ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆ ಡಿ.26ಕ್ಕೆ



ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾಪೋಷಕರ ಸಹಕಾರದಿಂದ ನಿರ್ಮಿಸಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ಡಿ.26ರಂದು ಲೋಕಾರ್ಪಣೆಗೊಳ್ಳಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಸಂಸದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಎರಡು ಕೋಟಿ ರೂ. ವೆಚ್ಚದ ಭವನವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸುವರು. ಡಿ.26ರ ಮಂಗಳವಾರ ಮಧ್ಯಾಹ್ನ 2ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ. 


ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್ ಕಟೀಲು, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ರಾಜೇಶ್ ನಾಯ್ಕ, ಹರೀಶ್ ಪೂಂಜಾ, ಮಾಜಿ ಸಚಿವ ಕೋಟಿ ಶ್ರೀನಿವಾಸ ಪೂಜಾರಿ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಗೋಪಾಲಕೃಷ್ಣ ಅವರು ಅಭ್ಯಾಗತರಾಗಿ ಭಾಗವಹಿಸುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಮಂಗಳೂರಿನಲ್ಲಿ ಬುಧವಾರ (ಡಿ.20) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ಮ್ಯೂಸಿಯಂ, ಗ್ರಂಥಭಂಡಾರ, 250ಕ್ಕಿಂತಲೂ ಹೆಚ್ಚು ಯಕ್ಷಗಾನದ ಕೀರ್ತಿಶೇಷರ ಭಾವಚಿತ್ರ ಸಿದ್ಧಗೊಂಡಿದೆ. ತೆಂಕುತಿಟ್ಟು ಯಕ್ಷಗಾನದ ಸಮಗ್ರ ಅಧ್ಯಯನಕ್ಕೆ ಈ ಭವನ ಮೀಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಯ್ಯರು ತಿಳಿಸಿದ್ದಾರೆ.

ಈ ವೇಳೆ ಯಕ್ಷದರ್ಶಿನಿಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಗ್ರಂಥಾಲಯವನ್ನು ಉದ್ಯಮಿ ಕೆ.ಕೆ. ಶೆಟ್ಟಿ ಉದ್ಘಾಟಿಸುವರು. ಮರೆಯಲಾಗದ ಮಹಾನುಭಾವರು ಹೆಸರಿನ ಛಾಯಾಚಿತ್ರ ಫಲಕವನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣ ಮಾಡುವರು.

ಅಗಲಿಹೋದ ಕಲಾವಿದರ ಪರಿಚಯವುಳ್ಳ "ಮರೆಯಲಾಗದ ಮಹಾನುಭಾವರು" ಪುಸ್ತಕ ಸಹಿತ 7 ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ವೃತ್ತಿ ಹಾಗೂ ಹವ್ಯಾಸಿ ಭಾಗವತರಿಂದ ಕುಂಬ್ಳೆ ಪಾರ್ತಿ ಸುಬ್ಬ ಅವರ ಕೃತಿಗಳ ಗಾನಾರ್ಚನೆ ನಡೆಯಲಿದೆ. ಸಂಜೆ 7ಕ್ಕೆ ಧರ್ಮಸ್ಥಳ ಮೇಳದಿಂದ 'ನಂದಿ ನಂದಿನಿ' ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಸ್ವಾಗತ ಸಮಿತಿ ಸಂಚಾಲಕರಾದ ಡಾ. ಜಯಪ್ರಕಾಶ ತಟ್ಟೆತೊಡಿ, ದಾಮೋದರ ಶರ್ಮ ಬಾರ್ಕೂರು, ಜಗದೀಶ ಕೂಡ್ಲು, ಯೋಗೀಶ್ ರಾವ್ ಚಿಗುರುಪಾದೆ, ಡಾ. ಶ್ರುತಕೀರ್ತಿರಾಜ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು