ಯಾವುದೇ ಒಬ್ಬ ವ್ಯಕ್ತಿಗೆ ಬಿರುದು ಬಂದಿದ್ದರೆ ಅಥವಾ ಮನೆತನಕ್ಕೆ ಒಂದು ಹೆಸರು ಬಂದಿದ್ದರೆ ಅದರ ಹಿಂದೆ ಯಾವುದಾದರೂ ಒಂದು ಕಥೆ ಇರುತ್ತದೆ. ಅದೇ ರೀತಿಯಾಗಿ ತೆಂಕುತಿಟ್ಟು ಯಕ್ಷ ರಂಗದಲ್ಲಿ ವಿಶಿಷ್ಟವಾದ ಛಾಪನ್ನು ಒತ್ತಿದ, ಯಕ್ಷಗಾನಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಕೆಲವು ಮನೆತನಗಳ ಪೈಕಿ ಬಲಿಪ ಎಂಬ ಹೆಸರಿಗೆ ಮಹತ್ತರವಾದ ಸ್ಥಾನಮಾನ ಗೌರವ ಇದೆ.
ಬಲಿಪ ಎಂಬ ಹೆಸರು ಹೇಗೆ ಬಂತು ಎಂಬುದು ಹಲವಾರು ಯಕ್ಷಾಭಿಮಾನಿಗಳಲ್ಲಿ ಹಾಗೂ ಕಲಾವಲಯದಲ್ಲಿ ಕೆಲವೊಮ್ಮೆ ಚರ್ಚಿತವಾಗುವ ಅಥವಾ ಜಿಜ್ಞಾಸೆಗೆ ಒಳಗಾಗುವ ವಿಷಯವಾಗಿದೆ.
ಈಗಿನ ಶ್ರೀ ಬಲಿಪ ನಾರಾಯಣ ಭಾಗವತರ ಪೂರ್ವಜರು ಕಾಸರಗೋಡು ತಾಲೂಕಿನ ಪೆರ್ಲ ಸಮೀಪದ ಪಡ್ರೆ ಗ್ರಾಮದಲ್ಲಿ ವಾಸವಾಗಿದ್ದವರು. ಅದು ತುಂಡರಸರ ಆಳ್ವಿಕೆಯ ಕಾಲ. ಪೂರ್ವ ಕಟ್ಟಳೆಯಂತೆ ಪ್ರತಿವರ್ಷವೂ ಸ್ಥಳ ತೀರ್ವೆಯನ್ನು ಕಟ್ಟಲು ಊರಿನ ಕೆಲವು ಮಂದಿಯೆಲ್ಲಾ ಒಟ್ಟಾಗಿ ಮಡಿಕೇರಿಯ ಅರಸನಲ್ಲಿಗೆ ಹೋಗುತ್ತಿದ್ದರಂತೆ.
ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ಕಾಲ, ಕೆಲವು ದಿನಗಳ ಪ್ರಯಾಣ ಇರುವುದು ಸಹಜ. ಕಾಡುದಾರಿಯ ಪ್ರಯಾಣ, ಮಾರ್ಗಮಧ್ಯೆ ರಾತ್ರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ. ಕಾಡಿನಲ್ಲಿ ಮೃಗಗಳ ಉಪಟಳ ಉಂಟಾಗದಂತೆ ನಡುವೆ ಬೆಂಕಿ ಹಾಕಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲಿ ಹುಲಿಯ ಘರ್ಜನೆ ಕೇಳಿತಂತೆ. ಆಗ ಇವರು (ಬಲಿಪರ ಪೂರ್ವಜ ಓರ್ವರು) ತಮ್ಮಲ್ಲಿದ್ದ ಕೋವಿಯಿಂದ ಹುಲಿಯನ್ನು ಗುಂಡಿಟ್ಟು ಕೊಂದರಂತೆ.
ಮರುದಿವಸ ಎಲ್ಲರೂ ಒಟ್ಟಾಗಿ, ಕೊಂದ ಹುಲಿಯ ಕಳೇಬರ ಸಹಿತ ಮಡಿಕೇರಿಯ ಅರಸನಲ್ಲಿಗೆ ತೆರಳಿ ವಿಚಾರವನ್ನು ತಿಳಿಸಿದರಂತೆ. ಅದನ್ನು ನೋಡಿದ ಅರಸ ಓ.. ಬಲಿಪ್ಪ ಎಂದು ಉದ್ಗಾರ ತೆಗೆದನಂತೆ. (ಹುಲಿಗೆ ತುಳು ಭಾಷೆಯಲ್ಲಿ ಬಲಿಪ್ಪ ಎಂಬ ಹೆಸರು ಇದೆ). ಜೊತೆಗೆ ಇವರ ಸಾಹಸಕ್ಕೆ ಮೆಚ್ಚಿದ ಅರಸನು, ಇವರು ವಾಸಿಸುತ್ತಿದ್ದ ಬಾರ್ಮುಗ ತೋಟ ಎಂಬ ಸ್ಥಳಕ್ಕೆ ಇನ್ನು ಮುಂದಕ್ಕೆ ತೀರ್ವೆ ಕಟ್ಟುವ ಅಗತ್ಯ ಇಲ್ಲ ಎಂಬುದಾಗಿ ಆದೇಶಿಸಿದನಂತೆ.
ಇಂದಿಗೂ ಪಡ್ರೆ ಗ್ರಾಮದ ಬಾರ್ಮುಗ ತೋಟ ಎಂಬ ಸ್ಥಳಕ್ಕೆ ತೀರ್ವೆ ಕಟ್ಟುವ ಪರಿಪಾಠವಿಲ್ಲ. ಹೀಗೆ ಹುಲಿಯನ್ನು ಕೊಂದು ಸಾಹಸ ಮೆರೆದ ವ್ಯಕ್ತಿಯ ಜೊತೆಗೆ ಬಲಿಪ ಎಂಬ ಬಿರುದು ಅಂಟಿಕೊಂಡಿತು. ಮುಂದಕ್ಕೆ ಆ ವಂಶಸ್ಥರೆಲ್ಲರೂ ಬಲಿಪ ಎಂಬ ವಿಶೇಷಣದೊಂದಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳುವಂತಾಯಿತು.
ಅಲ್ಲದೆ ಹಿಂದಿನ ಹಿರಿಯ ಬಲಿಪ ನಾರಾಯಣ ಭಾಗವತರು ಯಕ್ಷರಂಗದಲ್ಲಿ ಹುಲಿಯಂತೆ ಮೆರೆದವರು ಎಂದು ಕಿರಿಯ ಬಲಿಪ ನಾರಾಯಣ ಭಾಗವತರು ಸದಾ ಸ್ಮರಿಸಿಕೊಳ್ಳುತ್ತಾರೆ.
ಏನೇ ಇರಲಿ, ಬಲಿಪ ಎಂಬ ಹೆಸರು ಯಕ್ಷಗಾನಕ್ಕೆ ಮಹತ್ತರವಾದ ಒಂದು ಪರಂಪರೆಯನ್ನೇ ಹುಟ್ಟುಹಾಕಿ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬಲಿಪ ಗಾನ ಯಾನವು ಪರಂಪರೆಯ ನಿರಂತರವಾಗಲಿ.
(ಈ ಮೇಲಿನ ಕಥೆಯು ಬಲಿಪ ನಾರಾಯಣ ಭಾಗವತರ ಭಾಗವತಿಕೆಯ ಬದುಕು ಬಲಿಪ ಗಾನಯಾನ ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ.)
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ