾರಿಗೆ ಕಲಾಮಾತೆಯ ಪಾದ ಸೇರಿದ್ದಾರೆ.
ಯಕ್ಷ ರಂಗದ ಭೀಷ್ಮನೆಂದು ಖ್ಯಾತಿವೆತ್ತು, ಭಾಗವತಿಕೆಯಲ್ಲಿ ತನ್ನದೇ 'ಬಲಿಪ ಶೈಲಿ'ಯಿಂದಾಗಿ ಯಕ್ಷಗಾನ ಅಭಿಮಾನಿಗಳ ಹೃದಯ ಗೆದ್ದ ಬಲಿಪ ನಾರಾಯಣ ಭಾಗವತರು, ಯಕ್ಷಗಾನ ಪರಂಪರೆಯ ಪ್ರತಿನಿಧಿಯಾಗಿ, ಯಕ್ಷಗಾನದ ಸರ್ವಾಂಗಗಳನ್ನೂ ಬಲ್ಲವರಾಗಿದ್ದುಕೊಂಡು, ಯಕ್ಷಗಾನದ ಪರಂಪರೆಯ ರಕ್ಷಣೆಗೆ ಶ್ರಮಿಸಿದವರು.
ಅಜ್ಜ ಬಲಿಪರು (ಅವರ ಹೆಸರು ಕೂಡ ಬಲಿಪ ನಾರಾಯಣ ಭಾಗವತರು) ಹುಟ್ಟುಹಾಕಿದ ಯಕ್ಷಗಾನ ತೆಂಕುತಿಟ್ಟು ಹಾಡುಗಾರಿಕೆಯ ಬಲಿಪ ಶೈಲಿಯ ಪ್ರಬಲ ಪ್ರತಿಪಾದಕರಾಗಿ, ಕಾಸರಗೋಡು ಪೆರ್ಲದ ಪಡ್ರೆಯ ಯಕ್ಷಗಾನ ಸೊಗಡಿನ ಮಣ್ಣಲ್ಲಿ ಹುಟ್ಟಿ ಬೆಳೆದು ಮೂಡುಬಿದಿರೆ ನೂಯಿಯಲ್ಲಿದ್ದುಕೊಡು ತನ್ನ ಮುಂದಿನ ತಲೆಮಾರಿಗೆ ಬಲಿಪ ಶೈಲಿಯನ್ನು ವರ್ಗಾಯಿಸಿದ್ದಾರೆ. ಅದೆಷ್ಟೋ ಯಕ್ಷಗಾನ ಪ್ರಸಂಗಗಳನ್ನು ಕಂಠಸ್ಥವಾಗಿಸಿ, ಹಲವು ಪ್ರಸಂಗಗಳನ್ನೂ ರಚಿಸಿದ ಬಲಿಪರು, ಯಕ್ಷಗಾನ ರಂಗವನ್ನು, ಯಕ್ಷಗಾನ ಪ್ರಿಯರನ್ನು ದುಃಖದ ಕಡಲಲ್ಲಿ ಬಿಟ್ಟು ಹೋಗಿದ್ದಾರೆ. ಇದೀಗ ನೆನಪು ಮಾತ್ರವಾಗಿರುವ ಬಲಿಪರಿಗೆ ಸಮಸ್ತ ಯಕ್ಷಗಾನ ಅಭಿಮಾನಿಗಳ ಪರವಾಗಿ ಯಕ್ಷಗಾನ ಡಾಟ್ ಇನ್ ಅಶ್ರುಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸುದೀರ್ಘ ಕಾಲ ಭಾಗವತರಾಗಿ, ಸಮರ್ಥ ರಂಗ ನಿರ್ದೇಶಕರಾಗಿ ಮಾರ್ಗದರ್ಶಕರಾಗಿದ್ದ ಬಲಿಪ ನಾರಾಯಣ ಭಾಗವತರು, ಯಕ್ಷಗಾನ ಕವಿಗಳಾಗಿಯೂ ಸಾಕಷ್ಟು ಹಾಡುಗಳನ್ನು ರಚಿಸಿದ್ದಾರೆ.
ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ 13 ಮಾರ್ಚ್ 1938ರಲ್ಲಿ ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಬಲಿಪ ಮಾಧವ ಅವರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಇತ್ತೀಚೆಗೆ ಕ್ಯಾನ್ಸರ್‌ನಿಂದಾಗಿ ಇಹಲೋಕದಿಂದ ನಿರ್ಗಮಿಸಿದ ಬಲಿಪ ಪ್ರಸಾದರು ಉತ್ತಮ ಭಾಗವತರಾಗಿ ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನೋರ್ವ ಪುತ್ರ ಬಲಿಪ ಶಶಿಧರ್ ಅವರು ಕೃಷಿಕರು.
ಸುಮಾರು ಏಳು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ದುಡಿದ ಬಲಿಪ ನಾರಾಯಣ ಭಾಗವತರು, ಪಡ್ರೆ ಜಠಾಧಾರಿ ಮೇಳವನ್ನು ಆರಂಭಿಸಿದ್ದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡಿದರೆ, ಅಲ್ಲಿ ಅನೂಹ್ಯ ಯಕ್ಷ ಲೋಕವೊಂದು ಸೃಷ್ಟಿಯಾಗುತ್ತಿತ್ತು. ಇವರ ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.
ಬಲಿಪ ನಾರಾಯಣ ಭಾಗವತರನ್ನು ಅರಸಿ ಬಂದ ಪ್ರಶಸ್ತಿಗಳು
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010
- ಸಾಮಗ ಪ್ರಶಸ್ತಿ 2012
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' 2003
- ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ 2002
- 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ, 2003
- ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ' 2002
- ಶೇಣಿ ಪ್ರಶಸ್ತಿ, 2002
- ಕವಿ ಮುದ್ದಣ ಪುರಸ್ಕಾರ, 2003
- ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ, 2003
- ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, 2003
- ಪಾರ್ತಿಸುಬ್ಬ ಪ್ರಶಸ್ತಿ
- ಆಳ್ವಾಸ್ ನುಡಿಸಿರಿ ಪ್ರಶಸ್ತಿ